ಇನಿ ಹನಿ
ಅಧರದಳದ ಮೇಲೆ ಜೇನಿನಂತ
ಇನಿಯನ ಹೆಸರು ಹೊಳೆವಾಗ
ಲಜ್ಜೆ ಹೆಚ್ಚಿ ಕಾಲ ಹೆಬ್ಬೆರಳು
ಮೀಟುವ ನೋವಿಗೆ
ಕನಸ ಹುಚ್ಚು ಹೆಚ್ಚೆಚ್ಚು
ಮೆರಗು ತಂದಿದೆ ಈ ಮಳೆಗೆ
ತುಂಬಿಕೊಂಡ ದುಂಬಿ
ಹೂವಿನೊಳು ಮತ್ತಿನೊಳು
ಮತ್ತೆ ಮತ್ತೆ ಮುಳುಗಿ
ಮಳೆಯಲಿ ನೆನೆನೆನೆದು
ಒದ್ದೆ ಮುದ್ದೆ ಹೊರಳಾಡಿ
ಹೂವಿನ ದಳಗಳಲ್ಲಿ
ಮುತ್ತಿನ ಹನಿಗಳ ಪೋಣಿಸಿದೆ
ಮಳೆಗೆ ಬಾಗಿ ನಿಂತ ಹೂವು
ತುಂತುರು ಮಳೆ ಹನಿಗೆ ಮುದಗೊಂಡು
ಹರಿದಾಡುವ ದುಂಬಿಗೆ
ಎಲೆ ಮರೆಯಲಿ ಪ್ರೀತಿ ಕೊಟ್ಟು
ತಲೆ ನೆನೆಯದಂತೆ ಬಚ್ಚಿಟ್ಟು
ಎದೆಯೊಳಗೆ ಒಲವ ಹರಿಸಿದೆ
ನಾಚಿ ನಲುಗುವ ಬಳ್ಳಿ
ಕಾಲ ಹೆಬ್ಬೆರಳಲ್ಲಿ ಕೊರೆದು
ಮಣ್ಣೊಳ ಮನದ ಪ್ರೀತಿ ಬಿತ್ತುತ್ತಿದೆ
ಮಳೆ ಹನಿಯುತ್ತಲಿದೆ
ಮನವರಳುತ್ತಲಿದೆ..
ಹೂ ದುಂಬಿ ಮಳೆಯೊಂದಿಗೆ
ಮಾತಿಗಿಳಿದಿವೆ...
31/05/2015
No comments:
Post a Comment