Thursday 26 March 2015

ಕವನ

ಹೀಗೆಲ್ಲಾ ನನ್ನ ಕನಸುಗಳು


ನನ್ನ ಕನಸುಗಳನ್ನೆಲ್ಲಾ
ಹೀಗೆ ನೀ ಜಡೆ ಹೆಣೆದು
ಮೊಲ್ಲೆಯ ಮುಡಿಸಿರುವೆ
ನಿನ್ನ ನಾ ಪ್ರೇಮಿ ಎನ್ನಲೇ
ಇಲ್ಲ ನನ್ನ ತಾಯಿಯೇ
ಓರಿಗೆಯ ಗೆಳತಿಯೇ
ನೀ ಹುಡುಗ!

ಕಣ್ಣಿಗೆ ನಿಲುಕದ ಭಾಷೆಯ
ಕನ್ನಡಿಯೊಳು ಹುದುಗಿಸಿಟ್ಟು
ಹುಡುಕೆಂದು ಹುಡುಗಾಟವಾಡಿರುವೆ
ನೀ ನನ್ನ ಬಾಲ್ಯದ ಗೆಳೆಯನೇ ಹುಡುಗ!

ಹೀಗೆಲ್ಲಾ ನೀ ನನ್ನ ಸಿಂಗರಿಸಲು
ನಿನ್ನ ಕಣ್ಣಿಂದ ನನ್ನ ನಾ ಕಂಡು
ಕಣ್ಣೀರ ಮರೆತಿಹೆನು 
ಯಾರು ನೀ ನನಗೆ
ಹೇಳು ನೀ ಹುಡುಗ!

ನೀನೂ ಮೆಚ್ಚಿದೆ, ನಾನೂ ಮೆಚ್ಚಿದೆ
ಈಗೀಗ ಹೆಚ್ಚು ಹಚ್ಚಿಕೊಂಡೆ
ಜಡೆಯ ಬಿಟ್ಟು ಬೆನ್ನ ಬಿಟ್ಟು
ಪ್ರಶ್ನೆಗಳಿಗೆ ಉತ್ತರವಾಗು
ಎದುರು ಬಂದು ನಿಲ್ಲೋ ಹುಡುಗ!

ನಿನ್ನ ಕಣ್ಣಲ್ಲಿ ಕಣ್ಣಿಟ್ಟು
ಮತ್ತಷ್ಟು ಶೃಂಗಾರವ ಕಾಣಬೇಕಿದೆ
ನಿನ್ನೊಳು ನನ್ನದೇ ಬಿಂಬ
ಎಂದು ಹಣೆ ಮುಟ್ಟಿಸಿ, ಕೈ ಜೀಕಿ ನಿಲ್ಲುವೆ
ಹೇ ಹುಡುಗ, ಹೇಳು ನೀನೀಗ...!

ಚಿತ್ರ ಕೃಪೆ; ಕೃಷ್ಣ ಗಿಳಿಯಾರ್ ಸರ್


26/03/2015
ಕೋಪ

ಎಷ್ಟು 
ಕೋಪ-ತಾಪಗಳಿದ್ದರೇನು
ತಂಪಾದಾಗ 
ನೀನೇ ನೆನಪಾಗುವೆ
ಈ ಬೇಸಿಗೆಗೆ 
ನೀನೊಂದು 

ನವ್ಯ ವರ! 


********


ಲಹರಿ

ಆ ಮನಗಳ
ತಲ್ಲಣಗಳ ಕಾಣಬೇಕೆಂದು
ಕಲ್ಲೆಸೆಯಲ್ಲಿಲ್ಲ
ದಡದೊಳು ನಾನು ಕಾಲು ಜಾರಿದ್ದೆ
ತಡೆದು ನಿಂತಾಗ
ಕಲ್ಲೊಂದು ಎಡವಿ ಬಿತ್ತು
ಕೊಳದೊಳಗೆ
ಸಣ್ಣಗೆ ಕೋಲಾಹಲ
ಕಣ್ಣಿಗೆ ಕಂಡ ಲಹರಿ... !!

26/03/2015

ಕವನ

ಕಾವ್ಯ



ಬದುಕಲಿ 
ಕಾವ್ಯ ಹುಟ್ಟಿದ ನಂತರ
ಮತ್ತಿನ್ಯಾವುದೊ 
ಅಭಾವಗಳ ಕುರಿತು 
ತಕರಾರುಗಳೇ ಇಲ್ಲ

ಎಲ್ಲವ ನೀಗಿಸಿ
ಭರ್ತಿ ಪ್ರೀತಿ ತೋರಿದೆ
ರಮಿಸುತ್ತ ಮನವ
ಕೈ ಹಿಡಿದು ನಡೆದಿದೆ

ನಾನೂ ಉಸಿರಾಡಿದ್ದೇನೆ
ಹೌದು 
ನನ್ನ ಶ್ವಾಸೋಚ್ಛ್ವಾಸಗಳನ್ನು
ನಾನೀಗ ಆಲಿಸುತ್ತಿರುವೆ.!

25/03/2015
ಕೋಪಕ್ಕೂ ಗಂಟಲೊತ್ತುತ್ತದೆ
ಈಗೀಗ ನಿನ್ನ ಕಂಡಾಗ
ಮೀರಿದರೆ ಕಣ್ಣೀರಾಗುವ ಭಯವಿದೆ
ಅದಕ್ಕೆ ನಾ ನಿನ್ನಿಂದ ದೂರ ದೂರ... !

25/03/2015

ಕವನ

ಸಿಹಿ


ಬೆಲ್ಲವೂ ಸಕ್ಕರೆಯು
ಇದ್ದೊಡೆ
ಮುತ್ತುವುದು ಇರುವೆ
ಬೆಲ್ಲಕ್ಕೇ ಹೆಚ್ಚು

ದೂರ ನಿಂತರೆ
ಸಕ್ಕರೆಗೂ ಅದೇ ಬೇಡಿಕೆಯೇ
ಬೆಲ್ಲಕ್ಕೆ ಹತ್ತಿರಾದಂತೆ
ಸಕ್ಕರೆಗೆ ಸಿಹಿ ಕಡಿಮೆಯಂತೆ

ಸಕ್ಕರೆಯು ಈಗೀಗ 
ಹೆಚ್ಚೇ ಅತ್ತು ಮತ್ತೂ ಕರಗುತ್ತಿದ್ದಾಳೆ
ತಡವಾಗಿ ಬಂದ ಬೆಲ್ಲವ
ಒಳಗೊಳಗೇ ಜರಿದು..

ಸಕ್ಕರೆಯ ಸೋಲಿಗೆ
ಬೆಲ್ಲವು ಮರುಗುವಳು
ನಾನಿಲ್ಲದ ಸ್ಥಳಗಳಲ್ಲಿ ನಿಂತು
ಸುಖಾವಾಗಿರುವಂತೆ ಹಾರೈಸುವಳು

ತನ್ನ ಮನೆಗೋಡಿದ ಸಕ್ಕರೆ
ಹಾಲಿಗೆ ಬೆರತು
ಜೇನಾದಳು
ಮನೆಯೆಲ್ಲೆಲ್ಲಾ ಹಾಲುಕ್ಕಿ
ಹೊಸತು ಶುರುವಾಯಿತು

ಬೆಲ್ಲವಿಲ್ಲಿ ಹೋಳಿಗೆಯಾಗಿ
ಹಬ್ಬವಾದಳು
ಸಕ್ಕರೆಯಿಲ್ಲದ ಹಾಲಿಗೆ ಕರಗಿ
ತನುವಾದ ಸಿಹಿಯಾದಳು!

25/03/2015

Wednesday 25 March 2015

ಕವನ

"ನಕ್ಷತ್ರ"



ನಕ್ಷತ್ರಕ್ಕೂ ಒಂದು ಅಂತ್ಯವಂತೆ
ಅದು ಸ್ಫೋಟವೋ ಮಹಾ ಸ್ಫೋಟವೋ
ತನ್ನಲ್ಲೇ ಉರಿದು ಮುನಿದು ಹೊಳೆದು ಬೆಳಕ ಬೆಳಗಿ
ಕಾಲ ಮೀರಿ ಒಡಲೊಡೆದು, ಛಿದ್ರವಾಗಿ
ಇದ್ದರೂ ಇಲ್ಲದಂತೆ ನಿಂತು
ದಾನ ನೀಡಿದ ಬೆಳಕಿನ ಋಣ ಕೇಳಿ
ಎಲ್ಲವನೂ ತನ್ನೆಡೆಗೆ ದಾಹದಿಂದ ಸೆಳೆದುಕೊಳ್ಳುತ್ತಾ
ಕೊನೆಗೂ ಕಪ್ಪುರಂದ್ರವಾಗಿ ಮರೆಯಾಗುವುದು

ನಕ್ಷತ್ರಕ್ಕೂ ಒಂದು ಅಂತ್ಯವುಂಟು
ಆ ಅದೇ ಒಡೆದ ಸೂರ್ಯನ ಹೆಜ್ಜೆಗಳ ಹರವಿನಲ್ಲಿ
ಅದರ ಪಳಯುಳಿಕೆಯೇ ಜೊತೆಯಾಗಿ
ಮತ್ತೆ ಹುಟ್ಟಿಗೆ ಸರಕಾಗಿ 
ಮುಂದೊಮ್ಮೆ ಮತ್ತೆ ಮೂಡುವ ಸೂರ್ಯನಾಗಿ
ಮತ್ತೆ ಮತ್ತೆ ಹುಟ್ಟುವುದು ನಕ್ಷತ್ರ
ಅಂತ್ಯವೇ ಆರಂಭವಾಗಿ ಉದಯಿಸುವುದು ಮತ್ತೆ ಮತ್ತೆ 'ನಕ್ಷತ್ರ'

25/03/2015
ಅವಳು 
ಜೊತೆಗಿದ್ದಳು
ಹೌದು
ನಕ್ಷತ್ರಗಳೇ ಉದುರಿ
ಪಾದದಡಿ ಬಿದ್ದಂತೆ
ನನಗೆ ಹಿಗ್ಗು!
ಹೌದು ಅಂದು,
ಅವಳು 
ಜೊತೆಗಿದ್ದಳು...

ಕವನ

ನನ್ನ ಕಲ್ಪನೆಗಳು


ನನ್ನ ಕಲ್ಪನೆಗಳನ್ನೆಲ್ಲಾ
ನಿನ್ನ ಮೇಲೆ ಹೇರುವ ಭರವಿಲ್ಲ
ಕಲ್ಪನೆಗಳಿವೆ ಹೇಳುವೆನಷ್ಟೇ
ಕೇಳಿಬಿಡು ಬೇಸರಿಸದೆ

ಹೇಳದೆ ಹಾಡದೆ ನಾನಿರಲಾರೆ
ಇದು ನನ್ನ ಹಾಡು
ಪಾಡೆಂದರೂ ಸರಿಯೇ
ನಿನ್ನ ಧಾಟಿಯಲಿ..!

25/03/2015

ಕವನ

ಚಿಲಿಪಿಲಿಗೆ ಕಾತುರರಾಗಿ...



ಈ ಪಯಣದಲಿ
ನೆನ್ನೆಯ ನಾನು
ಇಂದಿನ ನೀನು
ನಾಳಿನ ನಾವು
ಬಹಳಷ್ಟು ರೆಕ್ಕೆ ಕಟ್ಟಿ
ಪುಕ್ಕ ಹರಿದು
ಗೂಡು ಕಟ್ಟಬೇಕು
ಈ ನಾಡಿನ ಮರದ ಕೊಂಬೆಯಲ್ಲೊಂದು!
ಚಿಲಿಪಿಲಿಗೆ ಕಾತುರರಾಗಿ...

ಬದುಕೆಂದರೆ ಹೀಗೆ ಅಲ್ಲವೆ
ಹಕ್ಕಿಗಳದ್ದು
ಇರಲಿ ಅವರು ಇವರು
ನೋವು ಸಹನೆ
ಕೊಂಬೆಯ ಆಜು ಬಾಜಿನ 
ಸ್ನೇಹಿತರು! ..

25/03/2015

ಪ್ರೀತಿಯೊಂದು
'ಸಾಧನೆ'ಯೆಂದು ತಿಳಿದಾಗ
ಅದುವೇ ಸೋಲು
ಹಟ ಛಲಗಳನ್ನು
ಬಿಟ್ಟು ಬರಲು
ಗೆಲುವೇ ಈ ಪ್ರೀತಿ!

24/03/2015

ಕವನ

ನಾದವೇ......

ನಾದವೇ 
ನೀ ಹೊರಹೊಮ್ಮಿ ಬಿಡು
ಈ ಎದೆಯಿಂದ 
ಇನ್ನೆಷ್ಟು ಮೌನ
ಕರಾಳ ಕತ್ತಲೆಯ ನೀಗಿಬಿಡು

ವೇದವೇ 
ನೀ ತೀರಕೆ ತೀಡಿಬಿಡು
ಈ ಮನದಿಂದ
ಇನ್ನೆಷ್ಟು ಅವಮಾನ
ಬದುಕ ತೇರನು ಎಳೆಯಬಿಡು..

ಓ ನಾದವೇ
ನೀ ಹೊರಹೊಮ್ಮಿ ಬಿಡು...
ದೂರ ತೀರದ
ಎದೆ ತಟ್ಟಿಬಿಡು....!

ಚಿತ್ರ ಕೃಪೆ; ದಿವ್ಯ ಆಂಜನಪ್ಪ


ಕವನ

ವಿಪರ್ಯಾಸ!


ಸುತ್ತಲ ಜಗತ್ತು
ನನ್ನಯ ಚೆಂದದ
ರೆಕ್ಕೆಗಳನ್ನು ಊಹಿಸಿ
ಚಿತ್ರಿಸುತ್ತಿದ್ದರೆ
ನಾನಿನ್ನೂ ಕಂಬಳಿ ಹುಳುವಾಗಿ
ಮುದುಡಿ ಮುಳ್ಳಾಗಿ
ತನ್ ತಾನೇ ಚುಚ್ಚಿಕೊಳ್ಳುತ್ತಿರುವುದು
ವಿಪರ್ಯಾಸ.... !!

23/03/2015

ಕವನ

 ಬಿಂದಿಗೆ


ಪ್ರೀತಿಯ ಕೊಡ ತುಂಬಿ ಚೆಲ್ಲಿದಂತೆ
ಕನಸ ಕಂಡೆ ಈ ಹೊತ್ತು

ಕಣ್ಬಿಟ್ಟು ಎಚ್ಚರಗೊಳ್ಳಲು
ನಿನ್ನ ಬೆಳದಿಂಗಳ ಹಾಲ್ನಗೆ
ಇಲ್ಲೆಲ್ಲಾ ಹರಡಿ ನನ್ನ ತಬ್ಬಿತ್ತು

ಬೆಚ್ಚನೆಯ ಅಪ್ಪುಗೆಯಲ್ಲಿ
ಕಣ್ತುಂಬಿ ನಿದ್ದೆಗೆ ಹೊರಳಲು
ಬಿಂದಿಗೆಯು ತುಂಬಿತ್ತು ಮತ್ತೆ ಮತ್ತೆ.....

22/03/2015

ಕವನ

'ವಕ್ರೀಭವನ'


ಬಾಗುವುದು ಬೆಳಕು
ಎದುರಾದ ದಟ್ಟ ಸಾಂದ್ರತೆಗೆ
ಬಾಗಿ ನಡೆಯಲು ಕಲಿತೆವಿಲ್ಲಿ
ಬಾಗಿದಷ್ಟು ರಂಗು ಬಿಚ್ಚಿಕೊಳ್ಳುವುದಕೆ

ಮತ್ತೆ ಎಂದಿನಂತೆ ನೇರ ನಡೆ
ದಾಟಿ ದಟ್ಟತೆಯನು
ಬಾಗಿ ನಡೆದದ್ದಾದರೂ ಏಕೆ
ವೇಗವದು ಕಾಯ್ದುಕೊಳ್ಳುವುದಕೆ

ಬೆಳಕನನುಸರಿಸೋಣ
ಘನತೆಯ ಎದುರು ಮಾತ್ರವೇ ಬಾಗೋಣ
ಬೀಗೋಣ ನೇರ ನೆಡೆದು
ಸಣ್ಣತನಗಳ ಮೀರಿ ನಿಲ್ಲೋಣ.... !!!

22/03/2015
ಬಿನ್ನಾಣಗಿತ್ತಿ!


ಸಿಕ್ಕಿಕೊಂಡ ಕೂದಲಂತೆ
ಸುರುಳಿ ಸುರುಳಿ ಭಾವ ಲಹರಿ
ಚಮಕಿಸೋ ಕನ್ನಡಿಯ ದೀಪಕ್ಕೆ
ನಾನೋ ಹಟ ಹಿಡಿದು ನಿಂತ 
ಬಿನ್ನಾಣಗಿತ್ತಿ!
ನಾನೊಂದು ಮೋಡ ಬಿಟ್ಟ ಹನಿಯಂತೆ, 
ಅವಳ ಹೆರಳ ಬಿಟ್ಟ ಮೇಲೆ!

ಚಿತ್ರ ಕೃಪೆ; ದಿವ್ಯ ಆಂಜನಪ್ಪ

ನನ್ನ ನಗುವ 
ಸಹಿಸಲಾರದವರ
ಎದುರೂ
ನಾ ನಗುವೆ
ನಗುವ 
ನಾನು ಸಹಿಸಲಾರೆ
ಹಿಡಿದು ಹಾಗೆ...!

*****

ಕಷ್ಟದ ಸಂಗತಿಯೆಂದರೆ
ಒಬ್ಬ ಮಾನಸಿಕ ಸದೃಢ ವ್ಯಕ್ತಿಯು
ಎಂದೂ ತಾ ಅಳಲಾರ
ಯಾರ ಇದಿರೂ
ಹಾಗೆಯೇ ಕೈಚಾಚಲಾರ
ಒಬ್ಬಂಟಿಯಾಗಿಯೂ..!

21/03/2015
ಹಾಸ್ಯ


ಭಕ್ತೆ; ಕಣ್ಣೆಲ್ಲಾ ಮಂಜು ಮಂಜು...
ಮುಂಜಾನೆಯ ಈ ಹೊತ್ತಿಗೆ, 
ಯುಗಾದಿ ಬೇರೆ....
ಅರೇ ಏನಾಯ್ತೋ ದೇವಾ... ಮನ್ಮಥಾ.... :-O !!!!!""

ದೇವ; ಅಯ್ಯೊ ಮಂಕೇ, ನೆತ್ತಿಗೆ ತಟ್ಟಿದ ಹರಳೆಣ್ಣೆ ಹಣೆಗಿಳಿದು ಕಣ್ಣಿಗೂ ಜಾರಿದೆ...
ಹೋಗ್ ಹೋಗ್ ಸ್ನಾನ ಮಾಡು
ತೂಕಡಿಸ್ತಾ ಕುಂತಿದ್ಯಾ.... 

:-D ;-)




ಮಾವು ಬೇವು
ಕೂಡಿರಲು ತಂಪು
ಹಸಿರ ಹಬ್ಬ 
ಉಸಿರ ದಿಬ್ಬ
ಈ ಯುಗಾದಿ
ಬಟ್ಟಲ ಬೆಲ್ಲ ಬೇವಿನೆಲೆ ಹಿಡಿದ
ಹೊಸ ಚಿಗುರ ವಸಂತ
ಮನ್ಮಥನಾಗಮನ....


*****


ಸಿಹಿ ಬಾಳು ಹೊಸ ಬೆಳಕು
ಕಹಿ ಹಳತು ತೊರೆ ಇನಿತು
ಕಹಿಯಲೂ ಸವಿಯನೇ ಸವಿದಂತೆ
ಸಂಮೃದ್ಧವಾಗಿರಲಿ ಮನವು ಜನುಮವು.... 

*****

ಸಿಕ್ಕ ವೇಳೆಯಲ್ಲೆಲ್ಲಾ
ಸಿಕ್ಕಾಪಟ್ಟೆ ಅಲೆದಿದ್ದೆ
ಈಗ ಸಿಕ್ಕಲೆಲ್ಲಾ ಮುಳ್ಳುಗಳು
ಪಾದಗಳ ತುಂಬಾ
ಬಿಡಿಸಿಕೊಳ್ಳುವ ಹಾಗಿಲ್ಲ
ನೋವೇ ನೋವು
ರಭಸದಿಂದ ಕೀಳಬೇಕು
ಬೇಕೊಂದು ಮುಳ್ಳು!

20/03/2015

ಕವನ

ದೀಪದ ಜ್ವಾಲೆ


ದೀಪದ ಜ್ವಾಲೆ 
ನೆಟ್ಟಗೆ ನಿಂತು ಉರಿದಿತ್ತು
ಆಜು ಬಾಜಿನ ಕೆಟ್ಟ ಗಾಳಿಯು 
ದಾಳಿಯಿಡುವವರೆಗೂ

ಸುಳಿ ಗಾಳಿ ಬೇಕು 
ಬೆಳಗಲು ನಿಜವೇ
ಆತುರದಿ ರಭಸವ 
ಬೇಡಲು ಸೊಡರು

ಮೊದಮೊದಲು ಅಲುಗಾಟ
ತನ್ನ ಧ್ಯೇಯೆಗಳಿಂದ
ಮುಂದೆ ನಂದಿ, 
ನೊಂದುಕೊಳ್ಳಬೇಕಾದೀತು 

ಸುಂಟರಗಾಳಿಗೆ ಸಿಕ್ಕು
ಎಷ್ಟು ಬೇಕು ಎಷ್ಟು ಬೇಡಗಳ
ನಡುವಲಿ
ತಾಳ್ಮೆ- ಜಾಣ್ಮೆ
ಉಸಿರಾಡೀತು ಬದುಕು...!

20/03/2015

ಕವನ

ಪರಿಹಾರ


ದಿನದ ಬಹು ಬೇಗೆಯ ಹೊತ್ತಲ್ಲಿ
ದೂರದೂರಿಂದ ಪ್ರಯಾಣಿಸಿ
ಮುಸ್ಸಂಜೆಗೆ ಮನೆಯ ತಲುಪಿದ್ದೆ
ಎಂದಿನಂತೆ ಕೆಲಸದಿಂದ

ಅದೇನೇನೋ ಯೋಚನೆ 
ಯಾತನೆಗಳಲ್ಲೇ ಇದ್ದೆ
ಪ್ರಶಾಂತದಿ ಈಗೊಂದು 
ಪುಸ್ತಕ ಹಿಡಿದು ಓದುವಾಗ
ಧಗೆಯೋ ಧಗೆ..
ರಾತ್ರಿಯ ತಂಪು ಮೆರೆಸುವಂತೆ

ಏನಾಯಿತೋ ಎಂಬಂತೆ 
ಮುಡಿಯೊಳು ಬೆರಳಾಡಿಸಲು 
ಮದ್ಯಾಹ್ನದ ಬಿಸಿಯು ಇನ್ನೂ ಆರಿಲ್ಲ
ಓಹ್! ಸಂಜೆಗೆ ಮುಡಿಯ ಬಿಚ್ಚಿದ್ದರೆ
ಆಗಲೇ ಈ ಬಿಸಿ ಉಸುರಿ ಹೋಗುತ್ತಿತ್ತು 
ಅದರಂತ್ಯವ
ತನ್ನ ಸ್ವಗತ

ಹೆರಳ ಬಿಚ್ಚಿ ಹರಡಿದೆ
ಬೆರಳಾಡಿಸಿ ಹೊತ್ತು
ರಾತ್ರಿಯ ತಂಗಾಳಿ ತುಸು ತುಸುವೇ 
ಸನಿಹವೆನಿಸಿತು..

ಅಂದಂದಿನ ಬಿಸಿಗೆ 
ಅಂದೇ ಪರಿಹಾರ 
ಪ್ರಯತ್ನಗಳಾಗಬೇಕು

ಒಳಗೊಳಗೆ ಕುದ್ದು
ಕರಕಲಾಗುವ ಮುನ್ನ! 
ಇಲ್ಲವೇ
ಬಿಸಿ ಆರಿ ಬಯಕೆ
ಬತ್ತುವ ಮುನ್ನ!

20/03/2015



ಹೊಸದೇನು ಇಲ್ಲ
ಎನಿಸಿದಾಗ
ನಿನ್ನ ನೆನೆದು 
ಹಳಬಳಾಗುತ್ತೇನೆ
ನೀನು ಮತ್ತೂ ಹೊಸಬ
ನೆನಪುಗಳ 
ಮರು ಮೆಲಕುಗಳಲ್ಲಿ
ಒಂದು ದಿನ ಒಂದು ಯುಗ
ಎಂದರೇನೆಂದು ತಿಳಿಸುತ್ತಿದೆ
ಈ ಹೊಸತು! 

****

ಹೆಣ್ಮನವೊಂದು ಎನ್ನೆಡೆಗೆ
ಪ್ರೀತಿ ತುಂಬಿ
ಮಿಡಿಯಲು
ಅದೇಕೋ ನಾ ಕಣ್ಣೀರಾದೆ
ತೆರೆ ಮರೆಯಲೂ
ಕನ್ನಡಿಗಳುಂಟು!
ಅದು
ತನ್ನವರ ಮಿನುಗಿಸುತಿಹುದು!

19/03/2015

ಕವನ

ಪ್ರೀತಿ ಹುಟ್ಟಿತು
ಅಷ್ಟೇ ಆಗಿದ್ದರೆ ಚೆಂದವಿತ್ತು
ದಿನದಿನಕ್ಕೂ ಹೆಚ್ಚಾಗಿದೆ
ಅವ ಕಾಣದೇ ಇದ್ದಾಗ
ಮತ್ತೆ ಮತ್ತೆ ಒಲವಾಗಿದೆ
ಈ ಹುಡುಕಾಟದಲಿ!

ಹಾಗೆಯೇ 
ನನಗೀಗ ಆತಂಕವೂ..
ಅವನ ಪ್ರೀತಿಸುತ್ತಿರುವೆನೊ
ಇಲ್ಲ
ಈ ಹುಡುಕಾಟದ 
ಕಾತುರತೆಯನೋ!!
ಉತ್ತರಿಸಬೇಕು ಅವ ಬಂದು!

18/03/2015

Tuesday 17 March 2015

ಕವನ

ಒರಟು

ಒರಟು ನಾನು 
ಅದಕೆ ಸಂದಿಗೊಂದಿಗಳಲಿ
ನುಸುಳೆನು
ಅಡ್ಡ ಬಂದವರು 
ತರಚಿಕೊಂಡಾರೆಂದು
ಮುಖ್ಯರಸ್ತೆಯೇ ಬೇಕು
ಅಡ್ಡ-ಗಿಡ್ಡ ರಸ್ತೆಗಳಲಿ 
ಹಾದು ಹೋಗಲು
ರಸ್ತೆಗಳೇ ಮತ್ತೆ ಕಾಮಗಾರಿಗೆ 
ಒಳಪಡುವುದು!
ನಾನು ಒರಟು! 

17/03/2015

ಕವನ

ಮಳೆ ಮತ್ತು ಹೆಣ್ಣು


ಸುರಿವ ಮಳೆಯನೇ
ನಾ ನಂಬಿರಲಿಲ್ಲ
ಹುಟ್ಟಿನಿಂದ 
ಮೆಟ್ಟಿದ್ದ ನೆಲವನ್ನಷ್ಟೇ ನಂಬಿದ್ದೆ
ಹಟಮಾಡಿ ಗುದ್ದಿದರೂ
ನೀರು ಕರುಳಿಸಾಳು ಹೆತ್ತವಳು
ಈ ಭೂಮಿ!

ಹೆಣ್ಣನೇ ಧರೆಯೆಂದುಬಿಟ್ಟರೆ
ನಾನೊ ಹೆಣ್ಣು
ನನ್ನೊಳ ಗಂಗೆಗೆ
ಮಳೆ ಮೋಡವೂ
ಸೆಳೆದುಕೊಂಡು ಬರಬೇಕು
ಹಸಿರ ಹೊತ್ತ ಕಾರಣ
ಬರುಡಾಗದ ಈ ಕನಸ ಕಾರಣ

ಯಾರನ್ನಾದರೂ ನೆಚ್ಚಿಕೊಂಡೇ
ಹುಟ್ಟಳು ಹೆಣ್ಣು
ಹುಟ್ಟಿಕೊಂಡಳು ಹೆಣ್ಣೊಳು
ಹೆಣ್ತನಕೆ
ಮಳೆ ನೆಲಗಳ ಅಂತರದಲ್ಲಿ
ಸುಂದರಾತ್ಮವಾಗಿ
ಮತ್ತಷ್ಟು ಹುಟ್ಟುಗಳಿಗೆ ಕಾರಣವಾಗಿ!

17/03/2015

ಕವನ

ಕಸಿವಿಸಿ


ಎರಡು ದಿನಗಳಿಂದ ಏನೋ ಕಸಿವಿಸಿ
ಹೌದು ಮನೆಯ ಕಸ ಗುಡಿಸಿರಲಿಲ್ಲ!

ತಲೆ ಭಾರ ಕುತ್ತಿಗೆ ಬಿಗಿತ
ಏನೋ ನೋವು ಏನೋ ಆವೇಗ
ಹೌದು ಮನೆಯ ಕಸ ಗುಡಿಸಿರಲಿಲ್ಲ!

ತೊದಲ ಮಾತು, ಮಾತುಗಳೇ ಹುಡುಕೋ ಪದಗಳು
ಒಂದೂ ಜೋಡನೆಯಿಲ್ಲ ಎಲ್ಲಾ ಸೇರಿಸುವ ಕಸರತ್ತು
ಹೌದು ಮನೆಯ ಕಸ ಗುಡಿಸಿರಲಿಲ್ಲ!

ಬೆಳಗಾಗುವುದು ಅಂತೆಯೇ ಈ ರಾತ್ರಿಯೂ
ನನ್ನ ದಾರಿಯನೇ ಮರೆತಂತೆ ಈ ಕಸಿವಿಸಿಯೊಳು ನಾನು
ಮನೆ ಕಸ ಗುಡಿಸಿರಲೇ ಇಲ್ಲ!

ತಲೆಗೊಂದೆರಡು ಬಿಳಿ ಕೂದಲು
ನೋಡುಗರ ಹುಬ್ಬು ಹಾರಲು
ನಾನಿನ್ನೂ ಮನೆ ಕಸವ ಗುಡಿಸಿರಲಿಲ್ಲ!

ಕುದುರೆ ಎನ್ನುವರು ಓಡಲಾರದ ಕುರಿತು ತಕರಾರು
ಓಡಲಾರೆ ನಿಮ್ಮಂತೆ ಆದರೂ ಓಡುವೆ ನನ್ನಂತೆ
ಮನೆ ಕಸವ ಗುಡಿಸುತ್ತಿರುವೆ

ಈ ಮನದಿಂದ ಈ ಮನೆಯಿಂದ
ದೂರ ತೂರಿ ಹೋಗಬೇಕು
ಸ್ವಚ್ಛಗೊಂಡ ನನ್ನ ಕನಸುಗಳ ಹಿಡಿದು

ಅಲ್ಲಿ ಕಸವಿಲ್ಲ ಮನೆಯೂ 
ಹಳೆಯ ದಿನಗಳ ಕಸಿವಿಸಿಯೂ
ಕರಗಿ ಹೋಗುವಾಸೆ
ಬಾನಿಗೆಲ್ಲಿ ಧೂಳ ಹಂಗು!

17/03/2015
ಏನೂ ಬರೆಯದೇ
ಉಳಿದಾಗ
ನಿನ್ನ ಮೌನವೇ ಗದ್ದಲ
ನನ್ನೊಳಗೆ!

17/03/2015

Monday 16 March 2015

ಕವನ

ಸಕ್ಕರೆ


ಆ ಎರಡು ಕಣ್ಗಳೆದುರು
ಒಂದು ಉಂಡೆ ಸಕ್ಕರೆಯಚ್ಚಿತ್ತು
ಕಣ್ಗಳು ನೋಡಿತು
ತನಗೆ ಬೇಡವೆಂದೆಣಿಸಿ ಸುಮ್ಮನಿದ್ದುಬಿಟ್ಟಿತ್ತು
ಬೇಡವೆಂದದ್ದು ಉಳಿದುಕೊಳ್ಳಬಾರದಿತ್ತು

ದಾರಿ ಸವಿಯ ಹುಡುಕಿ
ಇರುವೆಯೊಂದು ಹರಿದು ಬಂದಿತ್ತು 
ಸಕ್ಕರೆಯಚ್ಚಿನ ಸವಿಯ ಸವಿದಿತ್ತು
ಕಣ್ಣು ಸುಮ್ಮನೆಯೇ ನೋಡಿತ್ತು

ಕೆಲ ಹೊತ್ತಿನಲ್ಲಿ ಮತ್ತೆರಡು ಇರುವೆಗಳು
ಜಾಡ ಹಿಡಿದು ಬಂದಿತ್ತು
ಅಚ್ಚಿಗೀಗ ಮೂರೆಡೆ ಸವೆತ
ಕಣ್ಣೂ ಈಗಲೂ ನೋಡುತ್ತಲೇ ಇತ್ತು

ದಂಡಿನಂತೆ ಮತ್ತಷ್ಟು ಇರುವೆಗಳು
ಕಪ್ಪನೆಯ ಹೊಳೆಯಂತೆ ಮೂಡಿ ಬಂದಿತ್ತು
ಕಣ್ಣಿಗೆ ತಣ್ಣನೆಯ ಜೊಂಪು ಹತ್ತಿತ್ತು
ಮತ್ತು ಮಲಗಿಬಿಟ್ಟಿತ್ತು
ಸವಿದ ಸವಿಗೆ ಬಾಯೆಲ್ಲಾ ಬೆಲ್ಲವಾಗಿತ್ತು 
ಈಗ ಇರುವೆ ಕಣ್ಣಿಗೂ ದಾಳಿಯಿಟ್ಟಿತ್ತು

ಕಣ್ಣುಗೋ ನಿದ್ದೆ 
ಎಚ್ಚರಗೊಂಡಾಗ
ಕಣ್ಣ ಸುತ್ತಾ ಕಪ್ಪು ಹಾವಳಿ, ತುರಿಕೆ, ಚುಚ್ಚುವಿಕೆ
ಸವಿಯಾದ ಸಕ್ಕರೆಯೂ ಮೆತ್ತುಕೊಂಡಿತ್ತು
ಬೇಡವೆಂದೆಣಿಸಿದ ಸಕ್ಕರೆ 
ಅಂಗಳದಲ್ಲುಳಿದ 'ಒಂದು ತಪ್ಪು'

ಹೆದರದಿದ್ದರೂ ಸಕ್ಕರೆಯ ಸಿಹಿಗೆ
ಹೆದರಬೇಕು ಅದರ ಸೆಳೆತಕೆ
ನಮ್ಮ ದೌರ್ಬಲ್ಯವೆಂಬ ಸಕ್ಕರೆಗೆ
ಮುತ್ತುಗೆಗಳು ಜೋರೆ!

ದೌರ್ಬಲ್ಯಗಳ ಕಡೆಗಣಿಸಬಾರದು
ಸರಿಯಾದ ಸ್ಥಳದೊಳಿಟ್ಟು ಸರಿಯಬೇಕು
ಇಲ್ಲವೇ ಕಳೆದುಬಿಡಬೇಕು
ಜೊತೆಯಲ್ಲಿಟ್ಟುಕೊಳ್ಳದೆ ಈ ಸಾಂಕ್ರಾಮಿಕ ಸವಿಯ!


16/03/2015

ಕವನ

@ ಹಾಸ್ಯ ಲಾಸ್ಯ

ಪುಟ್ಟ ಹುಡುಗಿಯಾದ ಅಕ್ಕನ ಮಗಳನು 
ಕೇಳಿದಳಿವಳು
ಅವನ ಚಿತ್ರ ತೋರಿಸಿ

"ಚೆನ್ನಾಗಿದ್ದಾರಲ್ಲ ಈ ಅಂಕಲ್ಲು?"
"ಹ್ಮೂ,, ಅಚ್ಚಾ ಹೈ,
ಪರ್ ಆಂಕಲ್ ಕಿ ತರಹ್ ನಹೀ ದಿಕ್ತಾ
ಲಡಕಾ ದಿಕ್ತಾ"...

"ಅರೇ ವಾಹ್! ಮೈ ಕ್ಯಾ ಆಂಟೀ ದಿಕ್ತೀ,
ಫಿರ್ಬೀ ಆಂಟೀ ಬುಲಾತಿ ತುಮ್?!!
ಹ್ಹ ಹ್ಹ ಹ್ಹ... 
ಮುದ್ದಿಟ್ಟಳು ಮಗಳು

16/03/2015

ಕವನಗಳು




ಮನದೊಳಗೆ 
ಮಂದಾಗ್ನಿ ದಹಿಸಿ
ಉಸಿರೊಳು ಉಸುರಿದ 
ಹೊಗೆಯಂತೆ
ಹಾಳಾದ ಈ ಅಹಂ
ನರಳಿಸಿ ಕೊರೆದು 
ಮತ್ತೂ ಹೂತುಬಿಟ್ಟಂತೆ
ನಗುವೆಲ್ಲಾ 
ಅದ್ಯಾವುದೋ ಪಾತಾಳಕೆ
ಮೇಲೆ ತೇಲಿದ 
ಜಿಗುಟು ಒರಟು 
ಅದು ನಾನು!..

****

ಮೌನದ ಆಲಾಪನೆ
ಹೆಚ್ಚಿದಂತೆ
ಗದ್ದಲ ಹೆಚ್ಚು
ಒಳಮನೆಯಲಿ
ಅಂಗಳವೆಲ್ಲಾ
ಅದ್ಯಾವುದೊ ಬಣ್ಣಗಳ ಹೊತ್ತು
ಸುಮ್ಮನಷ್ಟು ರಂಗವಲ್ಲಿ
ಇನ್ನೂ ತಿಳಿಯಲೇ ಇಲ್ಲ
ಮೌನ ಮನದ 
ಬೇಡಿಕೆಗಳು...
ಅಥವಾ ಇನ್ನೂ ಇವೆಯೇನೋ
ಬಾಕಿಯುಳಿದ 
ಸಣ್ಣತನಗಳು...

15/03/2015

ಕವನ

ಅಪವಾದಗಳು

ಕಾಡಿಸಿ ರೂಢಿಯೇ ಇರಲಿಲ್ಲ
ಕಾಡಿಸಬೇಕೆಂದೂ ಇರಲಿಲ್ಲ
ಸುಮ್ಮನಿದ್ದೆ ಅಷ್ಟೆ

ನೋಡಿದವರೆಲ್ಲಾ 
ಅವರವರ ಕಾಡಿಕೊಂಡರು
ನನಗೋ ಈಗ ಅಪವಾದಗಳು

ಯಾರನು ಕಾಡಿದೆ ನಾನು
ನನಗೀಗ ಕಾಡುವ ಪ್ರಶ್ನೆ
ಈ ಕಣ್ಣ ಕಾಡಿಗೆಯಡಿ ಒದ್ದೆಗೊಂಡು

15/03/2015
ಅತಿಯಾದ ನಿರೀಕ್ಷೆಗಳೇನು 
ಇಲ್ಲವೆನಿಸಿದಾಗ
ಸಮರ್ಪಿತ ಭಾವವೇ ಆದರೂ
ಹಾಗೆಯೇ ಬಿಗಿಯಾಗಿ 
ಮುಚ್ಚಿಟ್ಟುಕೊಳ್ಳುವಂತೆಯೂ
ಎನಿಸುವುದು ಈ ಭಾವ
ಯಾರಿಗೂ ಸುಮ್ಮನೆ ಹಟವಾಗದೆ!

14/03/2014

ಕವನ

ಉಬ್ಬಿದ ಬಲೂನು

ಸುಮ್ಮನೆ ಎಲ್ಲರೂ ಅಂದುಕೊಳ್ಳುತ್ತಾರೆ
ಉಬ್ಬಿದ ಬಲೂನಿಗೆ ಬಲು ಜಂಭದಿ
ಕುಣಿವ ಕಾತುರವೆಂದು

ಅದರ ಪಾಡದು ಅದಕ್ಕೇ ಗೊತ್ತು
ಎಲ್ಲಿ ಯಾವ ಮೊನೆಯು ಚಿಗುರುವುದೊ
ತನ್ನೆಡೆಗೆ ಕುದಿಗೊಂಡು ಭಾವ ಛೇದಿಸಲೆಂದು

ಬಲೂನಿನಂತಾಗಬಾರದು ಈ ಮನಸ್ಸು
ಉಬ್ಬಬೇಕು ಆಗಾಗ ತಗ್ಗಬೇಕು
ಕಾದು ಬೆಂದು ಗಟ್ಟಿಗೊಳ್ಳಬೇಕು!

ಕುದಿ ಉರಿ ಚೂರಿಗಳಿಗೂ 
ಮೂತಿ ಸೊಟ್ಟಾಗುವಂತೆ ತಡೆದು ನಿಲ್ಲಬೇಕು
ಉಳಿಯಬೇಕು ಮತ್ತೂ ಬದುಕಬೇಕು!...

14/03/2015



ಕಡಲು,ದೊರೆ
ಇವೆಲ್ಲವೂ ಕದ್ದ ಮಾಲು
ನಿನಗೆಂದು ಹೊಸದು
ಹೆಸರಿಡುವೆ
ಕರೆದರೆ ನೀನಷ್ಟೇ
ನೋಡಬೇಕು!

****

ಮನದ ಮೌನಕ್ಕೆ
ಏನೋ ಒಂದು
ಹುಡುಕಾಟವಿರುತ್ತದೆ
ಪದಗಳದೋ
ಭಾವಗಳದೊ
ಇಲ್ಲ ನಿನ್ನದೊ!
ಸಿಕ್ಕ ಮೇಲೆ ಒಂದೇ
ಜಗಳ ಗದ್ದಲ
ನೀನೇ ಮುದ್ದು,ನೀನೇ ಸ್ವೀಟು!
ಅಂತೆಲ್ಲಾ... !

***

ತಿರುಗಿ ಬಂದ ಬಾಣವೇ
ಹೇಳಿದ್ದು
ಗುರಿ ಮುಟ್ಟಿದೆ
ಎಂದು! 

14/03/2015

ಕವನ

ಈ ಹುಡುಗಿಯರೇ,,,


ಈ ಹುಡುಗಿಯರ ಮನಸ್ಸೇ
ಅರ್ಥವಾಗೊಲ್ಲ ಗುರು

ಅರಳಿ ಕಟ್ಟೇಲಿ ಕೂತು
ಕಾಳು ಹಾಕಿದರೆ
ಎಡಗಣ್ಣಲ್ಲೂ ನೋಡೊಲ್ಲ
ನಮಗೆ ಸಿಕ್ಕಾಪಟ್ಟೆ ಟೈಮಿರುತ್ತೆ
ಅವರಿಗದು ಬೇಕಿರೊಲ್ಲ

ಹುಡುಗ ಏನೋ ಚೂರ್ ಓದ್ಕೊಂಡು
ಕೆಲ್ಸ ಹಿಡಿದಿದ್ದಾನೆ ಅಂದ್ರೆ
ಓರೆ ನೋಟನಾದ್ರೂ ದಕ್ಕೀತು
ಆದರೆ ಆ ಹುಡುಗನಿಗೋ ಟೈಮೇ ಇರೋಲ್ಲ
ಇವು ಒಂದೇ ಒದ್ದಾಡ್ತವೆ ನಮ್ಗೆ ಟೈಮೇ ಕೊಡೊಲ್ಲಾಂತ

ನಾವ್ ಫ್ರೀ ಇದ್ವಿ
ಬೇಡಂದ್ರು...
ಈಗ 
ಅವ ಫ್ರೀಯಿಲ್ಲ
ಆದರೂ ನಮ್ ಕಡೆ ನೋಡಂಗಿಲ್ಲ

ಈ ಹುಡುಗೀರೇ ಅರ್ಥವಾಗೊಲ್ಲ ಗುರು
ನಮ್ ಟೈಮೇ ಸರಿ ಇಲ್ಲ ಬಿಡು.. !

11/03/2015

Wednesday 11 March 2015

ಕವನ

ಸ್ವರ್ಗ ಸುಖ


ಹುಟ್ಟಿ ಹಾಕಿಕೊಳ್ಳುವ
ಪ್ರವೃತ್ತಿಗೆ
ಕಳೆದುಕೊಳ್ಳುವ
ಆತಂಕವೇ ಇಲ್ಲ

ಇದನ್ನು ಎಷ್ಟೋ ಬಾರಿ
ತರ ತರದಲಿ ಗುನುಗಿರುವೆ
ಅಷ್ಟು ಸಲವೂ
ನನ್ನೊಳು ಮಿಡಿತ ಸ್ಪಂದಿಸುತ್ತಿತ್ತು

ಸಂತಸವೆಂಬುದು
ಇರುವುದು ನಿಜವೇ ಆದರೆ
ಹೌದು ನಮ್ಮೊಳಗೇ ಇದೆ
ಇದೇ ಸುಖ, ಇದೇ ಸ್ವರ್ಗ!

11/03/2015

ಕವನ

ನನಗಾಗಿ ನೀನು


ಪ್ರಪಂಚ ವಿಶಾಲವಾಗಿದೆ
ಹೌದು
ಆದರೇನು
ಕಣ್ಣಿನ ದೃಷ್ಟಿ ಸಣ್ಣದು!

ದಕ್ಕಿದಷ್ಟೇ ಸ್ವರ್ಗ
ಪ್ರಪಂಚವೆಲ್ಲಾ
ಏಕೆ ಬೇಕು!

ಇದ ತಿಳಿದು
ಸಮಯವಿಟ್ಟುಕೊ
ನನಗಾಗಿ ನೀನು! 

11/03/2015

ಕವನ

ಸ್ವರ ಸೇರಿಸು


ಬಿಸಿಯೇರಿ ತಂಪಾಗುವ ಹೊತ್ತು
ನವೋಲ್ಲಾಸ
ಈ ಬಿರು ಬಿಸಿಲಿನಲಿ
ಕಣ್ತಂಪ್ಪಿಗೆ ನಿನ್ನ ನೆನಪಿನ ಚಿತ್ರ!

ಸುಮ್ಮನೆ ಹೊಗಳೆನು ನಾನು
ಏನೇ ಹೇಳು 
ನನ್ನ ಮೇಲೆಯೇ ನನಗೆ
ಹಿರಿಮೆ
ಗರಿಮೆಯ ನೀನು 
ಒಂದಷ್ಟು ತಿರುವು ಕೊಟ್ಟೆ
ಅಕ್ಷರಾಭ್ಯಾಸಕೆ!

ನನ್ನದೋ ಇನ್ನೂ ಧಾಟಿ ಬದಲಾಗಿಲ್ಲ
ಚೂರು ಹಾಡಿ ತೋರಿಸಲಾರೆಯಾ
ಕೆಲ ಸ್ವರಗಳು ನಿನ್ನೊಳಗಿವೆ
ದಕ್ಕಿಸಿಕೊಳ್ಳಬೇಕು ಎಂದು ಸಿಗುವೆ?! 
ಏಕಾಂತದಿ ಕಾಂತನೇ...

11/03/2015

ಕವನ

ಮನದ ತುಣುಕು ಇಟ್ಟಿಗೆಗಳು


ಗೂಡು ಕಟ್ಟಿಕೊಂಡು
ತನ್ನೊಳಗೆ ಬೆಂದದ್ದಾದರೂ ಏಕೆ
ಕಂಬಳಿ ಹುಳುವು
ನಾಳೆಗೆ ರೆಕ್ಕೆ ಬಿಚ್ಚಿ ಹಾರಲೆಂದೆ

ಆಗಾಗ ಗೂಡಿಟ್ಟು
ಸುಟ್ಟಿಕೊಳ್ಳಬೇಕು 
ಮನದ ತುಣುಕು ಇಟ್ಟಿಗೆಗಳನು
ಮುಂದಣ
ವೈಭವದರಮನೆಯ ನಿರ್ಮಾಣಕ್ಕೆಂದು

ಅಮಾವಾಸ್ಯೆ ಪೌರ್ಣಮಿಗಳು
ಭಾವಗಳೇರಿಳಿತಗಳು
ಮುದುಡಬೇಕು ಮರುಗಬೇಕು
ತನ್ನೊಳಗೆ ತಾ ಬೆಳೆದು ಹೊಮ್ಮಬೇಕು

11/03/2015
ತಟಸ್ಥತೆಯ ಆರಾಧಕಳಾಗಿ
ಉಳಿದುಕೊಳ್ಳುವ ಎಂದುಕೊಳ್ಳುತ್ತೇನೆ
ಸುಟ್ಟರೂ ಹೋಗದ ಗುಣವದು 
ಚಿತೆಯಲೂ ಸಿಡಿದು ಹೊರಳುವ ಬುರುಡೆ!

11/03/2015

ಕವನ

ಕಡಲಾಳ



ದಡದ ಅಲೆಗಳದು

ಹೆಚ್ಚು ಅಬ್ಬರ

ಆಳದ ಶಾಂತತೆಯ

ಮುಚ್ಚಿಡಲೋ ಏನೋ


ಕಲಕಿದರೆ ತಳದಿ ಸಣ್ಣಗೆ

ಉಕ್ಕುವುದು ಶರಧಿ

ತಡೆಯಲಾರದು ಜಗ

ಶರಣಾಗದೆ ಉಳಿದು


ಈ ಶಾಂತತೆ, ಉಗ್ರತೆ

ಅವಳಿಗಳಂತೆ

ಒಂದತ್ತರೆ ಮತ್ತೊಂದಕೆ

ಎಚ್ಚರಿಕೆ ಕನವರಿಕೆ



10/03/2015

ಕವನ

ಹೇಳೇ ನವಿಲೇ....

ಬರೆದು ಹರಿದು ಹಾಕುವುದು
ನೋವುಗಳಾದರೆ
ಬರೆಯದೆ ಎದೆಯಲ್ಲುಳಿವುದು
ನಲಿವೇ ?!
ಹೇಳೇ ನವಿಲೆ..

ಬರೆಯಲಾಗದ ಅವನ
ಏನೆಂದು ಕರೆದುಬಿಡಲಿ
ನಲಿವ ನವಿಲು!
ಸರಿಯೇ ನವಿಲೇ..

11/03/2015


ತೆರೆ ಮರೆಯ ಗೂಡಿಗೆ
ಅದೆಷ್ಟೋ ಕಾದಿದ್ದ ಕಣ್ಣುಗಳು
ದಾಳಿಯಲ್ಲ ದಯೆಯಿತ್ತು
ಮರದ ಕೊಂಬೆಯು ಮುರಿದಿತ್ತು!

09/03/2015

ಕವನ

ಸಂಭ್ರಮ


ಒಂದರ ನಂತರ ಒಂದರಂತೆ 
ಸಂತಸ ಸಂಭ್ರಮಗಳು
ಈ ನಡುವೆ ಸುತ್ತ ಹರಿದಾಡಿ
ಗಟ್ಟಿಗೊಳಿಸಿವೆ ಹೊಸ ಆಸೆಗಳನ್ನು

ಆದರೆ ಅಷ್ಟೆ ಸತ್ಯ
ಸಣ್ಣಗೆ ಹರಿದಂತೆ ಎದೆಯೊಳಗೆ 
ಆತಂಕಗಳ ಹರಿವು
ನೆಲದಾಳದಲಿ ನೀರು ನಡೆದಂತೆ!

ಆಸೆಗಳೂ ಇರಲಿ
ಆತಂಕಗಳ ಸಾಲು ಸಾಲು 
ಭರವಸೆಗಳು ಬತ್ತದಿರಲಿ
ಸೋತರು ಹಲವು ನಿರೀಕ್ಷೆಗಳು!

09/03/2015
ನಿಂತು ಕಾದಿದ್ದು ತಪ್ಪಾಯ್ತು
ನಡೆಯುತ್ತಾ ನಿರೀಕ್ಷಿಸಬೇಕಿತ್ತು
ದೂರವಾದರೂ ಕ್ರಮಿಸುತ್ತಲಿದ್ದೆ
ಒಂದೆಡೆ ಕಾಲ ಕಳೆದು 
ಹೆಚ್ಚು ಕಣ್ಗಳಿಗೆ ಗುರಿಯಾಗದೆ
ಹ್ಮೂ ಇನ್ನು ಓಡಬೇಕು ನಿಲ್ಲದೆ...

09/03/2015

******

ಈ ನಿಶ್ಶಬ್ದ ರಾತ್ರಿಗಳ
ಪ್ರಶ್ನೆಗಳು ಅನೇಕ
ಉತ್ತರಿಸಲಾಗದೆ
ನಾ ಕನಸಿಗೆ ಜಾರಿದೆ
ಉಳಿದಂತೆ ಹಗಲು
ಹೆಚ್ಚು ಪ್ರಶ್ನಿಸದು!

08/03/2015