Wednesday 30 October 2013


ಕಾಮದ ಸೋಂಕಿಗೆ
ನೆಗಡಿಯಾದವನಿಗೆ
ಪ್ರೀತಿಯ ಘಮಲತ್ತದು 


***


ಪ್ರೀತಿ ದೂರವಾಯಿತು ನಿಜ
ಆದರೆ ಕಾರಣ ಗೊತ್ತಿಲ್ಲ 
ಪ್ರಿಯ ಪ್ರೀತಿಯೇ
ನೆಕ್ಸ್ಟ್ ಟೈಮ್
ಹೇಳಿ ಹೋಗು ಕಾರಣ !! 


30/10/2013

Tuesday 29 October 2013

ಅವಳು ಸುಮ್ಮನೆ ನಡೆದು ಹೋದಳಷ್ಟೇ
ಅಷ್ಟೇ ಆಗಿದ್ದರೆ ಚೆನ್ನಿತ್ತು
ತಿರುಗಿ ನೋಡಿಬಿಟ್ಟಳೇ!
ನೀಳ ಜಡೆಯ ಹಿಂದೆಸೆದೇಬಿಟ್ಟಳು

ನನ್ನ ಗ್ರಹಚಾರ; 
ಅವಳು ಮುಡಿದ ಮಲ್ಲೆ 
ಬರ್ರೆಂದು ಬಂದೆನ್ನ ನಾಸಿಕವ ದಾಟಿ 
ಎನ್ನೆದೆಗೆ ತಾಗಬೇಕಿತ್ತೇ?
ನಾ ಮೂರ್ಛೆ ಹೋಗಬೇಕಿತ್ತೆ?
ಅವಳೇ ಬಂದೆತ್ತಬೇಕಿತ್ತೇ?

ಇನ್ನೇಲ್ಲಿ ನಿಲ್ಲುವುದು...
ಈಗಲೂ ಅವಳೇ ಮೇಲೆತ್ತುತ್ತಾಳೆ
ನಾ ಬಿದ್ದಂತೆ ನಟಿಸುತ್ತೇನೆ 



****************************


ಬಯಸಿ ನೀಡಿದ್ದು ತ್ಯಾಗ
ಕಿತ್ತುಕೊಂಡದ್ದು ಶೋಷಣೆ



*****

ತ್ಯಜಿಸುವಷ್ಟು ಗಳಿಸಿಲ್ಲ,
ಗಳಿಸುವ ಆಸೆಯ
ತ್ಯಾಗದ ಹೆಸರಲಿ ಕೈಬಿಡಲಾರೆ


*****

ಜೀವನವಿಡೀ ತ್ಯಾಗವೇ ಆದರೆ
ಸ್ವಾರ್ಥಿಗಳ ನೋಡಿ ನಾ ಕರುಬುತ್ತೇನೆ 
ಮನಸ್ಸು ಮಾಗಿಲ್ಲ 


29/10/2013

Monday 28 October 2013

ಮುಚ್ಚಿಟ್ಟುಕೊಂಡಷ್ಟೇ 
ಮುತ್ತುಗಳು,
ಹರಿದು ಬಿಟ್ಟವು 
ಹರಳುಗಳು,
ನೋಡಲಷ್ಟೇ
ಅಸಲು!!

***


ಪರೀಕ್ಷೆಗಳು ಜಗದೊಳು ಸಾವಿರಾರು,
ಫಲಿತಾಂಶವೆರಡೆ 
ಸರಿ ಗೆಲುವೇ ಆರಿಸೋಣ ಬಿಡಿ ಗೆಲುವಾಗಿ
ಸೋಲಿಗೆ ಸೋಮಾರಿಯ ನಡೆಯಂತೆ!! 


***

ಹಾಗೇ ಸುಮ್ಮನೆ.... 

ಮೌನ ಮಾತಾಡುವ ಪರಿಯೇ ಬೇರೆ,
ಅದರೊಳ ಸೊಗಸೇ ಬೇರೆ,
ಹೇಳಲಾಗದು ಮುಚ್ಚಿಡಲಾಗದು
ಒಳಗೊಳಗೇ ಉಕ್ಕುವ ಪುಳಕಗಳ
ನವಿರು ಕಂಪನಗಳ......... 


***

ಮೇಲೊಬ್ಬ ಬರೆದಾನು 
ಜಗದ ಜೀವನ ಕತೆಗಳ
ಹಣೆಯಲಿ,
ಮನುಜನೂ ಬರೆದಾನು
ಇರುವೆ ನೆಡೆದ ಪಾದಗಳ 
ರಂಗೋಲಿ! 


28/10/2013
ಸಂಬಂಧಗಳು 
ಹೇಳಿಕೊಳ್ಳುವ ಆಡಂಬರಗಳಲ್ಲ,
ಗಳಿಸಿ ನಿಭಾಯಿಸುವ ವಿಶ್ವಾಸಗಳು


27/10/2013



ಗಾಳಿಗೇನು ಹರಡುವುದು ಬೇಕಿದ್ದ ಬೇಡದ್ದ,
ನಿನ್ನ ನೆನಪು ತಂದ ಹಾಗೇ ಕಹಿ ಕುಹುಕವೂ ಹೊತ್ತು ತಂದಿದೆ
ನಾನಲ್ಲ ನೀನಲ್ಲ ಕಾರಣ, ಆದರೆ ತಪ್ಪದು ನನಗೀ ಯಾತನೇ


***


ನನ್ನ ದೌರ್ಬಲ್ಯಗಳ ಮೇಲೆ ನೀರೆರಚಿ ಎಚ್ಚರಿಸಿ
ಧೀರರೆಂದು ಬೀಗದಿರಿ
ಸವಾಲುಗಳು ನನಗೂ ಪ್ರಿಯವೇ
ಎದುರಿದ್ದು ಗೆಲ್ಲಿರಿ ನನ್ನನು,
ಹಿಂಬದಿ ನಿಂತಲ್ಲ!


26/10/2013

Friday 25 October 2013




ನಕ್ಷತ್ರವೊಂದು 
ಒಡವಿಕೊಂಡು 
ಬಿದ್ದಿದೆ 
ಎನ್ನಂಗಳದಿ,
ನನ್ನ ನೋಡಿ
ನೀ ನಕ್ಕಾಗ :-)


***

ಕೊಡುವಾಗ ಕೊಡುತಾನಂತೆ ಹೊರಲಾಗದಷ್ಟು

ಕೊಟ್ಟಿದ್ದ ಹಿತ್ತಲಲ್ಲಿ ಅಳೆಯದಿದ್ದರೆ ಮತ್ತಷ್ಟು
ಕೊಟ್ಟದಕ್ಕೇ ಮತ್ತೆ ಕೊಂಕಾಡುತ ಕೂತಿರಲು
ಕೊಟ್ಟು ಕೊಡದಂತೆ ಅತಂತ್ರದಲಿ ನಿಲ್ಲಿಸಿಬಿಡುವ 
ತೃಪ್ತಗೊಳ್ಳದ ಮನವ ಕೊಟ್ಟು ಜೊತೆಗೆರಡು ಕಂಚಿನ ಕಿವಿಯ ಕೊಟ್ಟು!

25/10/2013

Thursday 24 October 2013


ನೆಮ್ಮದಿಯ
ಕಾಣಲು,
ನೆಮ್ಮದಿಯ
ಪರಿಚಯವಿರಬೇಕು 

***

ನಿನ್ನ ಮೌನವನ್ನೇ ಅರಗಿಸಿಕೊಂಡಿದ್ದೇನೆ
ಮಾತಾಡಿ ಸುಳ್ಳಾಡಬೇಡ
ನಿನ್ನ ಸುಳ್ಳಾಡೋ ಮಾತಿಗಿಂತ
ನಿನ್ನ ಮೌನವೇ ಸಹ್ಯ ನನಗೆ 


*** 


ನಗು ನನ್ನ ಜೊತೆಗಾರ್ತಿ
ನಿನ್ನ ಮೊದಲು ನನಗೆ
ನನ್ನ ನಂತರ ನಿನಗೆ


***


ಅವಳ ನಿಟ್ಟುಸಿರ ಕಾವಿಗೆ
ಚಳಿಗಾಲದ ಮಂಜೂ 
ಬೇಸಿಗೆಯ ಹಬೆ!!


***


ಬರೆದು ಬರೆದು ಅಳಿಸಿದೆ
ನನ್ನ ವಿಷಾದಗಳ
ನೀನೋದಬಾರದೆಂದು
ನನ್ನ ವಿಷಾದಗಳನ್ನಷ್ಟೇ 
ನೆನಪಿಡುವ ನೀನು
ನನ್ನಂತರಂಗದ ಪ್ರೇಮಧಾರೆಯ
ಸೋಕಿಸಿಕೊಳ್ಳದೆ ದಾಟಿ ನಡೆಯುವ
ಉದ್ದ ಜಿಗಿತದ ಕ್ರೀಡಾಪಟು!! 



***


ಸಾಧುತನಕ್ಕಿಂತ ಕೆಣಕುವಿಕೆಯೇ
ಹೆಚ್ಚು ಕಾಡುವುದು 
ಮನದೊಳುಳಿದು,
ಅದಿಲ್ಲದೆ ಚಡಪಡಿಕೆ,
ಏರು ಪೇರಿನ ಜೀವನ
ಪ್ರಿಯವಾದ ಮೇಲೆ 



24/10/2013

Wednesday 23 October 2013

ಹಾಗೇ ಸುಮ್ಮನೆ.......... 

ಪ್ರೀತಿ ಕನಸು ಕಾಣುವ ಹೊತ್ತು
ನಿದಿರೆ ನೀ ಹೊತ್ತು ಹೋದೆ
ಕನಸೀಗ ಕೈ ಸೇರದು,
ನೀನೆಂದು ಬರುವೆ?, ನಿದಿರೆ ತರುವೆ,
ಕನಸ ತೆರೆವೆ, ಪ್ರೀತಿ ಕೊಡುವೆ?!!! 


******************************

ನನ್ನನ್ನು ನನ್ನಂತೆ ಬಿಡರು ಈ ಜನರು
ನನ್ನ ಭಾವಕ್ಕೆ ಅರ್ಥ ಕಲ್ಪಿಸಿ ಕೆಡಿಸುವರು
ಮನದ ಕ್ಷೋಭೆಯಾಗಿಸುವರು ಉಲ್ಲಾಸವ
ನನಗೂ ಮಾತುಂಟು ಕೇಳಿದರಾಗದೇ??


****************************

ನಿನ್ನ ಮೆಚ್ಚಿಸಲಾರೆ,
ನೀ ಮೆಚ್ಚಿದರೆ 
ನಾನೀ ನೆಲದೊಳು 
ನಿಲ್ಲಲಾರೆ
ಬಹುಶಃ 
ಹಾರಿ ಹೋಗಬಹುದೇನೋ 
ಈ ಪ್ರಾಣ...!!


******************

ಸುಳ್ಳುಗಳ ಹೇಳ ಹೊರಟೆ
ನನಗೆ ನಾನೇ ಹಾಸ್ಯವೆನಿಸಿತು
ನಿಜ ಹೇಳ ಹೊರಟರೆ 
ನಿನಗೆ ಸುಳ್ಳು ಎನಿಸೀತು


*****************

ಕನಸುಗಳೆಷ್ಟೋ?, 
ಮುಚ್ಚಿಟ್ಟವು, ಬಿಚ್ಚಿಟ್ಟವು,
ಹೊರಳಿದವಷ್ಟು ಕಂಬನಿಯೊಡನೆ
ಹೊಳೆ ಹೊಳೆದವಷ್ಟು ಕಂಬನಿಯೊಳಗೆ
ಕನಸುಗಳೆಷ್ಟೋ...?
ಕಣ್ಣೊಳು, 
ಮುಚ್ಚಿ ಬಿಚ್ಚಿ ಹಚ್ಚಿಟ್ಟ ದೀಪಗಳ
ಕನಸುಗಳೆಷ್ಟೋ...


23/10/2013

Tuesday 22 October 2013

ಹಾಗೇ ಸುಮ್ಮನೆ........ 

ನನ್ನ ನೆರಳಲಿ ಅವನ ನಾ ಕಂಡಾಗಿನಿಂದ
ನನಗೆ ಕತ್ತಲೆಯ ಭಯವಿಲ್ಲ,
ಬೆಳಕೂ ಅವನೇ, ನೆರಳ ಕತ್ತಲೆಯೂ ಅವನೇ
ಒಮ್ಮೊಮ್ಮೆ ನಾನೂ ಅವನೇ ಆಗಿ ಕಾಣುವುದು
ನನ್ನ ಕಣ್ಮಂಜೇ!!! 


ಹಿರಿಯರ ಬಯಕೆ, ಙ್ಞಾನದ ದಯೆ
ಧ್ಯೇಯ ಒಳಿತಾಗಿರಲು,
ಚಿಗುರು ಚಿವುಟಿದರೂ ಮೂಡುವುದು
ಮತ್ತೆ ಮತ್ತೆ ಬಿರಿಯುತ... 


22/10/2013
ಪತ್ರವಾದರೆ ಹರಿದೀತು
ಚಿತ್ರವಾದರೆ ಅಳಿಸೀತು
ಹರಿಯದ ಅಳಿಸದ ಅಳಿಯದ
ತಂತ್ರ
ನೀ ಹೂಡಿದ ನಸು ನಗೆ
ಪ್ರೀತಿಯ ಸಲುಗೆ!


******************

ನನ್ನುಸಿರಾಗಿಹ ಅವನು
ಎಚ್ಚರಿದ್ದರೂ ಇಲ್ಲದಿದ್ದರೂ
ಹೃದಯವ ತುಂಬಿಹನು 


******************

ಯೌವ್ವನದ
ಹೊಳೆಯಲ್ಲಿ
ಪ್ರೀತಿ
ನೆರೆ


***************

ಅತಿಯಾದ ಪ್ರೀತಿ ಇದ್ದೆಡೆ
ಒಬ್ಬರನ್ನೊಬ್ಬರು ಕೆಣಕುವುದೇ ಹೆಚ್ಚು
 — feeling happy.


20/10/2013

Saturday 19 October 2013

'ಮರೆವು' ಒಂದು ವರವಂತೆ
ಧ್ಯಾನಿಸಿ ಸಾಧಿಸಬೇಕು
ನೆನಪುಗಳನ್ನೇ !! 


***************

ನಡೆವಾಗ ದಾರಿ ನೋಡಿ ನಡೆವುದು
ಓಡುವಾಗ ದಾರಿ ಸಿಕ್ಕಲ್ಲಿ ಓಡುವುದು!! 


*************

ನನ್ನ 
ಹಟಕೆ
ಪರರ 
ನೋಯಿಸಲಾರೆ
ಬಯಸಿ 
ಬಯಸಿ!!


************

ಭಾವಕೆ 
ಬಂಧನವೇ 
ನಿರೀಕ್ಷೇ;
ತೊರೆದರೆ
ಸ್ವಾತಂತ್ರ್ಯ!!


*************

ಮಾತಿಗೆ ತಡೆಯಾದರೂ 
ಮೂಕಿಯಾದೆ,
ಭಾವಕೆ ತಡೆಯಾದರೂ 
ಗೊಂಬೆಯಾದೆ,
ಎಲ್ಲವ ತಡೆದರೆಂಬ ಅಹಂ 
ಅವರೊಳು ಮಾಸಿದರೂ 
ಮಾಸದಂತೆ ಹುಸಿನಗೆಯಾದುದು;
ಎನ್ನ ಮನಸಿನೋಟವ ತಡೆಯದಾದಾಗ


19/10/2013

Friday 18 October 2013

ಅವಳ ತುಮುಲಗಳು



"ನಿಜ ಏನು?, ಹೇಳಿ. ಇಲ್ಲ 'ನೀನಲ್ಲ' ಅಂತನಾದ್ರೂ ಹೇಳಿ, ದ್ವಂದ್ವದಲ್ಲಿ ನಾನ್ ಸಾಯ್ತಾ ಇದ್ದೀನಿ. ಅಟ್ಲೀಸ್ಟ್ ಹುಚ್ಚಿ ತರ ಕವನ ಬರಿಯೊದಾದ್ರೂ ಬಿಡ್ತೀನಿ. ಪ್ಲೀಸ್,,,, ನಾನ್ ರೆಕ್ವೆಸ್ಟ್ ಮಾಡ್ತಾ ಇದ್ದೀನಿ".

ಹೀಗೊಂದು ಮೆಸೇಜ್ ಮಾಡಿದಳವಳು. ಪ್ರತಿಕ್ರಿಯೆಗಾಗಿ ಕಾದಳು. ಕಾಯುವ ತಾಳ್ಮೆ ಸಂಪೂರ್ಣ ಇಲ್ಲವೇ ಇಲ್ಲ ಎನ್ನುವ ಮನೋಸ್ಥಿತಿ ಅವಳದು. ಹಾಗಾಗಿಯೂ ೧೫ ರಿಂದ ೨೦ ನಿಮಿಷಗಳು ಕಾದಳು.. ಅವಳ ಮನದಲ್ಲಿ ಇನ್ನೆಂದೂ ಈತನನ್ನು ತಾನು ಏನೂ ಕೇಳುವುದು ಬೇಡ. ಹೀಗೆ ಪರಿತಪಿಸುವುದು ಬೇಡವೇ ಬೇಡ. ತನ್ನ ಸ್ಥಿತಿಯ ತಾನೇ ನೋಡಿಕೊಳ್ಳಲಾರದೇ ಹೆಣಗುವಳು. ಕೊನೆಯದಾಗಿ ಹೇಳುವುದಾದರೂ ಹೇಳಿಬಿಡೋಣವೆಂದು ಮನಸ್ಸು. ತಾಳ್ಮೆಗೆಟ್ಟು ಮತ್ತೊಂದು ಮೆಸೇಜ್ ಟೈಪ್ ಮಾಡಿದಳು.

"ಇಷ್ಟು ದಿನಗಳು 'ನಾನೇ ಅದು' ಅಂತ ಅಂದುಕೊಂಡಿದ್ದೆ. ಇವತ್ತು ನಿಮಗೆ ಉತ್ತರ ಕೊಡೊಕೆ ಆಗದೇ ಇರೋದು ನನಗೆ ಕಷ್ಟವಾಗುತ್ತಿದೆ. ಬಹುಶಃ ನನ್ ಕಷ್ಟ ನಿಮಗೆ ಅರ್ಥ ಆಗುತ್ತಿಲ್ಲ".
"ಇನ್ನೊಂದು ನಾನ್ ಸಾಯೊಲ್ಲ ಅನ್ನೋ ಧೈರ್ಯ ಇರಲಿ ನಿಮಗೆ. ಒಟ್ಟಿನಲ್ಲಿ ನಾನ್ ಹುಚ್ಚಿ ಅಂತು ನಿಜ ನಿಮ್ಮಿಂದ, ನಾನ್ ನಿಮಗೆ ಯಾವತ್ತೂ ಯಾವ್ ತರದಲ್ಲೂ ಅಡ್ಡಿ ಅಲ್ಲ. ಕೋಪ ಮಾಡಿಕೊಳ್ಳೊದು ಒಂದೇ ಗೊತ್ತಿರೊದು ನಿಮಗೆ. ನಾವೇನ್ ಆದ್ವಿ ಅನ್ನೋ ಕಿಂಚಿತ್ತು ಯೋಚ್ನೆ ಇಲ್ಲ ನಿಮಗೆ. ಇರ್ಲಿ, ನಿಮ್ಮ ಬಗ್ಗೆನೇ ನೋಡಿಕೊಳ್ಳಿ, ಆರಾಮಾಗಿರಿ. ನಾನು ಇನ್ನು ನಿಮ್ಮ ಸುತ್ತಾ ಮುತ್ತಾ ಇರೋಕ್ ಆಗೊಲ್ಲ. ಗುಡ್ ಲಕ್".

ಮೆಸೇಜ್ ಸೆಂಡ್ ಆಗುತ್ತಿದ್ದಂತೆಯೇ ಕಣ್ಣೀರುಕ್ಕಿ ಬಿಕ್ಕುವಳು. ಒಮ್ಮೆಲೆ ಸ್ತಬ್ಧತೆ, ತಾನು ಮಾಡುದ್ದು ಸರಿಯೋ? ತಪ್ಪೋ?, ಮತ್ತೂ ನಾನೇ ನೋಯಿಸಿದೆನೇ? ಎಂದು ಮತ್ತಷ್ಟು ಗೊಂದಲ. ಮತ್ತೇನು ಮಾಡುವುದು ಎಷ್ಟು ದಿನ ಹೀಗೆ ಕೊರಗುವುದು? ಹಗಲಲ್ಲ, ರಾತ್ರಿಯಲ್ಲವೆಂದು ಅವನೊಂದಿಗೆ ಮಾತನಾಡಿ ಪ್ರೀತಿ-ಪ್ರೇಮಗಳ ಕನಸು ಕಂಡು, ಅವನ ಅತಿರೇಕದ ಮಾತುಗಳಿಂದ ಇರಿಸುಮುರಿಸಾದರೂ ಕೊನೆ ಕೊನೆಗೆ ಅವುಗಳೇ ಪ್ರಿಯವಾಗಿ, ಅವಳೇ ಮೊದಲಾಗಿ, ತಾನು ನಿಮ್ಮನ್ನು ಪ್ರೀತಿಸುತ್ತಿರುವುದಾಗಿಯೂ ಹೇಳಿದ್ದಳು. ಸ್ಪಷ್ಟವಾಗಿ ಉತ್ತರಿಸದೆ, ಸತಾಯಿಸಿ ತಾನೂ ಅವಳಲ್ಲಿ ಅನುರಕ್ತನಾದಂತೆ ವರ್ತಿಸಿ, ಅವಳಲ್ಲಿ ಪ್ರೀತಿಯೆಂದರೆ ಹೇಳುವುದಲ್ಲ; ನಡೆಯುವುದು ಎಂಬ ಭಾವ ಮೂಡುವಂತೆ ಉಳಿಯುವನು.

ಅತೀ ಗೌರವ ಹೊಂದಿದ್ದ ಅವಳಿಗೆ ಆತನನ್ನು ಪ್ರಶ್ನಿಸಿ ಕಾಡುವ ಮನಸ್ಸಿರಲಿಲ್ಲ. ಬದಲಿಗೆ ಸಂಭ್ರಮಿಸಿದಳು. ಅವನ ಮೌನವೇ ಅವಳ ಕವನಗಳಾದವು. ಅವಳ ಪ್ರತೀ ಬರಹಗಳನ್ನು ಅವನಿಗೇ ಮೊದಳು ತೋರಿಸುತ್ತಿದ್ದಳು. ಅವನೊಪ್ಪಿದರೇ ಅಷ್ಟೇ ಖುಷಿ ಅವಳಿಗೆ. ಮೊದಮೊದಲು ಆಪ್ತರಾಗಿದ್ದೂ ಹೀಗೆಯೇ ಎನ್ನಬಹುದು. ಅವನು ತನ್ನನ್ನೇ ಪ್ರೀತಿಸುತ್ತಿರುವನೆಂದು ನಂಬಿದ್ದಳು. ಅದೇ ಧೈರ್ಯ ಅವ ನನ್ನವನೆಂದು. ಆದರೆ ಇತ್ತೀಚಿಗೆ ಅವನು ಮಹಾ ಮೌನಿ; ಇದೇ ಅವಳಿಗೆ ಸಹಿಸದ ಸಂಕಟವಾದದ್ದು. ಅವನ ಮೌನಕ್ಕೆ ಅವಳ ಬಿಕ್ಕುಗಳೇಷ್ಟೋ? ಮೌನಕ್ಕೆ ಕಾರಣಗಳನ್ನು ಊಹಿಸಿ ಊಹಿಸಿ ಹುಚ್ಚಿಯಂತಾಗುವಳು; ತನ್ನ ಹುಚ್ಚುತನಕ್ಕೆ ತಾನೇ ಬೆಚ್ಚುವಳು. "ನಾನು ನಾನಾಗಿಲ್ಲ, ನಾನಿಷ್ಟು ದುರ್ಬಲಳಾಗಲಾರೆ" ಬಡಬಡಿಸಿ ಅತ್ತು, ಚಿಂತೆಗಳಲಿ ಮುಳುಗುವಳು. ಕೊನೆಗೂ ಅವ ತನ್ನವನೆಂದ ಅಭಿಪ್ರಾಯಕ್ಕೆ ಬಂದು ಮನಸೋಯಿಚ್ಛೆ ಕವನ ಗೀಚುವಳು. ಅವಳ ಕವನಗಳೂ ಅವಳಂತೆ ಹುಚ್ಚುತನದವು. ಒಮ್ಮೆಲೆ ಬಾನೇರಿ ಹಾರುವಳು ದಿಢೀರನೆ ಅವೆಲ್ಲಾ ಕನಸಾದರೆಂದು ಭಾವಿಸಿ ಭ್ರಮೆಯಿಂದ ಮುಗ್ಗರಿಸುವಳು. ಅವನ ತಣ್ಣನೆಯ ಮೌನ ಮಂಜಿನ ಚೂರಿಯಾಗಿ ಇರಿದಾಗೆಲ್ಲಾ, ಎಲ್ಲಿ ತಾನೂ ಏನಾಗುವೆನೋ ಎಂಬ ಭಯ ಶುರುವಾಗಿಬಿಡುತ್ತದೆ. ''ಸಾಯಲಂತೂ ಸಿದ್ಧಳಿಲ್ಲ, ಯಾವ ಕಾರಣಕ್ಕೂ'' ಎಂಬ ಸಿದ್ಧಾಂತವನ್ನು ಹಲವು ವರ್ಷಗಳಿಂದ ಪಾಲಿಸಿದವಳು. ಏನೇ ಆದರೂ ಜೈಯಿಸುವೆ ಎನ್ನುವ ಮನೋಭಾವ ಅವಳಲ್ಲಿ ಸದಾ ಜಾಗೃತ. ಹೀಗಿರುವಾಗ ಬಹಳ 'ಗಟ್ಟಿ' ಎನಿಸಿಕೊಳ್ಳುವವಳು ಈಗ ಅವನ ಪ್ರೀತಿಗೆ ಸಿಕ್ಕಿ, ಅವನ ಮೌನಕ್ಕೆ ಮೇಣದಂತೆ ಕರಗುತ್ತಿರುವಳು. ಒಮ್ಮೆಲೆ ನಾಶವಾಗದಿದ್ದರೂ, ಇಂಚಿಂಚೇ ಸವೆಯುತ್ತಿರುವಳು. ಇದ್ಯಾವುದರ ಪರಿವೆ ಅವನಿಗಿಲ್ಲ.....

ನೊಂದ ಅವಳ ಮನ ಹಾಡಿಕೊಳ್ಳುವುದು......

ಮೇಣದ ಬತ್ತಿಯಂತಾದೆ ಇಂದು ನಾ
ನಿನ್ನ ಮೌನದ ಜ್ವಾಲೆ ನನ್ನಲ್ಲುರಿಯುತ್ತಿರಲು
ನಾನಿಲ್ಲುವೆ ಕಾಣುವ ಕಣ್ಗಳಿಗೆ ಬೆಳಕ ಶೋಭಿಸುತ
ಅಳಿಯುವೆ ನಿನ್ನ ಮೌನದೊಂದಿಗೆ..... still i love u

ಅವಳ ಮನದ ಮಾತುಗಳೋ ಕಾದಂಬರಿಯ ಸಾಲುಗಳೋ ಎಂಬಂತೆ ಅನಿಸುವುದು ಅವಳಿಗೂ ಒಮ್ಮೊಮ್ಮೆ. ಇಂದಿನ ಯಾಂತ್ರಿಕ ಬದುಕಿನಲ್ಲಿ ಈ ಹಳೆ ಮಾಡೇಲ್ ಎಲ್ಲಿಂದ ಬಂದಳೋ ಎನಿಸುವಂತೆ ಅತೀ ಭಾವುಕತೆ. ಅದೇ ಅವಳಿಗೆ ಮುಳುವೆನೋ ಅನಿಸುವುದು. ಅವಳ ರಾಗದಲ್ಲಿ ಅವಳು ಹಾಡಿಕೊಳ್ಳಲಿ ಅವಳ ಹಣೆಬರಹ!


ಅವಳು ಅವನಿಗಾಗಿ; ಅವನು ಅವಳಿಗಾಗಿ.... ಮೌನ ಪ್ರೇಮಿಗಳು ಅಲ್ಲಿ ಇಲ್ಲಿ ನಮ್ಮ ನಡುವೆ ಕಾಣ ಸಿಗುವ ಕತೆಗಳೋಳಗಿನ ಚಿತ್ರಣಗಳು.    

18/10/2013

Thursday 17 October 2013

ನನ್ನ ಕೋಪಕ್ಕೆಲ್ಲಿ ಬೆಲೆ?
ಇಂದ್ರ ಚಂದ್ರನೆಂದು ಅಟ್ಟಕೇರಿಸಿರುವೆ
ಈಗೆಲ್ಲಿಳಿದಾರು ಕೆಳಗೆ;
ಸೋಲಿನ ರೂಢಿಯವಳು ನಾನಿರುವಾಗ



********************

ಸೋಲದ 
ಗಂಡು 
ಅವನು;
ಸೋಲಿಗಂಜದ 
ಹೆಣ್ಣು 
ನಾನು!!



**********

ಪ್ರೀತಿಯಲಿ 
ಸೋಲು-ಗೆಲುವಿನಾಟ
ಕೊನೆಗೊಳ್ಳಲಿ 
ಪ್ರೀತಿಸುವ 
ಪ್ರೀತಿಸಿಕೊಳ್ಳುವ 
ರೀತಿಯಲಿ 


**********************

ಸತ್ಯಕ್ಕೆ ಬೆನ್ನು ಮಾಡಿ ನೆಡೆದಷ್ಟೂ
ಸತ್ಯದಿಂ ದೂರಾಗಬಹುದು,
ಸತ್ಯ ಕಾಂತಿಯ ನಂದಿಸಲಾಗದು


*******************

ಹಾಗೇ ಸುಮ್ಮನೆ.......... 

ಸಂಜೆಯ ಹೊಂಗಿರಣಗಳ ಕಾಂತಿಯಲಿ
ಕಾಂತ, ನಿನ್ನ ಕಲ್ಪಿತ ರೂಪ ಬಲು ಅಪರೂಪ


********************

ನಿನ್ನಂತೆ ನಾನಾಗಲಾರೆ
ನನ್ನಂತೆ ನೀನಾಗಲಾರೆ
ಇಬ್ಬರೂ ಒಂದೇ ವ್ಯಕ್ತಿತ್ವವಾದರೆ
ಬದುಕಲಿ ಏನಿದೆ ಸ್ವಾರಸ್ಯ?! 


17/10/2013

Wednesday 16 October 2013

ಅವನ
ನೆನೆದ
ಪದವೆಲ್ಲಾ
ಹನಿಗಳು!
 


***********

ಪ್ರೀತಿ 
ಕಣ್ ತುಂಬಿ 
ನಿದ್ದೆ 
ಇಲ್ಲ 


***********

ನನ್ನವೇ ಕೆಲ ಸಾಲುಗಳು
ನನ್ನನೇ ಅಚ್ಚರಿಗೊಳಿಸಿ
ಮನಸಿಗೆ ಮುದ ನೀಡಿ
ರಮಿಸುವಂತಿರಲು;
ನನಗೆ ನಾನೊಬ್ಬ ಪ್ರಿಯ ಸ್ನೇಹಿತೆ
ಹಾಗೇಯೇ ಪ್ರೇಮಿ!!
 

17/10/2013
ಹಾಗೇ ಸುಮ್ಮನೆ........... 

ನಿನ್ನ ಮಾತೊಳು ನನ್ನ ದನಿಯಿರಲು
ನನ್ನ ದನಿಯೊಳು ನಿನ್ನ ಒಲವಿರಲು
ವಿರಹವೂ ಸವಿಯಾಗಿರಲು
ಮನದ ಪ್ರೀತಿ ಹಸಿರಾಗಿರಲು
ಬೇಕಿಲ್ಲೇನು ಬೇರೆ, 
ನೀನಲ್ಲದೆ!


*****************

ಬೊಗಸೆಯಷ್ಟು ನಿರೀಕ್ಷೆಗೆ 
ಊರಗಲ ಬೆಳ್ಳಿ ಮೋಡ
ಸುರಿಸಿದ ಧಾರೆಯಲಿ
ಪ್ರೀತಿ ಹೊಲ ಹುಲುಸಾಗಿ
ಜೀವನ, ಚಿರನೂತನ!


****************

ಹೊಳೆಯ ದಾಟಿಸೊ ಅಂಬಿಗ
ಹಾಡಿಕೊಳ್ಳುವನು ತನಗಾಗಿ,
ಕೇಳಿದವರು ಪುಳಕಗೊಂಡರು,
ಕೆಲವರು ಹೊಗಳಿದರು;
ಮೆಚ್ಚುಗೆಯ ಪರಿವೆಯಿಲ್ಲದೆ
ರಾತ್ರಿಯ ಕರಿ ನೀರಿನಲ್ಲೂ 
ಸೊಗಸ ಕಂಡು, 
ಹಾಡುವನಂಬಿಗ
ಒಬ್ಬಂಟಿಯಾಗಿಯೂ, 
ಪರರಿಗಲ್ಲ ತನಗಾಗಿ

ತನ್ನ ಪ್ರಸನ್ನ ಮನಸ್ಸಿಗಾಗಿ

****************


ಸೋಲಿನಲ್ಲಿಲ್ಲದ 
'ಸೋಲು'
ಸೋತೆನೆನ್ನುವುದರಲ್ಲಿದೆ!



*******************
ಭಾವ ಸ್ವಸ್ಥವಿರುವವರೆಗೂ
ಕವನ ಹರಿವುದು;
ಮಾತು ನಿಂತಾಗಲೂ
ಮೌನ ಹರಟುವುದು; 
ತನ್ನಲ್ಲಿ ವಿಶ್ವಾಸವಿರುವವರೆಗೂ
ನಗುವು ನಲಿವುದು 
ನೋವಿನಲ್ಲೂ!


16/10/2013

Tuesday 15 October 2013

ಕುಳಿರ್ಗಾಳಿಗೆ ತಿಳಿಯದು
ಅದು ಹೊತ್ತು ತಂದ
ಇನಿಯನ ಮೌನ ಸಂದೇಶ
ಎನ್ನ ಮನದೊಳೆದ್ದ ಪ್ರೀತಿ ಭೋರ್ಗರೆತ !


**********************

ಬೆಳಕಿಗಿಂತ ಹೆಚ್ಚು ಕಾಡಿದ್ದು ಕತ್ತಲು
ಬೆಳಕಿಗೆ ಹಾತೊರೆದ ಪ್ರೀತಿಯಲಿ
ಬೆಳಕಿಗೆ ತನ್ನ ತೆರೆದುಕೊಂಡ ರೀತಿಯಲಿ
ಬೆಳಕನೆಂದೂ ತಿರಸ್ಕರಿಸದ ಅದರ ನೀತಿಯಲಿ


************************

ಬೇಸರಕೆ ಬಿಡುವಿಲ್ಲ,
ಬರಿದು ಕನಸುಗಳ
ಬರಿದು ಮನಸುಗಳ
ಭರ್ತಿ ತುಂಬುವ,
ನಿತ್ಯ ನಿರಂತರ ಕರ್ಮದಲಿ


15/10/2013