ಮಾಯಾ ಜಿಂಕೆ
ಮಾಯಾ ಜಿಂಕೆಯ
ಬೆನ್ನು ಹತ್ತಬಾರದು
ಹೌದು
ಅದು "ಮಾಯಾಜಿಂಕೆ"
ಅದು ಕಾರಣ
ಅದರ ಬೆನ್ನೇ ಬಿಡದು
ನನ್ನನು...!
ಬೇಟವೇ ಬೇಟೆಯಾಗಿ
ನಿಲ್ಲಿಸಿರಲು
ಜಿಂಕೆ ಓಡಿದಂತೆ
ಈ ಕಣ್ಣ ಓಟ
ಅದರ ಕಣ್ಣ ಕಾಂತಿಗೆ
ಪೈಪೋಟಿಗೆ ಬಿದ್ದು
ಶರವೇಗದ ಬುದ್ದಿಯ ಆಟ!
ಭೃಂಗದ ಬೆನ್ನೇರಿ ಬಂದ
ಶೃಂಗಾರದಂತೆ
ಕಣ್ಣೆವೆಗಳೆಲ್ಲಾ ಸೂಜಿಮೊನೆಯಾಗಿ
ನಾಟುತ್ತಲಿವೆ, ಹೀರುತ್ತಲಿವೆ
ಆಸೆಗಳನು
ಓಡುವ ಜಿಂಕೆಯ
ಮೈಮೇಲಿನ ನೂರಾರು ಕಣ್ಣುಗಳಲಿ
ನೆಟ್ಟು ನೆಟ್ಟು!
ಈ ಮೋಜಿನಾಟದಲಿ
ಸೋತವರು ಯಾರೋ
ಜಿಂಕೆಯೋ?
ಕಾಮನೆಯ ಬೇಟವೋ?
ಮಿಂಚಿ ಮಿಂಚಿ ಕರೆಯುತ್ತಿರೆ
ಓಟದ ದಾರಿಯೋ
ಓಡಿ ಓಡಿ ಹಿಡಿಯುತ್ತಿಹ
ನನ್ನದೋ?!
ಮಾಯಾಜಿಂಕೆಯ ಬೆನ್ನತ್ತಿ ನಿಂತೆ....
14/05/2015
No comments:
Post a Comment