Wednesday 9 December 2015

ಪದ್ಯ

ಭಾವಗಳ ಕನ್ನಡಿ

ಬರೆಯಲು ನಾನೇನು
ಕವಿಯಲ್ಲ
ಭಾವಗಳ ಕನ್ನಡಿ

ಹುಟ್ಟಿದ ಕಲ್ಪನೆಗೆ
ಭಾವಗಳ ತಾಳೆಯಷ್ಟೆ
ಕನ್ನಡಿಗೆ ಅಕ್ಷರಗಳು ಬಡಿದು
ಉದುರಿದ ಪ್ರತಿಬಿಂಬಗಳೇ
ಸಾಲು ಹನಿಗಳು

ಲಯವಿಲ್ಲ ನಯವೂ
ಕಲಿಯುತ್ತಿರುವೆ ಭಾಷೆಯ
ನಾನು ಕನ್ನಡಿಯ ವಿದ್ಯಾರ್ಥಿ ...

09/12/2015

ಪದ್ಯ

ಕಣ್ಮುಚ್ಚಿ ಕೂತ ಬುದ್ಧ


ಕಣ್ಮುಚ್ಚಿ ಕೂತ
ಬುದ್ಧನೆದುರು
ನನ್ನದು ಪ್ರಶ್ನೆಗಳ ಸುರಿ ಮಳೆ
ಒಂದಕ್ಕಾದರೂ ಉತ್ತರಿಸುವನೇನೋ
ಕಾದು ಕೂತೆ... 

ಅಷ್ಟು ಹೊತ್ತು ಒದರಿದ ನಂತರ
ಒಂದು ದೀರ್ಘ ನಿಟ್ಟುಸಿರು
ಗಲಭೆ ನಿಂತ ಮನ
ಆವರಿಸಿದಂತೆ ಪ್ರಶಾಂತತೆ
ಬುದ್ಧನುದಯಿಸಿದ ತೋರಿ ಸಹನೆ... 

ಮಳೆಗಾಲದ ಕೋಗಿಲೆಯ 
ಮೌನ ಕಲಿಸಿದ
ಬದುಕಿನ ಪ್ರಶ್ನೆಗಳಿಗೆ 
ಮಳೆ ಋತು ಮಾನಗಳು ಸಮೀಕರಿಸಿದ
ಎದ್ದು ನಿಂತೆ 
ಕೆಲ ಪ್ರಶ್ನೆಗಳನ್ನಷ್ಟೇ ಆಯ್ದು 
ಅಲ್ಲಿಂದ ಹೊರಟುಬಿಟ್ಟೆ
ಬುದ್ಧನಿನ್ನೂ ಕಣ್ಮುಚ್ಚಿಯೇ ಕಾದು ಕೂತ
ಮತ್ತಿನ್ಯಾರಿಗೋ...

08/12/2015
ನನ್ನವಳ ಕೆನ್ನೆ ಹೂತೋಟದಲ್ಲಿ
ಕಪ್ಪು ದುಂಬಿಯ ಕಾಟ ಹೆಚ್ಚಾಗಿದೆ
ಮುತ್ತಿಕ್ಕುವಾಗ ಪ್ರತಿಭಟಿಸಿದಂತೆ ಎದುರಾಗಿ..!

07/12/2015

ಪದ್ಯ

ನನ್ನ ಸೋಲು


ಕೊನೆ ಪಕ್ಷ
ನನ್ನ ಸೋಲನ್ನಾದರೂ
ಸ್ವೀಕರಿಸಿ..
ಮುಂದೆ ನೀವು
ಮತ್ತೆ ಮತ್ತೆ ಸೋಲಿಸಬಹುದು... 

ನೀವು ಕಡೆಗಣಿಸಿದ ನನ್ನ ಸೋಲೂ ಸಹ
ಎದ್ದು ನಿಲ್ಲುವುದು
ಗೆಲುವನ್ನೆಚ್ಚರಿಸಲು ಇಲ್ಲದ ಹಠತೊಟ್ಟು
ದಯಮಾಡಿ ಸ್ವೀಕರಿಸಿ..

ಗೆದ್ದೆನೆಂದರೆ ಅದು
ನಿಮ್ಮನ್ನೇ ಸೋಲಿಸುವುದಲ್ಲ
ಸೋತ ತಾಣಗಳಿಂದ
ಬೇಡಿಕೆಯಿಲ್ಲದೆ ಹೊರಗುಳಿವುದು
ಒಪ್ಪದ ನಿಮ್ಮನಗಳ ಗೆಲ್ಲುವ ಪ್ರಯತ್ನಗಳ ಕೈಚೆಲ್ಲಿ..

ಸೋತು ಬಿಡಿ
ಈ ನನ್ನ ಸೋಲುಗಳನ್ನು 
ಪೋಣಿಸಲು ಒಪ್ಪಿಬಿಡಿ

ನೀವು ಒಪ್ಪದ ಹೊರತು
ಗೆಲ್ಲುವುದು
ನನಗೆ ಅನಿವಾರ್ಯವಾದೀತು
ನೀವು ಗೆದ್ದೀರಿ ಹೌದು
ಹೀಗೂ ಸೋತುಬಿಡಿ
ಈ ಸೋಲುಗಳನ್ನೊಪ್ಪುವ ನನ್ನ ಮಾತಿಗೆ

ಸೋಲಿಗಾದರೂ ಬೆಲೆ ಕಂಡೆನೆಂದು
ಹೀಗೆ ಹಿಗ್ಗುವೆ..
ಕಳೆದು ಕೂಡುವೆನೆಂದುಕೊಂಡೆ
ಶೂನ್ಯವಾಗುಳಿದೆ
ಭಾಗಿಸಲು ಬಂದ ಸೋಲುಗಳಿಗೆ
ಇನ್ಫಿನಿಟೀ ಆದೆ..!
ನಗುವಿದೆ, 
ಈ ಸೋಲುಗಳಿಗೋ, ಅರ್ಪಣೆಗೋ..
ಸೋಲಿನ ಖಿನ್ನತೆಯು ತಲೆಗೇರಿ
ನಕ್ಕೇನು ...
.........
ನಗುವುದು ಮುಖ್ಯವಷ್ಟೇ...

07/12/2015

ಪದ್ಯ

ಚಳಿಗೆ ಎಷ್ಟೊಂದು ಆಪಾದನೆಗಳು

ಮಳೆ ಹನಿಗಳಿಗೆ 
ಬಸೆದು ವಿರಹ
ತಂದುಕೊಂಡು ನೂರು ಕಲಹ
ಎದೆಯೊಳೆಲ್ಲ ಕೋಲಾಹಲ

"ಧೋ.."
ಎಂದು ಸುರಿವ 
ಮಳೆಯ ಸಾಂತ್ವಾನ
ಹ್ಞೂ ಹು ಇಲ್ಲವೇ ಇಲ್ಲ,
ಒಂದು ಘಳಿಗೆಯೂ ವಿರಾಮ

ಕನವರಿಕೆ ಚಡಪಡಿಕೆ
ಕನಸಳೊಂದು ಸುಂದರ ಕಲ್ಪನೆ
ರಾತ್ರಿ ಹಗಲಿನ ಮೇಲೆ
ಅದೇನೋ ದ್ವೇಷ

ಮಳೆ ಹನಿಗಳು 
ಮನದೊಳು ತೇಲಾಡಿ 
ಹಸಿಯಾಡಬಾರದಿತ್ತು
ಹೆಪ್ಪುಗಟ್ಟಿದ ಕಾಮನೆ 
ಉರಿದೇಳಬಾರದಿತ್ತು

ಹೀಗೆ ಬೆನ್ನಿಗೆ ಬಿದ್ದು 
ನನ್ನ ನೀ ಕಾಡಬಾರದಿತ್ತು
ಎಲ್ಲಾ ಈ ಚಳಿಯ ಮಹಿಮೆಯೋ
ನಿನ್ನಿಂದಾಗಿ ಆಪಾದನೆಗಳೆಷ್ಟೋ 
ಸುಮ್ಮನೆ ಈ ಚಳಿಗಾಲಕೆ..

02/12/2015

ಪದ್ಯ

ಎಳಸು ಹಸಿರೆಲೆಯ ಮೇಲೆ
ನೀರ ಹನಿಗಳು
ಅಧರಗಳ ಮೇಲೆ
ಹಗುರಾದ ಮುತ್ತುಗಳು
ತಿಳಿದೆಯಾ ಇನಿಯ...

ಮುಂಜಾವಿನ ರಮ್ಯತೆಗೆ
ಸೂರ್ರನ ದಿವ್ಯ ಕಿರಣಗಳು
ಹಾಸು ಹುಲ್ಲಿಗೆ
ಮಳೆಗರಿದ ಹೂ ಮರಗಳು
ನಮ್ಮ ಪ್ರೀತಿಗೆ ಕಾಣ್ಕೆ ಹುಡುಗ...

ನೀಲಿ ಬಾನು ಹೊತ್ತ ಹವೆಗೆ
ಚುಮು ಚುಮು ಚಳಿಯು
ರೋಮಾಂಚನದ ಪ್ರೇಮ ಕಾವಿಗೆ
ಗಟ್ಟಿಕ್ಕಿಕೊಂಡ ಬೆರಳುಗಳು ಬೆಸೆದುಕೊಂಡು ಒಲವು
ನಮ್ಮದು ಗೆಳೆಯ... !

01/12/2015


ನೀನು
ನನಗೆಂದೂ ಸ್ವಂತ
ನಾನು
ನನಗಲ್ಲದೆ ಉಳಿದು.. !

ನೀನು
ಕನಸಿಗೆ ಹಸಿರು
ನಾನು
ಆಸೆ ತೀರದೆ ಪಟು..

ನೀನು
ಕಣ್ಣ ಕಾಂತಿಯು
ನಾನು
ನಿನ್ನಪ್ಪುವ ಕಾಡಿಗೆ ಕಪ್ಪು 

ನೀನು
ಮೀರಿದ ಜಾಣ್ಮೆ
ನಾನು
ನಿಷ್ಠೆಯ ಅನುಯಾಯಿಯು

ನೀನು
ನಿತ್ಯ ಪ್ರೀತಿಯು
ನಾನು
ಮೋಹದ ಮಡಿಲು

ನೀನು
ಅಭೇದ ಶಕ್ತಿಯು
ನಾನು
ನಿನ್ನ ಭಕ್ತಳು

ನೀ
ಎನ್ನ ಆತ್ಮವು
ನಾ ನಿನ್ನ
ಪ್ರೇಮಿ ಸಾವಿನ ಅಂಚಿಗೂ... 

ನೀ ಎನ್ನ
ದಿವ್ಯವು
ನಾ ನಿನ್ನ 
ರೂಪದಿಂದಿಳಿದ ಬೆಂಕಿಯ ಮಿಣುಕು...!!!

ನೀನು
ನನಗೆಂದೂ ಸ್ವಂತ
ನಾನು
ನನಗಲ್ಲದೆ ಉರಿದುಳಿದು.. !

26/11/2015


*****

ಮಿಡಿತವ ಹಿಡಿದಿಡಲಾರದ ನಾಡಿಗಳಲ್ಲಿ
ಹರಿಯುವುದು ರಕ್ತ 
ಮಿಡಿತವ ಹತ್ತಿಕ್ಕಿಕೊಂಡಲ್ಲೂ 
ಮಿಡಿವುದು ರಕ್ತ
ಉದ್ವೇಗ ಆವೇಗಗಳಲ್ಲಿ
ಸಿಡಿದು ನರ ನಾಡಿಗಳು ...

24/11/2015

ಪದ್ಯ



ಮೌನದ ಬೇಲಿಯಿಟ್ಟು
ಎಲ್ಲರನೂ ದೂರವಿಟ್ಟೆ
ಅದೇನೋ ಆತಂಕ
ಕಸಿದುಕೊಳ್ವರೇನೋ ಧ್ಯಾನ

ಮಾತಿನ ಪ್ರೀತಿಯಿಟ್ಟು
ಅವರೆಲ್ಲರನೂ ಬಳಿಗೆ ಕರೆದುಬಿಟ್ಟೆ
ಅದೇನೋ ವ್ಯತ್ಯಾಸ
ಮುತ್ತಿನೊಡವೆಗೆ 'ಬಿಳಿ' ಎಚ್ಚರಿಕೆ

ಕನಸಿನ ಮಾಲೆತೊಟ್ಟು
ಕಾಲಿಗೆ ಗೆಜ್ಜೆಯನೇ ಕಟ್ಟಿಬಿಟ್ಟೆ
ಅದೇನೋ ಹೊಸ ಮೋಜು
ಸೋಲು ಗೆಜ್ಜೆಯದೋ? ಕುಣಿತದೋ?
ಹೆಜ್ಜೆ ನಿರಂತರ...

23/11/2015

Divya Anjanappa updated her status.
5:
ಮೌನದ ಬೇಲಿಯಿಟ್ಟು
ಎಲ್ಲರನೂ ದೂರವಿಟ್ಟೆ
ಅದೇನೋ ಆತಂಕ
ಕಸಿದುಕೊಳ್ವರೇನೋ ಧ್ಯಾನ

ಮಾತಿನ ಪ್ರೀತಿಯಿಟ್ಟು
ಅವರೆಲ್ಲರನೂ ಬಳಿಗೆ ಕರೆದುಬಿಟ್ಟೆ
ಅದೇನೋ ವ್ಯತ್ಯಾಸ
ಮುತ್ತಿನೊಡವೆಗೆ 'ಬಿಳಿ' ಎಚ್ಚರಿಕೆ

ಕನಸಿನ ಮಾಲೆತೊಟ್ಟು
ಕಾಲಿಗೆ ಗೆಜ್ಜೆಯನೇ ಕಟ್ಟಿಬಿಟ್ಟೆ
ಅದೇನೋ ಹೊಸ ಮೋಜು
ಸೋಲು ಗೆಜ್ಜೆಯದೋ? ಕುಣಿತದೋ?
ಹೆಜ್ಜೆ ನಿರಂತರ...

23/11/2015

ಪದ್ಯ

ನಿನ್ನ ಪಾದಗಳು..

ನಿನ್ನ ಪಾದಗಳು
ಕೋಮಲವಲ್ಲ ಕಣೆ ಹುಡುಗಿ
ಆದರೆ ನಾನದ ಚುಂಬಿಸಲು 
ಹವಣಿಸುವೆನು 

ಹೊಳಪಿಲ್ಲ ಹೌದು 
ಕಾಣುವುದು ಕಣ್ಣಿಗೆ
ನುಣುಪಾಗಿ ನಲುಗುವುದು 
ಕಣೆ ಜಾಣೆ ನನ್ನ ಸ್ಪರ್ಷಕೆ 

ಪಾದ ನಿನ್ನವು 
ಸುಂದರ ಕಣೆ ಹುಡುಗಿ
ಬಾಗಿ ನಾನಿಂದು ಚುಂಬಿಸುವೆ
ತಪ್ಪಿದರೆ
ಜನ್ಮಗಳೇ ಕಾಯುವೆನು
ನಾ ನಿನ್ನ ಪ್ರೀತಿಸುವೆನು...'
ನಿನ್ನ ಪಾದ..

ನಿನ್ನ ಪಾದಗಳು
ಕೋಮಲವಲ್ಲ ಕಣೆ ಹುಡುಗಿ
ಆದರೆ ನಾನದ ಚುಂಬಿಸಲು 
ಹವಣಿಸುವೆನು 

ಹೊಳಪಿಲ್ಲ ಹೌದು 
ಕಾಣುವುದು ಕಣ್ಣಿಗೆ
ನುಣುಪಾಗಿ ನಲುಗುವುದು 
ಕಣೆ ಜಾಣೆ ನನ್ನ ಸ್ಪರ್ಷಕೆ 

ಪಾದ ನಿನ್ನವು 
ಸುಂದರ ಕಣೆ ಹುಡುಗಿ
ಬಾಗಿ ನಾನಿಂದು ಚುಂಬಿಸುವೆ
ತಪ್ಪಿದರೆ
ಜನ್ಮಗಳೇ ಕಾಯುವೆನು
ನಾ ನಿನ್ನ ಪ್ರೀತಿಸುವೆನು...

20/11/2015

ಪದ್ಯ

ನೆಮ್ಮದಿಯ ಬೆನ್ನು ಮುಗ್ಧತೆ...!


ನೆಮ್ಮದಿಯ ಬೆನ್ನು
ಮುಗ್ಧತೆ ..! 
ಹೀಗೆ ನಾನಂದಾಗ
ಹಿಂದೆಯೇ ಅನಿಸುವುದು
ಏನೂ ತಿಳಿಯದ ಸ್ಥಿತಿಯು
ಅದು ಹೇಗೆ ನೆಮ್ಮದಿಯೆಂದು?! 
ತಿಳಿಯದೆಯೂ ಅನೇಕ ತಿಳಿದವುಗಳು
ಕಾಡದೆ ಇರುವುದೇ.. ?!

ತಿಳಿಯಲಿ ತಿಳಿಯದಿರಲಿ
ನೆಮ್ಮದಿಯದು ಒಂದು ಮನಃಸ್ಥಿತಿ 
ಪಡೆಕೊಳ್ಳುವುದು ಮನದ ಸಾಧನೆ..
ಈಗ ನೆಮ್ಮದಿಯಾಯ್ತು
ನೆಮ್ಮದಿಯ ವ್ಯಾಖ್ಯಾನ ಮಾಡಿ
ಮುಗ್ಧತೆಗಳನೆಲ್ಲಾ ಬದಿಗೊತ್ತಿ
ತಿಳಿದುಕೊಳ್ಳುವ ಹೊಸ ರೀತಿಗೆ.. 

ತಿಳಿದ ತಿಳಿಯದ
ಆ ಎಲ್ಲಾ ವಿಚಾರಗಳಿಗೂ
ಸ್ಪಂದಿಸುವ ಮಾತು ಕೊಡದಿರಲಿ ಮನವು
ತೂಗಿ ಅಳೆದು ತುಂಬಿಕೊಳ್ಳಲಿ
ಕೆಲವನಷ್ಟೇ ಶ್ರೇಷ್ಠವೆನಿಸಿದವು..
ಉಳಿದ ಮುಕ್ಕು ತುಕ್ಕುಗಳನ್ನು
ಎಲ್ಲಿ ಬಿಟ್ಟೆವೋ ಅಲ್ಲಿಯೇ ಮರೆತು.. 

ಮುಗ್ಧತೆಯು ಈ ನಡುವೆ ಎದ್ದು ನಿಂತು
ತಿಳಿದ ತಿಳಿಯದ ವಿಚಾರ-ಅನಿಸಿಕೆಗಳಲ್ಲಿ
ಜಾಣ ಕಿವುಡಾಗುಳಿಯಲಿ
ಮತ್ತೆ ಮತ್ತೆ
ನೆಮ್ಮದಿಗೆ ಬೆನ್ನಾಗಿ...!

20/11/2015



ಸಿಗದ ವಸ್ತುವನ್ನು 
ಹೆಚ್ಚು ಸ್ಮರಿಸುತ್ತೇವೆ..
ಆಗಾಗ ನೆನಸಿ ಅಳುತ್ತೇವೆ
ಇದರ ನಡುವೆ ಸುಳಿವ ನಗು
ಬರೆಸಿಕೊಂಡು ನಗುತ್ತದೆ.. 

*****

ಎಲ್ಲವ ಪಡದೇ 
ಸುಖಿಸುವೆನು 
ಎನ್ನುವ ಮಾತು
ಸುಳ್ಳೇ
ಪಡೆಯದೇ ಉಳಿದರೂ
ನಗು ಮುಖವ ಉಳಿಸಿಕೊಂಡರೆ
ಅದುವೇ ಸುಖವು...

20/11/2015
ಸ್ವೇಚ್ಛಾಚಾರ ಮತ್ತು ಸ್ವಾತಂತ್ರ್ಯ
ಎಂದಿಗೂ ಅರ್ಥ ವ್ಯತ್ಯಾಸವಾಗದಿರಲಿ
ನೊಂದ ಮನವು
ಹುಡುಕಿ ಬಾರದು
ಮತ್ತೆಂದೂ
ಮೊದಲಿನಂತೆ ನಂಬಿ... !

18/11/2015
******

ಎಳೆದಂತೆ ಹಗ್ಗ
ಜಗ್ಗುವುದು ಹೌದು
ಆ ಕಡೆಗೆ ಹೆಚ್ಚುವುದು
ಅಷ್ಟೇ ಸೆಳೆತ

ಯಾಕಷ್ಟು ಬಲವ
ಸಲೀಸಾಗಿ ತುಂಬುವುದು
ಆಸೆಗೆ ಹಿಡಿದೆಳೆದು..?!

ಅವಸರಕೆ ಕಣ್ ಬಿಡುವ ಹೊತ್ತಿಗೆ
ಹಗ್ಗ ಎಲ್ಲಿಗೋ ಹಾರಿ.. 
ಕೈ ಜಾರಿ ಮನ ಪೂರ ಖಾಲಿ...

17/11/2015


ದಿನವೂ ನಾನರಸಿ ತರುವ ಹೂಗಳಲಿ
ಎಷ್ಟೋ ಕಳೆಗಳುಂಟು
ಬಿಡಿಸಿ ಕಟ್ಟುವುದರೊಳಗೆ ತಡವಾಗುವುದು
ಹೂ ಮಾರುವುದಕೆ
ಹಾದಿ ಬೀದಿಯ ಗಾಳಿಯೇ
ನೀನಷ್ಟು ಹುಡಿಯ ತುಂಬದಿರು
ನನ್ನೀ ಬುಟ್ಟಿಯ ಹೂ ಮಾಲೆಗೆ 
ಬೇಸತ್ತು ಹೂಕಟ್ಟುವುದ ಬಿಟ್ಟೇನು
ಹೊಟ್ಟೆಗಿಲ್ಲದೆ ಬರಿದೇ ಸತ್ತೇನು..


**********

ಏನೆಲ್ಲಾ ಬರೆವವರು
ಹಾಗೆ ಬದುಕಲಿಲ್ಲವಂತೆ
ಬದುಕು ಅಷ್ಟು ಸುಲಭವೇ?
ಕಂಡೊಡನೆಯೇ ಕಣ್ಣಿಗೆ ದಕ್ಕಿಬಿಡಲು?.. 

15/11/2015