Wednesday 19 November 2014



ಬೋಗಿಗಳೆಲ್ಲಾ ಮುಂದೆ ಹೋದ ಮೇಲೆ
ಹಿಂದೊಂದು ಎಂಜಿನ್ ಉಳಿದಿತ್ತು
ಹಿಮ್ಮುಖವಾಗಿ ಕರೆಯುತ್ತಿತ್ತು ನನ್ನನೇ!
ಓಡಿ ಹೋಗೋ ಕಾಲ ಬಂದಾಯ್ತು! 

18/11/2014

^^^^^^^^^^^^^^^^^^^^^^

ಮುಖವೇ ಬೇಡವೆಂದು ಹೊರಟಿದ್ದೇ 
ಮೂಲೆಯ ಮರೆಯ ಬಯಸಿ, 
ಗೋಡೆಗಳೇ ಇಲ್ಲದ ಬಯಲಲಿ 
ಬಿಳಿಚಿಕೊಂಡ ಮುಖವೇ ಗುರಿಯಾಯ್ತು 
ಬೆಳಕಿಗೆ;
ಇದು ಮುಖವಾಡವಲ್ಲಾ ಎಂದರೆ 
ಅವರ್ಯಾರು ನಂಬುತ್ತಿಲ್ಲ!

^^^^^^^^^^^^^^^^^^

ಇವಳನು ಕಳೆದುಕೊಳ್ಳುವ ಭಯದಲಿ
ಅವರೇ ಕಳೆದು ಹೋದರು
ಇವಳೂ ಹುಡುಕಲಿಲ್ಲ ಮತ್ತೆ
ಕತೆಗೊಂದು ತಿರುವು! 

17/11/2014

ಕವನ

ನದಿಯು...


ನದಿಯು (ನೀರು) ಹಳ್ಳ ಬಿದ್ದಲ್ಲಿ ಹರಿಯುತ್ತದೆ 
ಧುಮುಕೊ ಭರದಲಿ 
ಆಗಾಗ ಕದಡುತ್ತದೆ!
ಮತ್ತೂ ಹರಿಯುತ್ತದೆ 
ಇನ್ನೆಲ್ಲೋ ತಿಳಿಗೊಳ್ಳುತ್ತದೆ

ಹರಿಯುವುದು ತಿಳಿಗೊಳ್ಳುವುದು
ನಿಂತು ಕಾಲ ಮರೆವುದು
ನೀರ ಗುಣಕ್ಕದು ಹೊರೆಯೇ ಅಲ್ಲ
ಆದರೂ ಕದಡಿದಾಗ ನೊಂದು
ತಿಳಿಗೊಂಡಾಗ ಕಾಲನೊಡನೆ ಹೊಳೆಯುತ್ತದೆ

ಸಾಗರವ ಸೇರುವ ಹೊತ್ತಿಗೆ 
ನದಿಯ ಕತೆಯದು ಅಂತ್ಯ
ರೋಚಕಗಳೇನಿದ್ದರೂ 
ಈ ನಡುವಿನ ಹರಿಯುವಿಕೆಗಳು, 
ಹೊಳೆಯುವಿಕೆಗಳು! 

16/11/2014


ತುಂಬಿ ಹರಿಯೋ ಕಣ್ಣೀರ ತೊರೆಯಲಿ
ನಿನ್ನ ಬಿರು ನುಡಿಗೂ 
ಒಂದು ಹನಿ ಕಣ್ಣೀರು
ನನ್ನದು ಹೆಚ್ಚೇ ಇರಲಿ ಬಿಡು!

^^^^^^^^^^^^^^^^

ನಮಗೆ ನಮ್ಮ ಬೆನ್ನು ಕಾಣದು
ಅದು ಕಾರಣ
ಮುಂದಿದ್ದವರ ಬೆನ್ನ ಮೇಲೆ 
ಆಸಕ್ತಿ
ಅದರಲೂ ಬೆನ್ನ ಮೇಲೆ 
ಮಚ್ಚೆಯ ಕಾಣಲು ಹವಣಿಸೊ ವಿಕೃತ!

16/11/2014

^^^^^^^^^^^^^

ನಾ ಬಯಸಿದೆಲ್ಲವೂ
ನನ್ನ ಸನಿಹವೇ ಸುಳಿದು ಹೋದವು
ನಿಂತು ದಕ್ಕಲಿಲ್ಲವಷ್ಟೇ!
ಕೊರಗೇನಿಲ್ಲ ಬಿಡು
ಕಂಡೆನು ಅವಷ್ಟನ್ನೂ
ಸನಿಹದಿಂದಲೇ!! 
ಹಗುರ ಭಾರಗಳ ತಿಳಿದು ವ್ಯತ್ಯಾಸ
ಇನ್ನಷ್ಟು ಸಾಣೆ ಹಿಡಿದ ಬುದ್ಧಿ!

14/11/2014
ಕತ್ತಲೊಳು ಕುಳಿತಿದ್ದರೂ ಬೆಳಕಿನ ಮೇಲೆ ಮತ್ಸರವೇಕೆ?
ಬೆಳಕಾಗದ ಸ್ಥಿತಿಗೆ ಬಾಗುವ ಸೂರ್ಯ ಕಾಂತಿಯ ಜರಿಯುವುದೇಕೆ
ತನ್ನ ಬೇರನೇ ಗಟ್ಟಿ ಹಿಡಿಯದೆ ಹಬ್ಬೋ ಬಳ್ಳಿಯ ದೂಷಿಸುವುದೇಕೆ
ಚೆಂದದ ನೋಟಕೆ ಕಣ್ಣ ಕಸವ ಹಚ್ಚಿ ತೋರುವುದೇಕೆ
ಕೈಲಾಗದ ಸ್ಥಿತಿಗೆ ಇನ್ನೆಷ್ಟು ಅಮಲೊಳು ಮೈಪರಚಿಕೊಳ್ಳವರೋ?!
ಹಾರೈಕೆ ಇಷ್ಟೇ ತಮ್ಮ ಕಣ್ಣನೇ ಕಿತ್ತುಕೊಳ್ಳದಿರಲಿ ಚಿತ್ರವದು ನಾಶ ಮಾಡಲಾರದ ಹೊತ್ತಿಗೆ!

14/11/2014
ಮಳೆಯೇ ಇಲ್ಲೆಲ್ಲಾ
ನೀನಿಲ್ಲ ಇಲ್ಲಿ
ಕಣ್ಣಿದ್ದು ಕುರುಡಂತೆ
ಈ ಯೌವ್ವನದ ಕಣ್ಣು!

14/11/2014

^^^^^^^^^^^^^^^^^^^^^^^^

ಆಗಾಗ ಜಗ್ಗಿ ಕೀಟಲೆ ಮಾಡುವ
ಸ್ನೇಹವೂ ಇರಬೇಕು
ಸದಾ ಹೊಗಳುವ ಬದಲು!

^^^^^^^^^^^^^^^^^

ಆ ದಡದ ವ್ಯಕ್ತಿಗಷ್ಟೇ ಗೊತ್ತು
ಈ ದಡದಲ್ಲುಳಿದ ಮನದ ವೇದನೆ!

^^^^^^^^^^^^^^

ಚಂದದ ಮುಖವಿದ್ದರೂ
ಚಂದ್ರನಂತೆ ಹೊಳೆಹೊಳೆದರೂ
ಹಿಂದಿದ್ದ ನೆರಳು ಮಾತ್ರವದು ಕಪ್ಪೇ!

13/11/2014

^^^^^^^^^^^^^^^^^^^^^^^^^

ಸುಂದರ ಛಾಪು ಮೂಡಿಸಿದ ಉಳಿಗಳು
ಹಳತಾದರೂ ಉಳಿವವು ಶಾಸನಗಳಂತೆ
ಮುಕ್ಕಾಗಿ ಇನ್ನೂ ಓದಿಸಿಕೊಂಡು ರಹಸ್ಯವಾಗಿ!

^^^^^^^^^^^^^^^^^^^^^^

ದುಃಖವು ಗಂಟಲೊತ್ತುತ್ತಿದರೂ
ಅವಳವು ಬಿರು ನುಡಿಗಳೇ
ಎದುರುಗೊಳ್ಳೊ ಎಲ್ಲಾ ವೇದನೆಗಳಿಗೂ
ಅವಮಾನ ಅವಗಡಗಳಿಗೂ

^^^^^^^^^^^^^^^^^^^^^^

ಮನವು ತೀರಾ ವ್ಯಾಕುಲವೆನಿಸಿದಾಗ
ದಯವಿಟ್ಟು ಕುಲವನ್ನು ಮರೆಯಿರಿ!

^^^^^^^^^^^^^^^^^^^^

ಕಳೆದ ವಸ್ತುವನು 
ಹೆಚ್ಚು ಹುಡುಕಬಾರದು
ಕಳೆವ ಮುನ್ನ 
ಕಡೆಗಣಿಸಿರಬಾರದು
ಹಾಗೆ ಕಡೆಗಣಿಸಿ 
ಈಗ ಹೆಚ್ಚೆಚ್ಚು ಹುಡುಕಿದರೆ
ಅದು ಸಿಕ್ಕಿಯೂ ಬಿಟ್ಟರೆ
ತಬ್ಬಿಬ್ಬಾಗಿಬಿಡುವೆ ನನಗಿದು
ಏಕೆ ಬೇಕಿತ್ತೆಂದು!! 

^^^^^^^^^^^^^^^^^^^^^

ನೋಟದೊಳು ನಾ ಅರಸಿದರೆ ಕಪ್ಪು
ಕಪ್ಪೊಳ ರಂಗು
ಉಡಲು ಆರಿಸಿದೆ ನೀಲಿ
ನೀಲಿಯೊಳ ತಿಳಿ ಗುಂಗು
ಹಾದಿ ಬೀದಿಲಿ ಮಾತ್ರ
ಹಾರೈಸುವೆ ಇರಲಿ ಕಪ್ಪು ಬಿಳಪು!!

12/11/2014

^^^^^^^^^^^^

ಹೀಗೆ ಅನಿಸಿದ್ದು,,,
ಬದುಕೆಂದರೆ ನಾವೊಬ್ಬರೇ ಬದುಕಿಬಿಡುವುದಲ್ಲ
ನಮ್ಮೊಂದಿಗೆ ಅವರೂ ಇವರೂ ಸೇರಿ ಬದುಕುವುದು
ನಿಂದಿಸಿ ಮೂದಲಿಸಿ ಹೊರಗಟ್ಟುವಾಗ ನೊಂದ ಆ ಮನಗಳು
ಬಾರದು ಎಂದಿಗೂ ನಮ್ಮ ನೆರೆಗೆ
ಹೀಗೆ ಎಲ್ಲರನೂ ಹೊರಗಟ್ಟಿ ನಾವೊಬ್ಬರೆ ಉಳಿದರೆ
ನಮ್ಮದದು ಬದುಕೇ? ಎನಿಸುವಷ್ಟು ಬದುಕಿಗೆ ನಾವು ವ್ಯತಿರಿಕ್ತ!

11/11/2014

Monday 10 November 2014

ಕತೆ ಕವಿತೆ ಮತ್ತು ಆ ರಾಮ
ನನ್ನೇ ಕೆಣಕುತ್ತಲಿರುವವು ತರತರದಲಿ!
ಕನ್ನಡ ಕವಿತೆ ಹಾಡಿದೆ ಅಲ್ಲಲ್ಲಿ
ಲಯವನಷ್ಟೇ ತಪ್ಪಿ,
ಈಗಿಲ್ಲಿ ಇಂಗ್ಲೀಷಿನ A rama
ಒಂದೇ ಸಮನೆ ಕಾಡುತಲಿರುವನು
ರಾಮನೋ ರಮನೋ ಎಂದೊಂದೇ ಪ್ರಶ್ನೆ
ನನಗೆ ಗೊತ್ತಿಲ್ಲ ಬಿಡಿ Englishಉ ಎಂದುಬಿಟ್ಟೆ!

%%%%%

ಕಳಚಿಕೊಳ್ಳೊ
ಮರದ ಫಲ
ಮೋಡದ ಹನಿ
ಸೂರ್ಯನ ಕಿರಣ 
ಶ್ರೇಷ್ಠವೋ ಪ್ರಭುವೇ
ಬಂಧಗಳಿಂದ ಮನವಲ್ಲ!
ತಪ್ಪಿದರೆ ತಪ್ಪಿದ್ದರೆ 
ಕ್ಷಮಿಸಲಿ ಹರನು!!

10/11/2014

ಕವನ

'ಮರೆವು'




ಅವರ ಮರೆವಿಗೆ ಗುರಿಯಾಗಿ ಬದುಕುವುದೆಂತು;

ನಾವೂ ಬದುಕುವ ಅದೇ ಮರೆವಿನೊಂದಿಗೆ!


ಮರೆತು ನಡೆಯುವುದು ಕ್ಲಿಷ್ಟವೇನಲ್ಲ

ನೆನಪಿಟ್ಟು ಮರೆತಂತಿರುವುದು ಜೀವನ


ನಿರಂತರ ಮರೆವು ನಿರಂತರ ದಣಿವು

ಸಾಗಿದೆ ಮರೆವಿನ ಯಾನ ನಿರಂತರ! 



09/11/2014


ಕವನ


ಮನದ ಹೊಲ..


ತುಂಬಿಕೊಂಡಷ್ಟೂ ಹಿಗ್ಗುವ ಮನ
ಹಿರಿ ಹಿಗ್ಗಿ ತುಡಿವುದು ಪ್ರೇಮಕೆ
ಮಮತೆ, ಸ್ನೇಹ, ಪ್ರೀತಿ, ಒಲುಮೆಯಲಿ ಕಣ್ತೇವ
ಮನಸು ಹಸಿ ಹಸಿ ಕಣ್ಗಳು ಹಸಿ ಬಿಸಿ
ಎದೆಯೆಲ್ಲಾ ಹದವಾದ ಹೊಲ
ಜಿಟಿಮಿಟಿ ಚಿಗುರಿದೆ ಮನದ ಹಸಿರು

ತಲೆಯೆತ್ತಿ ನೋಡುತ ಹೊಳೆವ ಸೂರ್ಯ 
ಅತ್ತ ಇತ್ತ ಸುಳಿವ ತಂಗಾಳಿ ಇನಿ
ಮಣ್ಣ ಘಮ ತೇಲಿಸಿ ತನುವ
ಮರೆಯಿಸಿ ಕಳೆದ ಕಳೆಯ
ಬತ್ತಿದ ಕೋನಗಳಲ್ಲಿ ಒಲವಿನ ಚಿಲುಮೆಯ
ಎಷ್ಟು ಬಣ್ಣಿಸಲಿ ಈ ಹಸನಾದ ಕನಸ

ಇರುಳ ತಾರೆಯಲಿ ಕನಸ ತೇಲಿಸಿದೆ
ಚಂದ್ರಮನದಕೆ ಚುಕ್ಕಿ ಎಂದನು
ಹತ್ತಿರಾಗುತ ಹಿರಿದಾಗುವ ಚುಕ್ಕಿಗೆ
ಜಗವದು ಸೂರ್ಯನೆಂದಿತು ಹಗಲಿನೊಳಗೆ

ರಾತ್ರಿಯ ಕನಸೆಲ್ಲಾ ಹಗಲ ಕನಸುಗಳಾಗಿ
ಹಗಲುಗನಸಾದವು ಎಚ್ಚೆತ್ತುಕೊಂಡು!
ಕನಸಿಗೆ ರಾತ್ರಿ ಹಗಲಿನ ಪರಿವೆಯೇ ಇಲ್ಲ
ಮನದ ಹೊಲದೊಳು ಜಿಟಿಮಿಟಿ ಚಿಗುರು 
ರಾತ್ರಿಯ ತಿಂಗಳು, ಹಗಲ ಸೂರ್ಯನು
ಚೆಲ್ಲಿರುವರು ಬೆಳಕನೇ ಹಗಲಿರುಳು!

09/11/2014

ಕವನ

''ಹಕ್ಕಿ''


ನೆಲವ ಬಿಡುವ ಮುನ್ನ
ರೆಕ್ಕೆ ಬಡಿಯಲೇ ಬೇಕಿದೆ
ಸುಮ್ಮನೆ ಎಂದೇ 
ಕೆಲವಷ್ಟು ಕೆಲಸ ಸಾಗಬೇಕಿದೆ!

ಹಕ್ಕಿ ರೆಕ್ಕೆಗೆ ನೀರಿಟ್ಟು 
ಮಿಂಚಿಸುವರ್ಯಾರು
ಬಡಿದ ರೆಕ್ಕೆಗೆ ತೆಕ್ಕೆ ಕೊಟ್ಟು
ಮೇಲೇರಿಸುವವರ್ಯಾರು!

ಹಾರುವುದು ಹಕ್ಕಿ
ರೆಕ್ಕೆ ಇರುವುದೆಂದಲ್ಲ
ಬಾನೇರುವುದು ಹಕ್ಕಿ
ನೆಲವ ಮರೆತಿದೆ ಎಂದಲ್ಲ!

ರೆಕ್ಕೆ ಬಡಿದು ಹಕ್ಕಿ ಹಾರಿ
ದೂರದಲೆಲ್ಲೋ ಕಾಳ ಹೆಕ್ಕಿ
ನೆಮ್ಮದಿಗಷ್ಟು ಗೂಡ ಕಟ್ಟಿ 
ಕನಸ ಕೂಸಿನ ರೆಟ್ಟೆ ಬಲಿಯಲು 
ಮತ್ತೆ ಮತ್ತೆ ಹಾರಿದೆ ಹಕ್ಕಿ ಸಾಲು!

09/11/2014



ನನ್ನ ಕುರಿತೇ ಬರೆಯುವ
'ಕವಿತೆ'ಯನ್ನು
ನಾನೆಂದಿಗೂ ಸಹಿಸುವುದಿಲ್ಲ
ನನ್ನ ಕವಿತೆಗಳ ಮೀರಿ
ಮೆಚ್ಚುಗೆ ಪಡೆವವವು
ಅವರ ಸ್ನೇಹಿತೆಯರಲ್ಲಿ!

08/11/2014

Friday 7 November 2014

ಕವನ

ಸದ್ದಿಲ್ಲದೆ ಸುದ್ದಿಯಾಗಲಿ... 



ನಿನ್ನ ಕೈ ಬೆರಳೊಳು
ಬಂಧಿಯಾಗುವ ಈ
ಬೆರಳುಗಳೇ ಈಗೀಗ
ನನ್ನ ಕಾಡೊ ಕೈ ಕುಸುಮ

ನಿನ್ನ ನೋಡದ ನನಗೆ
ನಿನ್ನೇ ನೆನಪಿಸುವಂತಿವೆ
ಈ ಕಿರು ಬೆರಳ ಕೊಂಕುಗಳು
ಬೊಗಸೆ ತುಂಬಾ ತುಂಬಿ ನಿನ್ನದೇ ಬಿಂಬ

ಎಡಗೈ ನಾನು ಬಲಗೈ ನೀನೆಂದು
ಸುಮ್ಮನೆ ಬೆಚ್ಚಗೆ ಹಿಡಿದಿಹವು
ಕೊರೆವ ಚಳಿಯಲಿ
ಖುಷಿಯಲಿ ಚಪ್ಪಾಳೆಯಾಗಿ!

ಎಷ್ಟು ಹೊತ್ತು ಹಿಡಿದಿರುವೆ
ಕೈ ಬಿಟ್ಟು ತುಂಬಿಕೊ ಮನದೊಳು
ಸದ್ದಿಲ್ಲದೆ ಸುದ್ದಿಯಾಗಲಿ
ನಿನ್ನ ಹೃದಯ ಪೀಠಾಲಂಕಾರ! 


07/11/2014
ಹಸಿವಿದ್ದರೂ ಹೊಟ್ಟೆಯಿದ್ದಷ್ಟೇ

ಅನ್ನ;

ಆಕಾಂಕ್ಷೆಗಳಿದ್ದರೂ ನಿಯತ್ತಿನಷ್ಟೇ

ಲಭ್ಯ!


07/11/2014

ಕವನ

ಒಮ್ಮೆ ಸಾಗಿದರೆ ಹಿಂದೆ ಬಾರದು


ಹೊರಡಬೇಕೆಂದುಕೊಂಡಷ್ಟೂ ನಿಲ್ಲುತ್ತೇವೆ
ಹೊರಟಮೇಲೆ ನಿಂತದಷ್ಟೇ ನೆನಪು!
ನಿಲ್ಲಲಾರದ ಪಶ್ಚಾತ್ತಾಪವಿಲ್ಲ

ಬೇರುಗಳಿರಬಹುದೇ ಈ ಕಾಲುಗಳಲ್ಲಿ
ಸುಲಭಕೆ ಮುಂದೆ ಸಾಗದು 
ಎದುರಿನ ಮನಗಳಿಂದ

ಒಮ್ಮೆ ಸಾಗಿದರೆ ಹಿಂದೆ ಬಾರದು
ಕತ್ತರಿಸಿಕೊಂಡ ಬೇರುಗಳಲಿ
ಜೀವ ತುಂಬಿ ಚಿಗುರೊಡೆಯಲು!

06/11/2014

Thursday 6 November 2014

ಕವನ

ನಕ್ಷತ್ರ ಕನಸು ...



ಸುನಾಮಿ ಎದ್ದ ಮನಸ್ಸು
ಶಾಂತವಾಗಲು ಅದೆಷ್ಟು 
ಹೊಡೆತಗಳ ಎದುರಿಸಬೇಕೋ?!

ಮಡಿಲ ಬಿಟ್ಟ ಹಕ್ಕಿ 
ಅದೆಷ್ಟು ತಾಸು ನೆಲದಿ
ಸುಮ್ಮನೆ ಉರುಳಬೇಕೋ?!

ಮೋಡ ಬಿಟ್ಟ ಹನಿ
ಗಾಳಿಯೊಂದಿಗೆ ಎಷ್ಟು 
ಸೆಣಸಿ ಧರೆಗಿಳಿಯಬೇಕೋ?!

ಬಿಟ್ಟ ಮಾತು 
ತಿರುತಿರುಗಿ ಎದುರೇಟಾಗಿ 
ಮತ್ತೆಷ್ಟು ಬಾರಿ ಎದೆ ನೆಟ್ಟಿ ನಿಲ್ಲಬೇಕೋ?!

ಕಳೆದು ಬಂದ ಬಂಧ 
ನೆನಪುಗಳಾಗಿ ಇನ್ನೇಷ್ಟೂ ಕಾಲ
ಹೀಗೆ ಜೀವ ಹಿಂಡ ಬೇಕೋ?!

ಒಮ್ಮೆ ಎಡವಿದ ಕಾಲ್ಬೆರಳು 
ರಕ್ತ ಒಸರುತ್ತಿದ್ದರೂ ಇನ್ನೆಷ್ಟು ದೂರ 
ಈ ಓಟದ ಆಟದಲಿ ಓಡಬೇಕೋ?!

ಒಡೆದ ಕನಸುಗಳ ಅವಶೇಷಗಳನ್ನಿಟ್ಟು 
ಇನ್ನೆಷ್ಟು ನಕ್ಷತ್ರ ಕನಸ ಹೊಸೆದು 
ಹಸಿ ಹಸಿಯಾಗಿ ಮತ್ತೆ ಮತ್ತೆ ಹುಟ್ಟಬೇಕೋ ಕಾಣೆ!!


06/11/2014

ಕವನ

ಯಾವ ದಿಕ್ಕಿಗೆ?!! 


ಬೆಳಗ್ಗೆ ಎದ್ದೊಡನೆ ಕಣ್ಣಿಗೆ ಬಿದ್ದ 
ಅತ್ಯಾಚಾರದ ಎರಡು ಸುದ್ದಿಗಳು. 
ಒಂದು ಶಿಕ್ಷಕನಿಂದ ಶಾಲೆಯಲ್ಲಿ ಮತ್ತೊಂದು 
ಅಪ್ಪನಿಂದ ಮಗಳ ಮೇಲೆ ಮನೆಯಲ್ಲೇ!.
ಅಲ್ಲೇ ಪಕ್ಕದಲ್ಲೊಂದು ವ್ಯಂಗ್ಯ ಚಿತ್ರ
ಶಾಲೆಯಿಂದ ಹೊರಡುವ ವೇದನೆಯ ಕೂಗಿಗೆ
ಹೆದರಿ ಎದ್ದು ಬಿದ್ದು ದೂರ ಓಡುವ ಬಾಲಕಿ!

ಶಾಲೆಯ ದಿಕ್ಕಿಗೆ ಆಸೆ ಕಂಗಳ ಕಂದಮ್ಮಗಳ
ಕನಸಿತ್ತು ಚಿತ್ರಕಾರರ ಕಣ್ಗಳಲಿ
ಶಾಲೆಯೆಡೆಗೆ ಸೆಳೆವ ಗುರಿಯಿತ್ತು ಶಿಕ್ಷಕರಲಿ
ಈಗೆಲ್ಲಾ ಭೀಕರವೆನಿಸೋ ಶಾಲೆಯ ಚಿತ್ರಣ
ಮನಗಳಲ್ಲೂ ಕಲೆಗಾರರಲ್ಲೂ; 
ಶಾಲೆ ಎಂದರೆ ಹೆದರುವ ಸ್ಥಿತಿಗೆ ಪುಷ್ಠಿ ನೀಡಿ
ಎತ್ತ ಸಾಗಿಸುತ್ತಿದ್ದಾರೆ ಶಿಕ್ಷಣದ ಗುರಿಯಾ?
ಶಿಕ್ಷಣವೆಂಬುದು ಕೇವಲ ಶಿಕ್ಷಕನ ಗುರಿಯೇ
ಸಮಾಜವೆಲ್ಲಿ ಕಳೆದು ಹೋಯ್ತೋ ಕರ್ತವ್ಯ ಸಡಲಿಕೆಗಳಲಿ

ರಣ ಚಂಡಿಯಂತ ಆ ಆಂಟಿಯದು 
ಒಂದೇ ಅಬ್ಬರಗಳ ಹೊಡೆತ
ಆ ಕೊಳಗೇರಿಯ ಹಾದು ಹೋಗುವಾಗ 
ಕೇಳಿಬಂದ ಹಿಂದಿನ ದಿನದ ಇಳಿ ಸಂಜೆಯ ನೆನಪು;
ಎಂತ ಗಂಡನಯ್ಯಾ ನೀನೂ ಮುದಿ ಗೂಬೆ ನೀನು
ಐವತ್ತಾದ ಮೇಲೂ ಹೆಂಡತಿ ಸತ್ತಳೆಂದು 
ಎರಡನೇ ಹೆಂಡತಿ ಬೇಕಿತ್ತೇನಯ್ಯಾ?! ಮುದಿಯಾ,,
ನೋಡು ಅಪ್ಪ ಮಗಳ ಮೇಲೇಯೇ ಕಣ್ಣು 
ಹಾಕಿದ್ದನಂತೆ
ಬಿಟ್ಟರೇ ನೀನೂ ಅಂತವನೇ 
ಈ ಎಪ್ಪತ್ತರಲ್ಲೂ
ಮನೆ ತುಂಬಾ ಹೆಣ್ಣು ಮಕ್ಕಳೇ ನಿನಗೆ,, 
ಛೇ ಛೇ,,
ಎಂದೊಂದೇ ಉಸಿರಿಗೆ ಬಡಿದಾಡುತಿದ್ದಳು 
ನಾಲಿಗೆಯೊಡನೆ ಅವಳ ಕೊಳಕು ಮೆದುಳೂ..

ಏದುಸಿರ ಜೀವ ಕಣ್ಣೀರಾಯ್ತೋ ಏನೋ
ಮಬ್ಬುಗತ್ತಲೊಳು ಆ ಹಿರಿ ಜೀವದ ಭಾವ 
ಕಲ್ಪನೆಗೆ ಹಿಡಿಯಲಾಗಲಿಲ್ಲ
ಜಗತ್ತು ಪ್ರತಿಕ್ರಿಯಿಸುತ್ತಲಿದೆ, ಪ್ರತಿಭಟಿಸುತ್ತಲಿದೆ
ಯಾವ ದಿಕ್ಕಿಗೆ? ಯಾವ ರೀತಿಯಲಿ? ಎಂತಹ ಆಕ್ರೋಶದಲಿ?
ಯಾರ ಮೇಲೆ? ಯಾರ ಪರಾರಿ ಮಾಡಿ? ಯಾರನು ಶಿಕ್ಷಿಸಿ?!
ದೀರ್ಘ ನಿಟ್ಟುಸಿರಲಿ ಚಿಂತನೆ ಸಾಗಿದೆ!!

05/11/2014

ಚಿತ್ರಗಳು


04/11/2014
ನುಣುಪಾದ ಕೆನ್ನೆಯನು
ಸ್ವತಃ ಮುಟ್ಟಿ 
ನೋಡಿಕೊಳ್ಳಲಷ್ಟೇನು 
ಆಸಕ್ತಿ ಇರುವುದಿಲ್ಲ;
ನುಣುಪಾದ ಕನ್ನಡಿಯೇ ಬೇಕು
ಕೃತಕವೆನಿಸಿದರೂ
ನೈಜತೆಗೊಂದು ತೆಳು ಪರದೆ
ಬೇಕೇ ಬೇಕೇನೋ
ಕದ್ದು ನೋಡೊ ಸ್ವಾರಸ್ಯವ 
ಅನುಭವಿಸಲು! 

06/11/2014

^^^^^^^^^^^^^^^^^^^^^^^^^^^^^^^^

ಇಲ್ಲದ ನೋವನು 
ಕಲ್ಪಿಸಿ ಮೊರೆವಾಗ
ಕಣ್ಣೀರು ಹೆಚ್ಚು
ಇದ್ದ ನೋವನು 
ಇನ್ನಿಲ್ಲದೆ ಮರೆಮಾಚುವಾಗ
ಎಲ್ಲಿಲ್ಲದ ಸಡಗರ ಸಂಭ್ರಮ
ಗೆದ್ದಂತೆ ಎಲ್ಲವ!

^^^^^^^^^^^^^^^^^^^^^^^^^^^^^

ಪದ್ಯಗಳಲ್ಲೇ ಕನಸು ಕಟ್ಟಿ,
ಕನಸುಗಳಲ್ಲೇ ಕಾಮನೆ ಹರಡಿ,
ಎಷ್ಟು ಸುರುಳಿ ಸುತ್ತಿಹುದೊ
ಆ ಆಲದ ಮರ,,
ಒಮ್ಮೆಲೆ ಬಿಳುಲಾಗಿ ಬಾಗಿದೆ ಭುವಿಗೆ,,
ಮರೆತು ದಿಕ್ಕುಗಳ,,
ನೆನಪಿಟ್ಟು ಪ್ರೀತಿಯನೇ,,

04/11/2014

ಕವನ

ಈ ಭಾವಗೀತೆ ...



ಇದ್ದ ಭಾವಗಳನ್ನು ಇಲ್ಲದ ಕವಿತೆಗಳಲ್ಲಿ
ಹುಡುಕಿದ್ದೇ ಒಂದು ತಪ್ಪು!
ಇದ್ದ ಕವಿತೆಗಳಲ್ಲಿ ಇಲ್ಲದ ಭಾವಗಳನ್ನು
ಕಂಡುಕೊಂಡಿದ್ದೂ ಮತ್ತೂ ತಪ್ಪೇ!

ಎಷ್ತು ತಪ್ಪು ಲೆಕ್ಕಾಚಾರಗಳೊ ಈ 
ಭಾವಗೀತೆಗಳಲಿ; ಹಾಡಿರುವೆ ನಾ
ಉಸಿರು ಕಟ್ಟಿ, ನಿಲ್ಲಿಸಲಾಗದು
ಇನ್ನೂ ಉಸಿರಿದೆಯಾದ ಕಾರಣಗಳಲಿ!

ತಪ್ಪೋ ಸರಿಯೋ ಅಂತೂ ಹಾಡಿದೆ
ಈ ಎದೆಯೊಳಗೆ ನಿರಂತರ ಮೊಳಗುತ
ಆಕಸ್ಮಿಕಗಳಾಗಿ ಹಿಮ್ಮೇಳಗಳು ಒಮ್ಮೊಮ್ಮೆ
ಕೈ ತಟ್ಟೋ ಮನಸ್ಸುಗಳ ಬೆನ್ ಚಪ್ಪರಿಕೆ

ಸಾಲು ಮುಗಿವ ಮುನ್ನ ಹಾಡು ನಿಲ್ಲದಿರಲಿ
ಎಂಬ ಆಶಯವಷ್ಟೇ ಈ ಎಲ್ಲಾ ತಪ್ಪುಗಳ ಸರಣಿ ಬಯಕೆ!
ಕಂಠ ಸವೆದರೂ ಗುನುಗಿ ಮುಗಿಸೇನು
ಹುಮ್ಮಸ್ಸಿನ ಉಸಿರಿರಲಿ ಹಾಡಿನೊಳಗೆ!

02/11/2014

Sunday 2 November 2014

ಕವನ

ಅಮ್ಮಾ ನೀ....




ಅಮ್ಮಾ ನೀನು ಗುರುವಾಗಲು
ನಾನು ಮಗುವಾಗಲೇ ಚೆಂದ
ನಿನ್ನ ಆಸೆ ಲಾಲಿತ್ಯ
ನಾಳೆಯ ನನ್ನ ಕನಸ ಸಾಹಿತ್ಯ!

ಅಮ್ಮಾ ನೀ ಗೆಳತಿಯಾಗಲು
ನಾನು ಗೆಳಯನಾಗಲೇ ಚೆಂದ
ನಿನ್ನ ಆಶಯ ಕಾರುಣ್ಯ
ನನ್ನೆದೆಯ ರಮ್ಯ ಕಾವ್ಯ!

ಅಮ್ಮಾ ನೀ ಜಗವೇ ಆಗಲು
ನಾನು ಪುಟ್ಟ ಕಣವಾಗಲೇ ಚೆಂದ
ನಿನ್ನ ಹಸುರ ರಹಸ್ಯ
ನನ್ನ ಜೀವನದ ಸ್ವಾರಸ್ಯ!

ಅಮ್ಮಾ ನೀ ಕನ್ನಡವಾಗಲು
ನಾನು ಕನ್ನಡದ ಕೈಯಾಗಲೇ ಚೆಂದ
ನಿನ್ನ ಅಜರಾಮರ ಲಿಪಿ ಮಾಣಿಕ್ಯ
ನನ್ನ ಹೃದಯ ವೀಣೆ ಉಲಿವ ಮಾಧುರ್ಯ!

31/10/2014

ಕವನ

ನಿನ್ನ ತಲುಪಬೇಕು ಎನಿಸಿದೆ...



ನಿನ್ನ ತಲುಪಬೇಕು ಎನಿಸಿದೆ
ಕಷ್ಟವೇನಲ್ಲ ನನಗೆ
ನಿನಗೆ ಕಷ್ಟವಾಗಬಾರದಲ್ಲ
ನನ್ನ ಪ್ರೀತಿಯ ಹೊರೆ

ನಿನ್ನ ಕೈ ರೇಖೆಯ ಮೇಲೆ ಬೆರಳಿಟ್ಟು
ನಾ ನೋಡಬೇಕಿತ್ತು
ಅದು ಸಾಗೊ ದಾರಿಯ
ಸವಿದು ನಡೆಯಬೇಕಿತ್ತು

ಎಷ್ಟು ಕನಸಿತ್ತೊ ಈ ಕಣ್ಣೊಳಗೆ
ಈಗೆಲ್ಲಾ ಹನಿಗಳ ಹೊರಳಾಟ
ಬರಬೇಕಿತ್ತು ನೀ ಅವಧಿಗೆ ಮುನ್ನ
ಈಗ ಹೋಗಬಾರದಿತ್ತು ಹೀಗೆ
ಕನಸಿನ ಕಣ್ ತೆರೆವ ಮುನ್ನ!

31/10/2014
ಹೃದಯ ಹಿಂಡುತ್ತಿದೆ
ಪ್ರಾಣ ಹೋಗುವುದಿಲ್ಲ ಬಿಡು
ಅಶುದ್ಧತೆಯ ಹೊರಗೆಡವಿಕೊಳ್ಳಲು
ಮತ್ತೆ ಹೃದಯ ತುಂಬಿಕೊಳ್ಳಲು!

31/10/2014

#####################

ಜೊತೆ ನಡೆಯಲಾರದವರ,
ಎಲ್ಲಿಂದಲೋ ಬಂದು ಸೇರುವವರ
ನಿಂತು ಕಾಯುವವಳು ನಾನಲ್ಲ;
ತೆವಳಿಯೋ, ಹರಿದೋ, ಓಡಿಯೋ
ಸಾಗುವಾಗ ಆಕಸ್ಮಿಕವಾಗಿ ಎದುರಾದರೂ
ಜೊತೆ ನಿಲ್ಲೋ ಮನಸ್ಸಿನವರ 
ಬಹುಶಃ ನಿರೀಕ್ಷಿಸಬಹುದು!! 

30/10/2014

ಕವನ

ಯಾರಿಗೆ ಯಾರುಂಟು!



ಈ ನಡುವಿನ ಹೊಯ್ದಾಟದಲಿ
ನಿಂತ ನೆಲದ ಅಸ್ಪಷ್ಟ ಬಿಂಬ!
ಮರೀಚಿಕೆಗಳ ಹಾರಾಟ,
ಅನಿಸುವುದು ಹಿಗೆಯೇ; 
ಮಿಕ್ಕಿದ್ದ ಬದುಕು ಅದು ನನ್ನದಲ್ಲ 
ಮಿಕ್ಕವರ ನಗೆಯ ಪಾಲು!
ಬದುಕಿದ್ದ ಅಷ್ಟು ದಿನ
ನಾನು ನಾನಾಗಿರಲೇ ಇಲ್ಲ
ಗೊತ್ತಿದೆ ಬದುಕು ಒಮ್ಮೆಲೇ ಜಗ್ಗಿ ಬಿಡುವುದಿಲ್ಲ
ತುಸು ತುಸುವೇ ವಾಲಿಸಿ
ನೆಲವ ನೇವರಿಸುವುದು ತಲೆಗೂದಲು
ಆಗಲಾದರೂ ಒಮ್ಮೆ ಎಚ್ಚತ್ತಾನೇನೋ ಮನುಜ
ಎಂಬ ಬದುಕ ಆಶಯ!
ಯಾರಿಗೆ ಯಾರುಂಟು?! ಯಾರೂ ಇಲ್ಲ
ಜೀವಕೆ ಬದುಕೇ ಬೆಂಬಲ!
ಬದುಕ ಪಡೆಯಲು
ಈಗೀಗ ಅದೇಕೊ ಬದುಕಿಬಿಡುವ ಹಂಬಲ!

30/10/2014
ಯಾಕೆ ಯಾರೂ ಪ್ರೀತಿಯ ನಂಬುವುದಿಲ್ಲ
ಆತಂಕಗಳೇ ಹೆಚ್ಚು; ಇಲ್ಲವೇ ಸಂಶಯ,
ಈಗೀಗ ನಿಷ್ಠೆ ಎಂಬುದು ನಿಘಂಟಿನ ಹೊರಗುಳಿದ ಪದವಂತೆ
ಗೊತ್ತಿರಲಿಲ್ಲ; ನಿಷ್ಠೆಯಿದ್ದರೆ ಅದು ಅವರಿಗೆ ಆಕಸ್ಮಿಕ
ನಮಗೆ ಸಂಕಟ!
ಪ್ರೀತಿಯಲಿ ನಿಷ್ಠೆಯ ಅವರು ಬಯಸರು
ಅವರಿಗೂ ಅದು ಕಷ್ಟವಂತೆ,,!
ನಿಷ್ಠೆಯ ಬಸಿದುಕೊಂಡ ಪ್ರೀತಿ ಕೊನೆಗೆ ಬೇಡವೆನಿಸಿತು!

30/10/2014

##############

ಕಣ್ಣಿಗೆ ಬಿದ್ದು ಬಿದ್ದೂ
ಕಣ್ಣು ಕೆಂಪಗಾಯಿತು
ಮನಸು ವಿಕಲವಾಗಿ
ನಾಲಿಗೆ ಹರಿತವಾಯಿತು!

29/10/2014