Thursday, 7 May 2015

ಬದುಕಿನೆದುರಿನ ನನ್ನ ಕೆಟ್ಟ ಹಟಕ್ಕೆ
ಬದುಕು ಉತ್ತರ ಕೊಟ್ಟಾಗ
ಹಟದ ಅರ್ಥವೇ ಕಳೆದು ಹೋಯ್ತು

ಬಹುಶಃ ನನ್ನೇ ನಾ ಕಳೆದ ಹೊಸತು!

*****

ನಾವಂದುಕೊಂಡ ಸತ್ಯಕ್ಕೂ
ಹೆಚ್ಚು ಸತ್ಯಾಸತ್ಯಗಳು
ಈ ಗತದಲ್ಲಿ...

ತಿರುಗಿ ನೋಡುವುದೇ
ಅಪರಾಧ
ಕಣ್ಣೀರಿಡದ ಅಭಾಸ..

ಸೋತವು ಎಲ್ಲಾ ದುರಂತಗಳು
ನಗುವೊಂದೆ ಸಾಧನ
ಈ ನಡೆಗೆ..

ಕನಸೊಂದೆ ಆಸರೆ
ಈ ಬದುಕಿಗೆ...

****

ಅಕ್ಷಯ ತೃತೀಯ ಸ್ಪೆಷಲ್.. 


ನೀನಿಂದು 
ಸಿಗುವೆಯಾದರೆ
ಅದೇ ಅಕ್ಷಯ
ಚಿನ್ನಾ...!
ನೀನೆಂದು
ಸಿಗುವೆಯೋ
ಆಗಲೇ ಶುರು
ಅಕ್ಷಯ ಚಿನ್ನ
ನಿನ್ನಯ ಪ್ರೀತಿ...! 

21/04/2015


****

ಕಾಯುವ 
ಬೇಸಿಗೆಯಾದರೂ
ಎಷ್ಟು ಕಾದೀತು
ಮಳೆ ಮೋಡಗಳ 
ಒತ್ತಡಕ್ಕೆ ಮಣಿದು
ಕೊಚ್ಚಿ ಹೋದೀತು
ತಣಿದು

****

ಪ್ರೀತಿ, 
ನೀ ಏನೇ ಮಾಡು
ನನಗೂ ಅರ್ಥವಾಗುತ್ತದೆ
ನಿನ್ನ ಭಾಷೆ!
ಆಗಾಗ ಅನರ್ಥ
ಅರ್ಥೈಸಲು ಕೊಡು
ಒಂದಷ್ಟು ನಿನ್ನ ಹೊತ್ತು!
ಅಷ್ಟೇ ಸ್ವಾರ್ಥ...

19/04/2015


****


ನಮ್ಮಲ್ಲಿ ಅದೆಷ್ಟೋ
ನಕಾರಾತ್ಮಕ ವಿಷಯಗಳಿವೆ
ಎಂದು ವಿಷಾದಿಸುತ್ತೇವೆ
ಅದಷ್ಟೂ ನಕಾರಾತ್ಮಕಗಳೂ
ನಮ್ಮನ್ನೂ ಹೊಂದಿವೆ
ಸರಿಯೇ ಹೀಗೆ ಯೋಚಿಸಿದರೆ
ಕಮಲವು ಕಸರಿನಲ್ಲಿದೆ
ಹೌದು 
ಕೆಸರು ಕಮಲವನ್ನು ಹೊಂದಿದೆ
ಎನ್ನುವಂತೆ! 

*****


ಸಹೃದಯಿಗೆ
ಭಾವ ಹೊಕ್ಕೊ ಒಳಗಣ್ಣು ಬೇಕು
ಆಸ್ವಾಧಿಸಲು
ಇಲ್ಲವೇ ಎಲ್ಲಾ ಪದ ಸಾಲುಗಳೂ
ಅಸಂಬದ್ಧ,, ಅಸಂಬದ್ಧ!

****

ಹೆಚ್ಚು ಕನಸುಗಳು
ಅಪಾಯಕಾರಿಯೇ
ನೆನ್ನೆಯ ಕನಸು
ಇಂದು ಎದುರಿದ್ದರೂ
ನಾಳೆಗೆ ಬಲಿಯಾಗಿ
ಅನುಭವಕೆ ಏನೂ ದಕ್ಕದು!

****

ಕೃಷ್ಣಾ,
ನಿನಗೆಷ್ಟು ಸ್ನೇಹಿತೆಯರೋ
ಕೋಪ ಅಸೂಯೆಗಾದರೂ ಸರಿಯೇ
ನಿನ್ನಂತ ಹತ್ತು ಹಲವು
ಗೊಂಬೆಗಳ ಮಾಡಿ
ನಿನ್ನಂತ ಜೀವವಿಟ್ಟು
ಅದರೊಟ್ಟಿಗೆಯೇ ನಾ ಹಾಡುವೆ
ದಾರಿ ತಪ್ಪಿ ನೀ ಇತ್ತ ಬಂದರೆ
ಗಾಬರಿಯಾಗದಿರು 
ನಿನ್ನವೇ ಬಹುರೂಪಗಳ
ನನ್ನೊಂದಿಗೆ ಕಂಡು...!
ರಾಧೆಗೂ ಛಲವಿದೆ 
ಕೋಪದೊಂದಿಗೆ..!


*****


ಬಡವನ ಕೋಪ
ದವಡೆಗೆ ಮೂಲ
ತಿಳಿದೂ ತಿಳಿದೂ
ಡೆಂಟಿಸ್ಟ್ ಜೊತೆ
ಎಂತಾ ಕಾಳಗ
ಫೀಸು ಹೆಚ್ಚೆಂದು
ಹಲ್ಲು ಕೈಯೊಳಿಟ್ಟು...

****

ಬೆಳೆವ ರೈತ
ಬಡಿದು 
ಗಾಳಿಗೆ ತೂರುತ್ತಾನೆ
ಫಸಲನು
ಬೇಡವೆಂಬ 
ತಿರಸ್ಕಾರಕ್ಕಲ್ಲ
ಗಟ್ಟಿ ಕಾಳುಗಳನ್ನು 
ಹಿಡಿದಿಡಲು..!

18/04/2015

****

ತೀವ್ರತೆ ಇಲ್ಲದೆ
ವಿರಹವೂ ಸಪ್ಪೆಯೇ
ಪ್ರೀತಿಯೂ ಉಪ್ಪೇ
ಏನಿದ್ದರೂ ಅದರೊಟ್ಟಿಗೆ
ನನ್ನದು ಪೂರ್ಣ ಮಿಳಿತ..!

****

ನನ್ನೆಲ್ಲಾ ಕನ್ನಡಿಗಳು
ಹೇಳಿದ್ದು ಸುಳ್ಳೇ
ಎನ್ನಂತರಂಗದಷ್ಟು
ಸುಂದರವಿಲ್ಲವೆಂದು...
17/04/2015

No comments:

Post a Comment