Thursday, 7 May 2015

ಕವನ*

ಅವನೆದೆ ಗೂಡಲ್ಲಿ….


ಬರೆಯದ ಪದ್ಯಗಳೆಲ್ಲಾ
ಅವನೆದೆ ಗೂಡಲ್ಲಿ
ಸದಾ ಚಿಲಿಪಿಲಿ

ಕದ್ದು ಓದೋಣವೆಂದರೆ
ಬಚ್ಚಿಟ್ಟುಕೊಳ್ಳುವ
ತುಂಟ ಗುಬ್ಬಚ್ಚಿ

ಕಾಳಿನಾಸೆಯಿಲ್ಲ
ಕಾವಿನಾಸೆಯಿಲ್ಲ
ಹಾರುವ ಹಕ್ಕಿಗಳನೇ ಹೊತ್ತ
ಕಾವಲು ಹಕ್ಕಿ

ಒಮ್ಮೆಯಾದರೂ ಎದೆಗೂಡ
ತೆರೆದುಕೊಳ್ಳವನೆಂಬ
ಆಸೆಗೆ ಕಾಯೋ
ನಾ ಬಕ ಪಕ್ಷಿ!

ಸಾಗಿದೆ ಕಾತುರ
ಇಲ್ಲದೆ ಆತುರ
ಅವನೆದೆ ಗೂಡ ಸುತ್ತ
ಹೀಗೆಯೇ ದಿನವಿಡೀ ಗಿರಕಿ

ಅವ
ಹಾರಿ ಬಂದಾನೊ
ಏರಿ ಬಂದಾನೋ
ಬಾನ ತುಂಬಾ ಚಂದಿರ ತಂದಾನೋ
ಬೆಳದಿಂಗಳಿನಾಸೆಗೆ
ಮತ್ತೆ ನಿಂತೆ ಮರದಡಿ ಅವನ ಹುಡುಕಿ

ಎದೆಗೂಡ ಹಕ್ಕಿ ನಾದ
ಅಷ್ಟೇ
ಅವನ ಪರಿಚಯ
ಎಂದಿನಂತೆ ನನಗಿಲ್ಲಿ

ಆ ಮರದ ರೆಂಬೆ -ಕೊಂಬೆಯಲ್ಲೆಲ್ಲಾ
ನನ್ನದೇ ಚಿತ್ತಾರ
ಬಣ್ಣವಷ್ಟು ಕೋಲ್ಮಿಂಚು
ಅವನ ಮಾತು ಚೆಲ್ಲಿ

ಎತ್ತರದಾಸೆಯಿಲ್ಲ
ಉತ್ತರದಾಸೆಯಿಲ್ಲ
ಪ್ರಶ್ನೆ ಹುಟ್ಟು ಹಾಕಿ ಕೊಡುವ
ಬಿರಿದ ಮಾತು
ಅದರೊಳು ಕೂಡಿಟ್ಟು ಮೌನ
ತೆರೆದೆದೆಯಲಿ

ಪ್ರಶ್ನಿಸಿಕೊಂಡೆ
ಉತ್ತರಿಸಿಕೊಂಡೆ
ಅವನ ಧ್ಯಾನದಲಿ
ನನ್ನದೇ ಧಾಟಿಯಲಿ

ಅಂತೂ ನಾ
ಕದ್ದು ಓದಿಕೊಂಡೆ
ಅವನೆದೆ ಕಲರವ
ಬರೆದೆನೊಂದು ಕದ್ದ ಪದ್ಯ
ನಿಂತು ಎಲೆ ಮರೆಯಲಿ

ಅವನದೇ ಚಿಲಿಪಿಲಿಯ
ದನಿಯ ಕಂಡು
ಜೋತು ಬಿದ್ದ
ಸೋತು
ಈ ಪದ್ಯದ ಗರಿಗಳಲಿ….
ಆರಿಸಿ ಸೇರಿಸಿ
ಪೋಣಿಸಿದ
ಮತ್ತಷ್ಟು ಅವನೆಂಬ ಖಜಾನೆ
ಈ ನನ್ನ ಗುಬ್ಬಿ ಗೂಡಿನಲಿ…

21/04/2015

No comments:

Post a Comment