Monday 30 September 2013

ಸಂತಸ ಬಯಸುವ ಮುನ್ನ
ಸಂತಸ ಕೊಟ್ಟು ನೋಡಲಿ
ಅದಿನ್ನೂ ಅದ್ಭುತ ಸಂತಸ
ಕಂಡುಕೊಂಡರೆ ತುಸು ಹಾಸ್ಯ! 

ದಿವ್ಯ ಆಂಜನಪ್ಪ

30/09/2013
ಸೊಗಸುಗಾರನ ಸೊಂಪಾದ
ಕನಸಿನೆದೆಯಲಿ ಹಾಯಾಗಿ ಮಲಗಿಹ
ಪ್ರೇಮಪಕ್ಷೀ ಹಾಡಿದೆ
ಅದ ನಾ ಕೇಳಿದೆ;
ರಾಗವು ಮಾತ್ರ ಅದೇ 'ಮೌನ'
 


30/09/2013
ಮುಂಜಾನೆ
ಸಂಜೆ
ರಾತ್ರಿ
ಇವಿಷ್ಟೇ 
ಪುನರಾವರ್ತನೆ
ಮತ್ತೇನಿಲ್ಲ
ಹೊಸತು
ಇನ್ನೇಕೆ ಭೀತಿ
ಕಾಳ ರಾತ್ರಿ ಕಪ್ಪು ಕಂಡು 

30/09/2013
ಚಿಂತೆಗಳ ಸಂತೆಯಲಿ
ಜೀವಿಸುವ ಜೀವ
ನಿರ್ಜೀವ!! 


30/09/2013
ಅರ್ಥವಾದದ್ದಕ್ಕಿಂತ
ಅರ್ಥವಾಗದವಕ್ಕೇ
ಮನವು ಹೆಚ್ಚು ವಾಲುವುದು 


29/09
ವಿರಹ
ಹಣೆ ಬರಹವಲ್ಲ
ಹಣೆಯ ಮೇಲೆ ಅಂಗೈಯಿಟ್ಟು
ತಲೆ ಕೆರೆದುಕೊಳ್ಳುವಾಗ
ಹಾಳೆಯ ಮೇಲೆ ಮೂಡಿದ ಬರಹ 
ಅನುಭವವಿಲ್ಲದ ಅಭಿವ್ಯಕ್ತಿ 


29/09/2013
ಮೂರು 
ದಿನದ
ಪ್ರೀತಿಗೆ
ಆಜನ್ಮ 
ವಿರಹ
ಹೆಣ್ಣಿಗೆ 


29/09/2013

Saturday 28 September 2013

ಹೀಗೊಂದು ತುಂಟತನ..... 

ಕನಸ ಕಟ್ಟಲು ಹೇಳಿಕೊಟ್ಟವ
ಕನಸಿಗೇ ಸ್ಫೂರ್ತಿಯಾದ
ಮತ್ತ್ಯಾರಿಗಾದರೂ ಹೇಳಿಕೊಟ್ಟಾನೆಂದು
ಕಟ್ಟಿ ಹಾಕಿರುವೆ ಕನಸುಗಳಿಂದ 

ದಿವ್ಯ ಆಂಜನಪ್ಪ 

29/09/2013
ಬಂಡೆ ಕಲ್ಲೇ 
ಆದರೂ 
ಬಾರಿ ಬಾರಿ 
ಭಾರಿ 
ಏಟ 
ತಾಳದು
ಕೊನೆಗೂ
ಮುರಿಯದಿದ್ದರೆ
ಕೊನೆಪಕ್ಷ ಕಲ್ಲು
ಎನ್ನರು ಯಾರೂ!!! 

29/09/2013
ನಕ್ಷತ್ರಗಳು ಏಕೆ
ಅಸಂಖ್ಯಾತವಾಗಿದೆ?
ನಿದಿರೆ ಬರದ ರಾತ್ರಿಗಳಲ್ಲಿ
ನೆತ್ತಿ ಮೇಲಣ ಕಾಂತಿ ಎಣಿಸುತ
ಸೋತ ಕಣ್ಗಳಿಗೆ ಸೋಲು ತಿಳಿಸುತ

ಸೋತು ನಿದಿರೆಯ ಪಡೆಯುವ ಕಲೆ
ವಿವರಿಸುತ ಬಾಳ ಹಾದಿಗೆ ಅಣಿಗೊಳಿಸಲು 



28/09/2013
ಬಣ್ಣಗಳು ಏಳಂತೆ
ಬಣ್ಣಗಳೆಲ್ಲವ ಹೀರಿದರೆ ಕಪ್ಪಂತೆ
ಬಣ್ಣಗಳೆಲ್ಲವ ಪ್ರತಿಫಲಿಸಿದರೆ ಬಿಳಿಯಂತೆ
ಹಾಗಾದರೆ 
ಕಪ್ಪು ಕಟ್ಟಿ ಬಣ್ಣವಲ್ಲ
ಬಿಳಿಪು ಬಿಟ್ಟು ಬಣ್ಣವಲ್ಲ
ಆದರೂ ಕಪ್ಪು ಬಿಳುಪು
ಬಣ್ಣಗಳಲ್ಲಿ ಬಣ್ಣಗಳಂತೆ! 


28/09/2013
ಕಣ್ಣ ಹನಿಯೊಂದು ಕೇಳಿತು 
ಕಣ್ಗಳನು;
ನಾ ನಿನಗೆ ಭಾರವೇ?
ಹೊರಗೆ ಕೆಡವಿದೆಯಲ್ಲ!
ಮತ್ತಷ್ಟು ಕಣ್ಣೀರುಕ್ಕಲು
ಕಣ್ಣು ತಬ್ಬಿಕೊಂಡಿತು
ಕಂಬನಿಗಳನು
ಹೊರಬಿಡದಂತೆ
ಕಣ್ಮುಚ್ಚಿ


ದಿವ್ಯ ಆಂಜನಪ್ಪ

28/09/2013
ಈ ಸುಂದರ ಸಂಜೆ
ಪ್ರೀತಿ ತುಂಬಲಿ
ನಿಮ್ಮಯ ಮನಗಳಲಿ
ಬೆಳದಿಂಗಳ ಧಾರೆ ಹರಿಯಲಿ
ರಾತ್ರಿಯ ಕನಸುಗಳಲ್ಲಿ

ದಿವ್ಯ ಆಂಜನಪ್ಪ

28/09/2013
ಬಹು ದಿನಗಳಿಂದ ಬರೆದೆ ನಾ, 
ಅವನ ಪ್ರೇಮವ, ದೀರ್ಘ ಕಾವ್ಯವಾಗಿ
ಬಳಸಿ ಒಂದೇ ಶಬ್ಧ
"ಮೌನ"



28/09/2013
ನಲ್ಲನ ಪಿಸುಮಾತು
ನಲ್ಲೆಯ ಹೃದಯ ಮಿಡಿತ
ಅವರಿಬ್ಬರ ಹೊರತು 
ಸುತ್ತಲಿನ ಕಿವಿಗಳಿಗದು ನೀರವತೆಯಷ್ಟೇ! 


28/09/2013

Friday 27 September 2013

ಹಾಗೇ ಸುಮ್ಮನೆ...... :-)

ಸುಂದರ ಕನಸನರಸಿ ಬಂದೆ
ಕನಸ ಬತ್ತಿಸಲಾರದೆ ನಿಂದೆ
ನಿನ್ನ ಕಣ್ಗಳ ಕನಸು ಸೆಳೆಯಿತೋ
ನಿನ್ನ ಮನವೋ ಇಲ್ಲ ಮೌನವೋ
ಮನವೀಗ ಕಾಮನಬಿಲ್ಲಲ್ಲೇ ಮಿಂದು
ಕಣ್ಗಳ ಕನಸನರಿಯಲು ಇಂದು, 
ನಿನ್ನೆದುರು ನಿನ್ನ ಕಣ್ಗಳ ಕಾಂತಿಯ ಸೆರೆ ನಾನು, 
ಪ್ರಿಯವಾಗಿದೆ ಬಂಧಿಯಾಗಿ
ಜೀವಾವಧಿ ವಿಧಿಸುವೆಯಾ??  :-)

ದಿವ್ಯ ಆಂಜನಪ್ಪ :-)
27/09/2013
ನಿನಗಿಂತ ಹೆಚ್ಚು ಕಾಡಿದ್ದು
ನಮ್ಮ ಸಂಭಾಷಣೆಗಳ ನೆನಪು
ನವಿರು ಕಂಪನವಾಗಿ 
ದಿನಕ್ಕೊಂದು ಅರ್ಥವ ನೀಡಿ 
ನವೀನವಾಗಿ ಮಧುರವಾಗಿ


27/09/2013
ಬೇಡವೆಂದು ಬಿಟ್ಟರು
ಕೈ ಹಿಡಿದೆಳೆದು
ಬರೆಸಿಕೊಳ್ಳುವೆಯಲ್ಲೇ
ನೀ ಪ್ರೀತಿ!


27/09/2013

Thursday 26 September 2013

ಕಾಲ ಮುಂದೆ ನಡೆದುಬಿಡುವುದು,
ಇಂದು ತೋರಿದ ಬಿಗುವು
ಮುಂದೊಂದು ದಿನದ ಪಶ್ಚಾತ್ತಾಪ;
ಇದು ಕಾರಣ, ಕ್ಷಮೆ ಕೋರಲು ವಂದನೆಗಳ ಅರ್ಪಿಸಲು
ಮನವೆಂದಿಗೂ ಹಿಂದೆ ಬೀಳಬಾರದು;
ಹಾಗೆಯೇ ಜೊತೆಯಾದ ಸಂಬಂಧಗಳು
ಬಿಟ್ಟು ನಡೆದರೂ ಬಾಧಿಸಬಾರದು
ಉಳಿಸಿಕೊಳ್ಳುವ ಪ್ರಯತ್ನ ಇನ್ನೂ ಬಾಕಿಯಿತ್ತೆಂದು 

ದಿವ್ಯ ಆಂಜನಪ್ಪ
27/09/2013
ಒಂದೇ ಬಳ್ಳಿಯ ಹೂವುಗಳವು ಐದು
ಸುಕೋಮಲ, ಮೃದು, ಸುಂದರ, ಆಕರ್ಷಕ, ನೈಜ
ದೂರ ಸರಿದರೂ ಮನವು ಒಂದರೊಳಗೊಂದು ಮಿಳಿತ
ಆಕಸ್ಮಿಕ ಹೊಡೆತಕ್ಕೇನಾದರೂ ಚೀರಿತೆಂದರೆ ಒಂದು ಹೂ
ಉಳಿದ ಹೂವುಗಳಲ್ಲಿ ಮೂರು ಸ್ವಭಾವತಃ ಮರುಗಿದರೆ
ನಾಲ್ಕನೇಯ ಹೂ ಹಾವಿಗೂ ಹೆಚ್ಚೇ ಹೆಡೆಯೆತ್ತುವುದು.
ಸಮಯದಿ ಹೂವೂ ಸಹ ತನ್ನ ಕೋಮಲತೆಯ ತೊರೆವುದು ತನ್ನವರಿಗಾಗಿ 

ದಿವ್ಯ ಆಂಜನಪ್ಪ

26/09/2013
ಬರಿದಾಗುವುದು
ತುಂಬಿಕೊಳ್ಳಲು
ಮತ್ತೊಮ್ಮೆ 
ಅವನ ಪ್ರೀತಿಯನ್ನು 


26/09/2013
ಮುಸ್ಸಂಜೆ ಮಾತು........ 

ಹೊರಡುವ ಮುನ್ನ
ನಾನಿದ್ದೆ
ನಿನಗದು ಗೊತ್ತಿತ್ತು
ಉರಿವ ರವಿ ಹೊರಳಿದನು
ಭೂರಮೆ ಕೊರಗಿದಳು!


25/09/2013

Wednesday 25 September 2013

ಹೆಣೆದ ಎಷ್ಟೋ ಭಾವಗಳು
ಪೂರ್ಣವಾಗದೇ ಉಳಿದಿರಬಹುದು
ಬರೆದ ಸಾಲುಗಳು ಕೂಡ;
ಜೀವನವೂ ಹಾಗೆಯೇ ಎನಿಸುವ ಕ್ಷಣಗಳೆಷ್ಟೋ?!
ಎಲ್ಲೋ ನೂಕುತ್ತ, ಮತ್ತೆಲ್ಲೋ ಕುಂಟುತ್ತ
ಇನ್ನೆಲ್ಲೋ ವಾಲುತ್ತ ತರಗೆಲೆಯಾಗಿ ಹಾರಿ
ಮಳೆಯಲಿ ತೊಯ್ದು, ರಪ್ಪನೆ ಬಂಡೆಗೆ ಬಡಿದು
ಕೆಲಕಾಲ ಕಲ್ಲಿಗೆ ಕಲ್ಲಾಗಿ ನಿಂತು, 
ಬಿಸಿಲ ತಾಕುತ್ತಲೇ ತೇವವಾರಿ 
ಮತ್ತೆ ಗಾಳಿಗಾರುವ ನಿರಂತರ ಸಂಚಾರಿ
ಒಮ್ಮೆ ದಿಕ್ಕಾಗಿ ಮತ್ತೊಮ್ಮೆ ದಿಕ್ಕೆಟ್ಟು.......


25/09/2013
ನಿಂತ ನೀರ ಕಲಕಿ
ಅದರೊಳು ಚದುರಿದ ಬಿಂಬಕೆ
ಸಿಡುಕಿ ಗುಡುಗಿದರೆಂತು
ನೀ ಮನವೇ?
ನೀರಿನದ್ದೇನಿದೆ ದೊಷ?
ನಿನ್ನದೇ ಅಲ್ಲದಿದ್ದ ಮೇಲೆ?!


24/09/2013

Tuesday 24 September 2013

ಬಯಸಿದ ಪ್ರೀತಿಗಿಂತ
ಬಯಸಿ ಬಂದ ಪ್ರೀತಿ
ಹೆಚ್ಚೆನಿಸಿಕೊಂಡರೂ
ಕೈ ನೀಡಲಾರೆ;
ಬದಲಿಗೆ ಹಾಕಿಬಿಡುವೆ
ಕಾಡುವ ಈ "ಪ್ರೀತಿ"ಗೆ
ನನ್ನದೊಂದು ಪೂರ್ಣ ವಿರಾಮ


24/09/2013
ಬೇಡಿ ಪಡೆದದ್ದು
ಪ್ರೀತಿಯಾಗದು
ಅದು ಕರುಣೆ; 
ಸತ್ಯ ಅರಿವಾದಾಗ
ಅದೊಂದು ಅಸಹನೆ 


24/09/2013

Monday 23 September 2013

ಮನಸ್ಸು ಮಾಯೆ
ಎಂದುಕೊಂಡಿದ್ದೆ;
ಇಲ್ಲ ಇಲ್ಲ
ಮನಸಿನಲ್ಲಿರುವ ನೀನು
ಮಾಯೆ!!


23/09/2013
ತಂತ್ರ ಹೂಡಿ ಮಂತ್ರ ಹಾಕಿ
ಹಿಡಿದಿಟ್ಟಿರುವೆ ಏನು
ಈ ನನ್ನ ಮನವ;
ಅಪ್ಪಿ-ತಪ್ಪಿಯೂ ನಿನ್ನ ಮರೆಯದಂತೆ
ಹೇಳೀಗಲೆ,
ಯಾವ ಸೀಮೆಯ ಮಾಂತ್ರಿಕ ನೀನು?! :-)

23/09/2013
ಶ್ರಮವಿಲ್ಲದೆ ಫಲವ ಬಯಸಲುಬೇಡ
ಶ್ರಮವರಿಯದೆ ಫಲವ ಕೆಡಿಸಲುಬೇಡ
ಶ್ರಮವಲ್ಲದೆ ಮತ್ತ್ಯಾವುದು ನಂಬಿಕೆಯಿಲ್ಲ
ಶ್ರಮವೇ ಸಾಧನ ಸಕಲ ಸಾಧನೆಗಳಿಗೆ 


23/09/2013
ಮುಖ ಸೌಂದರ್ಯದ ಮುಂದೆ 
ಗೌಣ ಹೃದಯ
ಹೃದಯ ಮಿಡಿತದ ಹಿಂದೆ
ಮಾತು ಮೌನ,
ಸೌಂದರ್ಯವಿದ್ದೆಡೆ ಜನ
ಮನ ಕಳೆದುಕೊಂಡವರು
ಭಾವ ಹೊಸಕಿದರು! 


23/09/2013
ಮಾಯೆಯ ಜಗದೊಳು
ತಾವೊಂದು ಮಾಯೆಯಾದರೆ ಮಾತ್ರ
ಮಾಯವಾಗದೆ ಉಳಿಯಬಹುದೇನೋ

23/09/2013

Sunday 22 September 2013

ಕನಸು ನಮ್ಮ ಖುಷಿಯಾಗುವುದಕ್ಕಿಂತ
ನಾವು ಕನಸಿಗೊಂದು ಆಸರೆಯಾಗಬೇಕಿದೆ
ಅದಕ್ಕಾಗಿಯೇ ಕನಸನು
ಹೆತ್ತ ಮಗುವಾಗಿ ಕಾಣುವರು
ಕನಸುಗಾರರು 


22/09/2013
ಭಾವುಕತೆಗೆ ಬೇಸರವೇ ಫಲವಾದರೆ
ನಿರ್ಭಾವುಕತೆಗೆ ಅದೆಂತಹ ವ್ಯಥೆಯೋ
ಭಾವುಕರಾಗಿ ಎರಡು ಹನಿ ಕಣ್ಣೀರಾದರೂ ಸುರಿಸೋಣ
ನಿರ್ಭಾವುಕರಾಗಿ ಅಳಲಾರದೆ ಹೆಪ್ಪುಗಟ್ಟಿ ತೊಳಲಾಡುವುದಕ್ಕಿಂತ


22/09/2013
ಹೀಗೊಂದು ವಿಷಾದ.... 

ಕತ್ತಲೆಯೂ 
ಸ್ವರ್ಗವಂತೆ
ನಾಟಕದಂತಹ ಕನಸು
ನಾಯಕನಾದ ನೀನು
ಕಪ್ಪಿನ ಹಿನ್ನೆಲೆಯಲಿ
ಬೆಳಕಾಗಿ ಭ್ರಮೆ ಹುಟ್ಟಿಸುವಾಗ 


22/09/2013
ಬದುಕು ಮೂರು ದಿನ
ಹುಟ್ಟಿದ ಒಂದು ದಿನ
ಹೋಗುವ ಒಂದು ದಿನ
ಮಧ್ಯದೊಂದು ದಿನ
ಅದೂ ಕರಗಿತು
ಬರೀ ನಿನ್ನ ನೆನಪಲ್ಲೇ
ಕರುಣೆ ಬಾರದೇ
ಅರ್ಧ ದಿನದ
ನಂತರವಾದರೂ
ವಿಧಿಯೇ


22/09/2013
"ಹುಟ್ಟಿನ ಗುಟ್ಟಿಗಿಂತ ಹಿರಿದು
ಬದುಕು ಬವಣೆ;
ಅದಕೂ ಹಿರಿದು
ಧ್ಯೇಯ ಸಾಧನೆ
ಇದನ್ನೂ ಮೀರುವುದಾದರೆ ಮಾನವರಾಗಿ!!


22/09/2013

Saturday 21 September 2013

ಬೆಳಕಿಲ್ಲದೆಡೆಯೆಲ್ಲಾ ಕತ್ತಲೆಯೇ
ಅದು ಕತ್ತಲೆಯ ತಪ್ಪೇ?
ಬೆಳಕು ಹರಿಯಬೇಕಿದೆ ಕತ್ತಲೊಳು;
ಕತ್ತಲೆಯ ತಬ್ಬಿ ಕತ್ತಲೆದೆಯ ಬೆಳಕಾಗಲು 


21/09/2013
ಪದಗಳ ಹುಡುಕುತ್ತಿರುವೆ
ಮೌನದಿ ಕಾಡುವ
ನಿನ್ನ ದೂಷಿಸಲು;
ಹಾಗೆಯೇ ಪ್ರೇಮಿಸಲು,
ಕೋಪಕೊಂಡ ನಿನ್ನ 
ಮುದ್ದಾಗಿ ರಮಿಸಲು 


21/09/2013
ನಿನ್ನ 
ಮೌನ;

ನನ್ನ 
ವೈರಾಗ್ಯ
ಬೇಸರದ
ಹೊತ್ತೇ 
ಇಲ್ಲ 
ಮನದೂಳು 
ನೀನಿರುವಾಗ 

21/09/2012

Thursday 19 September 2013

ಪ್ರೀತಿ ದೂರ
ಜೀವ ಭಾರ
ಆದರೂ 
ಓಟ ನಿರಂತರ
ನೆನಪಿನಾಸರೆಯಲಿ
ಒಮ್ಮೆ ನೆಲ ಒಮ್ಮೆ ಜಲ ಒಮ್ಮೆ ಗಾಳಿ
ಕುಣಿಯುತ, ತೇಲುತ, ಹಾರುತ......... 

ದಿವ್ಯ ಆಂಜನಪ್ಪ

19/09/2013
ನೀನೆಷ್ಟೇ ದೂರ ಓಡಿದರೂ
ಮರೆತಿರುವೆ ನಿನ್ನ ಮನಸ
ನನ್ನಲ್ಲೇ  <3

ದಿವ್ಯ ಆಂಜನಪ್ಪ
19/09/2013

Wednesday 18 September 2013

ನಿನ್ನ ನೋಡುತ್ತಲೇ
ಉಕ್ಕುವ ನನ್ನ ಕನಸಿಗೆ
ಜನರ ಕಣ್ತಪ್ಪಿಸಲು
ನಾನಿಟ್ಟ ಹೆಸರು
ಚುಟುಕು-ಹನಿಗಳು 

ದಿವ್ಯ ಆಂಜನಪ್ಪ

18/09/2013
ಹಾಗೇ ಸುಮ್ಮನೆ....... 

ಕತೆ ಮುಂದುವರೆಯದಿದ್ದರೆ 
ಮತ್ತೆ ಪ್ರಾರಂಭಿಸೋಣ
ಹೊಸ ಚಿಂತನೆಯಲ್ಲಿ
ಹಾಗೆಯೇ ನಮ್ಮ ಪ್ರೀತಿ
ಮತ್ತೆ ಪರಿಚಯಿಸಿಕೊಳ್ಳೋಣ
ಸ್ನೇಹಿತರಾಗಿ........ 

ದಿವ್ಯ ಆಂಜನಪ್ಪ

18/09/2013
ಗಾಢ ನಿದ್ದೆಯಲ್ಲಿದ್ದವರ ಏಳಿಸಬಹುದು
ನಿದ್ದೆಯ ನಟನೆ ಮಾಡುವವರ ಏಳಿಸಲಾಗದಂತೆ
ಮೂಗರ ಮಾತಿಗೆಳೆಯಬಹುದು
ಮೌನ ಬಯಸಿದವರ ಕರುಣೆಯೂ ಮಾತನಾಡಿಸಲಾಗದು

ದಿವ್ಯ ಆಂಜನಪ್ಪ

18/09/2013
ಗಿಡ ನೆಟ್ಟು ಬೆಳಸಿದರೂ
ಅದರೋಳು ಹೂಗಳ ಅರಳಿಸಲಾರೆ
ಎನುವ ಸ್ನೇಹಿತನ ಅಳಲಿಗೆ
ನನ್ನ ಸಮಾಧಾನದುತ್ತರ
ಮೊಗ್ಗುಗಳಿರಬಹುದು ಕಾದು ನೋಡುವ
ಸಂಯಮವಿರಲಿ;
ಅವನ ಕಾವ್ಯಾತ್ಮಕ ಸಾಲಿಗೆ
ನಾ ಸೇರಿಸಿದ್ದು ಸಾಲನಷ್ಟೇ
ಅಷ್ಟೇ ಸಾಕಾಗಿತ್ತೇನೋ
ವಿಸ್ತರಿಸಲು ಅವನ ಕಲ್ಪನೆಗಳ ಸರಹದ್ದಿಗೆ
ಗೆಳೆತನವಲ್ಲಿ ನಿಂತಿತ್ತು ಪ್ರಶ್ನಿಸುತ್ತ
ಇದು ಸ್ನೇಹನಾ? ಪ್ರೀತಿನಾ?

ದಿವ್ಯ ಆಂಜನಪ್ಪ

18/09/2013
ಮನಸ್ಸು ಕಟ್ಟಿ ಹಾಕಿದೆ
ನಿನ್ನ ಮನಸ ಮಾತ ಕೇಳೆಂದು
ನಾ ಅರಿಯಬಲ್ಲೆ ನಿನ್ನ ತಪನ
ಅದಕೆ ನಾ ಸುಳಿಯಲಾರೆ ನಿನ್ನನುಮತಿಯಿಲ್ಲದೆ
ಹೊಸ ನೆರೆಯಲ್ಲಿ

18/09/2013

Tuesday 17 September 2013

ನೀನು ಇಲ್ಲಿ ಇಲ್ಲದೇ ಇದ್ದಿದ್ದರೆ
ನಾನೂ ಇಲ್ಲಿರುತ್ತಿರಲಿಲ್ಲ!
ಅವರಿವರ ಮುಳ್ಳುಗಳ 
ಸೋಕಿಸಿಕೊಂಡು ನಡೆಯುತ್ತಿರಲಿಲ್ಲ!
ನೀ ಬರುವ ಹಾದಿ ಕಾದು ಈ ನೆಲದೊಳು ನಿಲ್ಲುತ್ತಿರಲಿಲ್ಲ


17/09/2013