ಕಾಡಿನಲ್ಲೊಂದು ಮಳೆಯ ದಿನ
ಕಾಡು ನೋಡ ಹೋದೆ
ಎಲ್ಲರಂತೆ ನಾನೂ ಒಂದು ದಿನ
ಕವಿತೆಯೊಡನೆ ಬರುವ
ಉದ್ದೇಶವೇ ಏನಿರಲಿಲ್ಲ
ಹೋಗಿದ್ದಾದರೂ ಒಂದು ಕವಿತೆಯೊಂದಿಗೆ
ಹಾಡಿಕೊಂಡು ಕೇಳಿಕೊಂಡು
ಅದರದೇ ರಾಗ ಹೊಸದೊಂದು ಭಾವ!
ಕಾಡು ಮುಟ್ಟುವ ಹೊತ್ತಿಗೆ
ಗಾಳಿ ಜೋರಿತ್ತು ಮಳೆಯ ಸುದ್ದಿಯೂ
ಒಳಗೆಲ್ಲೋ ಕವಿತೆ ಹಾಡಿದಂತೆ
ಸ್ವಗತ; ಇದು ಮಳೆಯ ದಿನ
ಈ ಹೊತ್ತು ಮುಂದಷ್ಟು ಹೊತ್ತು
ಗೊತ್ತಿಲ್ಲದ ಬೀಸು ಗಾಳಿ
ಒಡ್ಡಿಕೊಂಡಂತೆ ಕವಿತೆ
ಮಳೆಗೆ ಸುಮ್ಮನೆ ಮುಗುಳು ನಗೆ!
ಕಾಡೆಂದರೆ ರಹಸ್ಯ
ಹುದುಗಿರುವ ಅನೇಕವಲ್ಲಿ ಕಂಡೆನಷ್ಟು
ಜೀವಜಂತುಗಳ ಮೌನ
ತಿರುತಿರುಗುವ ಘರ್ಜನೆ!
ಹಾಗೇ ಸುಮ್ಮನೆ ದಿಟ್ಟಿಸಿ ಹೋದ ಹುಲಿಯು,
ಪುಳಕವೆಂದರೆ ತಿಳಿದೆ ನಾ ಮೊದಲು!
ಉಸಿರುಗಟ್ಟಿತ್ತು ಕಣ್ಣರಳಿತ್ತು
ಅದು ಸಾಗಿ ಹೋದ ನಂತರವಷ್ಟೆ ತಿಳಿದಿತ್ತು
ನನ್ನೊಳ ಕವಿತೆಯೂ ಅರಳಿತ್ತು
ಆಹಾ! ಸ್ವರ್ಗವೆಂದರೆ,,,, ___
ಇರಲಿ ಇನ್ನೂ ಇರಬಹುದೇನೋ...!
ಮಳೆ ಹನಿದ ಹವೆಯಲ್ಲಿ
ಹಸುರೆಲ್ಲಾ ಮೈ ತೊಳೆದು
ಹಕ್ಕಿ ನಲಿವ ಈ ಹೊತ್ತಲಿ
ಕಾಡೊಳು ಕವಿತೆ ಸುಳಿದಾಡಿ
ಮನ ತುಂಬಿ ತನು ದಣಿದು
ಹೊಸ ಗೀತೆಯ ಒಳಗೊಳಗೇ ನೇಯ್ದು
ಕಾಣುವಂತೆ ನಾಚಿತ್ತು!
ಅದರೊಟ್ಟಿಗೆ;
ಆಧುನಿಕತೆ ಹೆಸರಿನ ಈ ಅಭಯಾರಣ್ಯದಲ್ಲಿ
ಚಲಿಸುವ ಬೋನೊಳಗೆ ನಾವು ಕೂತು
ಕಾಡಿನೊಳ ಮೃಗ ಪಕ್ಷಿಗಳಿಗೆ
ನಮ್ಮನ್ನು ತೋರಿಸಿಕೊಳ್ಳುತ್ತ
ನಾವೇ ನೋಡಿ ಬಂದಂತೆ ಅನುಭಾವಿಸಿ
ವಿಚಿತ್ರ ಸೊಗಸು;
ಅದು ನಮಗೋ, ಇಲ್ಲ ಅವುಗಳಿಗೆ
ಅಂತೂ ಒಂದು ಮೋಜಿತ್ತು !
ಕಾಡಿಗೆ ಕಾಡೊಂದೇ ಸಾಟಿ,
ಅರಳಿ ನಿಂತ ತಾವರೆ
ಬಿಡಿಸಿ ನೋಡಬೇಕು ದಳಗಳ
ಸಂಖ್ಯಾ ಗುಟ್ಟು!
ಚಿಗುರಿನೊಳು ಚಿಗುರಿದಂತೆ
ಮತ್ತಷ್ಟು ಮಗದೊಷ್ಟು
ಲೆಕ್ಕ ಹಾಕಿದಷ್ಟೂ ತಪ್ಪು ತಪ್ಪು!
ಅಂತೂ ಕಾಡಿನೊಳು ಕಳೆದೆ
ಒಂದು ಮಳೆಯ ದಿನ!
ಮಿಂಚು ಸಿಡಿಲನು ಎದುರೇ ಕಾಣುತ
ತುಸು ತೊಯ್ದು, ತುಸು ಒಣಗಿ
ಹಸಿಯಾದಂತೆ ಮತ್ತೆ ಮತ್ತೆ
ಕಳೆದ ಕೆಲ ಹೊತ್ತುಗಳು
ಕವಿತೆ ಹುಟ್ಟಿಸಬಹುದೆಂಬ ಭರವಸೆಯಲಿ
ಹೊರಟಿತ್ತು ನನ್ನೊಡನೆ
ಕತೆಯು ಸಾಗಿತ್ತು ...
ನನ್ನೊಳ ಕವಿತೆಯೂ!
ಹೌದು..
ಕವಿತೆಯೊಡನೆಯೇ ಬಂದೆ!
ಕಾಡ ನೋಡ ಹೋದೆ,
ಕವಿತೆಯೊಡನೆ ಬಂದೆ!
10/05/2015