Friday, 7 March 2014

ನೆತ್ತಿಯ ಮೇಲಣ 
ಕಟ್ಟಿದ ಮೋಡವೆಲ್ಲಾ
ಮಳೆಯಾಗದು, 
ಕೆಲವೊಮ್ಮೆ ಗಾಳಿ ಹೊಗೆಯು,
ಕಟ್ಟಿದ ಮೋಡವು 
ಪ್ರೀತಿಯೊಳು ಭಾರವಾದರಷ್ಟೇ
ಮಳೆ ಸುರಿಸುವುದು 
ಹೂವ ಕಂಪು ಪಸರಿಸುವಂತೆ
ಕೋಗಿಲೆಗೂ ಗಾನ ನೆನಪಿಸುವಂತೆ


***

ನಿನ್ನ ಕವನ, ನನ್ನ ಅರ್ಥ
ಎಲ್ಲೋ ಮೋಹ
ಮತ್ತೆಲ್ಲೋ ಧ್ಯಾನ
ಸರಿ ಹೊಂದದ ಒಳಾರ್ಥಗಳು
ಸರಿ ಸರಿಯೆಂದೇ ಸರಿಸಿಬಿಟ್ಟವು
ನನ್ನನು ನಿನ್ನಿಂದ
ನಿನ್ನನು ನನ್ನಿಂದ
ಸೈರಿಸಲಾರದೆ ಬಹು ಅರ್ಥಗಳ... 


***

ಪದ ಕಟ್ಟಿಕೊಂಡು 
ಹಾಡಿ ಕುಣಿದಾಡೋ 
ದಾಸನಿಗೆ 
ಎಲ್ಲಿಯ ಗೊತ್ತಾದ ತಾಣ
ನಿಂತಲ್ಲೇ, ಕಳೆದಲ್ಲೇ, ಹೊರಟಲ್ಲೇ ತವರು
ಅಕ್ಕರೆಯ ಹಂಚಿದವರೇ ತನ್ನವರು
ಜಗದೇಕ ಒಡೆಯ ಬಯಸುವಂತೆ ವಿಧಿಯೋ
ವಿಷವಿಲ್ಲ, ವೈಷಮ್ಯವಿಲ್ಲ, 
ನೀನು ನಾನೆಂಬ ನಿಂದೆ ಅಹಂ ಇಲ್ಲದೆ 
ನುಡಿವ ನೀತಿ ಉದಯ ರವಿ ಪ್ರಜ್ವಲಿಸಿ
ಪೂಜನೀಯವೀ ವನದಂತೆ
ಸಕಲ ಜೀವಕೂ
ಸರ್ವ ಸಮ ಪಾಲು
ಪ್ರತೀ ದಕ್ಕಿಸಿಕೊಳ್ಳೊ ಜೀವನಕೂ


***

ದಕ್ಕದೆ 
ಹೃದಯಕೆ ನಾಟಿ ಹೋದ 
ಪ್ರೀತಿಗಿಂತ
ಮುಟ್ಟದೆ 
ಹೃದಯಕೆ ಬಳಿದು ಹೋದ 
ವಿರಹ ಶ್ರೇಷ್ಟ! 


***

ಶಪಿಸಲಾರೆನೋ ಪ್ರೀತಿಯ
ಹರಿದುಕೊಂಡಂತೆ ನನ್ನೊಳ
ಭಾವ ಚಿತ್ರವ...
ಮೂಡುವ ಮುನ್ನವೇ...

ಕರಗಿಸಲಾರೆನೋ ಕಾಂತಿಯ
ಕತ್ತಲಾದಂತೆ ಕಲ್ಪನೆ
ಬಣ್ಣದೊಳು ಮಿಂದು
ಕಣ್ ಕೋರೈಸುವ ಮುನ್ನವೇ...


***

ತುಂಬಿಕೊಳ್ಳಲಾರದ ಪ್ರೀತಿ
ಹೊರ ಹಾಕಲಾರದ ಕೋಪ
ಬಿಸಿ ತುಪ್ಪದಂತ ಮೋಹ
ಎದುರಲಿ ಒಲುಮೆಯುಕ್ಕಿಸೋ
ಕಾಡುವ ಸಖನಿರಲು....


07/03/2014

No comments:

Post a Comment