Tuesday, 4 March 2014

ಕವನ

ಮನದ ವಿಪ್ಲವ



ಇವಳೀಗ ಕವಯತ್ರಿಯಂತೆ 

ಕಲ್ಪಿಸಿ ಸುರಿಸುವಳು
ಸೋನೆ ಮಳೆ ಹನಿಗಳಲಿ

ಹನಿಗಳ ಉಲ್ಲಾಸಕೆ 
ನೆನೆದ ಮನಕ್ಕೆಲ್ಲಾ ತಂಪು
ಉನ್ಮಾದವೂ ಸಹಜವೇ,

ಇವಳ ಮಳೆ ಹನಿಗೆ ತೇವಗೊಂಡ ಅವನೂ 
ಮತ್ತೆ ಪ್ರೇಮಿಸ ಹೊರಟನು
ತನ್ನಿಬ್ಬರ ಮಕ್ಕಳೊಂದಿಗೆ ಮಡದಿಯ ಮರೆತು

ಇವಳ ಮುಗ್ಧತೆಗಷ್ಟೇ ಮಾರು ಹೋಗಿ 
ಎಂದೋ ಪ್ರೇಮಿಸಿದ್ದ ಪೇಮಿಯಂತೆ ಅವನು
ಅವನದೇ ಮತಿಭ್ರಮೆಗೆ ಪಡೆಯದಾದ ಇವಳನು ವರಿಸಿ ಮತ್ತೊಬ್ಬಳನು

ಕಳೆದವೆಷ್ಟೋ ವರ್ಷಗಳು, ಅವನಂತೆ ಅವನು; ಇವಳಂತೆ ಇವಳು
ಇವಳೀಗ ಭ್ರಮೆಯಲೇ ತೇಲೋ ಕವಿ ಹೃದಯ ಸದಾ ಮಿಡಿವ ಜೀವ
ಆ ಹಸಿತನಕೆ ಬೆರಗು ಬಯಕೆ ಮತ್ತೆ ಮತ್ತೆ

ಅವನೇನೇನೂ ಅಲ್ಲದ ಇವಳೋಳು ಮತ್ತೆ ನೆನಪಾದದು
ಅವನದೊಂದುಲಿಯಲಿ, ''ತಾನಿನ್ನೂ ನಿನ್ನೇ ಪ್ರೀತಿಸುವೆ,,,''
ಎರಡನೇ ಬಾರಿ ಹೇಳಿದ್ದು, ಮೊದಲು ಕೇಳಿದ್ದರೂ ಈಗ ಕಿವುಡು ಇವಳಿಗೆ

ಜೀವನದ ಕ್ಲಿಷ್ಟ ಹರವಿನೊಳು ನಲುಗುತ್ತಿರಲು
ಸಹಾಯವಿರಲಿ; ಇಂತಹ ಅಸಹಾಯಕತೆ ಬೇಡೆಂದೇ ಗೋಳಿಡುವಳು
ಪ್ರೀತಿಯೇ ಆಗಿದ್ದರೆ ಅಂದೇ ದಕ್ಕಿಸಿಕೊಳ್ಳಬಹುದಿತ್ತವನು ಇಂದಿನವರೆಗೂ ಕಾಯದೆ

"ಮುನ್ನೆಡೆದ ಮೇಲೆ ಹಿಂದುರಿಗಿ ನೋಡುವ ಕೊರಕಲು ಜೀವನ ರುಚಿಸದೆನಗೆ,
ನಿನ್ನನು ನಾ ಗೆಳೆಯನೆಂದೂ ನೆನೆಸೆನು, ಮತ್ತೂ ನೀ ಪ್ರೇಮಿಯೂ ಆಗಿರಲಿಲ್ಲ
ನಿನ್ನ ಮಡದಿಯ ಪತಿ, ನಿನ್ನ ಮಕ್ಕಳ ಪಿತನಷ್ಟೇ,," ಬರೆದು ಕೊಟ್ಟಳು ಕಾವ್ಯದೊಳುತ್ತರ

ಕವಿತೆಗಳೂ ಕತೆಗಳಾಗಲು
ಕತೆಗಳೆಲ್ಲಾ ಜೀವನವಾಗಿವೆ;
ನಂಬಿಯೂ ನಂಬದೆ ತೂಗಿ ಹೇಳಿದೆ

''ಬದುಕುವುದಾದರೆ ಬದುಕು ಉಸಿರಿದ್ದರೆ ಧ್ಯೇಯೆಯೊಳು
ಶುದ್ಧವಿದ್ದರೆ ಮನದೊಳು, ಕಾವ್ಯವಿದ್ದರೆ ಗುಣದೊಳು 
ನೀನಿದ್ದರೆ ನಿನ್ನೊಳು, ಭಯೋತ್ಪಾದಕರ ಧಿಕ್ಕರಿಸಿ ನಿಂತ ಮೇಲೂ!!''

-ದಿವ್ಯ ಆಂಜನಪ್ಪ
04/03/2014

No comments:

Post a Comment