Thursday 20 March 2014


ನಾ ಕಳೆದು ಹೋದಾಗ ಹುಡುಕದಿರು ಮೌನವೇ


ಧ್ಯಾನದಲ್ಲಿದ್ದೇನೆ ನನ್ನೊಳಗಿನ ದನಿಗೆ

ಚೈತನ್ಯವ ತುಂಬುವ ಸೃಷ್ಟಿಯ ಆರಾಧಕನಿಗೆ

ಸೇವಕಳಾಗಿ, ದೀನಳಾಗಿ, ಲೀನವಾಗಿ

ಹರಿವ ತೊರೆಯ ತೇಲುವ ಹಸಿರೆಲೆಯಾಗಿ,,,

ಹುಡುಕದಿರು, ತಡೆಯದಿರು, ಕದಡದಿರು 

ಅಲೆ ಅಲೆಯ ಸಾಲು ನೀರ ನೆರಿಗೆಯಾ,,,

ನಲುಗೇನು ಭಗ್ನದಲಿ ಭಾರಗೊಂಡು 

ತಳ ಸೇರಿದ ಕಲ್ಲಾಗಿ ಪರಮ ಮೌನಿಯಾಗಿ,,,




***



ಭಾವವಾಗಿ ಹೊರ ಹೊಮ್ಮಲಾಗದೆ

ಮೌನಕೆ ಹೆಸರಿಡಲಾಗದೆ

ಹನಿಗೂಡುವ ಈ ಹೆಣ್ಣು....

ನಿಗೂಢವಂತೆ... 




***



ನೀ ಏನನ್ನೂ ನುಡಿಯದೆ ನಡೆದೆ

ನನ್ನೊಳಗೆ ಸಾವಿರ ಪ್ರಶ್ನೆಗಳು,

ನಿನ್ನ ಹಿಂಬಾಲಿಸುವ ಮನ

ನೀ ಕಡಿದ ಸೇತುವೆಯ ಆ ತುದಿ,

ಸೇರಲಾರದೆ ನಿಲ್ಲಲಾರದೆ ಬೇಗುದಿ

ಒಳ ದಾರಿ, ಕಡಿದಾರಿ ಹಿಡಿದು

ಮಗುವಂತೆ ರಚ್ಚೆ ಹಿಡಿದಂತೆ ನಡೆದು

ದೂರದೂರಿನ ಪ್ರೇಮ ಕವಿಯೇ

ನಿನ್ನೊಳಗೊಮ್ಮೆ ಹರಿದಾಡಿದ ಗೆಲುವಿನ

ನಿನ್ನೊಂದಿಗೆ ನಾನು ಹೆಸರಿಲ್ಲದ ಕವನ..




***



ಮುಖವಾಡದ ಮರೆಯಲಿ

ಮತ್ತೊಮ್ಮೆ ನಿನ್ನ ಗೆಲ್ಲುವ

ನನ್ನ ಹುನ್ನಾರ, 

ಹೆಸರಿಡಲಾರೆ ಏನೆಂದು....

ಮೋಸವೆನ್ನದಿರು ಮಾತ್ರ 

ನಾ ಸಹಿಸಲಾರೆ ಉಳಿದು .....




***



ಕಲ್ಲನ್ನೆತ್ತಿಕೊಂಡೆ 

ಕೈಯೊಳೊಮ್ಮೆ

ರೂಢಿಯಿಲ್ಲ 

ಮೋಸದ ಕಲ್ಲ ಹೊರೆ

ಆಯ ತಪ್ಪಿ ಬಿದ್ದಿದೆ 

ನನ್ನದೇ ಕಾಲ ಮೇಲೆ.... 




***


ಕಪಟತೆಯ ಸೀಮೆಯೊಳು


ಕಪಟವಾಡದೇ ಉಳಿವುದೇ

ನರಕ... 



20/03/2014 :-)

***


ನಕ್ಕರೆ ನಗುವ 


ಅತ್ತರೆ ಅಳುವ

ಕನ್ನಡಿಯೇ ಈ ಜಗವು

ನಿಗಿನಿಗಿ ಹೊಳೆವ 

ಚಂದವ ತೋರುವ

ಪ್ರತಿಬಿಂಬವನೇ 

ಛಿದ್ರಗೊಳಿಸೋ ತಂತ್ರವೇ 

ಈ ಜಗದೊಳ ನಾವು




***



ಬಚ್ಚಿಟ್ಟ ನೋವ ಹನಿ 

ಕಪ್ಪೆ ಚಿಪ್ಪಿನೊಳ 

ಸ್ವಾತಿ ಮುತ್ತಾಗಿ ನಳನಳಿಸೀತು

ನಿರಂತರ ತವಕದೊಳು 

ಹನಿ ಮೀಯ್ದೊಡೆ



***


ಸೌಂದರ್ಯ 

ನೋಡುವ ಕಣ್ಣುಗಳಲಿ

ಹೌದು 

ಅವಳ ಕಣ್ಣುಗಳಲೇ,,

ಅವನು ಆಗಾಗ 

ಇಣುಕಿ ಮರೆಯಾಗುವ

ತುಂಟ ನಗೆ, 

ಬಿಸಿ ಹನಿ, 

ಆನಂದದ ಕನಿ,,,,



19/03/2014

No comments:

Post a Comment