ಮತ್ತೊಮ್ಮೆ ಮರಳಿಪಡೆದ
ಮಂದಹಾಸಕೆ
ಬಹು ದಿನಗಳ
ವೇದನೆಯ
ಸಾರ ತಿಳಿಯಾದ
ಹೆಮ್ಮೆ ಇತ್ತು ;
ಹಾಗೆಯೇ ಮರುಕವೂ,
ಮುಳ್ಳೆದೆಗಳ
ಚೀರಿಕೊಳ್ಳಲಾಗದ
ಸಂತಸದ ಮರೆಯ
ನೋವಿಗೆ...
***
ಕಳೆದ ನೋವೆಂಬ ನೆರಳಡಿಯಲಿ
ಬದುಕಿನ ಇಂದಿನ ಸಣ್ಣ ಸಣ್ಣ ಸಂಭ್ರಮಗಳನ್ನು
ಕಳೆದುಕೊಂಡು ಊಳಿಡುವದೇ ನಿಜ ನೋವು!
***
ಹೆಂಗಳೆಯರ ಚೆಲುವು ಕಣ್ಗಳ
ಕಪ್ಪಿನೊಳು ಹುಡುಕಿದೆನಾ
ನಿನ್ನ ಪತ್ತೆ ಹಚ್ಚಲು,
ಹಚ್ಚಿದ ಕಪ್ಪೊಳು
ನಿನ್ನ ಬೆರೆಳ ಅಚ್ಚನು,
ಅಲ್ಲೆಲ್ಲೂ ಸಿಗದ ನಿನ್ನ
ಎನ್ನ ಕಣ್ಣ ಚಿಪ್ಪಿನೊಳು
ಮುಚ್ಚಿಟ್ಟಿಹೆನೆಂಬ ಖಾತ್ರಿ
ಕೃಷ್ಣಾ,
ನಿನಗೂ ನೀ ಸಿಗದ ಹಾಗೇ
ಕದ್ದೇಬಿಟ್ಟಿಹೆನು,
ತೊಟ್ಟು
ನಿನ್ನನೀ ಕಣ್ಣ ಕಾಂತಿಯಾಗಿ
ಅತ್ತೆ
ದೇವಕಿ ಯಶೋಧೆಯರಿಗೂ
ಹೆದರದಂತಾಗಿ...
27/03/2014
***
ಮನವರಳದೆ ಕವಿ ಕೊರಗಿದ
ಮತ್ತೂ ಕನವರಿಸಿದ
"ನೀ ಮಾಯೆ
ಮಾಯೆಯೊಳ ಛಾಯೆ,,"
ಖಿನ್ನತೆಯೊಳ ಮನವು
ಉಸಿರಿದೆ ಕವನ
ಅದುವೇ ಕವಿಯ ಮನ....
***
ಮಾತು ಮುರಿದರೂ ಮೌನವಿದೆ
ಈ ಸಂಜೆ ಗಾಳಿಯಲಿ
ನಿನ್ನನು ನನ್ನಂತೆ,
ನನ್ನನು ನಿನ್ನಂತೆ
ಕೆಣಕುವಂತೆ
ಛಿದ್ರವಾದ ಚಿತ್ರಗಳೊಮ್ಮೆ
ಮೈದುಂಬಿಕೊಂಡಂತೆ
ಗತ ಕಾಲದ ಪ್ರೇತಗಳಂತೆ
ಅವರಿವರ ಕಣ್ತಪ್ಪಿಸಿ
ಕೈ ಹಿಡಿದು
ಜೊತೆ ನಡೆದಂತೆ,,,,,
***
ದಿನವೂ ಕ್ರಾಂತಿಯ ಬಾಗಿಲಿಗೆ
ಸಾರ್ವಜನಿಕ ಹಿತಾಸಕ್ತಿ ಪತ್ರಗಳ ನೇಣು
ಆ ಮನೆಯೊಡೆಯನ
ದ್ವಂದ್ವ, ಮನದ ಖಾಲಿತನವನ್ನರಿತವರಿಗೆ
ನಡು ರಾತ್ರಿಯ ನಿದಿರೆಯಲೂ ನಗು
26/03/2014
No comments:
Post a Comment