Sunday, 30 March 2014
ಸನ್ಯಾಸತ್ವವ ಹೊಂದುವ ಮುನ್ನ ಮನಸು
ತೀವ್ರವಾಗಿ ಸಂಸಾರಿಯಾಗಿರುತ್ತದೇನೋ
ಹಂಬಲಗಳೆಲ್ಲಾ ಬೆಂಬಿಡದೆ ಕಾಡಿ
ದೊರೆತ ಅಲ್ಪ ತೃಪ್ತಿ, ದೊರೆಯದ ಮಹಾ ಅತೃಪ್ತಿಗಳಲಿ ಮನವು ಹೊಯ್ದಾಡಿ
ಕಂಗೆಟ್ಟು ದಿಕ್ಕೆಟ್ಟು ವಿಧಿ ಕೈಚೆಲ್ಲಲು
ಆ ಮಹಾದೇವನೇ ಗುರುವಾಗಿ ಗುರಿ ಕಾಯಬೇಕೇನೋ.....
***
ನೀನೆಷ್ಟು ಮುನಿದರೇನು
ನಾ ಉರಿದೇ ಹೋದ ಮೇಲೆ..
***
ಬದುಕು ನೀಡಿದ್ದು ಉಸಿರನು
ಮಿಕ್ಕವನ್ನು ಗಳಿಸಲು ಅವಕಾಶಗಳನು
ಮತ್ತೂ ಸಾಧಿಸಲು ಕೆಲ ಕಾಮನೆಗಳನು
ಇದರ ನಡುವೆ ಪ್ರೀತಿಸಲು ಹಲವನು..
ಚಂದ್ರ, ಹೂ, ತಾರೆಗಳ ಕನಸುಗಳು
ಮತ್ತೂ ನೀನು,,,
ನನ್ನೊಳಗೊಂದು ದಿವ್ಯ ಭ್ರಮೆಯಾಗಿ,,,,,
***
ನಡೆದಷ್ಟು ದಾರಿ ಸವೆಯುತ
ಮೂಡುತ್ತಿದೆ
ಜೀವನಕ್ಕೊಂದು ಚಿತ್ರ
ಅದು ನೀನಲ್ಲ ನಾನಲ್ಲ
ಹಲವು ಸೊಗಸುಗಳ ಸೋಪಾನ
ಹೃದಯ ದೇವನ ಕೃಪೆಯ
ಸೃಷ್ಟಿಯೊಳ ಪ್ರೀತಿಸೊ ಮನಗಳದು...
ನಿನ್ನಂಗಳ ನನ್ನಂಗಳದವು...
30/03/2014
Saturday, 29 March 2014
ಓ ಚೆಲುವೆ,
ನೀ ನನ್ನ ಚುಂಬಿಸುವಾಗಲೆಲ್ಲಾ
ಕಣ್ಮುಚ್ಚುವೆ ಏಕೆ?
ನಿನ್ನ ಕಣ್ಣೊಳಿನ ನನ್ನ ಬಿಂಬ
ನಾಚುವುದ
ನಾ ನೋಡಬಾರದೆಂದೇ
ಕಣ್ ತೆರೆಯೇ,
ನಾಚಿಸು ನನ್ನನೊಮ್ಮೆ
ನಾಚಲು ಮತ್ತಷ್ಟು ಸ್ಫೂರ್ತಿಗೊಳ್ಳುವಂತೆ,,,
***
ಹಾರೋ ರೆಕ್ಕೆಗಳಿದ್ದರೂ
ಒಮ್ಮೆ ಕೆಳಕ್ಕೆ ಬಡಿದೇ ಮೇಲೇರಬೇಕು,
ಕೆಳಗೆ ಜಗ್ಗಲು ಬದುಕು;
ಮುಂದಿನ ಏರು ವೇಗದ
ಖುಷಿಯೇ ಇರಬೇಕು
***
ನಾ ಆಗಲೇ
ಉರಿದು ಹೋಗಿದ್ದ ಕೆಂಡ
ನಿನ್ನ ಹಿತವಾದ ಗಾಳಿ
ತಂಪೆನಿಸಿತೆನ್ನುವಷ್ಟರಲಿ
ರಭಸದಿ
ನೀ ಹಾದು ಹೋಗುವಾಗ
ಮತ್ತೊಮ್ಮೆ
ಭುಗಿಲೆದ್ದ ಜ್ವಾಲೆ ನಾ
ನಿನ್ನದೇನಿದೆ ತಪ್ಪು
ನೀನೋ ಗಾಳಿ
ನಾನೊ ಬೆಂಕಿ .....
***
ಎದುರಾಳಿ ಎದುರಿನಿಂದ ಬಂದರೆ ಸರಿ
ಬೆನ್ನು ಕಂಡು ಚೂರಿಯಾಗಿ ಬಂದರೆ
ಕೈ ಮುರಿದು ಹಿಂಬಾಲಕನನ್ನಾಗಿ ಇರಿಸಬೇಕಾದೀತು,
ಜೋಕೆ, ಚೂರಿ ಹಿಡಿದ ಕೈಗಳೇ...
***
ನಂಬಿಕೆ ಗಳಿಸುವುದು
ಬಯಸುವುದಲ್ಲ;
ಪ್ರಾಮಾಣಿಕತೆ ವಹಿಸುವುದು
ತೋರ್ಪಡಿಕೆಯಲ್ಲ;
ದೊಡ್ಡವರೆಲ್ಲಾ ಜಾಣರಲ್ಲ
ಚಿಕ್ಕವರು ದಡ್ಡರಲ್ಲ;
ನೀತಿ ಹೇಳುವ ರೀತಿಗಿಲ್ಲಿ
ಮಣೆ ಹಾಕಿ ಅಲ್ಲೇ ಕೂತಿರುವರೂ ಅಲ್ಲ,,,
***
ಮನದೊಳು ಪ್ರೀತಿ ಇದ್ದೆರೆ
ಹೃದಯವು ಕನಸು ಕಾವ್ಯವಾಗಲಿ;
ಅದ ಬಿಟ್ಟು ಮತ್ತೊಂದ ಹೃದಯವ ಬಯಸಿದರೆ
ಬದುಕಲಿ ಪಾಳು ಬಾವಿ ಕಾಣ್ವದು ಹಗಲಲೇ
ಬೀಳು ಬೀಳೆಂದು ಕರೆದು ಕೇಕೇ ಹಾಕುವುದು,,,
***
ನನ್ನದು ಬಲು ನಿಷ್ಠೆ
ನಿನ್ನ ಪ್ರೀತಿಸಲು,
ಹಾಗೆಯೇ ನಿನ್ನಪಚಾರಕ್ಕೆ
ಹಿಗ್ಗಾ ಮುಗ್ಗ ಹೊಡೆದಂತೆ ದೂಷಿಸಲು....
29/03/2014
ಒಬ್ಬ ವಿಚಾರವಾದಿ ಎನಿಸಿಕೊಂಡವನ ವಿಚಾರ,
ಛೇ ಪಾಪ ಅನಿಸಿಕೊಂಡದ್ದೇ ನನಗೆ ಸೋಜಿಗ,
ಸಮಾಜಕ್ಕಾಗಿಯೇ ತಾನೆಂದು ಹೋರಾಡುವವ
ತನಗಾಗಿಯೇ ಒಂದು ಹೊಸ ಮುಖವ ಹೊಂದಿ,
ಎಲ್ಲರೆದುರು ಬಚ್ಚಿಟ್ಟ,, ಕೊನೆಗೆ ತನ್ನ ಕನ್ನಡಿಗೂ,,
ಈಗೀಗ ದೂರದ ಬೆಟ್ಟ ನುಣ್ಣಗೆ, ಅನ್ನೋ ಮಾತೆ ಹೆಚ್ಚು ನೆನಪಾಗುವುದು
***
ನಿನ್ನ ಪ್ರೀತಿಗಿಂತ ನಿನ್ನ ಮೌನ ಗೆದ್ದಿತ್ತು ನನ್ನ
ಹೌದು ಮಾತಿಗಿಂತ ಮೌನ ಹೆಚ್ಚು ಅರ್ಥೈಸುತ್ತದೆ
ನಿನಗೆ ನನ್ನನು, ನನ್ನ ಪ್ರೀತಿಯನು,,
ಮೌನದಾಚೆಯ ಗಡಿ ದಾಟಿ ಕಳೆದು ಹೋದ ನನ್ನ
ಹುಡುಕಲೆಂತು ನೀ,
ಸಿಗದ ಶಬ್ದವದು ಗಾಳಿಯೊಳು ಲೀನವಾದಂತೆ
ನೀನೇ ಸಡಿಲಿಸಿದೆ ಕೈ, ಜಾರಿ ಬಿದ್ದದ್ದು ನನ್ನ ತಪ್ಪೇ,,, ?
***
ಎನ್ನ ಹೆಚ್ಚು ಕಾಡುವ ಕನಸೆಂದರೆ
ಕನಸೊಳು
ನೀ ಬರುವೆನೆಂದು ಬರದೇ ಹೋದದ್ದು...
***
ನನ್ನ ವೇದಾಂತಕ್ಕೆ ಬೆಚ್ಚಿದ ಹಿರಿಯರು
ನನ್ನ ಪ್ರೇಮಕೆ ಹುಚ್ಚೆದ್ದ ಕಿರಿಯರು
ಕಂಡರು ಮಕ್ಕಳಂತೆ ;
ಅವರವರ ವಾಸ್ತವಕೆ ಮರಳಲೊಮ್ಮೆ
ಮತ್ತೂ ನಾನೇ ವಿರುದ್ಧ ದೆಸೆಗಳ ವರಸೆ ಶುರುವಿಟ್ಟೆ,,
***
ಸುಗಂಧ ಹೆಚ್ಚು ಬೀರಿದರೂ
ಒಮ್ಮೊಮ್ಮೆ ಡಸ್ಟ್ ಅಲರ್ಜಿ,,,
ಅದೇ ಅಮೃತ ವಿಷವಾದ ಘಳಿಗೆ,,,
28/03/2014
ಕವನ
"ಅನಾಮಿಕ"
ನಡೆವಾಗ ಹೊಂಡಗಳು,
ಓಡುವಾಗ ಬೀಸೋ ದೊಣ್ಣೆಗಳು,
ಹಾರುವಾಗ ಹೆದರಿಸೋ ಗಿಡುಗಗಳು,
ಇವೆಯಾದರೂ,,
ಕಾಲು ನಡೆದು,
ಮನವು ಓಡಿ,
ಹೃದಯ ಹಾರುತಿರೆ,,,
ನೋಡಿದವರು ಚೀರುತ್ತಿದ್ದಾರೆ
ಅಗೋ ಅಗೋ,,
ಅತಿಮಾನುಷ, ಮಾಯೆ,
ದೈವೀಕ, ವೈಞ್ಞಾನಿಕ, ಅನಂತ ನಿಗೂಢ,,,!!
ಸಾಮಾನ್ಯವ ಅಸಮಾನ್ಯವಾಗಿ ನೋಡಲಿಚ್ಛಿಸುವರು
ತಮ್ಮದೇ ಕಲ್ಪನೆಯೊಂದಿಗೆ ಬುದ್ಧಿವಂತಿಕೆಯ ಸೇರಿಸಿ
ಹುಟ್ಟನ್ನೇ ಮತ್ತೊಮ್ಮೆ ಹುಟ್ಟಿಸಿಬಿಡುವರು
ಭ್ರಮೆಗಳ ಹೆಣೆಹೆಣೆದು,,
ಮಾತುಗಳ ನಡುವೆ ಮೂರ್ತವ ತಿರುಚಿ
ಹೇಗಿದ್ದರೂ ನಾ ಅಸಮಾನ್ಯವೆನುವಾಗ
ನನ್ನಂತೆ ನನ್ನನು ಕಾಣಿರೆಂದು
ಕೂಗಿಕೊಳ್ಳೋ ಊರಿನಲಿ
ನಾನೊಬ್ಬ ಅನಾಮಿಕ.....
28/03/2014
ಮತ್ತೊಮ್ಮೆ ಮರಳಿಪಡೆದ
ಮಂದಹಾಸಕೆ
ಬಹು ದಿನಗಳ
ವೇದನೆಯ
ಸಾರ ತಿಳಿಯಾದ
ಹೆಮ್ಮೆ ಇತ್ತು ;
ಹಾಗೆಯೇ ಮರುಕವೂ,
ಮುಳ್ಳೆದೆಗಳ
ಚೀರಿಕೊಳ್ಳಲಾಗದ
ಸಂತಸದ ಮರೆಯ
ನೋವಿಗೆ...
***
ಕಳೆದ ನೋವೆಂಬ ನೆರಳಡಿಯಲಿ
ಬದುಕಿನ ಇಂದಿನ ಸಣ್ಣ ಸಣ್ಣ ಸಂಭ್ರಮಗಳನ್ನು
ಕಳೆದುಕೊಂಡು ಊಳಿಡುವದೇ ನಿಜ ನೋವು!
***
ಹೆಂಗಳೆಯರ ಚೆಲುವು ಕಣ್ಗಳ
ಕಪ್ಪಿನೊಳು ಹುಡುಕಿದೆನಾ
ನಿನ್ನ ಪತ್ತೆ ಹಚ್ಚಲು,
ಹಚ್ಚಿದ ಕಪ್ಪೊಳು
ನಿನ್ನ ಬೆರೆಳ ಅಚ್ಚನು,
ಅಲ್ಲೆಲ್ಲೂ ಸಿಗದ ನಿನ್ನ
ಎನ್ನ ಕಣ್ಣ ಚಿಪ್ಪಿನೊಳು
ಮುಚ್ಚಿಟ್ಟಿಹೆನೆಂಬ ಖಾತ್ರಿ
ಕೃಷ್ಣಾ,
ನಿನಗೂ ನೀ ಸಿಗದ ಹಾಗೇ
ಕದ್ದೇಬಿಟ್ಟಿಹೆನು,
ತೊಟ್ಟು
ನಿನ್ನನೀ ಕಣ್ಣ ಕಾಂತಿಯಾಗಿ
ಅತ್ತೆ
ದೇವಕಿ ಯಶೋಧೆಯರಿಗೂ
ಹೆದರದಂತಾಗಿ...
27/03/2014
***
ಮನವರಳದೆ ಕವಿ ಕೊರಗಿದ
ಮತ್ತೂ ಕನವರಿಸಿದ
"ನೀ ಮಾಯೆ
ಮಾಯೆಯೊಳ ಛಾಯೆ,,"
ಖಿನ್ನತೆಯೊಳ ಮನವು
ಉಸಿರಿದೆ ಕವನ
ಅದುವೇ ಕವಿಯ ಮನ....
***
ಮಾತು ಮುರಿದರೂ ಮೌನವಿದೆ
ಈ ಸಂಜೆ ಗಾಳಿಯಲಿ
ನಿನ್ನನು ನನ್ನಂತೆ,
ನನ್ನನು ನಿನ್ನಂತೆ
ಕೆಣಕುವಂತೆ
ಛಿದ್ರವಾದ ಚಿತ್ರಗಳೊಮ್ಮೆ
ಮೈದುಂಬಿಕೊಂಡಂತೆ
ಗತ ಕಾಲದ ಪ್ರೇತಗಳಂತೆ
ಅವರಿವರ ಕಣ್ತಪ್ಪಿಸಿ
ಕೈ ಹಿಡಿದು
ಜೊತೆ ನಡೆದಂತೆ,,,,,
***
ದಿನವೂ ಕ್ರಾಂತಿಯ ಬಾಗಿಲಿಗೆ
ಸಾರ್ವಜನಿಕ ಹಿತಾಸಕ್ತಿ ಪತ್ರಗಳ ನೇಣು
ಆ ಮನೆಯೊಡೆಯನ
ದ್ವಂದ್ವ, ಮನದ ಖಾಲಿತನವನ್ನರಿತವರಿಗೆ
ನಡು ರಾತ್ರಿಯ ನಿದಿರೆಯಲೂ ನಗು
26/03/2014
Tuesday, 25 March 2014
ಕನಸಲಿ ಬರುವೆನೆಂದು ಹೇಳಿರುವನು ಚೆಲುವ
ನಾ ನಿದಿರೆಯ ಅಡವಿಟ್ಟು ಕಾಯಬೇಕಿದೆ ಅವನೊಲವ...
***
ನಮ್ಮ ಒಳ್ಳೆತನವನ್ನು
ಪೆದ್ದುತನ
ಇಲ್ಲವೇ ದೌರ್ಬಲ್ಯವೆಂದೇ
ತಿಳಿವರು ಬಹಳಷ್ಟು ಜನ,,,,
ಇಲ್ಲ ತಾಳ್ಮೆಯ
ಪರೀಕ್ಷಿಸುವರೋ ಕಾಣೆ,,,,
***
ನಮ್ಮ ನೋವು, ಸೋಲು, ಕ್ಷಣಿಕ ನಲಿವುಗಳನು
ಮನಬಿಚ್ಚಿ ಬರೆದುಬಿಡಬಹುದೀ ಕಾಗದದೊಳು
ನಿರ್ಭಯದಿ; ತುಂಬಿಕೊಳ್ವದು ನಮ್ಮಂತೆ,
ಕಣ್ಣೀರ ಕಳೆದು ನಗುವಾಗ ಕೊನೆ ಪಕ್ಷ
ಎಡವಿದೆದೆಯ ಹೆಪ್ಪುಗಟ್ಟಿದ ನಾಳವನೆಳೆದಂತೆ
ನುಡಿದು ನೆನಪಿಸಿ ಕಹಿಯ ಅವಮಾನಿಸದು,,,
***
ಪ್ರೀತಿ ಎಂದರೇನು?
ಎನ್ನುವ ನನ್ನ ಪ್ರಶ್ನೆಗೆ
ಹೆಚ್ಚು ಸಲ ಉತ್ತರಿಸಿದ್ದು
ಹೌದು ನೀನೇ,,
ನನ್ನ ಪ್ರಿಯ ಕನ್ನಡಿ,,,
***
ವಂಚಿಸುವ ಅವಕಾಶಗಳನ್ನೆಲ್ಲಾ
ಅವರಿವರು ದೋಚಿದ್ದಾಗಿದೆ,
ನನಗೇನು ಉಳಿದುದಿಲ್ಲವಷ್ಟೇ
ನನಗೆ ನಾ ಹೊರತು....
***
ಹಿಂದೆ ನೋಡುತಾ ನಡೆಯಬಾರದು ಗೊತ್ತು
ಹಿಂದುರುಗಿ ನೋಡಿದ್ದು ನಿನ್ನ ದನಿಗಲ್ಲ;
ನನ್ನದೇ ಕೆಲ ತಪ್ಪುಗಳ ಕೂಗಿಗೆ,,,,,,
***
ಅವಳು ಹೆಜ್ಜೆ ಕಿತ್ತಲ್ಲೆಲ್ಲಾ ಮುಳ್ಳುಗಳು ಬೇರುಬಿಟ್ಟು
ತಾಗಲಾರನಂತೆ ವಿರಹಿ ಪ್ರೇಮಿ;
ತಡೆಯಾಗಿ ಅವಳ ಮೊನಚು ಮಾತುಗಳ ನೆನಪು
25/03/2014
ಕವನ
ಸುಮ,, ವನಸುಮ
ಆ ಗುರುವರ್ಯರ ಆಶಯವೋ ಈ ವನಸುಮ,
ಆ ಕವಿಯ ಆಶಯಕೆ ಈಕೆಯನು ಹೋಲಿಸಿ ಬಣ್ಣಿಸಿದಂತೆ,
ಕವಿಯ ಕವನ, ಗುರುವಿನ ಮನದಾಶಯವ ಮರೆಯದಂತೆ
ಈ ಜಾಣೆ, ಹೊರಟಲ್ಲೆಲ್ಲಾ ಸುಗಮ, ಸುಂದರ ಪರಿಸರ,
ಇವಳ ಕಂಪಂತೆ, ಮನ ವನವೆಲ್ಲಾ ಮಾಧುರ್ಯ,
ಫಲಿಸಿದಂತೆ ಹಿರಿಯರ ವಾತ್ಸಲ್ಯ,
ಹೌದು ಇವಳೋ ವನಸುಮ,
ದೀನತೆಯಲಿ ಬಾಳಿ ಸೌರಭವನೇ ಸೂಸುವ
ಕಾಂತಿಯನೇ ಹೊರಹೊಮ್ಮುವ ಗಾಂಭೀರ್ಯೆ,
ಹೆಸರಂತೆಯೇ ವನಸುಮ,
ನೋಡುವ ಆನಂದಿಸುವ ಕಣ್ಣಿಲ್ಲದ ಈ ನಾಡಿನೊಳು...
ಅರಮನೆ ಅಂತಃಪುರದಲೂ ಗುಡಿಸಲಿನ ದೀಪದ ಬುಡದಲೂ...
24/03/2014
ಮನಸು ಕೆಡಿಸಿಕೊಳ್ಳಲು ಹೆಚ್ಚು ದೂರ ಹೋಗಬೇಕಿಲ್ಲ
ಮನಸು ಮನಸಲೇ ಹೆಪ್ಪುಗಟ್ಟಿ ಕಾಲದೊಳು ಮಥಿಸಿಕೊಳ್ಳದಿದ್ದರೆ ಸಾಕು...
***
ಜಗದೆದುರು
ನಾ ಚೆಂದ
ನಕ್ಕರಷ್ಟೇ
ಕಂದ....
***
ಪರರನು ಮೀರಿ ದುಡಿಸಿಕೊಳ್ಳುವ ಜಾಣ್ಮೆ
ಸ್ವತಃ ತೊಡಗಿಕೊಳ್ಳುವ ಹಿರಿಮೆಯೊಳಿದ್ದೊಡೆ
ಅಧಿಕಾರ ದರ್ಪವ ತೋರಿ ಜಗ್ಗದಿರೆ
ತಾವೇ ಬಗ್ಗಿ ಬೇಡಿಕೊಳ್ಳುವ ದೀನತೆಯಿರದು...
24/03/2014
***
ದ್ವೇಷವ ಮೀರಿಸೋ ಪ್ರೀತಿಯಿದೆ
ಕಹಿ ಮರೆತು ಬಾಳುವ ಹುರುಪಿದೆ
ವಿಧಿ ಕತ್ತಿ ಹಿಡಿದರೂ ನಾ ಹೂವ ಬಿಡೆನು
ಕೊಯ್ವೆಯಾದರೂ ಎಷ್ಟು ಹೂ,, ?
ಮತ್ತೂ ಅರಳುವ ನಿತ್ಯ ಪುಷ್ಪಗುಚ್ಛವೀ ಜೀವನವು,,,,
23/03/2014
Saturday, 22 March 2014
ಮನದ ಮಾತು
ಪಕ್ಷಿ ಪ್ರೇಮಿಗಳು ನಾವು, ಈ ಪೇಟೆಯ ಜೀವನದ ಜಂಗುಳಿಯಲಿ ನಿಸರ್ಗದ ಮಡಿಲು ದುರ್ಲಭ. ಹೊರಗೆಲ್ಲೋ ಬಯಲು ಸೀಮೆಗೋ ಮತ್ತೆಲ್ಲೋ ಕಾಡಿಗೋ ಹೋಗಲೂ ಸಮಯ ಅವಕಾಶಗಳಿಲ್ಲ, ಆದ್ದರಿಂದ ಎಲ್ಲವನ್ನೂ ನಾವಿದ್ದಲ್ಲೇ ಯಾವುದೋ ತೆರನಾಗಿ ಪಡೆದು ತೃಪ್ತಿಗೊಳ್ಳುವುದು ನಮಗೀಗ ವಾಡಿಕೆ ಮತ್ತು ಅನಿವಾರ್ಯ. ಅದಕ್ಕಾಗಿ ಛಾಯಾಗ್ರಾಹಕರ ಛಾಯಾಚಿತ್ರಗಳನ್ನು, ಟಿ ವೀ ಕಾರ್ಯಕ್ರಮಗಳನ್ನು,ಮುದ್ರಿತ ವೀಡೀಯೋಗಳ ಮೊರೆ ಹೋಗುವುದೇ ಹೆಚ್ಚು. ಬೇಡಿಕೆ ಹೆಚ್ಚಿದಂತೆ ಅವುಗಳ ತಯಾರಿಕೆಯ ಭರಾಟೆಯೂ ಹೆಚ್ಚು. ನಮ್ಮ ಅನುಕೂಲಕ್ಕೆ ಕಾಡನ್ನು ತೊರೆದು ನಾಡಿನಲ್ಲಿ ಉಳಿದು ಕಾಡನ್ನೇ ನುಂಗುತ್ತಿರುವ ನಾವು, ಮತ್ತೂ ಆಹ್ಲಾದಕ್ಕೇ ಆ ನಿಸರ್ಗದ ಮಡಿನಲ್ಲಿರುವ ಆ ವರ್ಣಮಯ ಪ್ರಾಣಿ ಪಕ್ಷಿಗಳೇ ಬೇಕೆಂದು ಹಂಬಲಿಸುವುದು ನಮ್ಮೊಳಗಿನ ಕಾಡಿನ ಜೀವ ಇನ್ನೂ ಮಿಡಿಯುತ್ತಿದೆ ಎನ್ನಬಹುದೇನೋ. ಎಷ್ಟೇ ಆದರೂ ಆದಿಮಾನವನ ವಾರಸುದಾರರು ನಾವು!.
ಎಲ್ಲವೂ ಸರಿಯೇ, ಆದರೆ ನಾಡಿನಲ್ಲಿ ಕುಳಿತ ನಮಗೆ ಬೇಕಿದ್ದ ಕೊಡುವ ಉದ್ದೇಶಕ್ಕೆ ಪಾಪ, ಆ ಪ್ರಾಣಿ-ಪಕ್ಷಿಗಳಿಗೆ ದೂರದ ಕಾಡಿನಲ್ಲೂ ಕಾಣದೆ ಕುಳಿತ ಅದರ ಗೂಡಿನಲ್ಲೂ ಮಾನವನ ಕಾಟ ಛಾಯಾಚಿತ್ರಕ್ಕೆ.
ನಮಗಾದರೂ "ಪ್ರೈವೆಸಿ" ವಿಚಾರಕ್ಕೆ ಎಷ್ಟು ದುದ್ದಾಡಿಕೊಳ್ಳುವೆವು ನಾವು ಮನುಷ್ಯ ಮನುಷ್ಯರು, ಆದರೆ ನಮ್ಮಂತಹ ಜೀವವೇ ಆದ ಈ ಪಕ್ಷಿಗಳಿಗೇಕೆ ನಾವು ಕೊಡಲಾರದಂತಾದೆವು?!, ಯೋಚಿಸಬೇಕಿದೆ,,,
ಇಂದಿನ ವಿಜಯಕರ್ನಾಟಕದಲ್ಲಿನ "ಅಬ್ದುಲ್ ರಶೀದ್ ರವರ ಕಾಲು ಚಕ್ರ" ಕಾಲಂನನ್ನು ಓದಿದಾಗ ನನ್ನಗನಿಸಿದ್ದು, ನಾನೂ ಪಕ್ಷಿ ಪ್ರೇಮಿಯೇ,, ದಿನವೂ ಫೇಸ್ ಬುಕ್ಕಿನಲ್ಲಿನ ಎಲ್ಲಾ ಪಕ್ಷಿ ಛಾಯಾಚಿತ್ರಗಳ ಪೇಜ್ಗಳನ್ನೇ ಹುಡುಕುವವಳು. ಯಾಕೋ ನನ್ನೊಳಗೊಂದು ಅಳುಕು ಸುಳಿದದ್ದು ಸುಳ್ಳಲ್ಲ. ನಮ್ಮಂತವರ ಸಂತಸಕ್ಕೆ ಅದೆಷ್ಟೋ ಹಕ್ಕಿಗಳು ಕ್ಯಾಮರದ ಮುಂದೆ ನಾಚಿ ಖಿನ್ನಾದದ್ದು ನನ್ನ ಕಲ್ಪನೆಯ ಅನುಭವಕ್ಕೆ ನಿಲುಕದೇ ಇರಲಾರದು,,,,,
ನಮ್ಮೊಳಗನ್ನೊಮ್ಮೆ ಒರೆ ಹಚ್ಚಿಕೊಳ್ಳುವಂತೆ ಪ್ರೇರೇಪಿಸಿದ ಅಬ್ದುಲ್ ರಶೀದ್ ರವರಿಗೆ ವಂದನೆಗಳು
ವಿಜಯ ಕರ್ನಾಟಕದಲ್ಲಿನ " ಕಾಲು ಚಕ್ರ" ಕಾಲಂನ ಅಬ್ದುಲ್ ರಶೀದ್ ರವರ ಲೇಖನ; ಪಕ್ಷಿ ಫೋಟೋಗ್ರಾಫಿಯ ಕುರಿತು
http://www.vijaykarnatakaepaper.com/Details.aspx?id=11980&boxid=52842916
ಎಲ್ಲವೂ ಸರಿಯೇ, ಆದರೆ ನಾಡಿನಲ್ಲಿ ಕುಳಿತ ನಮಗೆ ಬೇಕಿದ್ದ ಕೊಡುವ ಉದ್ದೇಶಕ್ಕೆ ಪಾಪ, ಆ ಪ್ರಾಣಿ-ಪಕ್ಷಿಗಳಿಗೆ ದೂರದ ಕಾಡಿನಲ್ಲೂ ಕಾಣದೆ ಕುಳಿತ ಅದರ ಗೂಡಿನಲ್ಲೂ ಮಾನವನ ಕಾಟ ಛಾಯಾಚಿತ್ರಕ್ಕೆ.
ನಮಗಾದರೂ "ಪ್ರೈವೆಸಿ" ವಿಚಾರಕ್ಕೆ ಎಷ್ಟು ದುದ್ದಾಡಿಕೊಳ್ಳುವೆವು ನಾವು ಮನುಷ್ಯ ಮನುಷ್ಯರು, ಆದರೆ ನಮ್ಮಂತಹ ಜೀವವೇ ಆದ ಈ ಪಕ್ಷಿಗಳಿಗೇಕೆ ನಾವು ಕೊಡಲಾರದಂತಾದೆವು?!, ಯೋಚಿಸಬೇಕಿದೆ,,,
ಇಂದಿನ ವಿಜಯಕರ್ನಾಟಕದಲ್ಲಿನ "ಅಬ್ದುಲ್ ರಶೀದ್ ರವರ ಕಾಲು ಚಕ್ರ" ಕಾಲಂನನ್ನು ಓದಿದಾಗ ನನ್ನಗನಿಸಿದ್ದು, ನಾನೂ ಪಕ್ಷಿ ಪ್ರೇಮಿಯೇ,, ದಿನವೂ ಫೇಸ್ ಬುಕ್ಕಿನಲ್ಲಿನ ಎಲ್ಲಾ ಪಕ್ಷಿ ಛಾಯಾಚಿತ್ರಗಳ ಪೇಜ್ಗಳನ್ನೇ ಹುಡುಕುವವಳು. ಯಾಕೋ ನನ್ನೊಳಗೊಂದು ಅಳುಕು ಸುಳಿದದ್ದು ಸುಳ್ಳಲ್ಲ. ನಮ್ಮಂತವರ ಸಂತಸಕ್ಕೆ ಅದೆಷ್ಟೋ ಹಕ್ಕಿಗಳು ಕ್ಯಾಮರದ ಮುಂದೆ ನಾಚಿ ಖಿನ್ನಾದದ್ದು ನನ್ನ ಕಲ್ಪನೆಯ ಅನುಭವಕ್ಕೆ ನಿಲುಕದೇ ಇರಲಾರದು,,,,,
ನಮ್ಮೊಳಗನ್ನೊಮ್ಮೆ ಒರೆ ಹಚ್ಚಿಕೊಳ್ಳುವಂತೆ ಪ್ರೇರೇಪಿಸಿದ ಅಬ್ದುಲ್ ರಶೀದ್ ರವರಿಗೆ ವಂದನೆಗಳು
ವಿಜಯ ಕರ್ನಾಟಕದಲ್ಲಿನ " ಕಾಲು ಚಕ್ರ" ಕಾಲಂನ ಅಬ್ದುಲ್ ರಶೀದ್ ರವರ ಲೇಖನ; ಪಕ್ಷಿ ಫೋಟೋಗ್ರಾಫಿಯ ಕುರಿತು
http://www.vijaykarnatakaepaper.com/Details.aspx?id=11980&boxid=52842916
ಕವನ
ಕವನ
ಒಮ್ಮೆಯಾದರೂ
ಅವಳೊಳು ಕವನವಾಗಬೇಕೆಂಬ
ಹುಡುಗನ ಕನಸು
ಹುಡುಗಿಗೆ
ಕವನವೆಂದರೆ ಅವನಿಲ್ಲದ ಬೇಸಿಗೆ
ವಿರಹ ತುಂಬಿದ ಮೇಘಮಾಲೆ,
ಮಳೆಯಾಗದ ಒಲವು
ಹುಡುಕಾಟದ ಕುಳಿರ್ಗಾಳಿ,
ಮೂರ್ಕಾಲಕೂ ನಿಲುಕದ
ಪ್ರಾರಂಭವಾಗಿ,
ತಿಳಿಯದೆ ಅಂತಿಮವಾಗುವ
ಜೀವನ ಚೈತ್ರ;
ಅವನಿಲ್ಲದ ಕವನವಿಲ್ಲ
ಆದರೆ ಅವನಿಗದು ಗೊತ್ತೇ ಇಲ್ಲ..
ವಾಸ್ತವಕೆ ನಿಲುಕದ ಜೊತೆಯಾದ,
ಮನಸಳುಳಿದು ಕವನವಾದ..
22/03/2014
Thursday, 20 March 2014
ನಾ ಕಳೆದು ಹೋದಾಗ ಹುಡುಕದಿರು ಮೌನವೇ
ಧ್ಯಾನದಲ್ಲಿದ್ದೇನೆ ನನ್ನೊಳಗಿನ ದನಿಗೆ
ಚೈತನ್ಯವ ತುಂಬುವ ಸೃಷ್ಟಿಯ ಆರಾಧಕನಿಗೆ
ಸೇವಕಳಾಗಿ, ದೀನಳಾಗಿ, ಲೀನವಾಗಿ
ಹರಿವ ತೊರೆಯ ತೇಲುವ ಹಸಿರೆಲೆಯಾಗಿ,,,
ಹುಡುಕದಿರು, ತಡೆಯದಿರು, ಕದಡದಿರು
ಅಲೆ ಅಲೆಯ ಸಾಲು ನೀರ ನೆರಿಗೆಯಾ,,,
ನಲುಗೇನು ಭಗ್ನದಲಿ ಭಾರಗೊಂಡು
ತಳ ಸೇರಿದ ಕಲ್ಲಾಗಿ ಪರಮ ಮೌನಿಯಾಗಿ,,,
***
ಭಾವವಾಗಿ ಹೊರ ಹೊಮ್ಮಲಾಗದೆ
ಮೌನಕೆ ಹೆಸರಿಡಲಾಗದೆ
ಹನಿಗೂಡುವ ಈ ಹೆಣ್ಣು....
ನಿಗೂಢವಂತೆ...
***
ನೀ ಏನನ್ನೂ ನುಡಿಯದೆ ನಡೆದೆ
ನನ್ನೊಳಗೆ ಸಾವಿರ ಪ್ರಶ್ನೆಗಳು,
ನಿನ್ನ ಹಿಂಬಾಲಿಸುವ ಮನ
ನೀ ಕಡಿದ ಸೇತುವೆಯ ಆ ತುದಿ,
ಸೇರಲಾರದೆ ನಿಲ್ಲಲಾರದೆ ಬೇಗುದಿ
ಒಳ ದಾರಿ, ಕಡಿದಾರಿ ಹಿಡಿದು
ಮಗುವಂತೆ ರಚ್ಚೆ ಹಿಡಿದಂತೆ ನಡೆದು
ದೂರದೂರಿನ ಪ್ರೇಮ ಕವಿಯೇ
ನಿನ್ನೊಳಗೊಮ್ಮೆ ಹರಿದಾಡಿದ ಗೆಲುವಿನ
ನಿನ್ನೊಂದಿಗೆ ನಾನು ಹೆಸರಿಲ್ಲದ ಕವನ..
***
ಮುಖವಾಡದ ಮರೆಯಲಿ
ಮತ್ತೊಮ್ಮೆ ನಿನ್ನ ಗೆಲ್ಲುವ
ನನ್ನ ಹುನ್ನಾರ,
ಹೆಸರಿಡಲಾರೆ ಏನೆಂದು....
ಮೋಸವೆನ್ನದಿರು ಮಾತ್ರ
ನಾ ಸಹಿಸಲಾರೆ ಉಳಿದು .....
***
ಕಲ್ಲನ್ನೆತ್ತಿಕೊಂಡೆ
ಕೈಯೊಳೊಮ್ಮೆ
ರೂಢಿಯಿಲ್ಲ
ಮೋಸದ ಕಲ್ಲ ಹೊರೆ
ಆಯ ತಪ್ಪಿ ಬಿದ್ದಿದೆ
ನನ್ನದೇ ಕಾಲ ಮೇಲೆ....
***
ಕಪಟತೆಯ ಸೀಮೆಯೊಳು
ಕಪಟವಾಡದೇ ಉಳಿವುದೇ
ನರಕ...
20/03/2014 :-)
***
ನಕ್ಕರೆ ನಗುವ
ಅತ್ತರೆ ಅಳುವ
ಕನ್ನಡಿಯೇ ಈ ಜಗವು
ನಿಗಿನಿಗಿ ಹೊಳೆವ
ಚಂದವ ತೋರುವ
ಪ್ರತಿಬಿಂಬವನೇ
ಛಿದ್ರಗೊಳಿಸೋ ತಂತ್ರವೇ
ಈ ಜಗದೊಳ ನಾವು
***
ಬಚ್ಚಿಟ್ಟ ನೋವ ಹನಿ
ಕಪ್ಪೆ ಚಿಪ್ಪಿನೊಳ
ಸ್ವಾತಿ ಮುತ್ತಾಗಿ ನಳನಳಿಸೀತು
ನಿರಂತರ ತವಕದೊಳು
ಹನಿ ಮೀಯ್ದೊಡೆ
***
ಸೌಂದರ್ಯ
ನೋಡುವ ಕಣ್ಣುಗಳಲಿ
ಹೌದು
ಅವಳ ಕಣ್ಣುಗಳಲೇ,,
ಅವನು ಆಗಾಗ
ಇಣುಕಿ ಮರೆಯಾಗುವ
ತುಂಟ ನಗೆ,
ಬಿಸಿ ಹನಿ,
ಆನಂದದ ಕನಿ,,,,
19/03/2014
Subscribe to:
Posts (Atom)