ಕಥೆ; ‘ಅವನ ಕಣ್ಗಳು’
ಆಕಸ್ಮಿಕವಾಗಿ ಎದುರಾಯ್ತು ಅವನ ಜೋಡಿ ಕಣ್ಗಳು. ಸುಮ್ಮನೆ ಎದುರಾಗಿದ್ದರೆ ಸರಿಯಿತ್ತೆನೋ ಅದೇಕೋ ನನ್ನನೇ ನೋಡುತ್ತಲಿತ್ತು. ಅವನು ನನ್ನೆದುರೇ ಕುಳಿತಿದ್ದ ಅಷ್ಟು ದೂರದಲ್ಲಿ. ಮೂರನೇ ಸಾಲಿನಲಿ. ಮೊದಲೇ ಅದು ದೋಣಿ ಹುಯ್ಲಾಟ ಜೋರು.
ಪಕ್ಕದೂರಿನ ಗೆಳತಿ ಸೌಪರ್ಣಿಕೆಯ ಮದುವೆಗೆಂದು ಬಂದಿದ್ದಳು ಸುಂದರಿ.
********
ನೆನ್ನೆಯಷ್ಟೇ ಮುಗಿದ ಮದುವೆ. ಇಂದು ಉಳಿದುಕೊಳ್ಳೆಂದು ಎಷ್ಟು ಕೇಳಿಕೊಂಡರೂ ಗೆಳತಿಗೆ ಇನ್ನಿಲ್ಲದಂತೆ ಕಾರಣಗಳನ್ನು ಹೇಳಿ ಬಂದಿದ್ದೆ. ಅಸಲಿಗೆ ನನಗಲ್ಲಿ ಉಸಿರುಗಟ್ಟಿದ ವಾತಾವರಣವಾಗಿ ಹೋಗಿತ್ತು. ಎಷ್ಟು ಹೊತ್ತಿಗೆ ಊರು ಸೇರುವೆನೋ ಎನಿಸಿಬಿಟ್ಟಿತ್ತು. ಆತ್ಮೀಯ ಗೆಳತಿ ನೊಂದುಕೊಂಡಾಳೆಂದಷ್ಟೇ ಬಂದಿದ್ದೆ. ಆದರೆ….
ಬದುಕಲಿ ಹೀಗೆಯೇ ಏನು?, ಯಾವುದು ಬೇಡವೆಂದು ದೂರವುಳಿಯುವೆವೋ ಅವುಗಳೇ ಎದುರಾಗುವವು. ಎದುರಾಗಿ ಎದೆಯುಬ್ಬಿಸಿ ನಮ್ಮನ್ನು ಸೋಲಿಸಿಯೇ ತೀರುವಂತೆ ಧಾಳಿಯಿಡುವವು. ನನಗೋ ಸಾಕಾಗಿ ಹೋಗಿದೆ ಪ್ರವಾಹದೆದುರು ಹೀಗೆ ಈಜಿ ಈಜಿ ಈ ಮೀನುಗಳಂತೆ!.
ಅವಳ ಕಣ್ಗಳು ಈಗ ನೀರಿಗಿಳಿದವು. ದೋಣಿಯ ತುದಿಗೇ ಕೂತಿದ್ದ ಕಾರಣ ಸುಂದರಿಗೆ ನೀರು ಕೈಗೆಟುಕುವಂತಿತ್ತು. ನಿಶ್ಕಲ್ಮಶ ನೀರು ತನ್ನೆದೆಯನ್ನೆಲ್ಲಾ ತೆರೆದು ತೋರುತ್ತಿದ್ದಂತೆ ಭಾಸವಾಗುವುದು. ಎಷ್ಟೆಂದರೂ ನೀರು ನೀರೇ. ಪವಿತ್ರ ಗಂಗೆ. ಶಿವನ ಮಡದಿ ಎನಿಸಿಕೊಂಡರೂ ಮಹಾಭಾರತದಲ್ಲಿ ಶಾಂತನುವಿನ ಮೊದಲ ಹೆಂಡತಿ, ವೀರ ಭೀಷ್ಮನ ಹೆತ್ತ ತಾಯಿ!. ಅವಳು ಗಂಗೆ. ಎಲ್ಲಾ ಪಾಪಗಳನ್ನೂ ತೊಳೆಯುವಳು. ಕೈ ಹಾಕಿ ತುಸು ನೀರನ್ನು ಹಿಡಿದು ಬಹು ಹತ್ತಿರದಿಂದ ನೋಡುವಳು. ಅವಳಿಗಲ್ಲಿ ತನ್ನ ಕೈರೇಖೆಗಳೆಲ್ಲಾ ಬಹಳ ಸ್ಪಷ್ಟವಾಗಿ ಕಾಣುತ್ತಿದೆ. ಏನನ್ನೋ ನೆನೆದಂತೆ ದೀರ್ಘ ನಿಟ್ಟುಸಿರ ನಿಡುಸುಯ್ವಳು. ಈ ರೇಖೆಗಳೆಲ್ಲಾ ‘ಪಾಪ’ ಕಳೆದುಕೊಳ್ಳಲೆಂದು ಮತ್ತಷ್ಟು ನೀರ ಹಿಡಿದಳು. ಎಷ್ಟು ಹಿಡಿದರೂ ಸೋರುತಿಹುದು ವಿಧಿಯ ಕೈಯದು ತೂತು.
ಕೈ ತೇವ ಆರುವ ಮುನ್ನ ಅಂಬಿಗನ ಕೂಗು, “ಯಾರಿದ್ದೀರಿ ಮತ್ತೆ,ಬೇಗ ಬೇಗ ಹತ್ಕೊಳ್ಳಿ”. ಸುಂದರಿಯ ಮನಸ್ಸು ಹಿಂದೆ ಹಿಂದೆ ಓಡುತ್ತಲಿದೆ. ಅದೇಕೋ ದೋಣಿ ಮುಂದೆ ಹೋದಂತೆ ನೆನಪು ಅವಳನ್ನು ಹಿಂದೆ ತಳ್ಳುತ್ತಿದೆ.
ಹೌದು ನನಗೂ ಹೀಗೆಯೇ ಒಂದು ನಿಲ್ದಾಣ ಸಿಕ್ಕಿತ್ತು. ಎಲ್ಲರೂ ನನ್ನನ್ನು ಇನ್ನಿಲ್ಲದ ಹುಮ್ಮಸ್ಸಿನಿಂದ ಹತ್ತಿಸಿಬಿಟ್ಟಿದ್ದರು. ದೋಣಿ ಏರುವಾಗ ಇದ್ದ ಆಕಾಂಕ್ಷೆಗಳು ಏರುತ್ತಿದ್ದಂತೆ ನಿಶೆ ಇಳಿಸಿಬಿಟ್ಟಿತ್ತು. ಅಲೆಗಳ ಅಬ್ಬರ!. ಹತ್ತಿಸಿದವರೆಲ್ಲಾ ದಡದಲ್ಲೇ ಉಳಿದಿದ್ದರು. ‘ಹೇಗೋ ತಳ್ಳಿಬಿಟ್ಟೆವು’ ಎನ್ನುವಂತಹ ನಿರಾಳತೆ ಅವರೆಲ್ಲರ ಕಣ್ಣಲ್ಲಿ. ಹೌದು ನನಗೆ ದೂರಕ್ಕೂ ಗೊಚರಿಸುತ್ತಿದ್ದ ಕಟ ಸತ್ಯವದು.
ಅವನೀಗ ಮರೆಯಾಗಿದ್ದಾನೆ. ಸಧ್ಯ ಅವನ ಕಣ್ಣ ದಾಳಿಗೆ ನಾನೋ ತತ್ತರಿಸಿ ಹೋಗಿದ್ದೆ. ಎನ್ನುತ್ತ ತನ್ನ ಕೈಯನ್ನು ಮತ್ತೆ ನೀರಿಗೆ ಇಳಿಬಿಟ್ಟಳು. ದೋಣಿಯ ಹುಯ್ಲಾಟ ಹೆಚ್ಚೇ ಇದೆ.
ಎಷ್ಟು ಆಳ? ಅದೇನೇನೋ ತುಂಬಿಕೊಂಡಂತೆ ಗಾಂಭೀರ್ಯ! ಎಷ್ಟು ಶಾಂತವಾಗಿಹಳು ಈ ಗಂಗೆ. ಎಲ್ಲಾ ಹೆಣ್ಣುಗಳಂತೆಯೇ. ಅದಕ್ಕೆ ಏನೋ ನದಿಯನ್ನು ಹೆಣ್ಣು ಎಂದು ಬಣ್ಣಿಸಿದ್ದಾರೆ ನಮ್ಮ ಪೂರ್ವಜರು. ಒಂದೆರಡು ಗಂಡು ಹೆಸರಿನ ನದಿಗಳಿದ್ದರೂ ಅವುಗಳ ಅಬ್ಬರ-ಅಟ್ಟಹಾಸಗಳ ಗುಣಗಳಿಗೆ ಗಂಡಿನ ಹೆಸರುಗಳಿಟ್ಟಿದ್ದಾರೆ. ಬ್ರಹ್ಮಪುತ್ರ, ಕೃಷ್ಣ…
ಅದೇಕೋ ಏನೋ ಬಹು ಪಾಲು ಜೀವನವನ್ನು ತನ್ನ ಕಲ್ಪನೆಗಳಲ್ಲೇ ಜೀವಿಸುವಳೇನೋ ಎನ್ನುವಂತೆ ಸದಾ ಮೌನಿ, ಅದ್ಯಾವುದರಲ್ಲೋ ಧ್ಯಾನಿ. ಮಾತಿಗಿಳಿದರೆ ಕಿವಿಗಳನ್ನೇ ಮರೆಯುವ ಸುಂದರಿ, ರೂಪದಲ್ಲೂ ಸುಂದರಿಯೇ ಆಗಿದ್ದಳು.
ತನ್ನ ಸ್ವಗತಗಳಲ್ಲೇ ಕಳೆದು ಹೊಗಿದ್ದ ಸುಂದರಿಯನ್ನು ಮತ್ತೆ ಎಚ್ಚರಿಸಿ ವಾಸ್ತವಕ್ಕೆ ತಂದಿದ್ದು ಆ ಅದೇ ಜೋಡಿ ಕಣ್ಗಳು; ಆ ಹುಡುಗನದು. ಅರೇ ಇವನೇಕೆ ಹೀಗೆ ಬೆನ್ನಿಗೆ ಬಿದ್ದಂತೆ ನನ್ನ ಕಾಡುತ್ತಿದ್ದಾನೆ ಎಂದುಕೊಳ್ಳುತ್ತಾ ಮುಖ ಪಕ್ಕಕೆ ತಿರುಗಿಸಿಕೊಂಡಳು. ಈ ಬಾರಿ ಅವಳು ಕಣ್ಸೆಳತಗೆ ತುಸು ಗುರಿಯಾಗಿದ್ದಳು. ಎರಡು ಮೂರು ನಿಮಿಷದ ನಂತರ ಮತ್ತೆ ಎದುರು ನೋಡಲು ಮತ್ತದೇ ಕಣ್ಗಳು ಕಂಡವು. ಈ ಬಾರಿ ಕಣ್ಣಿನಾಳಕ್ಕೆ ಇಳಿವವಳಂತೆ ಇವಳೂ ನೋಡುತಾ ಕೂತಳು. ಬಹುಶಃ ಮೈ ಮರೆತು.
ಅವನು ಹಿಂದಿನ ದಿನದ ಗೆಳತಿಯ ಮದುವೆಯಲ್ಲಿ ಕಂಡವನು. ಯಾರು ಏನೋ ಗೊತ್ತಿಲ್ಲ. ಸುಂದರಿ ಇದ್ದ ಕಡೆಯೆಲ್ಲಾ ಇವನೂ ಇರುತ್ತಿದ್ದನು. ಇವನ ನಡೆ ನೋಟಗಳನ್ನೆಲ್ಲಾ ನೋಡಿ ಗೆಳತಿಯರ ಗುಂಪು ಆಗಲೆ ಸುಂದರಿಯನ್ನು ರೇಗಿಸಿ ಕೆಣಕಲು ಶುರುವಿಟ್ಟಿದ್ದರು. ನಾಚುವಂತ ಕಾರಣಕ್ಕೆ ಸಿಡಿಮಿಡಿಗೊಂಡು ರೇಗುವಂತಾಗಿದ್ದರೂ ಗೆಳತಿಯ ಮದುವೆಯ ಸಂದರ್ಭ ಸಂತಸ ಕದಡದಿರಲೆಂದು ಹಲ್ಲುಕಚ್ಚಿ ಸುಮ್ಮನಿದ್ದಳು. ಬಹುಶಃ ಅವಳು ಒಮ್ಮೆ ಸಿಡುಕಿಬಿಟ್ಟಿದ್ದರೆ ಇಷ್ಟೇಲ್ಲಾ ಅನಾಹುತಗಳಾಗುತ್ತಿರಲೇ ಇಲ್ಲವೇನೋ. ಗೆಳತಿಯರಿಗೆ ಇವಳೂ ಎಲ್ಲರಂತೆ ಹಾಡಿ ನಲಿಯಲಿ ಎನ್ನುವ ಬಯಕೆ ಹಾಗಾಗಿ ಇಲ್ಲದ ಕನಸುಗಳನ್ನು ಇವಳಲ್ಲಿ ಹುಟ್ಟಿ ಹಾಕುವ ಪ್ರಯತ್ನವನ್ನು ಮಾಡುತ್ತಲಿದ್ದರು. ಇವಳ ಸಿಡುಕು-ಮೌನ, ಗೆಳತಿಯರ ಕಾಲೆಳೆಯುವಿಕೆಗಳನ್ನು ಸೂಕ್ಷವಾಗಿ ಗಮನಿಸಿದ್ದ ಹುಡುಗ ಆಗಲೇ ಮೋಹದ ಜಾಲಕ್ಕೆ ಬಿದ್ದುಬಿಟ್ಟಿದ್ದ. ಮನಸಲ್ಲೇ ಇವಳ ಕನಸ ಹೆಣೆಯುತ್ತಲಿದ್ದ. ಇದ ತಿಳಿದೋ ತಿಳಿಯದೋ ಅಕ್ಷತೆಯೊಂದಿಗೆ ಎದುರುಗೊಂಡ ಹುಡುಗನನ್ನು ಬಾಯಿಗೆ ಬಂದಂತೆ ಬೈದು ಗದರಿಸಿಬಿಟ್ಟಿದ್ದಳು. ಏನು ಬೈದಳು, ಏಕೆ ಬೈದಲೋ ಅಂತು ಒಂದೂ ಗೊತ್ತಿಲ್ಲ. ಯಾವುದೋ ಆಕ್ರೋಶ ಯಾರೋ ಮೇಲೋ ಎಂಬಂತೆ ಗುಡುಗಿದ್ದಳು. ಆ ಹುಡುಗನೂ ತಬ್ಬಿಬ್ಬಾಗಿ ನಿಂತಿದ್ದನು. ಆದರೂ ಅವಳ ಕೋಪಕ್ಕೂ ನಮ್ರತೆಯನ್ನು ತೋರಿ ತನ್ನದೇ ತಪ್ಪೆಂದುಕೊಂಡು ಕ್ಷಮೆಯನ್ನೂ ಕೋರಿದ್ದ.
‘ತಪ್ಪಾಯಿತು’ ಎಂದು ಮತ್ತೆ ಮತ್ತೆ ಕೋರಿದಂತಹ ನೋಟ ಅವನದೀಗ. ಹೌದು ದೋಣಿ ಉಯ್ಯಾಲೆಯಂತೆ ತೂಗುತ್ತಿತ್ತು. ಅವನ ಕಣ್ಗಳನ್ನು. ಆ ಕಣ್ಗಳಲ್ಲಿ ದೃಷ್ಟಿನೆಟ್ಟ ಇವಳ ಮನಸನೂ ತೂಗಿತ್ತು. ತಂಗಾಳಿ ತೇಲಿ ಬಂದಂತೆ. ಅದೇನೋ ಅದೃಶ್ಯ ರಂಗಮಂದಿರವೊಂದು ಅವಳ ಕಣ್ಮುಂದೆ ತೆರೆದುಕೊಳ್ಳೂತ್ತಿತ್ತು. ಅಲ್ಲಿ ಮತ್ತೆ ಅವಳ ಕನಸೆಲ್ಲಾ ಗರಿಕೆದರಿದಂತೆ ಪಾತ್ರಗಳಾಗಿ ಅವಳೇ ನಿಂತಿದ್ದಾಳೆ. ಜೊತೆಯಲ್ಲಿ ಅವನೂ…
ಆದೇನು ಮಾಯೆಯೇ ಈ ಪ್ರೀತಿ. ಕಣ್ಣಂಚಿನಲೇ ಕೂಗಿ, ಮನಸ ದಾಟಿ ಎದೆಗಿಳಿವ ರೀತಿ. ಅದಕೇ ಏನೋ ಶಿವನೂ ಸೋತನು ಕಾಮದೇವನೆದುರು! ಪಾರ್ವತಿಯೊಂದಿಗೆ ವಿವಾಹವಾಗಬೇಕಿತ್ತು. ಮರು ಹುಟ್ಟು ಪಡೆದ ದಾಕ್ಷಯನಿಯ ಅತೀವ ಆಸೆ-ಪ್ರೀತಿಯ ಕಾರಣಕ್ಕಾಗಿ. ಪ್ರೀತಿಯು ಮತ್ತೆ ಮತ್ತೆ ಹುಟ್ಟುವುದೇ? ತನ್ನೊಳಗೆ ಪ್ರಶ್ನಿಸಿಕೊಳ್ಳುವ ಸುಂದರಿ ಮತ್ತೊಮ್ಮೆ ಅವನ ಕಣ್ಗಳನ್ನು ದಿಟ್ಟಿಸಿದ್ದಳು. ನಿರ್ವಿಕಾರ ಮನದ ಕನ್ನಡಿಯಂತೆ ಅವನ ಕಣ್ಗಳು ಹೊಳೆಯುತ್ತಿದ್ದವು. ಪ್ರೀತಿ ಹುಟ್ಟದೇ ಇರಲು ಕಾರಣಗಳೇ ಇರಲಿಲ್ಲ. ತದೇಕಚಿತ್ತಾಳಾಗಿ ನೋಡುತ್ತಿದ್ದಾಳೆ. ಅವನ ಕಣ್ಗಡಲೊಳು ಮುಳುಗಿದಂತೆ ಭಾಸವಾಗುತ್ತಿದೆ. ಹೌದು ರಂಗ ಮಂದಿರದಲ್ಲಿ ಅವರಿಬ್ಬರೇ ಈಗ. ಸುತ್ತ ಹಸಿರು ವನ, ಮೃಗ-ಖಗಗಳೇ ಎಲ್ಲಾ. ಮತ್ತಿನ್ಯಾರೂ ಇಲ್ಲ. ಸಮಾಜವಂತೂ ಮೊದಲೇ ಇಲ್ಲ. ಯಾವುದೇ ನಿರ್ಬಂದನಗಳಿಲ್ಲ. ನಿರಾಳಳಾದಂತೆ ಸುಂದರಿ ನಿಟ್ಟುಸಿರ ಬಿಡುವಳು. ಕಣ್ಸುತ್ತಾ ಆವರಿಸಿಕೊಂಡಿದ್ದ ಎಲ್ಲಾ ಸಂಕೋಲೆಗಳೂ ಸಡಿಲಗೊಳ್ಳುತ್ತಿವೆ. ಅವಳ ಕಣ್ಗಳು ಅರಳುತ್ತಿವೆ. ಅವಳಿನ್ನೂ ಅವನ ಕಣ್ಣೊಳಗೇ ಉಳಿದಿದ್ದಾಳೆ ಹಾಗೆಯೇ ರಂಗದ ಮೇಲೂ. ಮನ್ಮಥನ ವೇಷದಲ್ಲಿನ ಅವನ ಮುಂದೆ ಶಕುಂತಲೆಯಂತಹ ಇವಳು. ಪ್ರೀತಿಯ ಹೂಬಾಣಗೆ ಲಜ್ಜೆ ಕಳೆದು ಉಂಗುರವೂ ಕಳೆದಂತೆ ಪರದಾಡುವ ಶಕ್ಯಂತಲೆಯು ದುಷ್ಯಂತನ ಹುಡುಕಾಟಕ್ಕೆ ಬೀಳುವಳು. ಮನ್ಮಥನಂತ ಹುಡುಗ ಈಗ ದುಷ್ಯಂತನಾಗಿ ನಿಲ್ಲುತ್ತಾನೆ. ‘ತೊರೆದು ಹೋಗುವ ಸಂಪತ್ತಿಗೆ ಬಂದೆಯೇ ನೀನು?’ ಎನ್ನುತ ಮರುಗುವ ಶಕುಂತಲೆ, ನೆನಪು ಆರಿದ ಹೃದಯದ ದುಷ್ಯಂತನ ದಿಟ್ಟಿಸಲಾರದೇ ನಿಲ್ಲುತ್ತಾಳೆ. ಹೌದು ವಾಸ್ತವದಲ್ಲೂ ಕಣ್ಣೀರಾಗುತ್ತಿದ್ದಾಳೆ ಸುಂದರಿ. ಅವನ ಕಣ್ಣೋಳಗೂ ನೀರೇ, ಬಹುಶಃ ಅವನೂ ಇವಳ ಕಣ್ಣೋಳಗಿನ ರಂಗ ನಾಟಕವನ್ನು ನೋಡಿದನೋ ಏನೋ. ಪರಸ್ಪರ ದೃಷ್ಟಿಗಳಿಂದ ವಿಚಾರ, ದೃಷ್ಯ, ಭಾವ-ಸಂವೇದನೆಗಳು ವಿನಿಮಯವಾಗಿ ಹೋಗಿದೆ. ಇವಳೇನೂ ಹೇಳಲೂ ಇಲ್ಲ, ಅವನೇನೂ ಕೇಳಲೂ ಇಲ್ಲ.
ದಡ ತಲುಪಿದ ದೋಣಿ ರಂಗಕ್ಕೆ ತೆರೆಯನೊಡ್ಡಿತ್ತು. ಎಚ್ಚೆತ್ತು ಸುಂದರಿ ಎದ್ದು ಹೊರಟಳು. ಹಿಂದಿನಿಂದ ವೇಗವಾಗಿ ಬಂದ ಹುಡುಗ ಹೇಳಿದ, “ ಅದೇನು ಹತಾಶೆಯೋ ನಿಮ್ಮದು ತಿಳಿಯದು, ಬಿಟ್ಟುಬಿಡಿ ಅವುಗಳನ್ನೆಲ್ಲಾ ಈ ಆಳದ ನದಿ ನೀರಿನಲ್ಲಿ. ನನಗೆ ನಿಮ್ಮ ಪ್ರೀತಿಯಷ್ಟೇ ಬೇಕಾಗಿದೆ. ಆದರೆ ದಯಾಮಾಡಿ ಅಳಬೇಡಿ, ನನಗೆ ಕಣ್ಣೇ ಕುರುಡಾಗಿ ಹೋಗಲೆಂದು ಅನಿಸುತ್ತದೆ”. ಸುಂದರಿ ಏನನ್ನೂ ಮಾತನಾಡಲು. ಅರೆ ಘಳಿಗೆ ನಿಂತು ಮತ್ತೆ ತಿರುಗಿ ನಡೆಯುವಳು.
ಅವಳ ಕಣ್ಣೊಲವು ಈಗ ಒಮ್ಮೆಲೆ ಉಕ್ಕಿ ಬರುತ್ತಿದೆ ಕಣ್ಣೀರು ಕೆನ್ನೆಯನ್ನೆಲ್ಲಾ ತೋಯ್ಸಿದೆ. ಅವನು ಅಲ್ಲಿಯೇ ನಿಂತು ಇವಳನೇ ನಿರೀಕ್ಷಿಸಿದ್ದ. ಏನೋ ಆಲೋಚಿಸಿದಂತೆ ಒಮ್ಮೆಲೆ ತಿರುಗಿ ನಿಂತಳು ಮತ್ತು ತೊಟ್ಟಿದ್ದ ಉಂಗುರವ ತೋರಿ ನೀರಿಗೆಸೆದಳು. ಅವನ ಕಣ್ಣರಳಿತ್ತು. ನೀರಿನಾಳದಲಿ ಮೀನುಗಳು ಉಂಗುರಕ್ಕೆ ಕಚ್ಚಾಡಿತ್ತು.
ಧನ್ಯವಾದಗಳೊಂದಿಗೆ,
ದಿವ್ಯ ಆಂಜನಪ್ಪ
23/02/2015