ಪ್ರೀತಿ
ಬದುಕಿನ ಅಡುಗೆ ಮನೆಯಲೊಮ್ಮೆ
ಆಕಸ್ಮಿಕವೆಂಬಂತೆ ಒಲವಾಯಿತು
ಬೆಂಕಿಗೂ, ಬೆಣ್ಣೆಗೂ ಹೇಗೋ..
ಉರಿವ ಬೆಂಕಿಗೆ ಬೆಣ್ಣೆಯ ಬಳಿಸಾರುವ ಬಯಕೆ
ಬೆಣ್ಣೆಗೋ ಬೆಂಕಿಯೊಳು ನಲಿದಾಡುವ ತವಕ,
ಇಬ್ಬರಿಗೂ ಅರಿವಿದೆ ಹತ್ತಿರವಾದರದೇ ಅಂತ್ಯ.
ತಮ್ಮನ್ನು ತಾವೇ ಬಹುವಾಗಿ ಬೇಡಿಕೊಂಡು
ವಿರಹದಿ ಬೆಂದ ಭಾವ ಜೀವಿಗಳೆರಡೂ ನಿರ್ಧರಿಸಿಬಿಟ್ಟವು,
ಕಣ್ಣೋಟಗಳೊಂದೇ ಸೇತುವೆ, ಮೌನವೇ ಮಾತು,
ಉರಿವ ಬೆಂಕಿ ಉಳಿದರೂ, ಬಿಸಿ ತಾಗಿ ಬೆಣ್ಣೆಯು
ಇಲ್ಲವಾಗುವುದು; ಆದರೇನಂತೆ?
ನಮ್ಮಿಬ್ಬರ ಮಿಲನದಾಹುತಿ
ಆಗಬಹುದು ದೇವನ ತುಪ್ಪದಾರತಿ.
ಸಾವಿರ ಕಾಲ ಉಳಿದು ಕೊಳೆವುದಕ್ಕಿಂತ
ನಿನ್ನೊಲವೊಳು ಅರೆಕ್ಷಣ ಮುಳುಗಿ ಕರಗಿದರೂ
ನನ್ನ ಬಾಳದು ಲೇಸೆನುತ, ಬೆಣ್ಣೆ ಜಾರಿದಳು ಬೆಂಕಿಗೆ!!!
16/02/2014
No comments:
Post a Comment