Sunday, 16 February 2014

ಮನದ ಮಾತು

ಇಂದಿನ ಜೀನ್ಸ್ ಟಾಕ್ನಲ್ಲಿ ಅಂಜಲಿ ರಾಮಣ್ಣನವರ ಲೇಖನವನ್ನು ಓದುತ್ತಿದಂತೆಯೇ ಅದರಲ್ಲಿ ಹೆಣ್ಣೊಬ್ಬಳು ತನ್ನ ಗಂಡ ಹೊಡೆದರೂ ಬಡಿದರೂ ಅದನ್ನು ಸಹಿಸುವುದು ಸರಿಯೇ, ಏಕೆಂದರೇ ಅಸ್ತಮವಿದ್ದರೂ ಮದುವೆಯಾಗಿ ಬಾಳನ್ನು ಕೊಟ್ಟಿದ್ದಾನೆಂಬ ಮಾತು ಏಕೋ ನನ್ನನು ಒಮ್ಮೆಲೇ ರೇಗಿಸಿ ಬಹುವಾಗಿ ಕಾಡಿಬಿಟ್ಟಿತು. 

ನಿಟ್ಟುಸಿರಿನೊಂದಿಗೆ ಯೋಚಿಸಿದ್ದೂ ಇದೆ. ಹೆಣ್ಣಿನ ಈ ಅಸಹಾಯಕತೆಗೆ ಕಾರಣವೇನು? ಹೆಣ್ಣಷ್ಟೇಯೇ?, ತಂದೆ ತಾಯಿಯರೇ?, ಈ ಸಮಾಜವೇ? ಅಥವಾ ಅವಳ ದೈಹಿಕ ದೌರ್ಬಲ್ಯವೇ? ಭಾವುಕ ಮನಸ್ಸೇ? ಹೌದು ಇವೆಲ್ಲವೂ ಕಾರಣವೇ ಸರಿ. ಒಂದನ್ನು ಬಿಟ್ಟು; ಹೆಣ್ಣು ಎನ್ನುವ ಕಾರಣ. ಹೆಣ್ಣೊಬ್ಬಳು ಎಷ್ಟೇ ಓದಿದ್ದರೂ ಆರ್ಥಿಕವಾಗಿ ಸ್ವಾವಲಂಬಿಯಾಗಿದ್ದರೂ ಆಕೆಯನ್ನು ಮನೆಯವರು ಮತ್ತು ಸಮಾಜವು ಒಬ್ಬ ಸಂಸಾರಸ್ಥೆಯಾಗಿಯೇ ನೋಡಲು ಬಯಸುತ್ತದೆ. ಏನೂ ನಷ್ಟವಿಲ್ಲದೆ ತನ್ನ ದುಡಿಮೆಯಲ್ಲಿಯೇ ಬದುಕಿದರೂ ತನ್ನದೇ ತವರಿನಲ್ಲಿ ಆಕೆ ಉಳಿವಂತಿಲ್ಲ. ಯಾರನ್ನಾದರೂ ಮದುವೆಯಾಗಲೇ ಬೇಕು, ಸಂಸಾರ ಹೂಡಲೇಬೇಕು. ಆ ಗಂಡು ಇಷ್ಟವಾಗಲಿ ಅಸಮರ್ಥನಾಗಿರಲಿ ಇನ್ಯಾವುದೇ ನ್ಯೂನತೆಯಿರಲಿ ಲೆಕ್ಕಿಸದೇ ಪ್ರಶ್ನಿಸದೇ ಮದುವೆಯಾಗಬೇಕು. ಅದೇ ಗಂಡು ಮದುವೆಗೆಂದು ಹುಡುಗಿ ನೋಡುವಾಗ ಎಲ್ಲವನ್ನೂ ಕೂಲಂಕುಷವಾಗಿ ಪರೀಕ್ಷಿಸಿ ಯೋಗ್ಯಳೇ ಎಂದಳೆದು, ಸರಿಯಾಗಿ ತೂಗಿ ಇಂತಹುದೇ ರೀತಿಯಲ್ಲಿ ಮದುವೆ ಮಾಡಿಕೊಡಬೇಕಾಗಿ ಅಪೇಕ್ಷೆನನ್ನಿಡುತ್ತಾನೆ. 

ಯಾಕೆ ಹೀಗೆ?, ಗಂಡಿಗೇಕೆ ಅಷ್ಟು ಪ್ರಾಮುಖ್ಯತೆ ಹೆಣ್ಣಿಗಿಲ್ಲದ್ದು? ಹೆಣ್ಣೊಬ್ಬಳ "ಒಬ್ಬ ಬಾಳು ಕೊಟ್ಟ" ಎನ್ನುವ ಮಾತು ಏಕೋ ಕರುಳು ಕಿವುಚಿದ ಅನುಭವವಾಗುತ್ತದೆ ನನಗೆ. ಸಮಾಜ ಎಂತಹ ಸ್ಥಿತಿಗೆ ಹೆಣ್ಣನ್ನು ತಂದು ನಿಲ್ಲಿಸಿದೆ. ಹುಟ್ಟಿನಿಂದಲೂ ಅಷ್ಟೇ ಏನೇ ಕೇಳಲಿ ಏನೇ ಬೇಡಿಕೆಯನ್ನಿಡಲಿ ತಂದೆತಾಯಿಯರು ಎಲ್ಲವನ್ನೂ ಅವಳ ಮದುವೆಗೇ ತಾಗಿಸಿ ನಿಲ್ಲುಸುತ್ತಾರೆ. ನಾನು ಹೈಸ್ಕೂಲ್ ಕಾಲೇಜು ದಿನಗಳಲ್ಲಿ ಅಪ್ಪನನ್ನು ಏನೇ ಒಡವೆ ವಸ್ತ್ರ ವಿಶೇಷವಾಗಿ ಬೇಡಿಕೆಯನ್ನಿಟ್ಟರೂ ಅವೆಲ್ಲವೂ ನಿನ್ನ ಮದುವೆಗೆ ಕೊಡುವೆ ಅನ್ನುತ್ತಿದ್ದರು. ನನಗೋ ಕೋಪ ಉರಿದು ಹೋಗುತ್ತಿತ್ತು. ಎಲ್ಲದಕ್ಕೂ ಹೀಗೆ ಹೇಳುವಾಗ ಏಕೋ ನನಗೆ ಮದುವೆಯೇ ಬೇಡವೆನಿಸಿದ್ದು ನಿಜವೇ. ಕೊನೆಗೆ ಸರ್ಕಾರಿ ಶಾಲೆಗೆ ನೇಮಕವಾದೆ. ಮನೆಯ ಹತ್ತಿರವೇ ವಿದ್ಯಾಭ್ಯಾಸ ಮುಗಿಸಿದ ನಾನು ಶಾಲೆಗೆಂದೇ ನಾ ಬಸ್ ಹತ್ತಿದ್ದು. ದಿನವೂ ಎರಡೆರಡು ಗಂಟೆ ಪ್ರಯಾಣ ಮಾಡಿ ದಣಿಯುತ್ತಿರುವಾಗ ಅಪ್ಪನ ಮಾತು, ''ನೋಡು ನೀ ಮದುವೆ ಆದ್ರೆ ಈ ಕಷ್ಟವೆಲ್ಲಾ ತಪ್ಪುತ್ತಪ್ಪ, ಗಂಡ ಅನ್ನೊವ್ನು ನಿನ್ನ ಕರ್ಕೊಂಡ್ ಹೋಗಿ ಕರ್ಕೊಂಡ್ ಬರ್ತಾನೆ ನಿನ್ ಕಷ್ಟಕ್ಕೆಲ್ಲಾ ಆಗ್ತಾನೆ....." ಇನ್ನೂ ಏನೇನೋ ಒಂದೇ ಸಮನೆ ಒದರುತ್ತಿದ್ದರು. ಕೇಳಿ ಕೇಳಿ ನನಗೂ ಹಿಂಸೆ. ಈಗಲೂ ಅದೇ ರಾಗ ಏನೂ ಬದಲಾಗಿಲ್ಲ ಅನ್ನಬಹುದು. ಅಪ್ಪನದು ತಪ್ಪು ಎನ್ನುವುದಕ್ಕಿಂತ ಸುತ್ತ ಸಮಾಜವೇ ಹಾಗಿದೆ. ಸಮಾಜದಲ್ಲಿ ಇರುವಂತ್ತಿದ್ದರೆ ಅದರಂತಿರು ಎನ್ನುವ ಸೂತ್ರ ಬೇರೆ. ಬೇಸತ್ತು ಹೋಗಿದೆ ಈ ವ್ಯವಸ್ಥೆಗೆ.

ತಂದೆ ತಾಯಿಯರು ಹೆಣ್ಣು ಮಕ್ಕಳನ್ನು ತಮ್ಮೊಂದಿಗೆ ಇರಿಸಿಕೊಳ್ಳಲಾರರು; ಕಾರಣಗಳೇನೇ ಇರಲಿ ಸಾವಿರ, ಒಬ್ಬಳೇ ಮಹಿಳೆ ಮನೆಯೊಂದರಲ್ಲಿರಲು ಮತ್ತೂ ಭಯ; ಹೀಗಿರಲು ಇದೊಂದೇ ದೊಡ್ಡ ದೌರ್ಬಲ್ಯವಾಗಿ ಹೆಣ್ಣು ಸೋಲುತ್ತಾಳೆ. ಮತ್ತದೆ, ತನಗೇ ಬಾಳನ್ನು ಕೊಟ್ಟ ಗಂಡೆಂದು ಕೊಂಡಾಡುವ ಪರೀಸ್ಥಿತಿ!! ತನ್ನಂತೆಯೇ ಜನಿಸಿದ ಗಂಡು ಒಮ್ಮೆಲೆ ದೇವನಾಗಬೇಕು, ದೇವನಾಗಿಸಬೇಕು..... 


16/02/2014

No comments:

Post a Comment