Thursday 27 February 2014





ಅಸಹಾಯಕತೆಗಳನ್ನೇ ಬದುಕುವುದಾಗಿದ್ದರೆ
ಕ್ರಾಂತಿ ಕಾಂತಿಯಿಲ್ಲದೆ ಉಳಿಯುವುದಾಗಿದ್ದರೆ
ಬದುಕು ಬಣ್ಣ ಬಯಸಲು ಅಸಹಾಯಕವಾಗಿಬಿಡುತ್ತದೆ...
ಸಹಾಯಕ್ಕೆ ನಾವೇ ನಮಗಿಲ್ಲದಂತೆ...


***


ಕಾವ್ಯದೊಳು ನಿನ್ನ ಪಡೆದೆದ್ದೂ ಇದೆ
ಹಾಗೆಯೇ ಕಳೆದದ್ದೂ;
ನಿನ್ನ ಸಾಲುಗಳು ಸೆಳೆದು ಮೂಡಿಸಿದ್ದೂ ಇದೆ
ನಿನ್ನೆಡೆಗೆ ನನ್ನೊಳು ಪ್ರೀತಿಯ
ನೀನೇ ಹೇಳಬೇಕಿದೆ,
ನಾ ನಿನ್ನೊಳ ಸಾಲುಗಳ ಅರಿತದ್ದೇ
ನನ್ನ ಘೋರ ಅಪರಾಧವೇ?
ಸಾಕ್ಷಿಯಿಲ್ಲದೀ ಪ್ರೀತಿಯೊಳು
ಸಾಲುಗಳ್ ಹುಟ್ಟಿದ್ದೇ ಸಾರ್ಥಕವಷ್ಟೇ..!


***


ಬವಣೆಗಳನ್ನೇ ಬರೆಸಿಕೊಂಡು
ನನ್ನೊಂದಿಗೆ ಬಸವಳಿವ ಅಕ್ಷರಗಳು
ಶಪಿಸಿಯಾವೆಂಬ ಭಯಕ್ಕಾದರೂ
ಪ್ರೀತಿ ತುಂಬಿಸುವೆ 
ಮೋಹಕದಿ ಒಮ್ಮೊಮ್ಮೆ
ಅದೇ ಮನಸಾಗಿ ಹರಿದು 
ವಿಶಾದಗಳೆಲ್ಲಾ ಕರಗಿ 
ಭರವಸೆಯು ಮೂಡಿದ್ದು ನಿಜವೇ
ಮನಸಿನಂತೆ ಮಹದೇವಾ ಎನುವಂತೆ...


***


ಈ ನೀಲಿ ಕಣ್ಗಳ ಚೆಲುವ
ನೀಲಿ ಆಗಸವ ತೋರಿ ಕರೆವ
ಹೋದರೆ ಮಾಯವಾಗಿಬಿಡುವ
ನೀಲಮೇಘಶಾಮನೆಂದುಕೊಂಡೆ
ಅದಕ್ಕೇ ಭ್ರಮೆಗಳಲೇ ತೋರಿ ಪ್ರೀತಿ
ಮತ್ತೂ ತೂರಿಯೂ ಬಿಟ್ಟ 
ಪ್ರೀತಿಯಿದೆ ನನಗೆ ನನ್ನ ಮೇಲೆ
ಹಾಗಾಗಿ ನನ್ನ ಭ್ರಮೆಯಾದ ನಿನ್ನ ಮೇಲೂ....


***


ಬೇಸರಗಳೆಲ್ಲಾ ಒಟ್ಟೊಟ್ಟಿಗೆ ಬಂದೆರಗಿದರೆ
ಒಳಿತೇ ಆಯ್ತು;
ಒಮ್ಮೆಲೆ ಕಣ್ಣೀರೊಳ ತೊಯ್ಸಿ ಕಳಿಸಿದರಾಯ್ತು... 



***


ಯಾವ ನೋವಿಗೆ ನೊಂದು 
ವಿಮುಖಳಾಗ ಬಯಸಿದೆನೋ
ಅವುಗಳಿಗೆ ಮತ್ತೆ ಮುಖ ಮಾಡಿ 
ಎದುರಿಸಿ ನಡೆವಾಗ ನೋವೇ ಇಲ್ಲ
ಸಂತೋಷವ ಎಲ್ಲಿ ಕಳೆದೆನೋ 
ಮನಸ್ಸು ಎಲ್ಲಿ ಮುದುಡಿತೋ
ಅಲ್ಲೇ ನಿಲ್ಲಬೇಕು 
ನೋವ ಸವಿದು 
ನೋವ ಗೆಲ್ಲಬೇಕು
ಇದೇ ನನ್ನ ಉತ್ತರ 
ಬದುಕಿನೆದುರು 
ಕೆಟ್ಟ ಧೈರ್ಯ ಮೆರೆದು....


***


ಬಹಳಷ್ಟು ಬಾರಿ ಮರೆತಿದ್ದೆ 
ಮರೆಯುವುದನ್ನು
ಬಹಳಷ್ಟು ಬಾರಿ ಮರೆತಿದ್ದೆ 
ನೆನೆಯುವುದನ್ನು
ಮರೆವು ಮರೆತಾಗಲು 
ಕಳೆದಿದ್ದೆ,
ನೆನಪು ಮರೆತಾಗಲೂ 
ಕಳೆದಿದ್ದೆ,
ನನ್ನೊಳ ಹೊಳಪೊಂದನು 
ಕೂಪದೊಳ ಕೋಪವಾಗಿಸಿ
ಮೃದು ಮನಸನು,
ನವಿರು ಕನಸನು,
ಅದಕ್ಕಾಗಿಯೇ ನೋಡೀಗ 
ನೀ ನೇಮಕಗೊಂಡಿರುವೆ
ನನಗೆ ನನ್ನನು ನೆನಪಿಸಲು 
ತೋರಿಸಿ ನಿನ್ನೆದೆಯೊಳಗೆ


23/02/2014

***


ನೀನಿಟ್ಟ ಹೆಸರಲಿ 
ಮತ್ತೊಮ್ಮೆ ಕರೆಯುವೆಯಾ
ಕರೆವ ಮುನ್ನ 
ದೂರಾಗು ನಿನ್ನೀ ಹೊಯ್ದಾಟಗಳಿಂದ
ಮತ್ತೆ ಮತ್ತೆ ತೇಲಿಸಿ 
ಮುಳುಗಿಸದಿರು ಪ್ರೀತಿ ಸೆಲೆಗಳಲಿ
ಬೆಚ್ಚಿ ಬೀಳಿಸಿದ್ದು ಸಾಕಿನ್ನು; 
ಒಮ್ಮೆಲೇ ನಿನ್ನ ಸಾನಿಧ್ಯ, 
ಒಮ್ಮೆಲೇ ವಿರಹದ ಕಹಿ ಬಾಂಧವ್ಯ,
ಪರೀಕ್ಷೆಯೇ ನನಗಿದು?
ಕನಸ ಹೊಸಕೋ ಪ್ರಯತ್ನದೊಳು
ತತ್ತರಿಸಿರುವೆ ನಗುತ್ತಲೇ......


***


ಹಾಗೇ ಸುಮ್ಮನೆ....... 


ಪ್ರೀತಿ ಎಂದರಷ್ಟೇ ಪ್ರಾರಂಭ
ಅಂತ್ಯ ಕಾಣದ್ದು ನನ್ನಂತೆ
ನಾನಿರೊವರೆಗೂ;
ನಂತರವೂ ನೀನಿರೋವರೆಗೂ
ಪ್ರೀತಿ ನಮ್ಮೊಳ ಉಸಿರು
ಬೀಸಿ ಬೀಳಿಸೋ ನೋವುಗಳ ಶಿಕಾರಿ
ನಾವಿಬ್ಬರೇ ಅದರ ರೂವಾರಿ!


22/02/2014
***


ಈ ಸುನಾಮಿಯಂತಹ ಮನವು
ನಿಲ್ದಾಣವ ಕಂಡದ್ದು
ಬಹುಶಃ 
ನಿನ್ನೊಲವಲಿ ಮಾತ್ರ....

ಮತ್ತೆ ಮತ್ತೆ ಮುದಗೊಂಡದ್ದು
ತಿಳಿಯದೇ ತಿಳಿಗೊಳಿಸೋ
ನಿನ್ನ ಪ್ರೀತಿಯ ನೇವರಿಕೆಯ
ಕನವರಿಕೆಗಳಲಿ ಮಾತ್ರ.... 


21/02/2014

No comments:

Post a Comment