Friday 14 February 2014

ಮನದ ಮಾತು

ಕೊಬ್ಬು ಅಂದುಕೊಂಡರೂ ಸರಿಯೇ ಜನ ಆದರೆ ಮಬ್ಬು ಅಂದುಕೊಳ್ಳುವ ಹಾಗೆ ಆಗಬಾರದು...
ಎನ್ನುವುದು ನನ್ನನಿಸಿಕೆ,,,

ಕಳೆದ ಅಕ್ಟೋಬರ್ ತಿಂಗಳಿನಲ್ಲಿ ಹೀಗೆ ನಮ್ಮ ಟಿ.ಸಿ.ಹೆಚ್ ಕಾಲೇಜಿನಲ್ಲಿ ನಮ್ಮ ಬ್ಯಾಚ್ನ ವಿಧ್ಯಾರ್ಥಿಗಳು ಸೇರಿ ಒಂದು ಕಾರ್ಯಕ್ರಮವನ್ನು ಆಯೋಜಿಸಿದ್ದರು. ನಮ್ಮ ಕಾಲದಲ್ಲಿದ್ದ ಎಲ್ಲಾ ಉಪನ್ಯಾಸಕರನ್ನೊಡಗೂಡಿ ರೂಪಿಸಿದಂತಹ ಕಾರ್ಯಕ್ರಮವದು. ಸರಿ ಕಾರ್ಯಕ್ರಮವೆಲ್ಲಾ ಚೆನ್ನಾಗಿಯೇ ಆಯಿತು ನಾನೂ ನನ್ನ ಗೆಳತಿ ಮತ್ತೊಮ್ಮೆ ವಿಧ್ಯಾರ್ಥಿಗಳಾಗಿ ಆ ಅದೇ ಪ್ರಾರ್ಥನೆಯನ್ನು ಹಾಡಿದೆವು. ಅನಿಸಿಕೆಗಳನ್ನು ಹಂಚಿಕೊಂಡೆವು. ಯಾರ್ಯಾರು ಏನೇನೋ ಆಗಿದ್ದಾರೆ ಈ ಹತ್ತು ವರ್ಷಗಳಲ್ಲಿ ಕೆಲವರಂತೂ ಗುರುತೇ ಸಿಗದಂತಾಗಿದ್ದಾರೆ, ಗುರ್ತಿಸುವುದು ತಡವಾಯ್ತು,,, ನಾನೂನೂ!! 
ಎಲ್ಲರೂ ಸಾಕಷ್ಟು ಬದಲಾಗಿದ್ದಾರೆ ನಡೆ-ನುಡಿ, ಎಲ್ಲವೂ ಧನಾತ್ಮಕವಾಗಿಯೇ ಅನ್ನಿ....,

ಗೆಳತಿಯರೊಂದಿಗೆ ಮಾತನಾಡುತ್ತಾ ನಿಂತಿದ್ದ ನನ್ನನು ಗೆಳೆಯನೊಬ್ಬ ''ದಿವ್ಯ'', ''ದಿವ್ಯ'' ಎಂದು ಕರೆಯುತ್ತಿದ್ದ, ನಾ ಬೇಕಂತಲೇ ತಿರುಗಿ ನೋಡಲಿಲ್ಲ ಕಾರಣವಿಷ್ಟೇ, ಆಗೆಲ್ಲಾ ಕಾಲೇಜಿನಲ್ಲಿ ಭಾವಿ ಶಿಕ್ಷಕರಾದ ನಾವು ಪರಸ್ಪರ ಗೌರವಿಸುತ್ತಾ ನೆಡೆದು ಹಾಗೂ ಮುಂದೆ ನಾವೆಲ್ಲರೂ ಶಿಕ್ಷಕರಾಗಿ ಎದುರುಗೊಳ್ಳುವುದರಿಂದ ಒಬ್ಬ ಶಿಕ್ಷಕನನ್ನು ಹೇಗೆ ಗೌರವಿಸುತ್ತೇವೋ ಹಾಗೆ ನಮ್ಮ ಸಹಪಾಠಿಗಳನ್ನೂ ಗೌರವಿಸಬೇಕೆಂದು ಬೋದಿಸಲಾಗಿತ್ತು ಮತ್ತು ನಾವೂ ಕೂಡ ಅದನ್ನೇ ಪಾಲಿಸುತ್ತಿದ್ದೆವು. ಹೀಗಿರುವಾಗ ನನ್ನನ್ನು ಬರೀ ದಿವ್ಯ ಅಂತ ಕರೆದನಲ್ಲಾ ''ಮೇಡಂ'' ಅನ್ನೊ ಪದವಿಲ್ಲದೆ ಅನ್ನೊ ಕೋಪ. ಯಾರು ಯಾರೊಂದಿಗೆ ಹೇಗೆ ನಡೆದುಕೊಳ್ಳುತ್ತಾರೋ ಅವರನ್ನೂ ಹಾಗೆಯೇ ಮನವೂ ಬಯಸುವುದು. ದಿಢೀರನೆ ಸಲುಗೆಯೂ ಬೆಳೆಯದು ಹಾಗೆಯೇ ಸೆಡವೂ,, ಎನ್ನುವುದು ನನ್ನನಿಸಿಕೆ. ಆತ ಒಂದು ನಾಲ್ಕೈದು ಬಾರಿ ಕರೆದ ನಂತರ ನಾನೂ ಕೇಳಿದೆ, ''ಏನೋ?'', ಅವನೋ ವ್ಯಂಗ್ಯವಾಗೇ ಅಂದ ''ಆಗಿನ ನಿನ್ನ ಧಿಮಾಕು ಇನ್ನೂ ಕಡಿಮೆಯಾಗಿಲ್ಲ ಬಿಡು'' ಅಂದ. ''ಕಡಿಮೆ ಆಗಲ್ಲ ನೀ ಹೇಳು'' ಅಂದೆ. ಅವನ ವ್ಯಂಗ್ಯಕ್ಕೆ ನನಗೇನು ಬೇಜಾರಾಗಲಿಲ್ಲ ಬದಲಿಗೆ ಹೆಚ್ಚು ಖುಷಿಯಾಯಿತು ನಾ ಬದಲಾಗಿಲ್ಲವೆಂದು.

ಇದನ್ನು ಆಗಾಗ ನೆನೆದು ಖುಷಿಗೊಳ್ಳುತ್ತೇನೆ. ನನ್ನ ಧಿಮಾಕಿಗೆ!!!!!!! 


09/02/2014

No comments:

Post a Comment