Friday, 28 February 2014


ಕೊಳಲ ನಾದಕ್ಕಿರುವ ಶಕ್ತಿಯದು
ಮನಕೆ ತಂಪ ನೀಡಿ,
ಮಾಧುರ್ಯ ತುಂಬಿಸೋ ಲಯದಲಿ,
ವಿಷಮವೆಲ್ಲಾ ಸಮವಾಗಿ ಪ್ರೀತಿ ಹೊಮ್ಮುವಾಗ
ನಾದದೊಳು ಕಣ್ಣೀರಾಗೋ ಪ್ರೀತಿಯ
ನಿಜ ಹಕ್ಕುದಾರ ಕೊಳಲೇ ಹೊರತು 
ಕೃಷ್ಣನಲ್ಲ;
ನಾದವ ಕದ್ದು ಕೇಳಿಸಿದ ಮಾತ್ರಕೆ
ರಾಧೆ ಗೋಪಿಕೆಯರೂ ಅವನ ಪ್ರೇಮಿಗಳಲ್ಲ...


28/02/2014

ಈ ಕಣ್ಣು 
ಕಪ್ಪಾಗುವ ಮುನ್ನ
ತುಂಬಿಕೊಳ್ಳಬೇಕಿದೆ 
ನಿನ್ನ ಬಣ್ಣ.. 


28/02/2014


ಇಲ್ಲೊಬ್ಬಳು ಪ್ರೀತಿಯೊಳು ಪ್ರೀತಿ ಕಂಡು

ಅವಳದೇ ಪ್ರೀತಿ ಕನಸ ಕವರಿಕೆಗಳಲಿ ಹಾಡಿರಲು
ಅವಳ ಗಾನ ಕೇಳಿದ ವಿಷಮ ಮನದವರೆಲ್ಲಾ
ಬತ್ತಿದ ತಮ್ಮ ಮನೆಯಂಗಳದ ಬಳ್ಳಿಗೆ ನೀರೆರೆದುಕೊಂಡು
ಇವಳೇ ಹೂವಾಗಿ ಅರಳಲೆಂಬ ಬಯಕೆಗಳಿಗೆ
ಸ್ವಾರ್ಥಕ್ಕೂ ಮೀರಿದ ಪಾಪವೆಂದೇ ಜರಿವಳಿವಳು ನೊಂದು...


28/02/2014

ಕವನ


"ಈ ಹೃದಯ"

ಪ್ರೀತಿ ತುಂಬಿದ ಹೃದಯವಿದು
ದ್ವೇಷ, ಅಸೂಯೆ, ಮೋಸ, ಅವಮಾನಗಳ
ತಿರುವಿ ಹಿಂದೆ ಹಾಕಿ ಮುನ್ನೆಡೆವ ದಿಟ್ಟ ಹೃದಯವಿದು

ಪ್ರೀತಿಸಲು ಹೃದಯಬೇಕು ಸರಿಯೆ, 
ಕಳೆದ ಮೇಲೂ ಹೃದಯದೊಳು ಪ್ರೀತಿ ಉಳಿಸಿಕೊಳ್ಳಲು 
ಆತ್ಮ ಗೌರವ ಬೇಕು,,ನಿರ್ವಂಚನೆಯ ಕಾಂತಿಬೇಕು

ಗಾಜಿನಂತಹ ಹೃದಯದ ಮೇಲೆ ಮುಳ್ಳು ಕೆರೆದ ಗೆರೆಗಳಿದ್ದರೂ
ತನ್ನಷ್ಟಕ್ಕೆ ತಾ ಮತ್ತೆ ಮತ್ತೆ ಅರಳುವ ಕೆಸರ ಕಮಲದ ಅಭಿಮಾನಿ,
ಈ ಹೃದಯದ ತೀಕ್ಷ್ಣತೆ, ಪ್ರೀತಿ-ವಿನೋದಗಳಿಗೆ ಬೆರಗಾಗಿವೆ ಆ ಕರಿ ಹೃದಯಗಳು

ಧಾವಂತವಂತೆ ಕೈಜಾರಿದೀ ಮನವ ಹಿಡಿದಿಡಲು,, 
ನಗುವುದೀ ಹೃದಯ ಹೇಡಿಗಳ ತುತಂತ್ರಕೆ,, 
ಮೀರಿದ ಅವರ ಮೈ ಪರಚಿಕೊಳ್ಳುವ ಸ್ಥಿತಿಗೆ 
ನಡೆದುಬಿಟ್ಟ ಮೇಲೆ ಮುನ್ನ ಹಾದಿಗಷ್ಟೇ ಪ್ರಾಮಾಣಿಕವೀ ಹೃದಯ

ಕೊರಗಿದಂತೆ ನರಳಿದಂತೆ ಮತ್ತೆಷ್ಟೇ ಮುಖವಾಡಗಳ ಹೊತ್ತರೂ
ಕಳೆದುಕೊಂಡದ್ದು ಕಳೆದು ಹೋಗಲೇ ಬೇಕಿದೆ
ಕಾಲಕ್ಕೆ ಲೆಕ್ಕಕೊಟ್ಟು, ಮನಸಿಗೆ ಉತ್ತರ ಕೊಟ್ಟು...


28/02/2014

ಹಾಯ್ಕು :-)


ಈ ತರಗೆಲೆ 
ಚಿಗುರುದಿಸೋ ತೇರ
ನಕಾಶೆ ಪತ್ರ

27/02/2014
ಬಹಳಷ್ಟು ಬಾರಿ ಅವ ಹೆದರಿದ್ದು
ನನ್ನ ಅಕಾರಣ ಖುಷಿಗಳಿಗೆ
ನೋಡಲಾರದೇ ದೂರ ಉಳಿದದ್ದು
ನಗುವಿನ ಅರ್ಥ ತಿಳಿದದ್ದೇ...!


***

ಎನ್ನ ಸಂಭ್ರಮಗಳಿಗೆ ಅಚ್ಚರಿಪಡುವ
ಓ ಗೆಳೆಯನೇ,
ನೀನೊಂದು ಸಂಭ್ರಮವೇ ಆಗಿದ್ದೆ
ಕಳೆದಿರುಳು ಕನಸೊಳು
ಎನ್ನನೇ ಅಚ್ಚರಿಗೊಳಿಸಿ!!.........


***

ಮನಸ್ಸು ತೀರ ಮೃದುವಾಗಬಾರದೆಂಬ
ಬುದ್ದಿಜೀವಿಗಳ ಮಾತು;
ಮೆದುವಾಗಬೇಕು ಭಾವ ತಾಪಗಳಿಗೆ
ಆ ಮನದ ಮೃದುತ್ವವ ಅನುಭವಿಸದೇ
ಹೋದೆಡೆ ಮನಸಿದ್ದೂ ನಮ್ಮದಾಗದು
ಕಳೆಯಬೇಕು ನಾವೇ ನಮ್ಮಯ ಮೃದುತ್ವದೊಳಗೆ
ಹೊರಗಿನ ಕ್ಷೋಭೆಗಳೂ ನಮ್ಮನು ಕದಲಿಸದಂತೆ!!


27/02/2014

Thursday, 27 February 2014

ಹಾಯ್ಕು :-)

ವಕ್ಷ ಸ್ಥಳದಿಂ
ಭಗ್ನ ಸಿರಿ ವಿರಹಿ
ಕಲ್ಯಾಣಾರ್ಥದಿ





ಪ್ರೀತಿಯು ಒಮ್ಮೊಮ್ಮೆ 
ಕಣ್ಮುಂದೆ ಸುಳಿದಾಡೋ
ಅಪಾರ ಅರ್ಥಗಳೊಳಗಿನ 
ದೀರ್ಘ ಪಾತ್ರದ 
ತುಂಟ ನಾಟಕ!! 



***


ನಲುಗುತ್ತಿರುವ ಹೂವಿಗೊಂದು
ಸಾರ್ಥಕತೆಯ ನಗು ಬರೆದದ್ದು
ಮರೆಯಲ್ಲಿನ ಸ್ವಾರ್ಥವ ನಯವಾಗಿ ವರ್ಣಿಸಲು!!


***

ಕಟ್ಟಿದ್ದು ಬರೀ ಪದಗಳೋ?, 
ಅದರೊಳು ಮನಸುಗಳೋ?
ಹೆಣೆದ ಹೂ ಮಾಲೆಯಲಿ 
ಉದುರಿದ ಹೂವೇ
ಕೊರಗಾಗಿ ಎದ್ದು ಕಾನ್ವದು 
ಸಾಲೊಳು;
ಎಲ್ಲಿ ಜಾರಿತೆಂದು,,,,,,,,,, 

***

"ಪ್ರೀತಿಯು ತುಂಬಿಕೊಂಡ
ಅರ್ಥಗಳಲಿ; ನನ್ನವೂ
ಕೆಲವು ಒಗಟುಗಳು"

26/02/2014




"ಓ ಮೋಡವೇ"


ಮೋಹಕತೆಯೇ ಎನ್ನ ಸುತ್ತುವರೆದಂತೆ
ಮಳೆಯಾದ ಕಂಪಡರಿ ಧರೆ ತಂಪಿಡಿದಂತೆ
ಮಿಂಚೊಂದು ದೂರದಿ ಹೊಳೆದಿರುವಂತೆ 
ಕತ್ತಲೊಳು ಮುಸುಕಿದ ಓ ಮೋಡವೇ
ಗೊತ್ತಿದೆಯೇ ನಿನಗೆ?;
ಮತ್ತೊಮ್ಮೆ ಒಲವಾಗಿದೆ ನಿನ್ನೆಡೆಗೆ

ಓ ಎನ್ನ ಕಲ್ಪಿತ ರೂಪವೇ,,, 
ಮಳೆಯಾಗದೆ ಮುನ್ನೆಡೆದೀಯ ಜೋಕೆ
ಹಿಂಬಾಲಿಸಿಬಿಟ್ಟೇನು ನಿನ್ನ ನಾ ಹೀಗೆಯೇ
ಹಟಮಾರಿ ಎನ್ನದಿರು, ನಿನ್ನೊಲವ ಅಭಿಮಾನಿ
ನದಿಯಾಗಬೇಕಿದೆ ಹರಿದು ನಾ ತಿಳಿಯಾಗಲು
ಯೋಚಿಸದೆ ಹರಿಸುಬಿಡು ನಿನ್ನೀ ಪ್ರೀತಿ ಮಳೆಯನು


***


ಬದುಕು 
ಇನ್ನಷ್ಟು ಉತ್ಸಾಹದಿ 
ಓಡುವಂತೆ ನನ್ನ ನಡೆಸಿದ್ದು,
ಹೆಚ್ಚು; 
ಇದ್ದದ್ದನ್ನು ಕಿತ್ತುಕೊಂಡು,
ಅದ ಪಡೆಯಲು 
ನಾ ಮತ್ತೆ ಮತ್ತೆ ಓಡುವಂತೆ ....


***


ನುಗ್ಗಿಬಿಟ್ಟ ದಾರಿ ಕೊರಕಲಾಗುತ್ತಿದೆ
ಎನಿಸಿದಾಗ 
ಬಿರುಸು ಸಾಗದು
ಹಾಗೆಯೇ ನಿಲ್ಲಲ್ಲೂ ಆಗದು;
ಭಾರವಿಟ್ಟ ಹೆಚ್ಚೆಗಳನು ಅಷ್ಟೇ ವೇಗದಿ
ಎತ್ತಿಟ್ಟು ಮುನ್ನೆಡೆಯುತ್ತಿರಬೇಕು
ಬಿಟ್ಟ ಹೆಜ್ಜೆಗಳಲ್ಲಿ ಆಳ ಇಣುಕಿ ಭಯ ಮೂಡಿಸಿದೆ
ಹಾದಿ ಬದಲಾಗದು ಅಷ್ಟು ದೂರ ಸವೆಸುವವರೆಗೂ
ಘಳಿಗೆ ಲೆಕ್ಕವಿಟ್ಟು ನಡೆಯಬೇಕಿದೆ
ಇದೂ ಹಾದಿಯೇ; 
ಎಷ್ಟೋ ಕಾಲುಗಳು ಸವೆದು ಹೋದದ್ದು


***


ಎಲ್ಲರೂ ತಮ್ ತಮ್ಮನಡೆಯನ್ನು
ತಾವೇ ಕ್ಷಮಿಸಿಕೊಳ್ಳಬಹುದಾಗಿದ್ದರೆ
ಯಾರೂ ಕ್ಷಮೆಯ ಬೇಡುತ್ತಿರಲಿಲ್ಲವೇನೋ

ಎನ್ನತನಕ್ಕಾಗಿ ಎನ್ನ ಮನಕ್ಕಾಗಿ
ಸೋಲುಬೇಕೇ ಹೊರತು
ಇನ್ಯಾರ ಮೆಚ್ಚಿಸಲಲ್ಲ

ಮನಕೆ ತಾ ಒಪ್ಪಿಗೆಯಾಗಲು
ಇನ್ನೆಷ್ಟು ಹೊರಗೆ ಸವೆಯಬೇಕೊ
ಒಳಗೊಂದು ನಲುಗದ ನಲಿವುಳಿಯಲು..


***


ಜೀವನದ ಸದೃಢ ಅವಧಿಯೊಳು
ಗಾಳಿಯಂತಾವರಿಸಿ, ಹಗಲಿರುಳು ಕಾಡಿಸಿ
ಜೀವ ಬಸಿದು, ಹಿಂಡಿ ಹಿಪ್ಪೆ ಮಾಡಿ 
ಕಾಲಲೊದ್ದು ತಂದು ನಿಲ್ಲಿಸುವಾಗ
ರೋದಿಸಲೂ ತ್ರಾಣವಿಲ್ಲದ ಬದುಕಿನ ಮುಸ್ಸಂಜೆ
ಪ್ರೀತಿ ಎಂದರೆ ಇದೇ ಏನೋ.... 



25/02/2014





ಅಂತರಂಗದ ರಂಗಮಂದಿರದೊಳು
ಸದಾ ಕೆನೆವ ಗೆಜ್ಜೆ ನಾದ
ಆಲಿಸದೇ ಕಿವುಡಾಗುವುದೆಂತು
ಅಳುವ-ಮುದ್ದಿಸುವ ಮಗುವಿನ ನಲಿವು
ಹಿಡಿದಿಡುವುದೆಂತು
ಕಣ್ಣಿರೂ ತಂಗಾಳಿಯೊಳು ತಣ್ಣನೆ ಆರಿಹೋಗಲು
ಹುಡುಕಿ ನಾ ಅತ್ತು ಮೊರೆವುದೆಂತು
ಆದದ್ದೆಲ್ಲಾ ನನ್ನಂತೆಯೇ, ಮುಂದಿದೇ ಎಂದು ಹೇಳಲಾಗದಂತೆ
ವಿಸ್ಮಯ ವಿನೋದಕರವಾಗಿರಲು
ನಾ ಮತ್ತೆ ಮತ್ತೆ ಮುಸುಕೊಳು ಮಸುಕಿಡುವುದೆಂತು 



***


ಮನೆಯಂಗಳದ ಬಾವಿಯೊಳು ಬಿದ್ದ
ಚಂದ್ರನ ಬಿಂಬವು;
ಚಂದಿರನು ಆ ಮನೆಗೆ ಸ್ವಂತವೇ 
ಆದಂತಹ ಭ್ರಮೆ 
ನೀನೊಮ್ಮೆ ಹೃದಯದೊಳು ಇಣುಕಿದಾಗ.... 


***


ಅವನ ಕಣ್ಣೋಟವೋ
ಮನ್ಮಥನ ಬಾಣವೋ
ಎದೆ ಬಿರಿದು;
ಅಂಗಳವೆಲ್ಲಾ ಪಾರಿಜಾತ ಹೂಗಳು... 



24/02/2014

ಕವನ; ಬೇಗೆ

ಅನಾದಿ ಕಾಲದಿಂದಲೂ ಲೇಖನಿಯೊಂದೇ ಸತ್ಯ 
ಕಾವ್ಯದೊಳು ಜೀವ ನೀಡಿದ್ದಕೂ ದ್ವೇಷವನ್ನಡಗಿಸುವುದಕೂ
ಪೋಷಣೆಗೆಂದು ಪೊಗಳಿದರೂ , ನೊಂದು ಜರಿದು ಶಾಪವನ್ನೀಯ್ವಕೂ
ಭಕ್ತಿ-ದೇಶ ಭಕ್ತಿ ಮೆರವಕೂ, ಕೊರೆವ ದೇಶ ದ್ರೋಹಕೂ
ಸತ್ಯವೊಂದೇ ಲೇಖನಿ, ದ್ರೋಹವಲ್ಲದ್ದು
ಅಷ್ಟು ನಂಬಿಕೆಯಿಟ್ಟ ಲೇಖನಿ ಕೈ ತಾಗಿತೇನೋ ಬುದ್ಧಿಮತ್ತೆಗೂ
ಕಲಿಯುಗವಂತೆ ಪಾಪಕ್ಕಿಲ್ಲದಂತೆ ಚಿಂತೆ
ನೊಂದು ಬೆಂದರೂ ಬಾಯ್ಬಿಡಲಾರದಂತೆ
ಉಸಿರುಗಟ್ಟಿಸೊ ಸಮಾಜದೊಳು
ಲೇಖನಿಯು ಅಕ್ಷರಗಳಲಿ ದ್ರೋಹವೊಂದನ್ನಡಗಿಸಿ ನಲಿವ ಮೆರೆದರೂ
ಹೆಣ್ಮನದ ಆ ಅಸಹಾಯಕತೆಯೇ ವರದಂತಿದ್ದರೂ
ಲೇಖನಿಯ ಗುರುತು, ಜನ ಶಕ್ತಿಯ ಮೀರೊಂದು ಶಕ್ತಿ
ಪಾಪಗಳ ಹೊಸಕದೇ ಬಿಡದು, ಇಂದಲ್ಲ ನಾಳೆ
ಕಣ್ಣೀರ ಹನಿಗಳು ದಿಟವಾಗಿದ್ದೊಡೆ
ನೋವುಗಳೇ ನೊಂದು ಜೊತೆಯಾಗಿದ್ದೊಡೆ......


24/02/2014




ಅಸಹಾಯಕತೆಗಳನ್ನೇ ಬದುಕುವುದಾಗಿದ್ದರೆ
ಕ್ರಾಂತಿ ಕಾಂತಿಯಿಲ್ಲದೆ ಉಳಿಯುವುದಾಗಿದ್ದರೆ
ಬದುಕು ಬಣ್ಣ ಬಯಸಲು ಅಸಹಾಯಕವಾಗಿಬಿಡುತ್ತದೆ...
ಸಹಾಯಕ್ಕೆ ನಾವೇ ನಮಗಿಲ್ಲದಂತೆ...


***


ಕಾವ್ಯದೊಳು ನಿನ್ನ ಪಡೆದೆದ್ದೂ ಇದೆ
ಹಾಗೆಯೇ ಕಳೆದದ್ದೂ;
ನಿನ್ನ ಸಾಲುಗಳು ಸೆಳೆದು ಮೂಡಿಸಿದ್ದೂ ಇದೆ
ನಿನ್ನೆಡೆಗೆ ನನ್ನೊಳು ಪ್ರೀತಿಯ
ನೀನೇ ಹೇಳಬೇಕಿದೆ,
ನಾ ನಿನ್ನೊಳ ಸಾಲುಗಳ ಅರಿತದ್ದೇ
ನನ್ನ ಘೋರ ಅಪರಾಧವೇ?
ಸಾಕ್ಷಿಯಿಲ್ಲದೀ ಪ್ರೀತಿಯೊಳು
ಸಾಲುಗಳ್ ಹುಟ್ಟಿದ್ದೇ ಸಾರ್ಥಕವಷ್ಟೇ..!


***


ಬವಣೆಗಳನ್ನೇ ಬರೆಸಿಕೊಂಡು
ನನ್ನೊಂದಿಗೆ ಬಸವಳಿವ ಅಕ್ಷರಗಳು
ಶಪಿಸಿಯಾವೆಂಬ ಭಯಕ್ಕಾದರೂ
ಪ್ರೀತಿ ತುಂಬಿಸುವೆ 
ಮೋಹಕದಿ ಒಮ್ಮೊಮ್ಮೆ
ಅದೇ ಮನಸಾಗಿ ಹರಿದು 
ವಿಶಾದಗಳೆಲ್ಲಾ ಕರಗಿ 
ಭರವಸೆಯು ಮೂಡಿದ್ದು ನಿಜವೇ
ಮನಸಿನಂತೆ ಮಹದೇವಾ ಎನುವಂತೆ...


***


ಈ ನೀಲಿ ಕಣ್ಗಳ ಚೆಲುವ
ನೀಲಿ ಆಗಸವ ತೋರಿ ಕರೆವ
ಹೋದರೆ ಮಾಯವಾಗಿಬಿಡುವ
ನೀಲಮೇಘಶಾಮನೆಂದುಕೊಂಡೆ
ಅದಕ್ಕೇ ಭ್ರಮೆಗಳಲೇ ತೋರಿ ಪ್ರೀತಿ
ಮತ್ತೂ ತೂರಿಯೂ ಬಿಟ್ಟ 
ಪ್ರೀತಿಯಿದೆ ನನಗೆ ನನ್ನ ಮೇಲೆ
ಹಾಗಾಗಿ ನನ್ನ ಭ್ರಮೆಯಾದ ನಿನ್ನ ಮೇಲೂ....


***


ಬೇಸರಗಳೆಲ್ಲಾ ಒಟ್ಟೊಟ್ಟಿಗೆ ಬಂದೆರಗಿದರೆ
ಒಳಿತೇ ಆಯ್ತು;
ಒಮ್ಮೆಲೆ ಕಣ್ಣೀರೊಳ ತೊಯ್ಸಿ ಕಳಿಸಿದರಾಯ್ತು... 



***


ಯಾವ ನೋವಿಗೆ ನೊಂದು 
ವಿಮುಖಳಾಗ ಬಯಸಿದೆನೋ
ಅವುಗಳಿಗೆ ಮತ್ತೆ ಮುಖ ಮಾಡಿ 
ಎದುರಿಸಿ ನಡೆವಾಗ ನೋವೇ ಇಲ್ಲ
ಸಂತೋಷವ ಎಲ್ಲಿ ಕಳೆದೆನೋ 
ಮನಸ್ಸು ಎಲ್ಲಿ ಮುದುಡಿತೋ
ಅಲ್ಲೇ ನಿಲ್ಲಬೇಕು 
ನೋವ ಸವಿದು 
ನೋವ ಗೆಲ್ಲಬೇಕು
ಇದೇ ನನ್ನ ಉತ್ತರ 
ಬದುಕಿನೆದುರು 
ಕೆಟ್ಟ ಧೈರ್ಯ ಮೆರೆದು....


***


ಬಹಳಷ್ಟು ಬಾರಿ ಮರೆತಿದ್ದೆ 
ಮರೆಯುವುದನ್ನು
ಬಹಳಷ್ಟು ಬಾರಿ ಮರೆತಿದ್ದೆ 
ನೆನೆಯುವುದನ್ನು
ಮರೆವು ಮರೆತಾಗಲು 
ಕಳೆದಿದ್ದೆ,
ನೆನಪು ಮರೆತಾಗಲೂ 
ಕಳೆದಿದ್ದೆ,
ನನ್ನೊಳ ಹೊಳಪೊಂದನು 
ಕೂಪದೊಳ ಕೋಪವಾಗಿಸಿ
ಮೃದು ಮನಸನು,
ನವಿರು ಕನಸನು,
ಅದಕ್ಕಾಗಿಯೇ ನೋಡೀಗ 
ನೀ ನೇಮಕಗೊಂಡಿರುವೆ
ನನಗೆ ನನ್ನನು ನೆನಪಿಸಲು 
ತೋರಿಸಿ ನಿನ್ನೆದೆಯೊಳಗೆ


23/02/2014

***


ನೀನಿಟ್ಟ ಹೆಸರಲಿ 
ಮತ್ತೊಮ್ಮೆ ಕರೆಯುವೆಯಾ
ಕರೆವ ಮುನ್ನ 
ದೂರಾಗು ನಿನ್ನೀ ಹೊಯ್ದಾಟಗಳಿಂದ
ಮತ್ತೆ ಮತ್ತೆ ತೇಲಿಸಿ 
ಮುಳುಗಿಸದಿರು ಪ್ರೀತಿ ಸೆಲೆಗಳಲಿ
ಬೆಚ್ಚಿ ಬೀಳಿಸಿದ್ದು ಸಾಕಿನ್ನು; 
ಒಮ್ಮೆಲೇ ನಿನ್ನ ಸಾನಿಧ್ಯ, 
ಒಮ್ಮೆಲೇ ವಿರಹದ ಕಹಿ ಬಾಂಧವ್ಯ,
ಪರೀಕ್ಷೆಯೇ ನನಗಿದು?
ಕನಸ ಹೊಸಕೋ ಪ್ರಯತ್ನದೊಳು
ತತ್ತರಿಸಿರುವೆ ನಗುತ್ತಲೇ......


***


ಹಾಗೇ ಸುಮ್ಮನೆ....... 


ಪ್ರೀತಿ ಎಂದರಷ್ಟೇ ಪ್ರಾರಂಭ
ಅಂತ್ಯ ಕಾಣದ್ದು ನನ್ನಂತೆ
ನಾನಿರೊವರೆಗೂ;
ನಂತರವೂ ನೀನಿರೋವರೆಗೂ
ಪ್ರೀತಿ ನಮ್ಮೊಳ ಉಸಿರು
ಬೀಸಿ ಬೀಳಿಸೋ ನೋವುಗಳ ಶಿಕಾರಿ
ನಾವಿಬ್ಬರೇ ಅದರ ರೂವಾರಿ!


22/02/2014
***


ಈ ಸುನಾಮಿಯಂತಹ ಮನವು
ನಿಲ್ದಾಣವ ಕಂಡದ್ದು
ಬಹುಶಃ 
ನಿನ್ನೊಲವಲಿ ಮಾತ್ರ....

ಮತ್ತೆ ಮತ್ತೆ ಮುದಗೊಂಡದ್ದು
ತಿಳಿಯದೇ ತಿಳಿಗೊಳಿಸೋ
ನಿನ್ನ ಪ್ರೀತಿಯ ನೇವರಿಕೆಯ
ಕನವರಿಕೆಗಳಲಿ ಮಾತ್ರ.... 


21/02/2014

ಕವನ


ಅತ್ತರೆ ಜಗದೆದುರು 
ಕರುಣೆಯ ಹಿಂದಿನ ಮೋಹದ ಬೆಂಕಿ
ನಕ್ಕರೆ ಮರೆತು, 
ಜರಿವ ಜಾಯಮಾನದ ಬತ್ತಳಿಕೆಗಳು
ಹೇಗಿರಬೇಕೆಂದು ಇನ್ನೂ ಕಲಿಯಬೇಕಿದೆ 
ನಿಮ್ಮೆದುರು
ಕೋಪ ತಾಪವೂ 
ಕೆಲ ಬಾರಿಯ ಅಸ್ತ್ರಗಳು 
ಸಂತೆಯ ಜಂಗುಲಿಯ ಚದುರಿಸಲು
ಮಾಡುವುದೆಂತು 
ಸೋತರೂ ಸೋಲದ ಬಿಂಕದವಳು
ಈ ಹೆಣ್ಣು;
ರುದ್ರ ನಾಟಕದ ನಾಯಕಿಯಂತೆ 
ಸದಾ ಮೆರೆಯುತ್ತಿರುವಳು...


21/02/2014




ಹೃದಯ ತುಂಬಾ ಪ್ರೀತಿ ಕೊಟ್ಟ 
ಹರಿಸದಂತೆ ತಡೆಯನಿಟ್ಟ
ಕಾಡುವ ದೇವನ ಕಾಣಲೊಟ್ಟು
ನಾ ಹತ್ತಲಿಲ್ಲ ಗುಡ್ಡ ಬೆಟ್ಟ


21/02/2014

''ನನ್ನ ಛಾಯೆ''

ಅವಳು ನನ್ನ ಛಾಯೆಯೇ ಆಗಿದ್ದ ಜೀವದ ಗೆಳತಿ
ಅಸೂಯೆ ಮೂಡಿಸುವಂತಿದ್ದ ಆ ನಮ್ಮ ಸ್ನೇಹ
ಅತಿಯಾದ ನನ್ನ ಪ್ರೀತಿ ಅಮೃತವ ಕೆಡಿಸಿತೋ 
ವಿಷವಾದ ಘಳಿಗೆ ಗೊತ್ತಿಲ್ಲ ಎನಗೆ,
ಜೀವ ಬೆವೆತ ರೂಪವಿನ್ನೂ ಕಣ್ಕಟ್ಟಿದೆ; 
ಎರಡಷ್ಟೇ ಕಹಿ ನುಡಿ ಸಾಕಾಯ್ತು, ಒಂದಷ್ಟೇ ಅವಿಶ್ವಾಸ

ಬದುಕೊಳು ನಿಜ ಪ್ರೇಮಿಗೂ ನಾನಷ್ಟು ಪ್ರೀತಿಯನ್ನೀಯ್ವೆನೋ ಕಾಣೆ
ಅವಳೆನಗೆ ಅಚ್ಚು ಮೆಚ್ಚು ನನಗೋ ಅವಳೆಂದರೆ ಬಲು ಹುಚ್ಚು
ಎಲ್ಲಿಂದೆಲ್ಲಿಗೋ ಹಾರುವ ಹಕ್ಕಿಯಾಗುತಲಿದ್ದೆ ಅವಳ ಕಾಣಲು
ಇಂದು ನೆನಪಾಗಿದ್ದಳು ಸಿಟಿ ಬಸ್ಸಿನ ಪ್ರಯಾಣದೊಳು 
ನಮ್ಮಂತ ಜೋಡಿ ಸ್ನೇಹಿತೆಯರ ಕಂಡು
ಜೊತೆ ಕಳೆದ, ಜೊತೆ ಹರಟಿದ ಹೊತ್ತು
ಕಾಡಿದ್ದು ನಿಜವೇ ಆ ನನ್ನ ಗೆಳತಿಯ ನೆನಪು....

ಚಿತ್ರ ಕೃಪೆ; ಅಂತರ್ಜಾಲ



20/02/2014

Wednesday, 26 February 2014






ನೊಂದಷ್ಟೂ ನಗುವ ಪರಿಗೆ
ಹುಚ್ಚೆನ್ನಲೋ ಭ್ರಾಂತಿ ಭ್ರಮೆಯೋ
ವಿಶ್ವಾಸಕೂ ಮೀರಿದ ಅಹಂ ಎನ್ನಲೇ
ಬದಕಲು ಬೇಕಿಂತಾ ಪರದೆಗಳೆನ್ನಲೇ
ನಗೆಯುಕ್ಕಿ ಬರುವುದು ಬಿಂಬಗಳ ಕಂಡು...


***


ಕಣ್ಣೀರ ಹನಿಗೊಂದು
ಒಲವ ಕೈ ಕಲ್ಪಿಸಿದ್ದೆ
ಹನಿಗೂಡಿಸಿ 
ಅದೃಶ್ಯವಾಯ್ತೆನೋ
ಅನಾಥವಾಗಿವೆ
ನೆಲಕ್ಕೆ ಬಿದ್ದ ಹನಿಗಳು
ಬಿಕ್ಕುತಾ 
ನನ್ನನೇ ಕುಕ್ಕುತಾ....


***


ನಾ ಹುಡುಕುತಲಿರುವೆ ನಿನ್ನನು,
ಸಿಗದೇ ಸತಾಯಿಸುತ್ತಲಿರುವೆ
ಅನುದಿನ;
ನನಗೂ ಗೊತ್ತುಂಟು
ನೀ ಹುಡುಕುವಂತೆ ಕಳೆದುಹೋಗಲು....
ಸಿಗುವೆಯೋ? ಹುಡುಕುವೆಯೋ?

20/02/2014