Saturday, 23 November 2013

ಮನದ ಮಾತು :-)

ಮಹಿಳೆಯೊಬ್ಬಳು ರಸ್ತೆಯಲ್ಲಿ ತುಸು ಹೆಚ್ಚಿನ ವೇಗದಲ್ಲಿ ಕಾರನ್ನೋಡಿಸಿಕೊಂಡು ಹೋಗುವಾಗ ಪಕ್ಕದಲ್ಲಿಯೇ ನಡೆದು ಹೋಗುತ್ತಿರುವ ನನ್ನೊಳಗೂ ಒಂದು ಪುಳಕ ಅಭಿಮಾನದ ದೃಷ್ಟಿ. ಓಹ್! ಎಂದು ಖುಷಿ. ಹಾಗೇಯೇ ಒಬ್ಬ ದಿಟ್ಟ ಮಹಿಳೆಯ ಭಾಷಣ, ಆತ್ಮವಿಶ್ವಾಸದ ಮಾತುಗಳಿಗೆ ನಾನೆಂದೂ ಅಭಿಮಾನಿ. ಯಾಕೆ ಹೀಗೆ ಎಂದು ನಾ ಯೋಚಿಸಿದಾಗಲೆಲ್ಲಾ ನನಗನಿಸಿದ್ದು, ಆ ಹೆಣ್ಣಿನ ಗೆಲುವಲ್ಲಿ ನಾನೋಬ್ಬ ಹೆಣ್ಣಾಗಿ ಆ ಕ್ಷಣಕ್ಕೆ ನನ್ನ ಗೆಲುವಾಗಿ ಅನಿಸುವ ನನ್ನ ಭಾವ. ಬಹು ಕಾಲ ನೆನಪಲ್ಲಿ ಉಳಿದು ರಂಜಿಸುವ ಭಾವ. ಮುಂದೆ ನಮ್ಮ ದಾರಿಗೂ ನೆರವಾಗುವ ಒಂದು ಆತ್ಮವಿಶ್ವಾಸದ ಅನುಭವ. ಹೌದು ಹೆಣ್ಣು ತನಗರಿವಿಲ್ಲದೆ ತನ್ನ ನಡೆಯಿಂದ ಮತ್ತೊಬ್ಬಳನ್ನು ಪ್ರಭಾವಿಸಿ ಪ್ರೇರಣೆ ನೀಡಿರುತ್ತಾಳೆ. ಮೀನಿನ ನಡೆ, ಹೆಣ್ಣಿನ ಮನಸ್ಸು ತಿಳಿಯಲಾಗದು ಎಂಬ ಮಾತಿದೆ. ಆದರೆ ನಾ ಹೇಳುವುದು ಹೆಣ್ಣಿನ ಮನಸ್ಸು ಎಲ್ಲವನ್ನೂ ಕ್ರೂಡೀಕರಿಸುತ್ತದೆ ಹಾಗೆಯೇ ಎಲ್ಲವನ್ನೂ ಹೊಮ್ಮಿಬಿಡುತ್ತದೆ. ಹೊಮ್ಮಿದಂತಹ ತುಣುಕುಗಳು ಮತ್ತೊಬ್ಬರಲ್ಲಿನ ಪ್ರೇರಣೆಯ ಬೀಜಗಳಾಗಿಬಿಡುತ್ತದೆ. ೩ ವರ್ಷಗಳ ಹಿಂದೆ; ಹೀಗೆ ಒಂದು ಸಂದರ್ಭದಲ್ಲಿ ಹತಾಶೆಯಲ್ಲಿದ್ದಾಗ ಕಣ್ಣೀರಿನ ತಡೆಗೆ ಕಾರಣವಾದದ್ದು ಅಕ್ಕನ ಗೆಳತಿಯ ಒಂದೇ ಒಂದು ಮಾತು, "ಸೆಲ್ಫ್ ಪಿಟಿ ಬಿಟ್ಬಿಡು ದಿವ್ಯ". ಕೇಳಿದೊಡನೆ ಅದೇನಾಯ್ತೋ ಗೊತ್ತಿಲ್ಲ ಒಟ್ಟಿನಲ್ಲಿ ವಾಸ್ತವಕ್ಕೆ ಬಂದಿದ್ದೆ. ನೋವ ನೆನೆದು ರೋದಿಸುವುದು ಬಹುಶಃ ಅಂದು ತೀರ ಅಹಿತವಾಗಿ ಕಂಡದ್ದು ನನ್ನಲೊಂದು ಬೆಳವಣಿಗೆಯ ಪ್ರಾರಂಭವಾಗಿದ್ದಿರಬಹುದು. ಅಂದಿನಿಂದ ಅತ್ತಿತ್ತು ಕಡಿಮೆಯೇ :-) .ಅಂತಹದೊಂದು ಪ್ರೇರಣೆಯು ಅವರಿಗೂ ತಿಳಿಯದ ಮತ್ತೊಬ್ಬರೊಳ ಒಂದು ಸಾಧನೆ. ನೊಂದ ಮನಕ್ಕೆ ಬೇಕು ಪ್ರೀತಿಯ ಸಾಂತ್ವಾನ ನಿಜ, ಹಾಗೇಯೇ ಬೇಕು ಗಟ್ಟಿ ನಿಲ್ಲಿವಂತೆ ಪ್ರೇರೇಪಿಸುವ ಒಂದು ದಿಟ್ಟ ಮಾತು. ಇದು ಎಲ್ಲರಿಗೂ ಸಾಧ್ಯವಿಲ್ಲವೇನೋ ನೊಂದು ಬೆಂದು ಮತ್ತೆ ನಿಂತವರಲ್ಲಿ ಮಾತ್ರ ಸಾಧ್ಯವೇನೋ...

"ದಿಟ್ಟ ಹೆಣ್ಣುಗಳ ದಟ್ಟ ಭರವಸೆ
ಸೂರ್ಯ ಕಿರಣಗಳಂತೆ

ಸುಟ್ಟರೂ ಬೇಕು ಚೈತನ್ಯಕೆ" 

23/11/2013

No comments:

Post a Comment