Saturday, 2 November 2013

ದೀಪ ನಮನ

ದೀಪಾವಳಿಯ ದಿನದಂದು ದೀಪವ ಹಚ್ಚಿಟ್ಟೆ ನಾನು,
ಹಳೆಯ ದಾರಿಯ ಮರೆತು ಹೊಸ ದಾರಿಯ ಹುಡುಕುತ,
ಕೈಯೊಳು ದೀಪ ನನ್ನ ನೋಡುತಾ, ಬೀಸುವ ಗಾಳಿಯ ನಾ ನೋಡುತಾ,
ಹೊರಟೆವು ನಾನು ನನ್ನ ದೀಪ, ಯಾನಕ್ಕೊಂದು ಅರ್ಥ ಹುಡುಕುತ.

ಹಿಡಿದ ದಾರಿಯುದ್ದಕೂ ಹೋಮ ಕುಂಡಗಳ ಸಾಲು,
ದೀಪ ಕಾಣಿಸಿ ತಪಸ್ವಿಯಾದೆ ಸಣ್ಣ ಅಪೇಕ್ಷೆಗಳಿಗೂ,
ಸಾಧಿಸುವ ಛಲವಲ್ಲ ನನ್ನದು, ಬದುಕುವ ಹಟವಷ್ಟೇ,
ದೀಪ ನಂದಿಸದ ಗುರಿಯಷ್ಟೇ. ನಿಂತ ನೀರಾಗದ ತವಕವಷ್ಟೇ

ಅಂದು ಕಾಣಿಸಿದ ನನ್ನೊಳ ದೀಪ ಇಂದಿಗೂ ಉರಿಯುತಿದೆ ದಿಟವಾಗಿ,
ಆರುವ ಮುನ್ನ ಉರಿಯುವಷ್ಟು ಹೊತ್ತು ಬೀರಬೇಕಿದೆ ಬೆಳಕನಷ್ಟೇ
ಒಡಲ ನೋವ ತೈಲವುರಿದು ಮನದ ಸ್ಥೈರ್ಯ ಬತ್ತಿ ಹೊಸೆದು
ನಾನೊಂದು ದೀಪವಾಗಿ ಬೆಳಕ ಪಡೆವೆ ಉರಿದುರಿದು ಸಂತಸದಿ.

ದಿನ ದಿನವೂ ದೀಪಾವಳಿ, ಆಕಾಂಕ್ಷೆಗಳ ದೀಪ ಸಾಲು,
ನನ್ನೊಳಗೊಂದು ದೀಪದ ಪ್ರತಿಬಿಂಬ, ಹೊರಗಷ್ಟು ಮತ್ತೂ ಬಿಂಬಗಳ ಸಾಲು
ಶ್ರಮದ ಫಲದಂತೆ ಬತ್ತಿ ನೇರಗೈವ ಕೈಗಳಿಗೆ
ಇಗೋ, ಈ ಮನದ ದೀಪದ ಸಾವಿರ ಸಾವಿರ ದೀಪ ನಮನಗಳು.

ದಿವ್ಯ ಆಂಜನಪ್ಪ
೦೨/೧೧/೨೦೧೩



No comments:

Post a Comment