ಆಗಾಗ ತನ್ನ ಮನೆಗೆ ಬರುವ
ಎರಡೂ ಕಡೆ ಅಜ್ಜಿಯಂದಿರಿಗೆ
ಅ ಆ ಇ ಈ ಹೇಳಿಕೊಡುವ
ಒಂದನೇ ತರಗತಿಯ ಮಗುವು
ಅಜ್ಜನಲ್ಲಿ ಪಾಠ ಹೇಳಿಸಿಕೋ ಎಂಬ
ಅಮ್ಮನ ಮಾತಿಗೆ,
"ಹೋಗಮ್ಮೋ ತಾತಂಗೆ ಓದಕೇ ಬರಲ್ಲ"
ಅಂತೋಡಿದ್ದು ತಾ ನೋಡಿದ ಅಜ್ಜಿಯರ ನೆನೆದು,
ಆದರೆ ಕತೆ ಹಾಗಾಗದೇ
ಅಜ್ಜಂದಿರು ಶಿಕ್ಷಕರು ಎಂದು ತಾಯಿ ವಿವರಿಸಿದಾಗ
ಹೆದರಿ ಓಡಿದ್ದು ಇನ್ನೂ ನೆನಪು!
ತಾತನೆಲ್ಲಿ ಶಿಕ್ಷಕನಾಗಿ ಗದರಿಯಾನೆಂದು
***
ಜಗುಲಿಯ ಮೇಲೆ ಕುಳಿತು
ಆಲದ ಮರವನು ನೋಡುತ
ಹಲಸನು ಮೇಯುತ
ತೆಂಗಿನ ಮರದ ಹಣ್ಣು ರುಚಿಯೋ ರುಚಿ
ಎಂದದ್ದೂ ಮಗುವೇ ಆದರೂ ಪೇಟೆಯದ್ದು!
***
ಸುಮ್ಮನೆ ನಾ ಹೇಳಿದ ಮಾತಿಗೂ
ಮಹತ್ತರ ತಿರುವು ಕೊಡುವುದು
ಅವನದೊಂದು ರೀತಿಯ ಪ್ರೀತಿ!
***
ಬಂಧಿಸಲಾರೆವು ನಮ್ಮನವನ್ನು
ನಾವೆಣಿಸಿದಂತೆ;
ಇನ್ನೂ ಇತರರ ಬಗ್ಗೆ?!
ಬಂಧಿಸುವ ಯೋಚನೆಯೂ ಅಪರಾಧವೇ ಸರಿ
ಶಿಕ್ಷೆ ತಮಗೆ ತಾವೇ ವಿಧಿಸುವ ಒಂಟಿತನ
***
ಮೌನ ಪ್ರೀತಿಯ ಮೂರ್ತಿಯಾದೆ ನಾ,
ಜೀವವಿಲ್ಲ; ಕದಲಲಾರೆ
ಬಳಿ ಬಂದು ನೀ
ಉಸುರದಿದ್ದರೆ ನನ್ಹೆಸರ
ಉಳಿವೆ ನಾನಿದ್ದಂತೆ,
ನಿನ್ನಣತಿಯಂತೆ , ನಿನ್ನ ಮನದಂತೆ
ಕಾಡಲಾರೆ ಬೇಡಿ ನಿನ್ನನು
ನಿನ್ನ ಸಂತಸಕೆ ನಾ ಅಡ್ಡಿಯಾಗಿ
ನೀನೆಲ್ಲಿದ್ದರೂ ಹೇಗಿದ್ದರೂ
ನೀ ನನ್ನ ಮರೆತ್ತಿದ್ದರೂ
ನಾ ನಿನ್ನ ಪ್ರೇಮಿ
ನನಗಷ್ಟೇ ನೆನಪು
17/11/2013
No comments:
Post a Comment