ಎಲ್ಲಾ ಅಳಿದ ಮೇಲೂ
ಮತ್ತೆ ಉಳಿಯುವುದೇ
ಪ್ರಾರಂಭ!
***
ಕಾಡು ಮಲ್ಲೆಗೆ ಸಂತಸವಂತೆ
ನರನ ಮೋಹ ಸೋಕದೆ
ಸ್ವಚ್ಛಂದವಾಗಿ ಬಿರಿಯುವುದಕೆ
***
ವಿರಾಮದ ಸಮಯಕೆ
ಪೂರ್ಣ ವಿರಾಮ ನಿನ್ನ ನೆನಪು
***
ಬದುಕ ಬಂಡಿ ವಾಲುವುದು
ಆಗೊಮ್ಮೆ ಈಗೊಮ್ಮೆ
ಪಯಣವಿದು ನಿರಂತರ
ಹೆಜ್ಜೆಗಳಿವು ದಿಟ್ಟತನ
ಶಕ್ತಿಯೊಂದೇ ಮನದ ದಿಟ!!
***
ಕಲ್ಪನೆಗೆ
ಕೊನೆಯಿಲ್ಲ
ನನ್ನೊಳು
ನಾ
ಬದುಕಿರುವ
ತನಕ
***
ನೀ ಕೊಟ್ಟ ಹೂ
ಇಂದಿಗೂ ನನ್ನ ಬಳಿಯಿದೆ
ಆದರೆ ಅದಕೆ ಜೀವವಿಲ್ಲ
ನಿನ್ನ ಚಿತ್ರವಿದೆ
***
ಕನಸಿನಿಂದಿಳಿದ ಖುಷಿಯು
ಮನಸಿನಲ್ಲುಳಿಯದೇ ಹೋಯಿತು
ಕಾಗದದಲ್ಲಿಳಿದು ಮರೆವ ಮರೆಸಿತು
***
ಎಲ್ಲರೊಳಿರುವನೊಬ್ಬ ಯಯಾತಿ
ಸಮಯದಿ ಹೆಡೆಯೆತ್ತುವ ಅತಿರಥ,
ಆದರೆ ಆಸರೆಗೆ ಶರ್ಮಿಷ್ಠೆಯಿಲ್ಲ
ತ್ಯಾಗಕ್ಕೆ ಚಿತ್ರಲೇಖೆಯಿಲ್ಲ,
ಎಲ್ಲರೊಳಿರುವನೊಬ್ಬ ಯಯಾತಿ
ಹೆಂಗಳೆಯರಲ್ಲಿ ಚಿತ್ರಳನ್ನು ಕಾಣುತ್ತ
ದೇಹ ಸೋಲಲು ಶರ್ಮಿಷ್ಠೆಯನ್ನು ಹುಡುಕುತ.
***
ಬಂದ ಮೇಲೆ
ಹೋಗುವ ಮುನ್ನ
ವೈರಾಗ್ಯದ ಭಯವೇ
ಹೆಚ್ಚು ಕಾಡುವುದು
ವಿಲಾಸಕ್ಕಿಂತ!
***
ತುಂಬಾ ಸಲೀಸಾಗಿ ಹರಟುವ ಮನವು
ನಿರ್ಭಾವುಕವಾದಾಗ
ಕಾಣುವುದು ಜಟಿಲವಾಗಿ
ಮೂಡಿಸುವುದು ಗುಮಾನಿ
ಒಮ್ಮೊಮ್ಮೆ ನಾನೂ ಹಾಗೇ!
ನಂಬುವುದಿಲ್ಲ ಆಗ ಸುತ್ತಲಿನವರು
***
ಗೆಲುವು ಸತ್ಯ
ಎನ್ನುವುದು ಸುಳ್ಳು
ಸೋಲು ಸುಳ್ಳು
ಎನ್ನುವುದು ಸತ್ಯ
ಸತ್ಯ ನಿತ್ಯ; ಸುಳ್ಳು ಪಥ್ಯ
ಹೌದು ನಾ ಸೋತಿರುವೆ!
31/10/2013
No comments:
Post a Comment