ಗಿರೀಶ ಕಾರ್ನಾಡರ ಯಯಾತಿ ನಾಟಕದಲ್ಲಿ ಪಾತ್ರಗಳ ಭಾವಗಳೇರಿಳಿತಗಳು
'ಯಯಾತಿ'- ನಾಲ್ಕಂಕದ ಸಣ್ಣ ನಾಟಕವಾಗಿ ಕಾಣುವ ನಮಗೆ ಪಾತ್ರಗಳಾರರಲ್ಲಿ ಮನುಷ್ಯನ ವಿರಾಟ ದರ್ಶನವನ್ನು ನೀಡುತ್ತದೆ. ನಾಟಕದ ಪ್ರಾರಂಭದಲ್ಲಿ ನಟಿಯೊಡನೆ ಸೂತ್ರಧಾರ ಬರುತ್ತಾರೆ. ಪ್ರೇಕ್ಷಕರನ್ನುದ್ದೇಶಿಸಿ ಸೂತ್ರಧಾರ ನಾಟಕದ ಕುರಿತು ಒಂದು ಕುತೂಹಲಭರಿತ ಮುನ್ನುಡಿಯನ್ನು ನೀಡುತ್ತಾನೆ. ಅಂತ್ಯದಲ್ಲಿ ಅವನಾಡುವ ಮಾತು ಪ್ರಸ್ತುತ ಮತ್ತು ಸರ್ವಕಾಲಿಕ ಸತ್ಯವಾಗಿ ನಿಲ್ಲುತ್ತದೆ. " ಒಮ್ಮೊಮ್ಮೆ ದಾರಿಗುಂಟ ಹೋಗುವಾಗ ನಮ್ಮ ದಾರಿ ಒಡೆದು ಎರಡಾಗುವುದಿಲ್ಲವೇ? ನಾವು ಒಂದನ್ನು ಮಾತ್ರ ಆರಿಸಬಹುದು. ಅದರೊಡನೆ ತತ್ಪೂರ್ತ ನಮ್ಮ ಗುರಿಯೂ ಗೊತ್ತಾಗುತ್ತದೆ. ಆದರೆ ನಮ್ಮ ಹಿಂದೆ ಕಿವಿಗಳ ಸನಿಹದಲ್ಲಿ, ಕೇಳದ ದನಿಯೊಂದು ಪ್ರಶ್ನಿಸಿರುತ್ತದೆ; ಆ ಇನ್ನೊಂದು ದಾರಿಯಲ್ಲಿ ಹೋಗಿದ್ದರೇನಾಗುತ್ತಿತ್ತು? ಏನೇನೋ ಅಗಬಹುದಿತ್ತು! ಆದರೆ…. ಆ ದಾರಿಯ ಗುಟ್ಟು ಅದರೊಡನೆ ಗುಟ್ಟಾಗಿಯೇ ಉಳಿಯಬೇಕು. ನಾವು ನಮ್ಮ ನೇಗಿಲನ್ನು ಹೊತ್ತು ಮುನ್ನಡೆಯಬೇಕು. ನಾವು ಕಟ್ಟಿದ ಅಜ್ಜಿಯ ಕತೆಯನ್ನು ನಾವೇ ಬಾಳಬೇಕು. ಇದೇ ಜೀವನದ ದುರಂತ ಪ್ರಯೋಗ. ಇದೇ ಆಶಾವಾದದ ಮೂಲ. ಇದೇ ನಮ್ಮ ನಾಟಕ". ಸೊಗಸಾದ ನಿರೂಪಣೆಯು ನಮ್ಮ ಮನ ಸೆಳೆಯುತ್ತದೆ.
ಈ ಮೊದಲು ಯಯಾತಿ ನಾಟಕವನ್ನು ನನ್ನ ಪಿ.ಯು.ಸಿಯಲ್ಲಿ ನಂತರ ಟಿ.ಸಿ.ಹೆಚ್ ನಲ್ಲಿ ಮುಂದೆ ಬಿ.ಎಸ್.ಸಿ ಮೊದಲ ವರ್ಷದಲ್ಲೂ ಪಠ್ಯಪುಸ್ತಕವನ್ನಾಗಿ ಓದೆದ್ದೆ. ಸತತ ಮೂರು ವರ್ಷಗಳು ಓದಿದ ಈ ನಾಟಕವು ಏನೋ ನಮ್ಮ ಆತ್ಮೀಯ ಬಂಧುವೇನೋ ಎಂಬಂತೆ ಪ್ರೀತಿಯಿಂದ ಬಹಳ ಖುಷಿಯಿಂದ ಲೀಲಾಜಾಲವಾಗಿ ಪರೀಕ್ಷೆಗಳಲ್ಲಿ ಪುಟಗಟ್ಟಲೆ ಬರೆಯುತ್ತಿದ್ದೆವು. ನೆನೆಯಲು ಖುಷಿಯೆನಿಸುತ್ತದೆ. ಹಲವು ವರ್ಷಗಳ ನಂತರ ಈಗ ಮತ್ತೊಮ್ಮೆ ಓದುವ ಮನಸ್ಸಾಗಿತ್ತು. ಕೈಯಲ್ಲೀಗ 'ಯಯಾತಿ', ಅದೂ ಕರ್ನಾಟಕ ವಿಶ್ವವಿಧ್ಯಾಲದಯ ಬಿ.ಎಸ್.ಸಿ ಭಾಗ-೨ರ ಪಠ್ಯಪುಸ್ತಕ. ವಿದ್ಯಾರ್ಥಿಯಾದಂತಹ ಅನುಭವ. ಪ್ರತೀ ಬಾರಿಯ ಓದಿಗೂ ಹೊಸ ಹೊಸ ಅರ್ಥಗಳನ್ನು ನೀಡಿ ವಯೋಮಾನಕ್ಕನುಗುಣವಾಗಿ ಹೊಸ ಪರಿಕಲ್ಪನೆಗಳನ್ನು ನೀಡುತ್ತಿದೆ ಎನ್ನಬಹುದು. ಸಾಹಿತ್ಯವೆಂದರೆ ಹಾಗೇಯೇ ಅಲ್ಲವೇ?
ಈ ನಾಟಕದಲ್ಲಿ ಮುಖ್ಯ ಪಾತ್ರದಲ್ಲಿ ಕಾಣುವ 'ಯಯಾತಿ' ಒಬ್ಬ ಮಹಾತ್ವಾಕಾಂಕ್ಷಿ, ಪರಾಕ್ರಮಿ, ಹಾಗೇಯೇ ಕಾಮಾಂಧನಾಗಿಯೂ ಕಾಣಸಿಗುತ್ತಾನೆ. ಅವನೇ ಹೇಳುವಂತೆ, "ಅನೇಕ ರಾಣಿಯರನ್ನು ತಾನು ಕಂಡಿದ್ದು, ಅವರನ್ನು ನಾನೇ ನನ್ನ ಮಾತಿನಿಂದ, ಆಕಾಂಕ್ಷೆಗಳಿಂದ ಸೆಳೆದಿದ್ದೂ ತನ್ನನ್ನ ಶರ್ಮಿಷ್ಠೆ, ಅಳುವಿನಿಂದ ಗೆದ್ದಳು" ಎಂದು ಹೇಳುತ್ತಾನೆ. ಕೋಪಗೊಂಡ ದೇವಯಾನಿ ರಾಜ್ಯದಿಂದ ಹೊರ ನಡೆದ ನಂತರವೂ ಯಯಾತಿ ಶರ್ಮಿಷ್ಠೆಯನ್ನು ಹಿಂದುರಿಗಿ ತನ್ನ ಮನೆಗೆ ಹೋಗಗೊಡುವುದಿಲ್ಲ. ದೇವಯಾನಿಯ ನಂತರ ಶರ್ಮಿಷ್ಠೆಯನ್ನು ಇನ್ನೂಷ್ಟು ಹೆಚ್ಚೇ ಹಚ್ಚಿಕೊಳ್ಳುತ್ತಾನೆ. ಇಲ್ಲಿ ಗಮನಕ್ಕೆ ಬಂದ ಅಂಶವೆಂದರೆ, ಪಾತ್ರಗಳಾವುವೂ ಮೇಲು ಕೀಳೆಂಬ ಸ್ತರಗಳಲ್ಲಿ ನಿಲ್ಲದೇ ಒಂದೇ ಸ್ತರ ಆಗಿರುವುದು. ಅಂದರೆ ತಮ್ಮ ಆಕಾಂಕ್ಷೆಗಾಗಿ ಪರಮಸ್ವಾರ್ತಿಗಳಾಗುವುದು, ತ್ಯಾಗದಲ್ಲಿ ಒಬ್ಬರಿಗಿಂತ ಒಬ್ಬರು ಮೀರಿ ನಿಲ್ಲುವಂತಹುದು. ಯಯಾತಿ ತನ್ನ ಮಹಾತ್ವಾಕಾಂಕ್ಷೆಗಾಗಿ ತನ್ನ ಮಗನ ತಾರುಣ್ಯವನ್ನೇ ಪಡೆದನು. ಚಿತ್ರಲೇಖೆಯ ಮರಣದಿಂದ ಬಾಧಿತನಾಗಿ ಅದೇ ತಾರುಣ್ಯವನ್ನು ಮಗನಿಗೆ ಹಿಂದುರಿಗಿಸಿ ವಾನಪ್ರಸ್ತಾಶ್ರಮಕ್ಕೆ ಹೊರಡುವನು.
ಚಿತ್ರಲೇಖೆ ತನ್ನ ಮುದುಕ ಗಂಡ ಪುರುವನ್ನು ಸ್ವೀಕರಿಸಲಾಗದೆ ಅವನ ತಾರಣ್ಯವನ್ನು ಪಡೆದ ಮಾವ ಯಯಾತಿಯನ್ನು ಮಾತಿನಿಂದ ಗೆದ್ದು, ಅವನ ಮಾತನ್ನೇ ಅವನಿಗಾಡಿ 'ಹಿಂದೆಂದೂ ನಡೆಯದದ್ದು ಈಗ ನಡೆಯಲಿ' ಎಂಬ ಯಯಾತಿಯ ಮಾತನ್ನೇ ತಿರುಗಬಾಣವಾಗಿಸಿ, ಹೀಗೆನ್ನುತ್ತಾಳೆ, " ಮದುವೆಗೆ ಮುನ್ನ ಪುರುವನ್ನು ನಾನು ಕಂಡಿರಲಿಲ್ಲ ತಿಳಿದಿರಲಿಲ್ಲ ಅವರ ಪರಿಚಯವಿರಲಿಲ್ಲ, ನಾನು ವರಿಸಿದ್ದು ಅವರ ತಾರುಣ್ಯವನ್ನು, ಚಂದ್ರವಂಶದ ಪುತ್ರರತ್ನವನ್ನು ತನ್ನ ಗರ್ಭದಲ್ಲಿ ಮೂಡಿಸಬಹುದಾದ ಅವರ ಪೌರುಷವನ್ನು; ಈಗ ಅವೆಲ್ಲವೂ ನಿಮ್ಮಲಿವೆ!" ಎಂದು ಹೇಳುತ್ತಾಳೆ. ಇಲ್ಲಿ ತನ್ನನ್ನು ತಾನು ಪೋಷಿಸುವಂತಹ ಪ್ರಯತ್ನವನ್ನು ಕಾಣಬಹುದು. ಮಾವನಿಂದ ನಿಂದನೆಗೊಳಗಾಗಿ ವ್ಯಭಿಚಾರಿ, ಇತ್ಯಾದಿಯಾಗಿ ದೂಷಿಸಲ್ಪಡುತ್ತಾಳೆ. ನಂತರ ತನಗೆ ನ್ಯಾಯ ಸಿಗದಿದ್ದ ಹಂತದಲ್ಲಿ ತಾನು ಪ್ರಾಣವನ್ನೇ ತ್ಯಾಗ ಮಾಡಿ ಪತಿಗೆ ಅವರಂತೆ ನಡೆಯಲು ಅನುವಾಗುವುದಾಗಿ ಹೇಳೀ ಅದರಂತೆ ಆವೇಶದಲ್ಲಿ ವಿಷ ಸೇವಿಸುತ್ತಾಳೆ. ತ್ಯಾಗ ಇಲ್ಲಿ ಆತ್ಮಾಹುತಿ, ಜೀವಿಸಲು ಹಂಬಲಿಸುತ್ತಾ ಸಾವನಪ್ಪುತ್ತಾಳೆ.
ದೇವಯಾನಿ; ತನ್ನನ್ನು ಹಾಳು ಬಾವಿಗೆ ದೂಡಿದಳೆಂಬ ಕಾರಣಕ್ಕಾಗಿ ತನ್ನ ಸ್ನೇಹಿತೆ ಶರ್ಮಿಷ್ಠೆಯನ್ನು ತನ್ನ ದಾಸಿಯನ್ನಾಗಿ ಕರೆತಂದು ತನ್ನಂತರಪುರದಲ್ಲಿರಿಸಿಕೊಳ್ಳುತ್ತಾಳೆ. ಮೇಲಾಗಿ ಶರ್ಮಿಷ್ಠೆ ರಾಕ್ಷಸ ಕುಲಕನ್ಯೆ; ದೇವಯಾನಿ ಸಾಮಾನ್ಯ ಬ್ರಾಹ್ಮಣನ ಮಗಳು. ರಾಜನ ಮಗಳಾಗಿ ಹುಟ್ಟಿ ಸಾಮಾನ್ಯ ಬ್ರಾಹ್ಮಣನ ಮಗಳಿಗೆ ದಾಸಿಯಾಗುವುದೆಂದರೇನು? ಅಲ್ಲಿಯೇ ಸಮಸ್ಯೇ ಕಾಡುವುದು. ಇಲ್ಲಿ ದೇವಯಾನಿಯ ದುರಾಹಂಕಾರ ತೇಲುವುದು. ಸ್ವೇಚ್ಚೆಯ ಪರಾಕಾಷ್ಠೆ!. ಆದರೆ ಅದೇ ಶರ್ಮಿಷ್ಠೆಯು ಆಡುವ ಚುಚ್ಚು ಮಾತುಗಳನ್ನು ಹಾಗೆಯೇ ಸಹಿಸುತ್ತಾಳೆ. ಸ್ವರ್ಣಲತೆ ಮತ್ತು ಶರ್ಮಿಷ್ಠೆ ಕಾದಾಡಿಕೊಂಡರೂ ಸ್ವರ್ಣಲತೆಯನ್ನು ರಮಿಸಿ ಇಲ್ಲವೇ ಗದರಿ ಶರ್ಮಿಷ್ಠೆಯನ್ನು ಸಹಿಸುವಂತೆ ಕೋರುತ್ತಾಳೆ. ಪಾತ್ರ ಒಂದೇ ಭಾವಗಳ ಏರಿಳಿತ. ಇದನ್ನು ಹೆಚ್ಚು-ಕಡಿಮೆಯಂತೆ ನಾವು ಎಲ್ಲಾ ಪಾತ್ರಗಳಲ್ಲೂ ಕಾಣುತ್ತೇವೆ.
ಸ್ವರ್ಣಲತೆ, ಪಾತ್ರದಲ್ಲಿ ಭಾವಗಳ ಏರಿಳಿಗಳು ತುಸು ಕಡಿಮೆಯೇ ಎನ್ನಬಹುದು. ದುಃಖಿತಳಾದ ಚಿತ್ರಲೇಖೆಗೆ ತುಸು ಸಾಂತ್ವಾನ ನೀಡಲು ತನ್ನ ಕತೆಯನ್ನು ಹೇಳಿ "ಬಾವಿಯಲ್ಲಿ ಬಿದ್ದವರಿಗೆ ಪಕ್ಕದ ಬಾವಿಯೊಂದರಿಂದ ಆರ್ತನಾದ ಕೇಳಿ ಬಂದರೆ ತನ್ನಂತೆಯೂ ಮತ್ತೊಬ್ಬರಿರುವರು, ಎನ್ನುವ ಭಾವ ಸ್ವಲ್ಪ ಸಮಾಧಾನ ತರಿಸಬಹುದು" ಎನ್ನುತ್ತಾಳೆ. ನಿಜವೆಸಿಸಿದರೂ, ಜೀವನದ ನೋವಿನ ಆಗರದಲ್ಲಿ ಸದಾ ಕಾಲ ಪಕ್ಕದ ಬಾವಿಯನ್ನೇ ಹುಡುಕಲು ಸಾಧ್ಯವಿಲ್ಲ, ಅವರವರ ಬಾವಿಗಳಿಂದ ಅವರವರೇ ಎದ್ದು ಬರಬೇಕು ಅಲ್ಲವೇ ಸ್ನೇಹಿತರೇ? ಚಿತ್ರಲೇಖೆಯ ಮರಣದಲ್ಲಿ ಈಕೆ ಮತಿಭ್ರಮಣೆಗೊಳಗಾಗುತ್ತಾಳೆ. ಗಂಡನು ಕಣ್ಮರೆಯಾದಾಗಲೂ ಧೃತಿಗೆಡವಳು ಅಂದೇ ಪರಿಚಿತಳಾದ ಚಿತ್ರಲೇಖೆಯ ಸಾವಿನಲ್ಲಿ ತನ್ನನ್ನು ತಾನು ಕಳೆದುಕೊಳ್ಳುತ್ತಾಳೆ. ಮೈನವಿರೇಳಿಸುವ ವೈಪರಿತ್ಯ.
ಈಕೆಯ ಕತೆಯಲ್ಲಿ ಬಾಲ್ಯದಲ್ಲಿ ತಂದೆ ಇವಳ ವಿದ್ಯಾಭ್ಯಾಸಕ್ಕಾಗಿ ಒಪ್ಪೊತ್ತಿನ ಊಟವನ್ನು ನೀಡಿ ಒಬ್ಬ ಬಡ ಬ್ರಾಹ್ಮಣನನ್ನು ನೇಮಿಸಿರುತ್ತಾರೆ. ಅವರಿಂದ ಕಲಿತಳು, ಬೆಳೆದಳು ಮದುವೆಯೂ ಆಯಿತು. ಗಂಡ ಈಕೆಯನ್ನು ತುಂಬಾ ಪ್ರೀತಿಸುವವನಾಗಿದ್ದರೂ, ಎಲ್ಲೋ ಹೇಗೋ ಆ ಬಡ ಬ್ರಾಹ್ಮಣನ ವಿಚಾರ ತಿಳಿದು ಹೆಂಡತಿಯ ಮೇಲೆ ಶಂಕಿಸಲಾರಂಭಿಸುತ್ತಾನೆ. ಪ್ರೀತಿಯ ಹೆಂಡತಿಯು ಹೀಗೆ ಮಾಡಿರಲಾರಳು ಎನ್ನುವ ಭಾವ ಒಂದು ಕಡೆ, ತಿಳಿದ ವಿಚಾರ ಒಂದು ಕಡೆ. ಗೊಂದಲದಲ್ಲೇ ಬೆಂದು ಅದರಿಂದ ಮುಕ್ತಿ ಕಾಣಲು ಅನೇಕ ಹೆಣ್ಣುಗಳ ಸಹವಾಸ ಮಾಡಿ ಅದರಲ್ಲೂ ಸುಖ ಕಾಣದೆ ರಾತಿಗಳ ನಿದ್ದೆ ಕಾಣದೆ ಪರಿತಪಿಸುತ್ತಿರುತ್ತಾನೆ. ಹೀಗೇ ಒಂದು ದಿನ ನಿದ್ದೆ ಕಾಣದೆ ಒದ್ದಾಡುತ್ತಿರುವಾಗ ಹೆಂಡತಿ ಸ್ವರ್ಣಲತೆ ಗಂಡನ ಕಿವಿಯಲ್ಲಿ "ಹೌದು ಆ ಬಡ ಬ್ರಾಹ್ಮಣ ನನ್ನ ಕೌಮಾರ್ಯವನ್ನು ಭಂಗಗೊಳಿಸಿದ" ಎಂದುಸುರುತ್ತಾಳೆ. ಅಂದಿನ ಮುಂಜಾವಿಗೇ ಆತ ಮನೆ ತೊರೆದು ಎಲ್ಲಿಯೋ ಹೊರಟು ಹೋಗಿಬಿಟ್ಟಿರುತ್ತಾನೆ.`ಇದೊಂದು ನಾಟಕದೊಳಗಿನ ಕಥೆಯೊಳಗಣ ಪಾತ್ರ; ಸ್ವರ್ಣಲತೆಯ 'ಗಂಡ'. ಅತೀ ಪ್ರೀತಿಸುವ ಗಂಡ. ಸಂಶಯದ ಬೆನ್ನೇರಿ ಹೆಂಡತಿ ಕೈಬಿಟ್ಟು ಹೊರಟು ಬಿಡುತ್ತಾನೆ. ಭೋಗ ಜೀವಿ ಒಮ್ಮೆಲೆ ಯೋಗಿಯಾದಂತೆ ಪಾತ್ರದಲ್ಲಿ ಭಾವಗಳೇರಿಳಿತ.
ಪುರು, ಯಯಾತಿ ರಾಜನ ಪುತ್ರ. ತನ್ನ ವಂಶದವರ ಶೌರ್ಯ ಸಾಧನೆಯ ಬಗ್ಗೆ ನಿರ್ಭಾವುಕನು. ವಂಶ ತಲೆಮಾರಿನಲ್ಲಿ ತನ್ನನ್ನೇ ತಾನು ಕೀಳಾಗಿ ಭಾವಿಸುವವನು. ತನ್ನನ್ನು ತಾನೇ ಕೀಟವೆಂದು ಕರೆದುಕೊಳ್ಳುವನು ತನ್ನ ಸ್ವಯಂವರವನ್ನು ಅತೀ ಹೀನಾಯ ಸ್ಥಿತಿಯೆಂದು ಭಾವಿಸುವವನು, ಅದರ ಕುರಿತು ಯಯಾತಿಯೆದುರು ಅವನದೇ ಮಾತುಗಳು ಹೀಗಿವೆ; "ಚಿತ್ರಲೇಖೆ, ಚಂದ್ರವಂಶದ ಯುವರಾಜನಿಗೇ ಮಾಲೆ ಹಾಕಬೇಕು. ಆರ್ಯವರ್ತದ ಸಾಮ್ರಾಜ್ಞಿಯಾಗಬೇಕು ಎಂದು ಅವಳ ತಂದೆಯ ಮನಸ್ಸಿನಲ್ಲಿ ಇತ್ತಂತೆ. ಚಂದ್ರವಂಶದ ಯುವರಾಜನಿಗೆ ಧನುರ್ವಿದ್ಯೆಯ ಪರೀಕ್ಷೆ ಏನು ಕಠಿಣ ಎಂದು ಅದನ್ನಿಟ್ಟರಂತೆ. ಆದರೆ ನನ್ನ ಶೌರ್ಯ ಗೊತ್ತಾದೊಡನೆ ತೆಗೆದು ಹಾಕಿದರಂತೆ. ಹೀಗೆ ಚಂದ್ರವಂಶಕ್ಕೆ ಸನ್ಮಾನ ಮಾಡಿದರು. ನಿನ್ನ ಕೀರ್ತಿಗೆ ಸನ್ಮಾನ ಮಾಡಿದರು. ಚಿತ್ರಲೇಖೆಯನ್ನು ನನಗಲ್ಲ, ನಿನಗೆ ಮದುವೆ ಮಾಡಿಕೊಟ್ಟಂತೆ ಇತ್ತು". ಎಂದು ಹೇಳುವ ಪುರು ತನ್ನ ಕೀಳರಿಮೆಯನ್ನು ತೋರುತ್ತಾನೆ. ಅದೇ ಪುರು ಮುಂದೆ ತಂದೆಯ ವಾರ್ಧಕ್ಯವನ್ನು ಪಡೆಯಲು ಯಾರೂ ಮುಂದಾಗದಾಗ ತಾನೇ ತ್ಯಾಗಕ್ಕೆ ನಿಲ್ಲುತ್ತಾನೆ. ಇದು ಪರಾಕ್ರಮನೆನಿಸಿಕೊಳ್ಳುತ್ತದೆ. ಅತಿ ನೀಚ ಅತೀ ಉಚ್ಚ ಸ್ತರಗಳು ಒಂದೇ ವ್ಯಕ್ತಿತ್ವದಲ್ಲಿ ನಮಗೆ ಕಾಣ ಸಿಗುತ್ತದೆ. ಓದುವಾಗ ರೋಮಾಂಚನವೆನಿಸುತ್ತದೆ.
ಶರ್ಮಿಷ್ಠೆ, ಮುಳ್ಳಿನ ನಾಲಿಗೆಯವಳು ಅವಳು ಹೇಳುವುದೆಲ್ಲವೂ ಸತ್ಯ. ಕಠೋರ ಸತ್ಯಗಳು. ಅದರೊಳಗಿನ ಕುಹುಕ ಕೊಂಕುಗಳಿಂದ ಅರಮನೆಯಲ್ಲಿ ಯಾರಿಗೂ ನೆಮ್ಮದಿಯಿಲ್ಲ. ಸ್ವರ್ಣಲತೆಯೊಂದಿಗಿನ ಜಗಳ, ಕೊನೆಗೆ ದೇವಯಾನಿಗೆ ಹೀನಾಯವಾಗಿ ಮೂದಲಿಸಿ ಅದರಿಂದ ಬೇಸತ್ತು ಅವಳು ಯಯಾತಿಯಲ್ಲಿ ,''ಈಕೆಯನ್ನು ರಾಜ್ಯದಿಂದ ಹಿಂದುರುಗಿ ಕಳಿಸಿಬಿಡಿ'' ಎಂದು ಕೇಳಿಕೊಳ್ಳುತ್ತಾಳೆ. ಈ ವಿಚಾರವಾಗಿ ಏಕಾಂತದಲ್ಲಿ ಶರ್ಮಿಷ್ಠೆಯೊಡನೆ ಮಾತಿಗಿಳಿದಾಗ ಮಾತಿಗೆ ಮಾತು ಬೆಳೆದು ಅತಿರೇಕಕ್ಕೇ ಹೋಗಿ, ತನ್ನ ಮನೆಗೆ ತಾನು ಹಿಂದುರುಗಲಾರೆ, ಇಲ್ಲಿಂದ ಹೊರಹೋಗಲೇ ಬೇಕೆಂದರೆ ತಂದೆ ತನಗಾಗಿ ಕೊಟ್ಟು ಕಳುಹಿಸಿದ ವಿಷವಿದೆಯೆಂದು ಶರ್ಮಿಷ್ಠೆ ತನ್ನ ಕರಂಡಿಕೆಯ ವಿಷವನ್ನು ಸೇವಿಸಲು ಮುಂದಾಗುತ್ತಾಳೆ. ಆಗ ಅವಳನು ತಡೆಯಲು ಮುಂದಾಗಿ ಜಿಗಿದು ಯಯಾತಿ ಅವಳ ಬಲಗೈ ಹಿಡಿಯುತ್ತಾನೆ. ಇದು ಕಾರಣ ಅವಳನ್ನು ವರಿಸುವಂತಾಗುತ್ತದೆ. ಅವಳ ಅಂತಃಕರಣವನ್ನರಿತು ಯಯಾತಿ ಅವಳ ಆರಾಧಕನಾಗುತ್ತಾನೆ.
ತನ್ನನ್ನು ದಾಸಿಯಾಗಿ ತಂದ ಕಾರಣಕ್ಕೆ ದೇವಯಾನಿಯನ್ನು ಇಂಚಿಂಚೇ ಮಾತುಗಳಿಂದ ಕೊಲ್ಲುತ್ತಿದ್ದ ಶರ್ಮಿಷ್ಠೆ ದುಷ್ಟತನದ ಪರಾಕಾಷ್ಠೇ ಮೆರೆದವಳು; ದೇವಯಾನಿಯ ತಂದೆ ಶುಕ್ರಾಚಾರ್ಯರು ಯಯಾತಿಗೆ ಶಾಪವಿಟ್ಟಾಗ ಅದರ ಉಃಶಾಪಕ್ಕಾಗಿ ಪರಿತಪಿಸಿದವಳು. ಕೊನೆಗೆ ಯಯಾತಿಯೊಡನೆ ವಾನಪ್ರಸ್ಥಾಶ್ರಮಕ್ಕೆ ಜೊತೆಯಾಗುವಳು. ತ್ಯಾಗಿಯಾಗಿ ನಿಲ್ಲುವಳು. ಇಡೀ ನಾಟಕದಲ್ಲಿ ನಿರಂತರವಾಗಿ ಪಾಲ್ಗೊಳ್ಳುವ ಪಾತ್ರ ಶರ್ಮಿಷ್ಠೆ ಅಂದರೆ ತಪ್ಪಾಗಲಾರದು. ಆದಿಯೂ ಅವಳೆ ಅಂತ್ಯವೂ ಅವಳೆ. ಒರಟು ಒರಟಾದ ಸತ್ಯದ ನೆರಳಿನ ನೋವುಗಳ ಆರ್ಭಟವೇ ಮಾತಾದ ಪ್ರೇಮಮೂತ್ರಿ 'ಶರ್ಮಿಷ್ಠೆ'. ಯಯಾತಿಯನ್ನು ಕೈಹಿಡಿದ ದಿನದ ಸಂಜೆಯೇ ಅವನೊಡನೆ ಅರಣ್ಯ ವಾಸಕ್ಕೆ ಹೊರಟು ನಿಂತ ನಿಜವಾದ 'ಸತಿ'.
ನಾಟಕದಲ್ಲಿನ ಪಾತ್ರಗಳ ಭಾವವೇರುವ ಮಾಹಾತ್ವಾಕಾಂಕ್ಷೇ ಮತ್ತು ತ್ಯಾಗದಲ್ಲಿಳಿದು ಕೊನೆಗೊಳ್ಳುವ ರೀತಿ ನಮ್ಮನ್ನು ಬೆರಗುಗೊಳಿಸುತ್ತದೆ. ಒಬ್ಬ ವ್ಯಕ್ತಿಯಲ್ಲಿನ ಒಳ್ಳೆಯ ಮತ್ತು ದುಷ್ಟತನಗಳು ಯಾವ ಸಂದರ್ಭಗಳಲ್ಲಿ ಹೇಗೆ ವ್ಯಕ್ತವಾಗುತ್ತದೆ ಅದರಿಂದಾದ ಪರಿಣಾಮಗಳು, ಅಲ್ಲೋಲ ಕಲ್ಲೋಲಗಳು… ಓಹ್!….. ಹರಿಬಿಟ್ಟ ಭಾವಗಳ ಪರಿಣಾಮವೆನ್ನಬಹುದು. ಹರಿಬಿಟ್ಟ ಭಾವ; ಹರಿಬಿಟ್ಟ ವ್ಯಕ್ತಿತ್ವದ ಸಂಕೇತ. ನಮ್ಮ ವ್ಯಕ್ತಿತ್ವ ನಮ್ಮ ಪ್ರಙ್ಞೆಯಲ್ಲಿರಬೇಕು. ಪ್ರಙ್ಞೆ ಕಳೆದರೆ ದುರಂತವೇ ಸರಿ. ಭಾವಗಳನ್ನು ಕಟ್ಟಿಹಾಕಬಾರದು ನಿಜವೇ ಆದರೆ ಭಾವಗಳನ್ನು ಶಿಕ್ಷಿತಗೊಳಿಸಬೇಕಿದೆ. ನ್ಯಾಯ ಅನ್ಯಾಯಗಳ ಅರಿವಿರಬೇಕು. ನಾಟಕಗಳು ಕಾವ್ಯಗಳು ನಮ್ಮ ಮನೋರಂಜನೆಗೆ ಇವೆಯೇ ಆದರೂ ಅದರ ಮೂಖೇನ ಜೀವನಾನುಭವವನ್ನು ಪಡೆಯಬೇಕಿದೆ. ಈ ನಿಟ್ಟಿನಲ್ಲಿ ಯೋಚಿಸುವಾಗ ನಮ್ಮಲ್ಲಿ ಹುಟ್ಟುವ ಕೆಲವು ಪ್ರಶ್ನೆಗಳು ಉತ್ತರ ಕಾಣದೆ ನಿಲ್ಲುವವು. ಇಷ್ಟೆಲ್ಲಾ ವಿಚಾರ ಮಾಡಿದ ನಂತರ ಒಂದು ಪ್ರಶ್ನೆ, ಅನಾದಿಕಾಲದಿಂದಲೂ ಗಂಡೊಬ್ಬ ತನ್ನ ಹಿತಕ್ಕಾಗಿ ಅನೇಕ ಹೆಂಡಿರನ್ನು ಮಾಡಿಕೊಳ್ಳುವುದು ಸ್ವೇಚ್ಚೆಯೆನಿಸಿಕೊಳ್ಳದೆ ಪರಾಕ್ರಮವೆನಿಸಿಕೊಳ್ಳುವುದು; ನಾಟಕದಲ್ಲಿ ಎಷ್ಟೋ ರಾಣಿಯರೊಂದಿಗೆ ನಡೆದು ಬಂದ 'ಯಯಾತಿ'ಗೆ ಕೊನೆಗೂ ಅಂತಹ ಪತಿಧರ್ಮಿಣಿ ಶರ್ಮಿಷ್ಠೆ ದೊರೆಯುತ್ತಾಳೆ; ದೊರಕಿಸುತ್ತಾರೆ ನಾಟಕಕಾರರು, ಏಕೆ?
ಹೆಂಡತಿ ಚಿತ್ರಲೇಖೆಯನ್ನು ಒಂದು ಮಾತು ಕೇಳದೆ ತಂದೆಯ ವಾರ್ಧಕ್ಯವನ್ನು ಸ್ವೀಕರಿಸುತ್ತಾನೆ ಪುರು. ಅವನದು ತ್ಯಾಗವೇ ಆದರೂ ಅವನು ಮಾಡುತ್ತಿರುವ ತ್ಯಾಗಕ್ಕಂಟಿಕೊಂಡಿರುವ ಹೆಂಡತಿಯ ಹಕ್ಕನ್ನು ತಿರಸ್ಕರಿಸಿದಂತಾಗಲಿಲ್ಲವೇ? ಅಲ್ಲಿ ಗೌಣವಾದ ಹಕ್ಕು ನ್ಯಾಯ ಸಮ್ಮತವೇ? ಎಂದು ಚಿಂತಿಗೀಡು ಮಾಡುತ್ತದೆ. ಅಷ್ಟೇಲ್ಲಾ ರಾಣಿಯರೊಂದಿಗೆ ನಡೆದು ಬಂದ ಯಯಾತಿ ಶರ್ಮಿಷ್ಠೆಯ ಬಿಡದವನು. ರಾಣಿ ದೇವಯಾನಿ "ಈ ಶರ್ಮಿಷ್ಠೆಯನ್ನು ಬಿಟ್ಟು ಬೇರೆ ಏಷ್ಟು ಜನರನ್ನಾದರೂ ಹೆಂಡಿರನ್ನಾಗಿ ಮಾಡಿಕೊಳ್ಳಿರಿ ಇವಳನ್ನು ಮಾತ್ರ ಬಿಟ್ಟುಬಿಡಿ ಎಂದು ಅಂಗಲಾಚುತ್ತಾಳೆ. ಇಲ್ಲಿ ಇನ್ನೊಂದು ಅಂಶ ನಮ್ಮರಿವಿಗೆ ಬರುತ್ತದೆ, ಗಂಡನೆಂದರೆ ವ್ಯಭಿಚಾರಿಯೇ? ಅವನಿಗೆ ಹೆಂಡತಿ ಈ ಹಂತದವರೆಗೂ ಬಗ್ಗಬೇಕೆ? ಸ್ತ್ರೀಕುಲ ಸ್ಥಾನದ ಅದೋಗತಿಯ ಪ್ರತಿಬಿಂಬ ಈ ಅಂಶಗಳು.
ಸುಖವಾಗಿ ಸಂಸಾರ ಮಾಡಿಕೊಂಡಿದ್ದ ಸ್ವರ್ಣಲತೆ ಮತ್ತು ಆಕೆಯ ಗಂಡ ಹೇಗೊ ತಿಳಿದ ಹೆಂಡತಿಯ ಗುರುವಿನ ಬಗ್ಗೆ ಶಂಕಿಸಿ; ಪ್ರೀತಿಸುವ ಹೆಂಡತಿಯನ್ನು ನಡು ನೀರಿನಲ್ಲಿ ಕೈಬಿಟ್ಟು ಹೊರಟನಲ್ಲ, ಅದು ಸರಿಯೇ? ನಾಟಕಕಾರರು ಚಿಂತನೆಗಳ ಮೇಲೆ ಚಿಂತನೆಗಳನ್ನು ನಮ್ಮ ಮುಂದಿಟ್ಟಿದ್ದಾರೆ. ಯಯಾತಿ ಹಾರುವ ಚಿಟ್ಟೆಯೆಂದು ತಿಳಿದರೂ ಅವನಲ್ಲಿನ ಅನುರಾಗ ಕಿಂಚಿತ್ತೂ ಕಡಿಮೆಯಾಗಗೊಡದೆ ಅದೇ ತೀವ್ರತೆಯಲ್ಲಿ ಅವನ ಹಿಂದೆಯೇ ವಾನಪ್ರಸ್ಥಾಶ್ರಕ್ಕೂ ಹೊರಡುವವಳಲ್ಲಾ ಶರ್ಮಿಷ್ಠೆ, ಅವಳಿಗೆ ತಾರುಣ್ಯ ಬೇಡದ್ದಾಗಿತ್ತೇ? ಅವಳ ಆಸೆಗಳನ್ನು ದ್ವಂಸ ಮಾಡಲಿಲ್ಲವೇ ಯಯಾತಿ ಮೇಲಿನ ಪ್ರೀತಿಗಾಗಿ?
ಒಂದೆಡೆ ತನ್ನ ಪಾಪದ ಫಲವಾಗಿ ವೃದ್ಧಾಪ್ಯವೇ ಶಾಪವಾದರೂ ತಾರುಣ್ಯಕ್ಕಾಗಿ ಹಂಬಲಿಸಿ ಮಗನ ತಾರುಣ್ಯವನ್ನೇ ಕಸಿದು ಸೊಸೆಗೆ ಬೋಧಿಸುವ ಯಯಾತಿ; ಮತ್ತೊಂದೆಡೆ ತಾರುಣ್ಯವಿದ್ದೂ ವೃದ್ಧ ಯಯಾತಿಯೊಡನೆ ವಾನಪ್ರಸ್ಥಾಶ್ರಮಕ್ಕೆ ಹೊರಡುವ ಶರ್ಮಿಷ್ಠೆ. ಪರೋಕ್ಷವಾಗಿ ಸ್ತ್ರೀ ಕುಲವನ್ನು ಮರೆಸಿದ್ದಾರೆ ನಾಟಕಕಾರರು. ಈ ಒಳಾರ್ಥಗಳು ಸಮಾಜವನ್ನು ಇನ್ನಾದರೂ ಬದಲಾಯಿಸಬೇಕಿದೆ. ಪ್ರತೀ ಬಾರಿಯ ಓದಿಗಿಂತ ಈ ಬಾರಿಯ ಓದು ನನ್ನನ್ನು ಬಹಳಷ್ಟು ಚಿಂತನೆಗಳಿಗೆ ಒಳಪಡಿಸಿದೆ. ಕಾರ್ನಾಡರಿಗೂ ಹಾಗೂ ನಿಮ್ಮೆಲ್ಲರಿಗೂ ವಂದಿಸುತ್ತಾ…..
ದಿವ್ಯ ಆಂಜನಪ್ಪ
೧೧/೧೦/೨೦೧೩