Saturday, 11 January 2014

ಕಿರು ಲೇಖನ

ಒಂದು ನೋಟ;

ಆ ಅಕ್ಕ ತಂಗಿಯರು ಹರಟುತ್ತಿದ್ದರು ಅದೂ ಇದೂ ಇನ್ನೂ ಏನೇನೋ. ಅವುಗಳ ಮಧ್ಯೆ ಸಮಾಜದ ಬಗೆಗಿನ ತಂಗಿಯ ಆಪಾದನೆಗಳು ಶುರುವಾದವು. ವೃತ್ತಿ ಬದುಕಿನ ಸವಾಲುಗಳು, ಸಹೋದ್ಯೋಗಿಗಳ ಕಿರಿಕಿರಿ, ಜಾತಿ ಭೇದ, ಲಿಂಗ ತಾರತಮ್ಯ, ಮದುವೆ ಇತ್ಯಾದಿ. 
ಎಲ್ಲೆಲ್ಲೋ ಸುತ್ತಿ ಕೊನೆಗೆ ಮದುವೆ ವಿಚಾರಕ್ಕೆ ಬಂದು ನಿಂತಿತ್ತು ಅವರ ಚರ್ಚೆ. ಇತ್ತೀಚಿಗಷ್ಟೇ ಮದುವೆಯ ಬಗ್ಗೆ ಆಸಕ್ತಿ ತೋರಿದ್ದ ತಂಗಿ, ತನಗೆ ಬಂದ ಗಂಡುಗಳ ಗುಣಗಾನ ಶುರುವಿಟ್ಟಳು. ಒಟ್ಟಿನಲ್ಲಿ ಮದುವೆ ಅನ್ನುವುದು ಅನಿವಾರ್ಯವಲ್ಲದ ವಿಚಾರ ಎಂಬುದು ಅವಳ ಮನೋಭಾವ.

"ಅವರ್ಯಾರೂ ಕಣೆ, ಎಲ್ಲಾ ಸರಿ ಅವರ ಹೇಳಿಕೆ ಏನಿತ್ತು ಗೊತ್ತಾ? ಯಾವುದೇ ಕಾರಣಕ್ಕೂ ಯಾವುದೇ ಬೆಲೆಯಲ್ಲೂ ಗಂಡನನ್ನು ತೊರೆಯಬಾರದು, ಅಂತ ಮ್ಯಾಟ್ರಿಮೋನಿ ಫ್ರೋಫೈಲ್ ನಲ್ಲಿ ಹಾಕ್ಕೊಂಡಿದ್ದಾರೆ", "ಅದಕ್ಕೆ ನನಗೆ ಇಷ್ಟವಾಗಲಿಲ್ಲ ಬಿಟ್ಟಾಕ್ದೆ".

ತಂಗಿಯ ಮುಗ್ಧತೆಗೆ ನಕ್ಕ ಅಕ್ಕಾ ಹೇಳತೊಡಗಿದಳು, "ನಿನಗೆ ಗೊತ್ತಿರಬಹುದು ಆದರೂ ಹೇಳ್ತೀನಿ, ನಾಲ್ಕು ಜನ ಕುರುಡರನ್ನು ಒಂದು ಆನೆಯ ಹತ್ತಿರ ಕರೆದೊಯ್ದು, ಮುಟ್ಟಿ ನೋಡಿ ನಂತರ ಆನೆಯನ್ನು ವರ್ಣಿಸಿ ಎಂದು ಹೇಳಿದರೆ, ಹುಟ್ಟು ಕುರುಡರು ಎಂದೂ ಆನೆಯನ್ನು ನೋಡದವರು ಏನು ಹೇಳಬಹುದು?.
ಆನೆ ಎಂದರೆ; ಒಬ್ಬ ಕಿವಿ ಮುಟ್ಟಿ ವಿಶಾಲ ಅಂತಾನೆ, ಒಬ್ಬ ಬಾಲ ಮುಟ್ಟಿ ನೀಳ, ಒಬ್ಬ ಹೊಟ್ಟೆ ಸ್ಪರ್ಶಿಸಿ ಉಬ್ಬಿದಂತೆ, ಮತ್ತೊಬ್ಬ ಸೊಂಡಿಲಿಡಿದು ಮತ್ತೇನನ್ನೋ ಹೇಳುತ್ತಾನೆ. ಅವೆಲ್ಲವೂ ಅವರ ಕಲ್ಪನೆಗಳಷ್ಟೇ. ವಾಸ್ತವ ಬೇರೆಯೇ ಇರಬಹುದು. ಆದರೆ ಅವರವರ ಅನುಭವಕ್ಕೆ ತಕ್ಕಂತೆ ಅವರ ನಂಬಿಕೆಗಳು ಬೆಳೆಯುತ್ತದೆ",

"ಇಲ್ಲಿ ಆತ ನೋಡಿದ ಹೆಣ್ಣನ್ನು ವರ್ಣಿಸಿದ್ದಾನೆ, ಇದರಲ್ಲಿ ಆತನದ್ದು ಪಡೆದ ಅನುಭವವಷ್ಟೇ" ಎಂದು ತಿಳಿಸಿ ಹೇಳುವಳು ಅಕ್ಕ.

ಆನೆಯ ಕತೆಯು ತಂಗಿಗೂ ತಿಳಿದಿತ್ತು ಆದರೆ ಈ ಸಂದರ್ಭಕ್ಕೆ ಅನ್ವಯಿಸಿದ್ದು ಸೋಜಿಗವೆನಿಸಿ, ಏನೋ ಹೊಳೆದಂತೆ "ಸರಿ" ಎಂದು ನಸು ನಗುತ್ತಾಳೆ.

ಹೌದಲ್ಲವೆ ಸ್ನೇಹಿತರೆ? ಅವರವರ ಕುರುಡುತನದಿ ಹೆಣ್ಣು, ಗಂಡು, ಪ್ರೀತಿ, ಬದುಕು, ದೇಶ, ಸ್ವಾತಂತ್ರ್ಯ ಇತ್ಯಾದಿಗಳು ಅರ್ಥ ಕಂಡುಕೊಳ್ಳುತ್ತವೆ. ಒಬ್ಬರಿಗೆ ಅತಿಯಾದದ್ದು ಮತ್ತೊಬ್ಬರಿಗೆ ಯಕಃಶ್ಚಿತ್ ಆಗಿ ಕಾಣುತ್ತದೆ. ನಮ್ಮ ಅನುಭವಕ್ಕೂ ಮೀರಿದ ಸತ್ಯವಿರಬಹುದು. ಅರಿಯುವ, ಅನ್ವೇಷಿಸುವ ಮತ್ತು ನಂಬುವ ಮನಸ್ಸಿರಬೇಕು......


ಧನ್ಯವಾದಗಳು
ದಿವ್ಯ ಆಂಜನಪ್ಪ
11/01/2014

2 comments: