ಬದುಕಲು ಶುರುವಿಟ್ಟೆನೀಗ
ನಿನ್ನ ಮನವನರಿತು,
ಅರಸಿ ಬಂದ ನನಗೆ
ಅದರೊಳು ನನ್ನ ನೀ ತೆರೆದಿಟ್ಟಾಗ!
***
ಪ್ರತೀ ಅವಮಾನಗಳ ಕೊನೆ ಕ್ಷಣಗಳು
ನಗುವಿನೊಂದಿಗೆ ನಿಲ್ಲುವಾಗ
ನನಗೆ ನಾ ಪರಕೀಯಳಾಗಿ
ಅವಮಾನಗಳ ಪರವಹಿಸುವ ನಾನು
ಕೆಲವೊಮ್ಮೆ ನಾನೇ ಅಲ್ಲದ ನಾನು,
ಆ ಕ್ಷಣವ ಮೀರುವುದೇ ನನಗೊಂದು ಪರೀಕ್ಷೆ
ದಾಟಿ ಮುನ್ನೆಡೆದ ಮೇಲೆ
ಎಲ್ಲಾ ಎಲ್ಲೆಗಳ ಮೀರಿ ನಡೆಸೋ ನಾನೇ ನನ್ನ ಸಾರಥಿ!
***
ನೀ ನನ್ನೊಳ ಕನಸ ಪತ್ತೆ ಹಚ್ಚಲೆಂದು
ನಾ ನಿನಗಾಗಿ ಮಾತು ಹರಿಸಿದೆ,
ಭಾವಗಳಂಕೆ ಮೀರಿದೆ,
ಹಗಲು ಮರೆತರೂ
ನಿನ್ನ ಕೈಯೊಳಿಟ್ಟೆ ರಾತ್ರಿಗಳ ನಿದಿರೆಯ!
***
ಕೆಲವು ಅರ್ಥವಾಗಬಾರದು
ಅರ್ಥವಾದದ್ದು ಮತ್ತೆ ಅರ್ಥೈಸಿ ಒರೆ ಹಚ್ಚಲು ಹೋಗಬಾರದು
ಅರ್ಥವಾಗದಕ್ಕೆ ಕೊರಗಿ ಕೂರಬಾರದು
ಅರ್ಥವಾದದ್ದ ಬಿಟ್ಟುಕೊಡಬಾರದು!
10/01/2014
No comments:
Post a Comment