Thursday 30 January 2014

ಕವನ

'ಕನಸು ಮನಸು' 




ಹೀಗೆ ಒಮ್ಮೆ ಓಡುತ್ತಿದ್ದೆ ಓಡುತ್ತಿದ್ದೆ,,
ನನ್ನ ಹಿಂದೆ ಒಮ್ಮೆ ಕರಿ, ಮತ್ತೊಮ್ಮೆ ನಂದಿ,
ಓಡಿಸಿದ್ದವು ಸತತ;
ಕಂಡದ್ದು ಕನಸೇ ಆದರೂ
ಬೆಳಗೆದ್ದು ಕಂಡ ದಾರಿಯೊಳ ದನವೂ ದೊಡ್ಡ ಭಯ!

ಎಷ್ಟೂ ಯೋಚಿಸಿದರೂ ತಿಳಿಯದೀ ಒಗಟು 
ನನಗೇಕೀ ಕರಿ ಗೋದೋಷಗಳೋ? 
ಕಾಣೆ!;
ನಾನೆಂದೂ ಪ್ರಾಣಿಪ್ರಿಯೆ ದೂರದಿಂದ!

ಸಾದಾ ಕಾಡೋಳಗೇ ಓಡುವ ನಾನು
ವಾಸ್ತವದಿ ನಾಡಿನ ರಾಜಧಾನಿಯವಳು
ಕನಸಿಗೂ ಮನಸಿಗೂ ಅದೆಷ್ಟೋ ತಾಳೆಗಳು
ಸಿಗದುತ್ತರ ಮಾತ್ರ ನಿರಂತರ;

ಅದು ಭೂತವೋ, ಸವೆದ ಹಾದಿಯೋ ಆಗಿ
ಮುಂದಿನ ಹೊಸ ಸಮಸ್ಯೆಗಳಲಿ ಆಸಕ್ತಳಾಗಿ
ಹಳೆಯ ವ್ಯಾಧಿಯೊಳು ಅಸ್ವಸ್ಥಳಾಗಿ,
ಹಿಂದುರುಗಿ ನೋಡುವ ಚಟ ಬಿಟ್ಟಂತೆ ಒಮ್ಮೆ,

ಅದರಂತೆ ಬೀಳತೊಡಗಿತೋ ಕನಸುಗಳೀಗ
ಆನೆ ಗೂಳಿಗಳು ಕನಸಿಂದ ದೂರ
ಮನವ ಕಾಡುವ ದಟ್ಟ ವ್ಯಾಕುಲತೆ
ಬಂದವೋ ಮೃಗಗಳಾಗಿ,

ಬದುಕತೊಡಗಿದೆ ವಾಸ್ತವದಲಿ
ನರಿ ತೋಳಗಳೂ ಸುಳಿಯದೀಗ
ಧ್ಯೇಯವೊಂದೆ ನಿಷ್ಠೆಯ ನಡೆ
ಜೊತೆಗಷ್ಟು ಬಂಡ ಧೈರ್ಯ!

ಈಗ ಕನಸುಗಳೆಂದರೆ ಸೂರ್ಯ, ಚಂದ್ರ,
ನಂದನ, ಬೃಂದಾವನ,,
ಮನದ ಬಾಂದಳದಿ ಹಾರುವ
ಮೋಹಕ ಜೋಡಿ ಖಗಗಳು!!

DA

30/01/2014

No comments:

Post a Comment