Thursday, 30 January 2014

ಕವನ

'ಕನಸು ಮನಸು' 




ಹೀಗೆ ಒಮ್ಮೆ ಓಡುತ್ತಿದ್ದೆ ಓಡುತ್ತಿದ್ದೆ,,
ನನ್ನ ಹಿಂದೆ ಒಮ್ಮೆ ಕರಿ, ಮತ್ತೊಮ್ಮೆ ನಂದಿ,
ಓಡಿಸಿದ್ದವು ಸತತ;
ಕಂಡದ್ದು ಕನಸೇ ಆದರೂ
ಬೆಳಗೆದ್ದು ಕಂಡ ದಾರಿಯೊಳ ದನವೂ ದೊಡ್ಡ ಭಯ!

ಎಷ್ಟೂ ಯೋಚಿಸಿದರೂ ತಿಳಿಯದೀ ಒಗಟು 
ನನಗೇಕೀ ಕರಿ ಗೋದೋಷಗಳೋ? 
ಕಾಣೆ!;
ನಾನೆಂದೂ ಪ್ರಾಣಿಪ್ರಿಯೆ ದೂರದಿಂದ!

ಸಾದಾ ಕಾಡೋಳಗೇ ಓಡುವ ನಾನು
ವಾಸ್ತವದಿ ನಾಡಿನ ರಾಜಧಾನಿಯವಳು
ಕನಸಿಗೂ ಮನಸಿಗೂ ಅದೆಷ್ಟೋ ತಾಳೆಗಳು
ಸಿಗದುತ್ತರ ಮಾತ್ರ ನಿರಂತರ;

ಅದು ಭೂತವೋ, ಸವೆದ ಹಾದಿಯೋ ಆಗಿ
ಮುಂದಿನ ಹೊಸ ಸಮಸ್ಯೆಗಳಲಿ ಆಸಕ್ತಳಾಗಿ
ಹಳೆಯ ವ್ಯಾಧಿಯೊಳು ಅಸ್ವಸ್ಥಳಾಗಿ,
ಹಿಂದುರುಗಿ ನೋಡುವ ಚಟ ಬಿಟ್ಟಂತೆ ಒಮ್ಮೆ,

ಅದರಂತೆ ಬೀಳತೊಡಗಿತೋ ಕನಸುಗಳೀಗ
ಆನೆ ಗೂಳಿಗಳು ಕನಸಿಂದ ದೂರ
ಮನವ ಕಾಡುವ ದಟ್ಟ ವ್ಯಾಕುಲತೆ
ಬಂದವೋ ಮೃಗಗಳಾಗಿ,

ಬದುಕತೊಡಗಿದೆ ವಾಸ್ತವದಲಿ
ನರಿ ತೋಳಗಳೂ ಸುಳಿಯದೀಗ
ಧ್ಯೇಯವೊಂದೆ ನಿಷ್ಠೆಯ ನಡೆ
ಜೊತೆಗಷ್ಟು ಬಂಡ ಧೈರ್ಯ!

ಈಗ ಕನಸುಗಳೆಂದರೆ ಸೂರ್ಯ, ಚಂದ್ರ,
ನಂದನ, ಬೃಂದಾವನ,,
ಮನದ ಬಾಂದಳದಿ ಹಾರುವ
ಮೋಹಕ ಜೋಡಿ ಖಗಗಳು!!

DA

30/01/2014

Tuesday, 28 January 2014


ಬೇಕೆಂದೇ ಮೋಹಿಸಿದೆ
ಬೇಕೆಂದೇ ಪ್ರೀತಿಸಿದೆ
ಈ ಬದುಕನು,,
ಭರವಸೆಗಳಿಗಪಚಾರವೆಸಗಿದ
ಹೂಳ ಹೊರಗೆಳೆದು
ಭರಿಸಬೇಕಿತ್ತು ಜೀವ ಜಲ
ಹೊರಗೂ, ನನ್ನೊಳಗೂ!


28/01/2014

ಸುಳ್ಳುಗಳಿಗೆಷ್ಟೇ ನಾ ಮೌನವ ಹೊದಿಸಿದರೂ
ನಿಜವೇ ಕೊರೆದು ಕೂಗಾಗುವುದು
ನನ್ನೊಳಗಿನ ಸ್ತಬ್ಧತೆಗೆ ನಿರಂತರ ಭಂಗ!!


***


ಹೊಳೆವ ಮುನ್ನ
ಉರಿದು ನೋಡು
ನಿನ್ನೊಳ ನೀನೇ
ತಿಳಿದೀತು
ಸೂರ್ಯನ ಪಾಡು!!


***


ಸೂರ್ಯ ಮುಖ ಜ್ವಾಲೆ
ಭೂಗರ್ಭದ ಲಾವ
ಕಡಲಾಳದ ಸುನಾಮಿ
ಇದ್ದರೂ ಇಲ್ಲದಂತೆ
ಉಕ್ಕಿದಾಗ ನಿಲ್ಲದಂತೆ
ಪ್ರತಿಭಟಿಸೋ 
ಸುಪ್ತ ಮನದಂತೆ!


28/01/2014

ಅವಳೆದೆಯಾಳ;

ಆದರೊಮ್ಮೆ ಬಿಳಿ ಮುಗಿಲು
ಮರು ಕ್ಷಣ ಕರಿ ಮುಸುಕು
ದಿಢೀರನೆ ಕೋಲ್ಮಿಂಚು
ತಿಳಿಯಾದೊಡೆ ಬಣ್ಣದ ಬಿಲ್ಲು 
ತಂಗಾಳಿ ಸವಿಯುವ ಹಸುರ ಚಿಗುರು
ಹಾಗೆಯೇ ಅಚಾನಕ್ಕಾಗಿ ಎಲ್ಲವೂ ಒಮ್ಮೆಲೇ.... 

ಚಿತ್ರ ಕೃಪೆ; ಅಂತರ್ಜಾಲ

27/01/2014



ರೆಕ್ಕೆ ಮುರಿಯಿತ್ತೆಂದು ನೆಲಕ್ಕುರುಳಿದ್ದೆ
ಕಣ್ಬಿಟ್ಟಾಗ ಪುಕ್ಕ ಹಾರಿತ್ತು ದೂರದಿ 


*******


ಬಯಲು ಬಯಲು ಮನದೊಳು
ಬಲು ಸುಂದರ ಹೂ ಗರಿಕೆ,
ಮುಸುಕಿನ ಸೂರ್ಯೋದಯ,
ನಸುಕಿನ ಚಂದ್ರೋದಯ,
ಜೊತೆಗೆ ನೀನೂ ಇದ್ದೊಡೆ
ಕನಸದು ಶೃಂಗಾರ...!


27/01/2014
***********************


ತಿರುವುಗಳಲ್ಲಿ 
ತಿರುತಿರುಗಿಯೇ.. 
ಹೆಚ್ಚು 
ತಲೆ ತಿರುಗಿದ್ದು!!


26/01/2014

ಗೂಡು ತೊಟ್ಟಿಲಾಗಿ
ಅಮ್ಮನ ಕಾವೇ ವರವಾಗಿ
ಸುತ್ತ ಹಸುರ ಉಸಿರಿರಲು
ಮುದ್ದು ಮರಿಯಾಗಿರಲೇ ಎನಗಿಷ್ಟ!

ಚಿತ್ರ ಕೃಪೆ; ಅಂತರ್ಜಾಲ

DA

24/01/2014

Saturday, 25 January 2014

ಕವನ


ಕಳೆದೆ

ಕಳೆದಿರುಳು ಹುಡುಕಿದ್ದೆ ಕಳೆದ ಭಾವಗಳ
ಸಿಗಲಿಲ್ಲ ಒಂದೂ ಎಲ್ಲವೂ ಸಿಕ್ಕು ಸಿಕ್ಕು 
ಗೋಜಲೊಳು ಮತ್ತೂ ಗೋಜಲು
ತಪದಂತೆ ತಪನಗಳ ಹೊಯ್ದಾಟವೆದ್ದು
ನಾನಲ್ಲದೀ ನಾನು ಹುಡುಕಿದ್ದೆ ನನ್ನೊಳಗಿನ ನಾನು!

ಎಷ್ಟು ಕನಸುಗಳ ಕೊಂದೆನೋ ಕಳೆದೊಂದು ಭಾವ
ಎಷ್ಟು ದಿನದ ನನ್ನ ಶ್ರಮವೊ ಹದಗೊಂಡ ಮನವು
ಕ್ಷಣಾರ್ಧದೊಳು ಕಳೆದಿದ್ದೆ ಒಂದೇ ಬಾರಿಗೆ ಭಾವುಕ ಶಿಖರವನ್ನೇರಿ
ಬುದ್ದಿ ಎಚ್ಚರಿಸಿದರೂ ಮನವು ಭಾವುಕ ಕಳೆದೇ ಹೋಯಿತು ಚಿರ ವಿರಹಿಯಾಗಿ

ಇನ್ನೇಲ್ಲಿ ಹುಡುಕಲಿ ಸಿಗದಿದ್ದ ನನ್ನ ಭಾವ
ಬಿಟ್ಟುಬಿಟ್ಟೆ ಅಲ್ಲೇ, ಕಳೆದಲ್ಲೇ.. 
ಜೊತೆಗೆ ಕಳುಹಿಸಿಬಿಟ್ಟೇ ಈ ಮನವನು ಅದರೊಟ್ಟಿಗೆ
ನಿಶ್ಚಿಂತೆ ನನಗಿನ್ನು ಕಳೆದ ಭಾವ ಕೊಟ್ಟ ಮನ ನನ್ನದಲ್ಲ
ಪಡೆದವನ ಜವಾಬ್ದಾರಿ ಅದನ್ನವನನೆಂದು ತಿಳಿದರೆ....

ದಿವ್ಯ ಆಂಜನಪ್ಪ
25/01/2014
ಸುಳ್ಳು ಹೇಳಿ ನಿಜವ ಹೊರಗೆಳೆಯುತ್ತಾರೆ
ಬುದ್ದಿವಂತರು;
ನಿಜವೇ ಹೇಳಿ ಸುಳ್ಳೆಂದು ಅನಿಸಿಕೊಳ್ಳುತ್ತಾರೆ
ನನ್ನಂತವರು!!

********

ಎಲ್ಲರದೂ ಮುಖವಾಡವೇ ಆದರೆ
ಚೆಂದದ ಮುಖವಾಡ ನನ್ನದಾಗಲಿ!

********

ನಾವೇ ಹುಟ್ಟು ಹಾಕಿದ ಭಾವಕೆ
ಭದ್ರತೆ ಒದಗಿಸಲಾಗದೆ
ಕಣ್ಣೀರೊಳು ತೇಲಿಹೋಗಬಿಟ್ಟ ಮೇಲೂ
ಬದುಕು ಬದುಕಾಗಿದ್ದರೆ ತೋರಿಕೆಯಷ್ಟೇ

25/01/2014

ನನಗೇನು ಗೊತ್ತಿಲ್ಲವೆಂದು ತಿಳಿವುದೇ ಮೇಲು
ಅರಿತು, ಬೆರೆತು, ಕಳಿತು, ಕಳೆದು 
ಮತ್ತೊಮ್ಮೆ ಅದೇ ಬಿಂದುವಿಗೆ ನೇತುಬೀಳುವ ಬದಲು!

24/01/2014
ಕರಿಯ ಮದದಿಂದ ಖೆಡ್ಡಾ ಕಾಣದಾಯ್ತು
ಉರುಳಿದ್ದೇನೋ ನಿಜವೇ
ಆದರೆ ಖೆಡ್ಡವೆಂಬುದು ಕುತಂತ್ರ
ತಿಳಿದ ವಿಷಯ

Thursday, 23 January 2014

ಗಾಳಿ ನೀ


ಸುಳಿದೆ ನೀ ಸವಿಗಾಳಿ
ಸುತ್ತಿ ನನ್ನೇ ಹುಡುಕಿದಂತೆ
ನಿನ್ನ ತಂಪಿಗೋ, ನೀ ಹೊತ್ತು ತಂದ ಕಂಪಿಗೋ
ಕಂಪಿಸತೊಡಗಿದೆ ಈ ಹೃದಯ,
ಬೇಕೆಂದೇ ಚಡಪಡಿಕೆಗೀಡು ಮಾಡಿರುವೆ 
ನಿನ್ನ ಅಸ್ಪಷ್ಟ ಕನವರಿಕೆಗಳಲಿ,
ಚಂಡ ಮಾರುತವಾಗಿ ಹೊತ್ತೊಯ್ದಿದ್ದರೂ
ಕರಗುತಲಿದ್ದೆ ಖುಷಿಯಲಿ...
ಉಸಿರಾದಂತಾಗಿ ಗಪ್ಪನೆ ನಿಂತೆ
ನಾನೀಗ ನಿಟ್ಟುಸಿರೂ ಬಿಡದಂತೆ
ಸ್ತಬ್ಧತೆ ಮನದಲೆಲ್ಲಾ.....


-ದಿವ್ಯ ಆಂಜನಪ್ಪ
23/01/2014

ಕವನ

ಕನಸು


ಹೆಂಡತಿ ತವರಿಗೆ ಹೋಗಿದ್ದಾಳೆ 
ನನ್ನಿಂದ ದೂರಾಗಿ, ನನಗಿಲ್ಲಿ ಹಸಿವಿಲ್ಲ,
ನನ್ನ ಬಟ್ಟೆಗಳೆಲ್ಲಾ ಕೊಳಕು ಮಾಸಲು,
ರಾತ್ರಿಗಳ ನಿದೆರೆಯೆಲ್ಲಾ ಬರೀ ಕನಸುಗಳು,
ಹೆಂಡತಿ ತವರಿಗೆ ಹೋಗಿದ್ದಾಳೆ,
ಅವಳಪ್ಪನಿಗೆ ಇನ್ನೂ ಬುದ್ದಿ ಬಂದಿಲ್ಲ
ನನ್ನ ಪಾಡೇನೆಂದು ಅರಿಯದ ಮಾವ..
ಅಗೋ!, ಬಂದಳಲ್ಲ ನನ್ನ ಮುದ್ದು ಮುದ್ದು..
ಅದೂ ಅವಳ ಪೆದ್ದು ಅಪ್ಪನೊಂದಿಗೆ,
ಮುದಿ ಮಾವ ಕರೆತಂದನೀಗ 
ಎಂಟು ಮೊಮ್ಮಕ್ಕಳ ಮೊದಲ ಅಜ್ಜಿ...
'ಮನೆಗೆಲಸಕ್ಕೆ ತೊಂದರೆಯಾದೀತು ನಿಮಗೆ
ಇವಳನ್ನಿರಿಕೊಳ್ಳಿ ಬಿಂಕವ ಬಿಟ್ಟು',
ಎಂದೆಲ್ಲಾ ಮಾವ ಹೇಳುವಾಗ
ಹಿಗ್ಗಿ ಬಿಟ್ಟೆನೋ, ಕೆಳಗೆ ಬಿದ್ದೆನೋ ಕನಸ್ಸಿಂದೀಗ
ನಿದ್ದೆ ಓಡಿತು ಕಣ್ಬಿಟ್ಟಾಗ,
ಇಲ್ಲ ಅವಳೀಗ, ನನ್ನ ಹಳೆಯ ಹೆಂಡತಿ, 
ನನ್ನೈದು ಮಕ್ಕಳ ತಾಯಿ,,
ಕನಸಲ್ಲೀಗ ಬದುಕಿ ಬಂದಿದ್ದಾಳೆ, 
ಅದೂ ಅವಳ ಮುದಿ ಅಪ್ಪನೊಂದಿಗೆ ರಾಜಿಗಾಗಿ,
ಅಂದು ಅವಳ ಮರ್ಜಿಯಿಲ್ಲದೇ ಬಾರದೂರಿಗೆ ಹೋದವಳು
ಇಂದು ಬಂದಾಳೆಂದರೆ ಇರಬಹುದು ನನಗೂ ಅರಳು ಮರಳು!!

DA
23/01/2014

ಬದುಕೊಂದು ಕಲೆಯಾದರೆ
ಒಡಲ ನೋವು 
ಮೊಗದ ನಗುವಾದೊಡೆ
ಪ್ರತಿಭೆ !! 



23/01/2014
**************


ಮುಚ್ಚಿಟ್ಟುಕೊಳ್ಳಬೇಕೆಂದಷ್ಟೂ 
ಬಿಚ್ಚಿಕೊಳ್ಳೊ ಮನಸು
ಬಗೆಬಗೆಯ ಕನಸು, 
ಬಿದ್ದರೂ ನಗುತಲಿರುವಾಗ
ಜಗವೆಲ್ಲಾ ಸೊಗಸೇ


22/01/2014
******************


ಬದುಕಿನ ತಿರುವುಗಳೇ ಹೀಗೆ
ಅರ್ಥವಾಗದು ತಿರುಗಿ ತೆವಳುವವರೆಗೂ 
ಒಮ್ಮೆ ನಿಂತರೆ ಓಡಿಸುವುದು ಮರೆವಂತೆ, 
ದಾಟಿ ಬಂದ ಹಾದಿಯು ಹಲವು ಬಗೆಯಲಿ
ಧಿಕ್ಕರಿಸಿ ದಿಕ್ಕೆಡಿಸಿತೆಂದು!


21/01/2014

Tuesday, 21 January 2014


ಹೇಳುವೆ ನಾ ನಿನಗೆ ಗುಟ್ಟೊಂದು
ಕೇಳುವೆಯಾದರೆ ನೀ ಕಿವಿ ಕೊಟ್ಟು
ಕೇಳಿ ನಕ್ಕರೆ ನೀನೊಂದು
ಇಲ್ಲವೆ ಸಿಡುಕಿದರೆ ನಾನೆರಡು
ಕೊಟ್ಟು ಮುದ್ದಿಸುವೆನೋ ಗೆಣೆಕಾರನೆ
ಕೊಟ್ಟುಬಿಡು ನಿನ್ನ ಕಿವಿಗಳ ಮನಸಾರೆ!!!



ಚಿತ್ರ ಕೃಪೆ; ಅಂತರ್ಜಾಲ


-ದಿವ್ಯ ಆಂಜನಪ್ಪ
21/01/2014

ಕವನ


ಚೂಟಿ ಚಂದಿರ


ಚಂದಿರನ ತೋಟದೊಳೆನ್ನ ಹೂ ನಗಲು
ಚುಕ್ಕಿಯೆಂದ್ ಹೆಸರಿಟ್ಟರು ನನ್ನ ಗೆಳತಿಯರು
ಹೊಳೆ ಹೊಳೆದು ಕಾಡುತ್ತಿದ್ದ ತುಂಟನು
ಮಿಂಚಂತೆ ಎನ್ನ ಸೆಳೆವ ತುಂಟರನ್ನು ಸಲಹುವ ಹಿರಿಯವನು

ಅವನಂತೆಯೇ ಮಾಯಗಾರರೀ ಚುಕ್ಕಿಗಳು
ಕಣ್ಗಳೋಳಿಳಿದು ಹೊಮ್ಮುವ ಮಾಯಾ ಬಿಂಬಗಳು
ಸುಮ್ಮನಿದ್ದಷ್ಟೂ ಹೆಚ್ಚೇ ಕೆಣಕುವ ಮೋಹನನು
ಕೊಳಲ ನಾದದಲೆಗಳ ಮೇಲೆ ಚುಕ್ಕಿಗಳ ತೇಲಿಸಿ ಹೂವಾಗಿಸಿಹನು

ಚಂದಿರನಾಸೆಗೋ, ಹೂಗಳ ಕಂಪಿಗೋ ನಶೆಯೇರಿ
ಕಾಣೆನೋ ಈ ಜಗವನೀಗ, ಕಂಡಲೆಲ್ಲಾ ನೀನೇ ಅಮೋಘ
ಎಷ್ಟು ಕಾಡುವೆಯೋ ಚಂದಿರ ನನ್ನ ನೀ
ಚುಕ್ಕಿ-ಹೂಗಳ ತೋರಿ ಸಂಚುಗಳ ಹೂಡಿ

ಒಮ್ಮೆಯೂ ಕೈಗೆ ಸಿಗದೇ ಅಲ್ಲೇ ನಿಂತು
ಎನ್ನ ಮನವ ಕುಣಿಸುವೆಯಲ್ಲೋ ನೀ ಜಾದೂಗಾರ
ಸಿಕ್ಕರೆ ನೋಡು ಎಷ್ಟು ಜನ್ಮಗಳ ಕೋಪ ತೀರಿಸಿಕೊಳ್ಳುವೆನೋ
ಚಂದಿರ, ನಿನ್ನ ಮೇಲೆ,,,,, 
ಪ್ರೀತಿಯಿಂದ ಮತ್ತೂ ಪ್ರೀತಿಯಿಂದ!  

-ದಿವ್ಯ ಆಂಜನಪ್ಪ
21/01/2014

Monday, 20 January 2014


ಕವಿ ಮನದೊಳ ಅವಳು
ಕವನ;
ಕವಯತ್ರಿ ಹೃದಯದೊಳ ಅವನು
ಸದಾ ಕದನ;
ಕವನ ನಿಲ್ಲದೆ ಹರಿವುದು 
ಅವಳನ್ನರಸಿ
ಕದನ ನಿಲ್ಲದೆ ನಡೆವುದು 
ಇಲ್ಲದ ಅವನನ್ನುಳಿಸಿ!



***


ಮುತ್ತುಗಳು ಅಡಗಿವೆಯಂತೆ 
ಕಡಲಾಳದೊಳು,
ಕೇಳಿದ್ದೆ;
ಹಾಗೆಯೇ
ಇವನೊಲವಾಳದೊಳು..
ಜಾರುತ್ತಿರುವೆ ರಭಸದಿ
ಅವನೊಳು 
ಕಳೆದು ಹೋಗಲು.....


***


ಆದ ತಪ್ಪುಗಳನ್ನೇ ವಾದಿಸುವ ಬದಲು 
ಸರಿಪಡಿಸಲು ಗೆಲ್ಲೋಣವೇ 
ಪರಸ್ಪರ ಮನಸುಗಳನು ಮತ್ತೊಮ್ಮೆ 



***


ಕನಸು ಬೀಳಲೆಂದು ಆಶಿಸದಿರಿ,
ಬೀಳುವ ಕನಸುಗಳಲ್ಲ ನನ್ನದು
ಬೆಳಗುವ ಕನಸುಗಳು,
ಇಚ್ಛೆಯಂತೆ ಹೆಣೆವೆನು ಹಗಲುಗಳಲಿ
ಉಳಿಸಿ ರಾತ್ರಿಗಳ, 
ನಿದಿರೆಗಾಗಿ,,


20/01/2014

ಆಡದ ಮಾತೊಂದಿದೆ ನನ್ನಲಿ
ನೀ ಕೇಳುವುದಾದರೆ;
ಸ್ನೇಹ,
ತಿಳಿಯದ ಒಗಟೊಂದಿದೆ ಕೈಯಲಿ
ನೀ ಬಿಡಿಸುವೆಯಾದರೆ;
ಪ್ರೀತಿ,
ಸ್ನೇಹದಿ ಆಲಿಸಿ ಮಿಡಿತವ
ಪ್ರೀತಿಲಿ ಬಿಚ್ಚಿಡು ತುಡಿತವ!


***


ಮನವ ಮರೆಮಾಚಿ ಬದುಕಬಹುದಿತ್ತು
ತೆರೆದಿಡದೆ ಕ್ಷಾಮವ;
ಮನವು ಮನಕೆ ಒಪ್ಪಿಗೆಯಾಗುವಂತ್ತಿದ್ದಿದ್ದರೆ...


18/01/2014

ಮುಳ್ಳುಗಳ ತುಳಿದು ನಡೆಯುವಾಗ
ನರಳಿದ್ದೇನೋ ನಿಜ,,

ಆದರದೇ ಸ್ಫೂರ್ತಿ 
ಹೂವಿನ ಕನಸು ಕಾಣಲು,

ಈ ದಾರಿ ಇನ್ನೂ ಉದ್ದವಾದಂತೆನಿಸಿದೆ
ಕನಸುಗಳ ಸಾಕಾರಗೊಳಿಸಲು

ಮುಳ್ಳುಗಳ ಹಾಸಿದವರಿಗೂ ಈಗ ಎನ್ನ ಗುರುತ್ತಿಲ್ಲವಂತೆ,
ಭ್ರಮೆಯಾಗಿದೆ ಹದಗೊಂಡ ಮನಸ ಕಂಡು

'ಕೊಂದ ಕನಸು, ಮನಸು ಇದುವೆ?!'
ಎಂಬುದ್ಗಾರವೇ ಈಗೀಗ ಎನ್ನ ಕಿವಿಯೊಳು ಇನಿದಾಗಿದೆ.......

DA


18/01/2014

Friday, 17 January 2014


ಗುಬ್ಬಿಯಂತೆ ನೀ ನನ್ನ ಕಾಣುವಾಗ
ಮರಿಯಂತೆ ನಿನ್ನೊಡಳೊಳು ಅವಿತುಕೊಳ್ಳುವ ಆಸೆ 
ಒಮ್ಮೆ ತೋಳ ತೆಕ್ಕೆಯೊಳು ಬಂಧಿಸಿದರೂ
ಮತ್ತೊಮ್ಮೆ ಹಾರಿಸಿ ಭರವಸೆ ಆಗುವೆಯೆಂಬ ನಿರೀಕ್ಷೆ





DA
17/01/2014

ಜೀವನವು ಈಗೀಗ ಜೀಕುವ ಜೋಕಾಲಿಯಂತೆ
ಮುಂದೆ ಹೋದಂತೆ ಹಿಂದೆ ಜಗ್ಗುವುದು
ಶೋಧಿಸಲೆಂದೇ ಎನ್ನ ಅಹಂ;
ಆದರೆ ಪ್ರತೀ ಬಾರಿ ಬೆನ್ನ ತಟ್ಟಲೊಂದು ಕೈ
ಮುನ್ನುಗ್ಗಿಸಲು ನಿರಂತರ ಹಾತೊರೆಯುವುದು!


***


ಬಂಧಗಳಿಂದ ಕಳಚಿಕೊಂಡು ಓಡಿದಷ್ಟೂ
ಬಂಧಿಸಿಕೊಳ್ಳೊ ಸೆಲೆಗಳೇ
ಬದುಕ ಕಟ್ಟುವ ಸ್ಫೂರ್ತಿಗಳು


16/01/2014

ಕವನ


"ಛಲದ ಮಕ್ಕಳು"

ಎಂದೋ ಆ ಕಂದನೂ ಕನಸು ಕಂಡು ಕನವರಿಸಿತ್ತು
ಕಳೆದ ತನ್ನ ತಾಯಿ ಮತ್ತೆ ಹುಟ್ಟಿ ಬರಲೆಂದು,
ನಾ ಅವಳ ಮಗಳಾಗಿ ಲಾಲಿಸಿ ತಾಯಿಯಂತೆ ಕಾಣುವೆ
ಇಲ್ಲವೇ ಕಣ್ಮರೆಯಾದಂತೆ ಮತ್ತೆಲ್ಲೋ ಎದುರುಗೊಳ್ಳಲೆಂದು
ಭ್ರಮೆಗೊಂಡು ಎಲ್ಲವ ಮೆರೆತಂತ್ತಿದ್ದರೂ ಸರಿಯೇ
ಒಮ್ಮೆ ಕಾಣಬೇಕಿದೆ ಆ ತಾಯಿಯ ಮೊಗವನಷ್ಟೇ
ಬೇಡ ನನಗವಳಲ್ಲಿ ಮಗಳ ಪಟ್ಟ,
ಮತ್ತೊಮ್ಮೆ ಆ ಅಮ್ಮನ ನೋಡಿದ ಖುಷಿಯೇ ನಿರಂತರ
ಮುಗ್ಧ ಮಕ್ಕಳ ಕನಸುಗಳೂ ದಿಟವಾಗಿಯೂ ಸಾಕಾರಗೊಳ್ಳುವವು
ದೇವನ ಮನ ಮುಟ್ಟುವಂತೆ ಮಕ್ಕಳೂ ಕನಸು ಕಾಣುವರು

16/01/2014


ಕವನ

ಕನ್ನಡಿಯೊಳ ಕಣ್ಗಳು


ಕನ್ನಡಿ ಎದುರು ಸಿಂಗರಿಸಿ ನಿಂತಾಗ
ಎನ್ನ ನಯನದೊಳಿಳಿದು ನಾನೇ ಕಳೆದು ಹೋಗುವಾಗ
ಅದರೊಳು ನಿನ್ನ ಕಾಣುವ ಕಾತುರತೆಗೆ
ಬೆಚ್ಚಿ ನಿಲ್ಲುವೆವು;
ನಾನು ಮತ್ತು ನನ್ನ ಕನ್ನಡಿ,

ಅನುಮಾನವಿದೆ ಎನಗೆ
ನಿನ್ನ ನಿರೀಕ್ಷೆಯಿರುವುದು ಎನ್ನ ಕನ್ನಡಿಗೋ?
ಇಲ್ಲವೇ ಅದರೊಳ ಕಣ್ಗಳಿಗೋ?
ಕಲ್ಪಿಸುವ ಕಣ್ಗಳು ತಂದು ನಿಲ್ಲಿಸುವವು
ಹಠಕ್ಕೆ ಬಿದ್ದಂತೆ;
ಎನ್ನ ಬೆಂಗಾವಲಂತೆ ನಿನ್ನ

ಕನಸೋ, ಕಲ್ಪನೆಯೋ
ಎನ್ನ ಕಣ್ಗಳ ಕಾಂತಿಯೊಳು 
ನೀನಿನ್ನೂ ಬಲು ಸೋಜಿಗ
ದೃಷ್ಟಿ ನೆಟ್ಟಂತೆ ತೋರಿದೆ 
ಬೊಗಸೆ ಬದುಕಲಿ ತೇಲಿದೆ
ನವೀನ ರೀತಿಯ 
ನಿನ್ನ ಪ್ರೀತಿಯ 
ಈ ವಸಂತ ಋತು...

DA
15/01/2014

ಜಲ್ಲೆ ಸವೆದರೂ 
ಸವೆಯದ ಸವಿಯಂತೆ
ಬದುಕು ಸೂರ್ಯನಡಿ
ಹೊಂಗಿರಣಗಳಂತೆ 
ಹೊಮ್ಮಿ ಬೆಳಗಲಿ
ಪ್ರಜ್ವಲಿಸುವಂತೆ....



15/01/2014

-ದಿವ್ಯ ಆಂಜನಪ್ಪ

"ಇಲ್ಲದ ನೀನು".......

ಇಲ್ಲದ್ದನ್ನು ಇದೆ ಎಂದು ನಿರೂಪಿಸ ಹೊರಟ್ಟಿದ್ದೇ ನನ್ನ ದಡ್ಡತನವೇನೋ,
ನೀನಿಲ್ಲ, ಈ ಪ್ರೀತಿ ಇಲ್ಲ, ಇರುವುದೆಲ್ಲವೂ ನನ್ನ ಭ್ರಮೆ,
ಗೊತ್ತಿತ್ತು ನನಗೆ ಅದರೂ ಹುಚ್ಚು ಕನಸುಗಳು ಮೃದುಗೊಳಿಸಿದವು ಎನ್ನ ಮನವ,
ದಿಕ್ಕೆಡಿಸಿದ ಆ ಹೊಡೆತಕೆ ಕಾಲನ ಗರ್ಭದೊಳು ಎಂದೋ ಸೇರಿದ್ದ ನನ್ನ ಆಕಾಂಕ್ಷೆಗಳ,
ಸುಮ್ಮನೆ ಕೆಣಕಿದೆನಷ್ಟೇ ಕಾವ್ಯದೊಳು ಹಾಗೇ ಮೈಮರೆತೊಮ್ಮೆ,
ವ್ಯಸನದಂತೆ ಹುಟ್ಟಿಕೊಂಡವೋ ಕಲ್ಪನೆಯ ನಿನ್ನ ಪ್ರೀತಿ ಪ್ರೇಮಗಳು,
ಇಲ್ಲದ ನಿನ್ನ ಹುಡುಕುತ, ರಚ್ಚೆ ಹಿಡಿಯುವ ಮುನ್ನ, 
ಹಾಕಬೇಕೆಂದಿರುವೆ ಈ ಮನಸಿಗೆ ವಿರಾಮ,,,, 


13/01/2014

Monday, 13 January 2014


ಭ್ರಮೆಯ ಕವನದಲ್ಲೊಮ್ಮೆ
ಹುಟ್ಟಿದ ಪ್ರೀತಿಯು
ನಿಜವೆಂಬ ಕಥೆಯೊಳು
ಇನ್ನಿಲ್ಲದಂತೆ ನಿರೂಪಿಸಿರಲು
ನೋಡುತ್ತಲೇ
ಪ್ರೀತಿ ಅದೃಶ್ಯವಾಗಿ 
ದುರಂತವಾಗಿಹುದು
ಬದುಕೆಂಬ
ರುದ್ರ ನಾಟಕದಲಿ...

DA

13/01/2014