Saturday, 21 February 2015

ಕವನ

ಕತ್ತಲೆಯ ಕೋಣೆ



ಆ ಕತ್ತಲೆಯ ಕೋಣೆಯಲ್ಲಿ
ದೀಪವ ಹಚ್ಚುತ್ತಿದ್ದಳು
ಏಸು ದಿನದ ಜಡವಿತ್ತೊ
ರಜ ತುಂಬಿ ಹೊಮ್ಮಿತ್ತು

ಕಡ್ಡಿ ಗೀರಿ ಗೀರಿ ಹೊತ್ತಿಸಿದ್ದಳು
ದೀಪವದು ಸಣ್ಣಗೆ ಉಲಿದಂತೆ
ಎಣ್ಣೆ ಇತ್ತೋ ಇಲ್ಲವೋ
ತುಸು ಹೆಚ್ಚೇ ಮಬ್ಬು ಮಬ್ಬು

ಒಂದೆರಡು ಘಳಿಗೆಯಲ್ಲಿ 
ಬತ್ತಿ ನೇರವಾಗಿತ್ತು
ಹರಡಿತ್ತು ಬೆಂಕಿ ಬತ್ತಿಯ ತುದಿಯ ದಾಡಿ
ಕತ್ತಲ ಕೋಣೆಗೆ ಬೆಳಕು ತುಂಬುತ್ತಿತ್ತು

ಕನಸುಗಳು ಗರಿಕೆದರಿಸಿದ ಕತ್ತಲದು
ಹೊತ್ತಿಕೊಳ್ಳುತ್ತಿತ್ತು ಬೆಳಕಿಗೆ
ಆಕೆ ಸೊಡರಿಡುತ್ತಿದ್ದಳು
ಕೂಪದೊಳಗಣ ಕಣ್ಕಿಡಿಗಳಿಗೆ

ಪ್ರಜ್ವಲಿಸಿದವೋ ದೀವಿಗೆ
ಒಂದೊಂದೆ ಕನಸಗಳ ಹೊತ್ತಿಕೊಂಡ ಸುದ್ದಿ
ಹುಡಿಯೊಳು ಹೊರಳಿದ್ದ ಕೀಟವೆಲ್ಲಾ ಗುಲ್ಲು
ದಿಕ್ಕೆಟ್ಟು ಹೊರಗೋಡುತ್ತಿರುವ ಹುಳುಗಳು

ತಾಯಿ ಹಿಡಿದಿಹಳು ದೀಪವ
ಈ ಹೊತ್ತು ಮುಂದಣ ಹೆಜ್ಜೆ ದಾರಿಗೆ
ಅನುಸರಿಸಿ ನಡೆದಿದೆ ಕನಸುಗಳು
ಚಿಟಪಟನೆ ಉರಿದು ಸಿಡಿಲಂತೆ ಸದ್ದು!

21/02/2015

No comments:

Post a Comment