Saturday, 21 February 2015

ಕವನ

ಬೇಕು ಇಲ್ಲಗಳ ನಡುವೆ....


ಮೋಹದ ಜಾಜಿಮಲ್ಲೆ ಮುಡಿದಿದ್ದೆ
ಸಂಜೆಗೆ ಕೆಂಚಗೆ ಮುದುಡುತ್ತಿದೆ
ನಿರ್ಮಲ ಪ್ರೇಮಮಲ್ಲಿಗೆಯ ಮುಡಿದಿದ್ದರೆ
ಇನ್ನೂ ಅರಳುತ್ತಿತ್ತೋ ಏನೋ ಈ ಸಂಜೆಗೆ?!

ಮುಡಿಯಲು ಮೊಲ್ಲೆಯ ನೆಚ್ಚಿದ್ದೆ ತಪ್ಪಾಯ್ತು
ಚೆಂದದ ಹರಳುಗಳಿದ್ದವು ದುಕಾನಿನಲ್ಲಿ
ಆರಿಸಿ ತರಬೇಕಿತ್ತು ಮುಂಚಿಗೆ; ಈಗ
ದುಕಾನು ಬಂದಾಗಿದೆ ಮಲ್ಲಿಗೆಯೂ ಬಾಡಿದೆ

ಕಾಲಕ್ಕೆ ತಕ್ಕಂತೆ ಬುದ್ಧಿ ಓಡದು ನನಗೆ
ಅದೆಂತದೋ ನನ್ನದೇ ಕಲ್ಪನೆಗಳ ಆಲಾಪಗಳು
ಹೊರಗಿನ ಜಗಕ್ಕೆ ಎಂದಿಗೂ ಅಪರಿಚಿತಳು
ನಾನು ಇಂದಿಗೂ 'ನಾನೇ' ಆಗಿ ಉಳಿದೆ

ಬದಲಾವಣೆಗಳೇ ಇಲ್ಲದ ಮನಸ್ಸು
ಎಂದಿಗೂ ಸಂಕುಚಿತ ಸ್ವಾರ್ಥಿಯು
ಖಿನ್ನವಾಗುವುದು ಒಮ್ಮೊಮ್ಮೆ
ತನ್ನನೇ ತಾ ಬಣ್ಣಿಸಿ ಅಳೆದು ಸುರಿದು

ಒಂದಷ್ಟು ಕುತೂಹಲಗಳ ಹುಟ್ಟುಹಾಕಿಕೊಂಡು
ಮತ್ತಷ್ಟೂ ಕೌತುಕಳಾದೆ ಬಿಟ್ಟು ಓಡೊ ಈ ಜೀವನಕೆ
ಒಳಗೊಮ್ಮೆ ಹೊರಗೊಮ್ಮೆ ಕೂತು ಯೋಚಿಸಿದೆ
ಜೀವಕ್ಕೆ ಏನೆಲ್ಲಾ ಬೇಕೆಂದು ಜೀವನಕೆ ಏನೆಲ್ಲಾ ಇಲ್ಲವೆಂದು..

21/02/2015

No comments:

Post a Comment