ನನ್ನ ಕವಿತೆಗಳು
ನನ್ನ ಕವಿತೆಗಳು
ನನ್ನನ್ನೇ ಅಣಕಿಸಿದಂತೆ
ಭಾಸವಾಗಿದೆ
ಸ್ವಾರಸ್ಯವೆಂದರೆ
ನಾನೀಗ ಹೆದರುತ್ತಿರುವೆ
ನನ್ನ ಸಾಲುಗಳಿಗೆ
ಯಾರೋ ಗೊಣಗಿಕೊಂಡಂತೆ
ಮರುಗಿದಂತೆ; ತಿವಿದು ಹೇಳಿದಂತೆ
ನನ್ನ ಕವಿತೆಗಳು
ವಿಶಿಷ್ಟ ಮುಖವಾಡಗಳಲಿ
ಬರೆಯಬಾರದಿತ್ತು ಹೀಗೆ
ಬಾಗಿಲು-ಚಿಲಕವಿಲ್ಲದೆ
ಮನವ ಬಯಲು ಮಾಡಿ
ಕೋಟೆ ಕಟ್ಟೋ ಯೋಚನೆ ಈಗ
ಊರೇ ಕೊಳ್ಳೆ ಹೊಡೆದ ಮೇಲೆ
ಎದ್ದು ಎದುರುಗೊಳ್ಳುವವು
ನನ್ನವೇ ಸಾಲುಗಳು
ಅವುಗಳೊಂದೊಂದು ಪ್ರಶ್ನೆಗಳು
ನಾ ಕಳೆದುಕೊಂಡ ನನ್ನ ಉತ್ತರಗಳು
ಹರಿದುಬಿಟ್ಟೆ ಅದ್ಯಾವುದೋ ಆವೇಗಕ್ಕೆ
ನಿರಾಳವಾದೆ ಎನ್ನುವ ಭ್ರಮೆ
ನಿಟ್ಟುಸಿರುಗಳ ಪೋಣಿಸಿಟ್ಟ ಮಾಲೆ
ಕೊರಳಲಿ ಉಳಿದೇ ಇತ್ತು
ಹರಿದಂತೆಲ್ಲಾ ಹಗುರಾಗುವರು
ಇರಬಹುದೇನೋ;
ನಡೆದದ್ದೆಲ್ಲಾ ಮರೆಯಾದೀತೆ
ತೆರೆ ಮೇಲಿನ ಪ್ರಹಸನಗಳು
ಸಾಲುಗಳು ಕೆಣಕಿವೆ ನನ್ನವು
ಸೋತಿದೆ ಬದುಕು
ಕಾಣದ ಉತ್ತರಕೆ
ಮತ್ತೊಂದು ದೀರ್ಘ ನಿಟ್ಟುಸಿರು;
ಹ್ಮೂ ಜೀವವಿದೆ
ಖಾತ್ರಿಯೇ!
06/02/2015
No comments:
Post a Comment