"ಹಾರೆಲೇ ಹಕ್ಕಿ"
ಮಗಳೇ, ಚಿನ್ನು ಮರಿಯೇ
ಹಾರೆಲೆ ನೀನು ನವಿಲ ಗರಿಯೇ
ನಿನ್ನ ಓರಿಗೆಯವರೆಲ್ಲ ಹಾರಿ ಹೋದರು
ಹೋಗಲೇ ನೀನು ಹಾರೆಲೇ ಮುದ್ದೇ..
ಹೌದೋ ಅಪ್ಪ, ಅವರೆಲ್ಲಾ ಹಾರಿಬಿಟ್ಟರು
ಅವರದೆಲ್ಲಾ ಬಲಿತ ರೆಕ್ಕೆಯು
ನಾನು ಹಾರುವೆನಿರು
ತುಸು ಹೊತ್ತು ತಡವೇ.. ನೀ ಸುಮ್ಮನಿರು!
ಹಾರಲೇ ನೀ ಗುಬ್ಬಚ್ಚಿಯೇ, ನನ್ನ ಕೋಗಿಲೆಯೇ
ನಾನಿನ್ನು ಸಲಹೆನು ನಿನ್ನ
ಮೊಟ್ಟೆಯೊಳಗಿನ್ನೂ ನಿನ್ನ ತಂಗಿ-ತಮ್ಮನು
ಪೊಷಿಸಬೇಕಿದೆ ತಕರಾರುಗಳಿಲ್ಲದೆ
ಹಾರಲೇ ನೀ ಹಕ್ಕಿಯೇ...
ಹಾರುವೆನಪ್ಪ ಇಂದಲ್ಲ ನಾಳೆ
ರೆಕ್ಕೆಗಳಷ್ಟು ತೇವವಿನ್ನು
ಆರಲಿ..
ನಾ ಹಾರುವೆ...
ನೆಪಗಳೇ ಆಯ್ತಲ್ಲೆ ಹುಡುಗಿ
ಹಾರಿಬಿಡಲೇ ಬೆಡಗಿ
ಗೂಡುಬಿಟ್ಟು ಹೋಗಲೇ ಹೆಣ್ಣೇ
ಪ್ರಕೃತಿಯದು ಮರುಳೇ
ಹಾರಿ ಹೋರಟುಬಿಡು ಎಲ್ಲರಂತೆ!
ಹೌದಣ್ಣ ಹೌದು ನೀನು ನಿಜವೇ
ಹಾರಿಬಿಡುವೆ ಬಿಡು
ನಿನಗೂ ಮತ್ತೆ ಕಾಣದಂತೆ
ಯಾರ ಇದಿರೂ ಸುಳಿಯದಂತೆ
ಏನು ಮಾಡಲಿ?
ಹಾರುವುದೇ ಅಪರಾಧದಂತೆ
ಸಾಕಿಬಿಟ್ಟೆ ನೀನು;
ದಿಢೀರನೆ ವಚನಗಳ ಬದಲಿಸಿಬಿಟ್ಟೆ
ನನಗೀಗ ದಿಕ್ಕೇ ತೋಚದಂತಾಗಿದೆ
ಒಬ್ಬಳೆ ನಾನೆಲ್ಲಿಗೆಂದು ಹಾರಲೇ ಅಪ್ಪ?!
ಹಾರಿಬಿಡೆಂದು ಹೇಳಬಲ್ಲೆ
ಹೇಗೆ? ಎಲ್ಲಿ? ನಿನಗೆ ಬಿಟ್ಟೆ,
ಹಾರಿ ಹೋಗುವಂತೆ ಹುರಿದುಂಬಿಸಿದ್ದೆ,
ಅಷ್ಟೆತ್ತರ 'ರೆಕ್ಕೆ ಹಿಡಿದು' ನಿನ್ನ ಮೇಲಕ್ಕೆತ್ತಿದ್ದೆ
ನೀನೋ ನೆಲಕ್ಕೆ ಬಿದ್ದೆ
ನನ್ನ ತಪ್ಪೇ?!...
ಗಾಳಿಗೆ ನೀನೆ ಒಡ್ಡಿಕೊಳ್ಳಬೇಕು
ರೆಕ್ಕೆಯ ನೀನೇ ಬಡಿಯಬೇಕು
ಆಗಲೇ ಅಲ್ಲವೇ ನೀನು ಹಾರುವೆ!
ಹೌದಪ್ಪ ಹೌದು,
ನೀನೇನೋ ಕೈ ಎತ್ತಿ
ಬಿಟ್ಟುಬಿಟ್ಟಿದ್ದೆ,
ನಾನೂ ರೆಕ್ಕೆ ಬಡಿದಿದ್ದೆ
'ವಾಯು'ವೂ ಸೆಳೆದುಕೊಂಡಂತೆ
ಖಾಲಿ ಜಗಕ್ಕೆ ನಾ ನುಗ್ಗಿದ್ದೆ
ನನ್ನದು ತಪ್ಪೇ
ಈ ಸೃಷ್ಟಿಯ ಕೈವಾಡಕೆ?!
ನ್ಯೂನತೆಗಳೆಲ್ಲಾ
ನೀ ಅಡಿಯಿಟ್ಟಲ್ಲೇ
ಕಂಡುಬಿಟ್ಟರೆ,
ನನ್ನದೇನು ಅಪರಾಧವೇ ಮಗಳೆ
ಹಾರಿಬಿಡೇ ಅವೆಲ್ಲ ಪುರಾಣಗಳ ಬಿಟ್ಟು
ನನ್ನ ಗೂಡೀಗ ದಿನದಿನಕ್ಕೂ ಕಿರಿದು
ಹೌದು ಕಿರಿದೇ ಎಲ್ಲಾ
ಮನಸು, ಗೂಡು
ಎಲ್ಲವೂ..
ಹಾರಿಯೇ ಬಿಡುವೆ ನಾನಿನ್ನು,
ಬಿದ್ದರೆ
ಇದ್ದೇ ಇದೆ ಎಂದಿನಂತೆ
ಈ ನೆಲವು;
ತೆವಳೊ ಅವಕಾಶವಾದರೂ..
ಮೊದಲೇ
ಹಾರಲಾರದ ಹಕ್ಕಿ ನಾನು
ಹಾರುವೆ ಅಷ್ಟೆತ್ತರಕ್ಕಾದರೂ...
-ಚಿತ್ರ ಕೃಪೆ; ಅಂತರ್ಜಾಲ
17/02/2015
No comments:
Post a Comment