Saturday, 28 February 2015

ಕವನ

ಕಪ್ಪು ಆಗಸ

ಖಾಲಿ ಕಪ್ಪು ಆಗಸಕ್ಕೆ
ಬೆಳ್ಳನೆಯ ಚುಕ್ಕಿಗಳನ್ನಂಟಿಸಿದಂತೆ
ಮಿನುಗಿ ಮೆರೆಯಾಗೊ
ಕನಸುಗಳು
ಹಾದಿಯುದ್ದಕ್ಕೂ ಹರಡಿದೆ
ಈ ಕಪ್ಪಡರಿದ ಜೀವನಕೆ

ಕಪ್ಪಾದ ಕಾರಣಕೆ
ಮಿನುಗಿದಂತೆ ಕನಸುಗಳು
ಮರೆಯಾಗುವುದು ಮತ್ತೂ
ಕಪ್ಪು ತುಂಬುವುದಕೆ

ಆಗಸಕ್ಕಾದರೂ ಅಂತ್ಯವಿಲ್ಲ
ಮನಸಿಗೂ ಈಗ ಅದೇ ಭ್ರಮೆಯೇ
ಹಗಲು ಹಾರಾಡಿ ರಾತ್ರಿ ಚುಕ್ಕಿ ನೆನಸಿ
ಕನಸಿ ಹೊಸೆದು ಬಗೆ ಬಗೆಯ ಖಾದ್ಯ ಸಾಲು

ಸಂತಸವದೆ ಮಿನುಗಿದಷ್ಟು ಹೊತ್ತು
ಕಪ್ಪಿದ್ದಷ್ಟು ಕನಸು
ಬೆಳಕ ಬಯಸುವ ಪ್ರತೀ ಹಗಲು
ಕಾಳರಾತ್ರಿ ಕಪ್ಪನ್ನೊಮ್ಮೆ ಕನಸಾಗಿಸಿಯೇ ನಡೆದಂತೆ!

28/02/2015

ಮಳೆಯ ವಾಸನೆ
ಮಣ್ಣ ಮೈಯೆಲ್ಲಾ
ಕಂಪಿಸುತ್ತಿದೆ 
ಮೋಡದ ಅಂತರಾಳ
ಯಾವ ಘಳಿಗೆಯಲೋ 
ಸೋಬಾನೆ
ಗಾಳಿ ನಶೆಯಲಿ
ಜೋಲಿ ಹೊಡೆದಿದೆ
ಸುದ್ದಿ ಮುಟ್ಟಿಸಲೆಂದೆ
ಅವರಿವರಿಗೆ!


************

ಹಾಲು ಹಾದಿಯ ತುಂಬೆಲ್ಲಾ 
ಹಾಲೇ ಇಲ್ಲ
ಮರುಳೆ
ಹಾಲ ಹಬೆಯಂತೆ ಕಾಣೋ 
ಬೆಂಕಿಯ ಉಗಿ
ಸಾಸಿರ ಸೂರ್ಯರ ನಿಟ್ಟುಸಿರು
ಒಂದೇ ಸಮನೆ ಬೇಯ್ದು

************

ಚಂದಿರನು ನಗುತಲಿರುವನು
ಮರೆಯಲಿ ನಿಂತು 
ನನ್ನ ನೋಡುತ
ನಿದ್ದೆ ಬಾರದ ರಾತ್ರಿಗಳಲಿ 
ಅವನ ತೊರೆದು
ಕನಸು ಕವನಗಳೆಂದು
ಬೆಳದಿಂಗಳ ಮರೆತಿಹಳೆಂದು!

28/02/2015

Friday, 27 February 2015

ಕವನ


ನನ್ನ ಸ್ನೇಹಿತರು!


ನನ್ನ ನೋವುಗಳೆಡೆಗಿನ
ಅವರೆದೆಯ ಪ್ರಾಮಾಣಿಕ ಕೋಪ
ಅದೇನೋ ಹೇಳಲಾರದ ಅನುಭಾವ
ಬೆನ್ನುಗಟ್ಟಿಗಿದ್ದ ಅನುಭವ

ಕಣ್ಣೀರಿಗೂ ಕೆನೆ ಕಟ್ಟಿ
ಹೊಳಪು ತಂದಿಟ್ಟಂತೆ
ಗಾಜಿನ ನಮೂನೆ ಮಾಡಿದ
ಭವ್ಯ ಕಲಾಕಾರರು ನನ್ನ ಸ್ನೇಹಿತರು

ಧಾರೆ ತಿರುಗಿಸಿ
ಕೂಪದಿಂದ ಹೊರ ಚಿಮ್ಮಿಸಿದ
ಪ್ರೀತಿ, ಕಾಳಜಿ ಹೆಸರಿನ 
ಮನುಷ್ಯರು; ನನ್ನ ಗೆಳೆಯರು

ಬಾಂಧವ್ಯಕ್ಕೆ ಬದ್ಧರಾಗಿ
ಎಂದೂ ನಡೆಯುತ್ತಿರುವರು
ನನ್ನಂತೆ ನನ್ನನ್ನುಳಿಸಿ 
ಹರಸಿ ಹುರಿದುಂಬಿಸಿದವರು

ನನಗೂ ಹೆಚ್ಚೇ 
ನನ್ನ ನೋವ ಪೀಳಿಗೆಗಳಿಗೆ
ಉತ್ತರಿಸುವವರು;
ಹೌದು ನನ್ನ ಸ್ನೇಹಿತರು!

27/02/2015

Thursday, 26 February 2015

ಕವನ

ಮಂದೆ


ಎರಡು ದಿನಗಳು ಸಾಕಿದಾತ 
ಹೆಮ್ಮೆ ಎನಿಸಿದ
ಮೈದಡವಿ ನೀರಿಟ್ಟು ಹುಲ್ಲು ಹಾಕಿ

ಮೂರನೇಯ ದಿನವೇ 
ಬಲಿ ನೀಡುವುದಿತ್ತು
ನಾನು ಹೇಗೋ ಜಿಗಿದು ಬಂದೆ

ಮತ್ತೆಷ್ಟೋ ಮಂದೆ 
ಇನ್ನೂ ಕೊಟ್ಟಿಗೆಯೊಳಿವೆ
ಮೇ.. ಮೇ... ಎಂದುಲಿಯುತ

ಓಡಿ ಬಂದ ನನ್ನನು
ಇನ್ನೂ ಪ್ರೀತಿಸುವನಂತೆ ಅವನು
ನಾನು ಮರಳಿ ಹೋಗುವುದಿಲ್ಲ
ಆಗಾಗ ಸುಳಿವೆನು ಅವನ ಹಜಾರದಲಿ
ನಾನಿನ್ನೂ ಬದುಕ್ಕಿದ್ದೇನೆಂದು ಜಿಗಿದು ತೋರಿಸಿ..

26/02/2015
ಕ್ಯಾಂಡಿ ಕ್ರಷ್ 


ಲೈಫು ಲ್ಯಾಂಡಿ ಕ್ರಷ್ ತರ
ಆಟವಾಗೋಗಿದೆ ಗುರು
ಲೆವೆಲ್ ಚೆಂಚ್ ಆಗೊಲ್ಲ
ಪ್ರಯತ್ನ ಬಿಡೊಂಗಿಲ್ಲ
ಲೈಫಲ್ಲಿ ಲೈಫುಗಳಿಗಾಗಿ
ಕಣ್ಣೀರು ಹಾಕಿ ಹೃದಯ
ಸಕ್ಕತ್ ಫೀಲಿಂಗಲ್ಲಿ
ಕಾಯೋದೇ ಆಗೋಗಿದೆ!

ಪ್ಲೀಸ್, ನೋ ಮೊರ್ ರಿಕ್ವೆಸ್ಟ್ಸ್/ಇನ್ವಿಟೇಶನ್ಸ್... ;-)


**********

ಕಳವು

ಕದಿಯುವ ಕಣ್ಣಿಗೆ
ಸಾವಿರ ಕನಸುಗಳು
ನನಗೆ ಅವನು

ನಾ ಕಳ್ಳಿ 
ಅಲ್ಲವೇ ಅಲ್ಲ
ಅವನು ಕದ್ದನಲ್ಲ!

25/02/2015

ಕವನ

ಕೂಗು


ಹೆಣ್ಣು ಚೀರುತ್ತಾಳೆ
ದೌರ್ಜನ್ಯಕೂ ಮುನ್ನ
ಮೌನದಿ;
ನಂತರ
ಸುತ್ತಲ ಗೋಡೆ ಕಿತ್ತು ಹೋಗುವಂತೆ

ಬಲದ ಒತ್ತಡವಿದ್ದಾಗ
ಒತ್ತಿ ಹಿಡಿದದ್ದು
ತಾಮಸ ವೃತ್ತದೊಳು ಅವಳದೇ
ಅಟ್ಟ ಹಾಸ
ಹೌದು ಚೀರುವಳು
ಬರೀ ಚೀರುವಳು

ಯಾರಿದ್ದಾರೆ ಯಾರಿಲ್ಲ 
ಏನನ್ನೂ ನೋಡಳು
ಕೇಳುವವರಿಲ್ಲ
ನೋಡುವವರಿಲ್ಲ
ಆದರೂ ಅರಚಿಯೇ ತೀರುವಳು

ಅವಳೂ ಹೆಣ್ಣೇ
ಮರುಗಟ್ಟಿದ ನೋವುಗಳಿಗೆ
ತಾನೇ ದನಿ ಎತ್ತಿದ ಕೂಗಾಗಲು
ತಾನೇ ಹೋರಾಡುವಳು
ಅವಳೊಂದಿಗೆ
ಹರವಿ ತನ್ನದೇ ಭಗ್ನ ಭೂತಗಳ

ಚೀರುತ್ತಾಳೆ ಚೀರುತ್ತಾಳೆ
ಮಾಡು ಮುರಿದು ಬೀಳುವಂತೆ
ಬಿದ್ದರೂ ಬಿದ್ದೀತು ಮಾಡು
ಅಡಗದು ಕೂಗು ಅವಳದು

ನೋವುಗಳನ್ನೆಲ್ಲಾ ಉಂಡ ಮೇಲೆ
ಮಿಕ್ಕಂತೆ ತೇಗು
ಈ ಕೂಗು!

25/02/2015
ನನ್ನಲೂ ಲೋಪಗಳುಂಟು
ಗೆಳೆಯ,
ಆತುರಪಟ್ಟು ಅತ್ತಿಹಣ್ಣು
ಎನ್ನದಿರು
ಅಷ್ಟು ಆಳಕೆ ಯಾರು ಯಾರನ್ನೂ
ಭೇದಿಸಿ ನೋಡಲಾರರು
ನೋಡಿದರೆ ಅವನೇ ಜ್ಞಾನಿ
ಅತ್ತಿಹಣ್ಣೂ ಸಹ ಸಿಹಿ ಎನ್ನುವನು!

25/02/2015

Monday, 23 February 2015

ಈಜು ಬರುವುದು ಎನಗೆ
ದಡ ದಾಟಿ ಈಜಲಾರೆನು
ಯಾರೊ ತಡೆ ಇಟ್ಟುಬಿಟ್ಟಿದ್ದಾರೆ
ನನ್ನ ಈಜಿಗೆ ದಡವೊಡ್ಡಿ!

23/02/2015
"ಜೊತೆಯಲಿ"

ನಡು ರಾತ್ರಿ
ಕೋಣೆಯೊಳಗೆಲ್ಲಾ
ಬೆಳಕೇ ಬೆಳಕು
ನೀನಿದ್ದೆ ಮನದಲಿ!

ಕೇಳಿದ ಹಾಡೆಲ್ಲ 
ಮಧುರವಂತೆ
ಶಬ್ದವಿಲ್ಲ 
ಭಾವ ತುಂಬಿ

ಅರಳೊ ಹೂವಿಗೆ
ಹುಟ್ಟಿಕೊಂಡ 
ಹೊಸ ಕಂಪು
ನೀನಿದ್ದಂತೆ 
ಜೊತೆ ಜೊತೆಯಲಿ....

23/02/2015

ಕವನ

"ಚಿತ್ರ"


ನಾನು ಗೆರೆಗಳನ್ನು
ಮೂಡಿಸುವುದರಲ್ಲೆ
ಉಳಿದೆ
ಬಣ್ಣ ತುಂಬುವ ಕಾಲ
ಮರೆತೆ!

ಮನವ ಮುಟ್ಟುವುದಕು
ಮನದೊಳು ಉಳಿವುದಕೂ
ವ್ಯತ್ಯಾಸಗಳಿದ್ದವು
ಕಾರಣಗಳು 'ಅನೇಕ'
ಅದರೊಳು ನನ್ನವಿವು

ನನ್ನದೊಂದು 
ಪೂರ್ಣ ಚಿತ್ರ 
ಇನ್ನೂ ಇಲ್ಲ..!

23/02/2015

ಕವನ

"ಅತಿರೇಕ"


ನಶೆ ಮತ್ತು ಪಥ್ಯ
ಒಂದೇ ಆಗಿದೆ
ನೀ
ಮನಸ್ಸಿಗೆ..

ಕಾಣದೆ
ಮಂಕಾಗಿದೆ
ರಂಗು ಕಳೆದು 
ಆಗಸ, ಸಂಜೆ

ನಿರ್ಲಕ್ಷ್ಯವೇ
ಆದರೆ
ಕಣ್ಣುಮುಚ್ಚಿ ನಡೆದೇ ಬಿಡುವೆ
ಎಂದಿನಂತೆ ಸುಮ್ಮನೆ

ಕಾಡಿದರು ಚೆಂದವೆ
ಕಾಯಿಸದೆ
ಆಕಸ್ಮಿಕವೆಂಬಂತೆ
ನೆನಪಾಗಲಿ ನಾ
ದಿನಕ್ಕೊಮ್ಮೆಯಾದರೂ ನಿನಗೆ

ನನ್ನವೆಲ್ಲಾ ಅತಿರೇಕವೆ
ಇದು ಗೊತ್ತೇ ಇದೆ
ಅತೀ ಮುದ್ದಿಗೆ
ಕೆನ್ನೆ ನೊಂದಂತೆ!

22/02/2015
ಕಲ್ಪನೆಗಳನ್ನೆಲ್ಲಾ 
ಸಿಂಗರಿಸಿ
ಬರೆದುಬಿಟ್ಟೆ
ನಿನ್ನ ಬರೆಯಲು 
ಸೋಲುತಿಹೆನು..

22/02/2015

Saturday, 21 February 2015

ಕವನ

ಕತ್ತಲೆಯ ಕೋಣೆ



ಆ ಕತ್ತಲೆಯ ಕೋಣೆಯಲ್ಲಿ
ದೀಪವ ಹಚ್ಚುತ್ತಿದ್ದಳು
ಏಸು ದಿನದ ಜಡವಿತ್ತೊ
ರಜ ತುಂಬಿ ಹೊಮ್ಮಿತ್ತು

ಕಡ್ಡಿ ಗೀರಿ ಗೀರಿ ಹೊತ್ತಿಸಿದ್ದಳು
ದೀಪವದು ಸಣ್ಣಗೆ ಉಲಿದಂತೆ
ಎಣ್ಣೆ ಇತ್ತೋ ಇಲ್ಲವೋ
ತುಸು ಹೆಚ್ಚೇ ಮಬ್ಬು ಮಬ್ಬು

ಒಂದೆರಡು ಘಳಿಗೆಯಲ್ಲಿ 
ಬತ್ತಿ ನೇರವಾಗಿತ್ತು
ಹರಡಿತ್ತು ಬೆಂಕಿ ಬತ್ತಿಯ ತುದಿಯ ದಾಡಿ
ಕತ್ತಲ ಕೋಣೆಗೆ ಬೆಳಕು ತುಂಬುತ್ತಿತ್ತು

ಕನಸುಗಳು ಗರಿಕೆದರಿಸಿದ ಕತ್ತಲದು
ಹೊತ್ತಿಕೊಳ್ಳುತ್ತಿತ್ತು ಬೆಳಕಿಗೆ
ಆಕೆ ಸೊಡರಿಡುತ್ತಿದ್ದಳು
ಕೂಪದೊಳಗಣ ಕಣ್ಕಿಡಿಗಳಿಗೆ

ಪ್ರಜ್ವಲಿಸಿದವೋ ದೀವಿಗೆ
ಒಂದೊಂದೆ ಕನಸಗಳ ಹೊತ್ತಿಕೊಂಡ ಸುದ್ದಿ
ಹುಡಿಯೊಳು ಹೊರಳಿದ್ದ ಕೀಟವೆಲ್ಲಾ ಗುಲ್ಲು
ದಿಕ್ಕೆಟ್ಟು ಹೊರಗೋಡುತ್ತಿರುವ ಹುಳುಗಳು

ತಾಯಿ ಹಿಡಿದಿಹಳು ದೀಪವ
ಈ ಹೊತ್ತು ಮುಂದಣ ಹೆಜ್ಜೆ ದಾರಿಗೆ
ಅನುಸರಿಸಿ ನಡೆದಿದೆ ಕನಸುಗಳು
ಚಿಟಪಟನೆ ಉರಿದು ಸಿಡಿಲಂತೆ ಸದ್ದು!

21/02/2015

ಕವನ

ಕೊಡಲೇ ಹುಡುಗಿ..


ಹೇ ಹುಡುಗಿ
ಕೆನ್ನೆಗೊಂದು ಕೊಡಲೇ..
ಹುಡುಗಿ

ಹೌದೋ ಹುಡುಗ
ನಾನೇ ಕೊಡಲೊ ಏನೋ?

ಆಹಾ ಸುಂದರ!!
ನನಗೆ ತಕ್ಕಂತೆ ರಸಿಕತೆ
ಕೊಟ್ಟುಬಿಡೇ ಹುಡುಗಿ

ಹುಡುಗನೇ, ಒಂದು ಕೊಡಲೇ
ಇಲ್ಲ ಎರಡು?

ಎಷ್ಟಾದರೂ ಸರಿಯೇ ಜಾಣೆ
ಕೊಟ್ಟುಬಿಡೇ ಚತುರೇ
ಕಾತರಿಸಿಹೆನು ಇನ್ನೂ ಕಾಯಿಸಬೇಡ!

ಹೋ ಹೋ ಇಗೋ ನೋಡು
ಒಮ್ಮೆ ಕಣ್ಣು ಬಿಟ್ಟು 
ಕೊಡಲೇ ಹೇಳು

ಆಹಾ ಅತೀ ಸುಂದರ ಕರಗಳು
ಪಾತ್ರೆ ಸ್ವಲ್ಪ ಬೆಳಗೋದು ಬಿಡು
ಬಟ್ಟೆ ಒಗೆಯೋದುನು
ಏನು ಕರಕರ ಸದ್ದು ನಿನ್ನ ಕೈಯ ಸ್ಪರ್ಷ..!! ;-)

21/02/2015

ಕವನ

ಬೇಕು ಇಲ್ಲಗಳ ನಡುವೆ....


ಮೋಹದ ಜಾಜಿಮಲ್ಲೆ ಮುಡಿದಿದ್ದೆ
ಸಂಜೆಗೆ ಕೆಂಚಗೆ ಮುದುಡುತ್ತಿದೆ
ನಿರ್ಮಲ ಪ್ರೇಮಮಲ್ಲಿಗೆಯ ಮುಡಿದಿದ್ದರೆ
ಇನ್ನೂ ಅರಳುತ್ತಿತ್ತೋ ಏನೋ ಈ ಸಂಜೆಗೆ?!

ಮುಡಿಯಲು ಮೊಲ್ಲೆಯ ನೆಚ್ಚಿದ್ದೆ ತಪ್ಪಾಯ್ತು
ಚೆಂದದ ಹರಳುಗಳಿದ್ದವು ದುಕಾನಿನಲ್ಲಿ
ಆರಿಸಿ ತರಬೇಕಿತ್ತು ಮುಂಚಿಗೆ; ಈಗ
ದುಕಾನು ಬಂದಾಗಿದೆ ಮಲ್ಲಿಗೆಯೂ ಬಾಡಿದೆ

ಕಾಲಕ್ಕೆ ತಕ್ಕಂತೆ ಬುದ್ಧಿ ಓಡದು ನನಗೆ
ಅದೆಂತದೋ ನನ್ನದೇ ಕಲ್ಪನೆಗಳ ಆಲಾಪಗಳು
ಹೊರಗಿನ ಜಗಕ್ಕೆ ಎಂದಿಗೂ ಅಪರಿಚಿತಳು
ನಾನು ಇಂದಿಗೂ 'ನಾನೇ' ಆಗಿ ಉಳಿದೆ

ಬದಲಾವಣೆಗಳೇ ಇಲ್ಲದ ಮನಸ್ಸು
ಎಂದಿಗೂ ಸಂಕುಚಿತ ಸ್ವಾರ್ಥಿಯು
ಖಿನ್ನವಾಗುವುದು ಒಮ್ಮೊಮ್ಮೆ
ತನ್ನನೇ ತಾ ಬಣ್ಣಿಸಿ ಅಳೆದು ಸುರಿದು

ಒಂದಷ್ಟು ಕುತೂಹಲಗಳ ಹುಟ್ಟುಹಾಕಿಕೊಂಡು
ಮತ್ತಷ್ಟೂ ಕೌತುಕಳಾದೆ ಬಿಟ್ಟು ಓಡೊ ಈ ಜೀವನಕೆ
ಒಳಗೊಮ್ಮೆ ಹೊರಗೊಮ್ಮೆ ಕೂತು ಯೋಚಿಸಿದೆ
ಜೀವಕ್ಕೆ ಏನೆಲ್ಲಾ ಬೇಕೆಂದು ಜೀವನಕೆ ಏನೆಲ್ಲಾ ಇಲ್ಲವೆಂದು..

21/02/2015

Friday, 20 February 2015

ಕವನ

"ಆಸೆ"



ಸುತ್ತಲ ಅಸ್ತವ್ಯಸ್ತಗಳೆಲ್ಲಾ
ನಗಣ್ಯವಾಗಿ ಹೋಗಿದೆ
ಎಲ್ಲಿದ್ದೆನೊ ಎಲ್ಲಿಲ್ಲವೊ
ಮತ್ತೆಲ್ಲೋ ಇದ್ದಂತೆ
ಎಲ್ಲವೂ ಒಂದೇ ಆಗಿದೆ

ನೆಮ್ಮದಿಯಾಗಿರದ 
ಜೀವವಿದು
ಹೇಗೋ ನೆಮ್ಮದಿಯ 
ಅನುಭವಿಸುತ್ತಿದೆ
ಎಲ್ಲಿಯವರೆಗೂ? 
ಎನ್ನುವ ಆತಂಕವ ತೊರೆದು

ಯಾಕಿಷ್ಟು ನಗು, ಹೊಡೆತಗಳ
ನಡುವೆ ಈ ನೊರೆಯುಕ್ಕೊ ಹಾಲ್ಗಡಲು..
ಯೋಚಿಸುತ್ತಾ ಹೋದರೆ
ಅಲೆದಾಡುವ ಮನಕ್ಕೆಲ್ಲೋ
ಶುದ್ಧ ಗಾಳಿ ದೊರೆತಂತೆ ಆಹ್ಲಾದ!

ಬದುಕಲು ಉಸಿರಾಡಿದರೆ
ಈಗೆಲ್ಲಾ ಎದೆಯೊಳು ತುಂಬಿಕೊಳ್ಳುವಂತೆ
ದೀರ್ಘ ಉಸಿರಾಟ
ಆಯುಷ್ಯವ ಹೆಚ್ಚಿಸಿಕೊಳ್ಳಲು

ಹೊಸ ತರ ಹೊಸತನಗಳೆಂದರೆ
ಇದುವೆ ಏನೋ?! ; 
ಇನ್ನೂ ಇವೆಯೋ?!
ಹೇಳಲಾರೆಯ ನೀ ಕುಳಿತು
ಪಕ್ಕದಲ್ಲೊಮ್ಮೆ ಹೀಗೆ...
ಗಲ್ಲದ ಮೇಲೆ ಕೈಯಿಟ್ಟು 
ನಿನ್ನ ಕಲಿಯುತ
ಕೇಳುವಾಸೆಯಾಗಿದೆ....

20/02/2015

ಕವನ

"ಪ್ರೀತಿ"


ಪ್ರೀತಿ ಹುಟ್ಟಿ 
ನಂತರ 
ಕವಿತೆ ಹುಟ್ಟುವುದೊ
ಕವಿತೆ ಕಟ್ಟಿ 
ನಂತರ
ಪ್ರೀತಿ ಹುಟ್ಟುವುದೊ
ಹುಟ್ಟಿ ಕಟ್ಟುವುದೊ

ಕಟ್ಟಿ ಹುಟ್ಟುವುದೊ
ಹುಟ್ಟಿಗೂ ಮುನ್ನಿಂದ
ಮಿಡಿಯುತಿದೆ
ನನ್ನೊಳಗೆ ನನ್ನೊಂದಿಗೆ
ಈ ಹೃದಯ
ಈಗ ಪ್ರೀತಿಗೆ ಬಿದ್ದಿದೆ
ಈ ಕವಿತೆಯೊಳು!

ಹುಟ್ಟಿ ಕಟ್ಟಿ
ಬೆಸೆಯಬೇಕಿದೆ
ಭರವಸೆಗಳನು
ಕವಿತೆಯ ಒಂದೊಂದೆ 
ಸಾಲುಗಳನು
ಪ್ರೀತಿಯಿಂದ...
ಹೌದು ಬರೀ ಪ್ರೀತಿಯಿಂದ..

19/02/015

ಕವನ

(ಮಕ್ಕಳ ಪದ್ಯ)
''ಪುಟ್ಟ ಹಕ್ಕಿ''



ಪುಟ್ಟ ಹಕ್ಕಿ ಮರಿಯೇ
ನೀ ಚೀವ್ ಚೀವ್ ಎನ್ನತ ಬಾರೆ
ಅಮ್ಮನಿಗೆ ನಾ ಹೇಳಿರುವೆ
ದಿನವೂ ನಿನಗಿಡುಲು ನೀರ ಅರಿವೆ

ಬಾರೆ ಗಿಳಿಯೇ, ಬಾರೇ ನವಿಲೇ
ನನ್ನೊಡನಾಡಲು ಅಳಗುಳಿಮನೆಯೇ
ಚಕ್ಕುಲಿ, ಕೋಡುಬಳೆ, ಪಾಯಸ, ಸಜ್ಜಿಗೆ
ನಿನಗೆಂದೇ ನಾ ಎತ್ತಿಟ್ಟಿರುವೆ

ಆಗಸವೇರುವ ನಾವೀಗ
ಅಮ್ಮನ ಕಣ್ತಪ್ಪಿಸಿ ಬೇಗ ಬೇಗ
ಸೂರ್ಯನಿಗೊಂದು ಐಸ್ ಕ್ಯಾಂಡಿ ಕೊಟ್ಟು
ಚಂದ್ರನಿಗೊಂದು ಬಿಸಿ ಕಾಫಿ ಕುಡಿಸಿ
ಓಡಿ ಬಂದುಬಿಡುವ ಧರೆಗೆ

ಬಾ ಬಾ ಹಕ್ಕಿ ಮರಿಯೇ,
ನನ್ನಯ ಕನಸಿನ ಕುಡಿಯೇ
ಚೀವ್ ಚೀವ್ ಎನ್ನುತ ಕಚಗುಳಿ ಇಡುವ
ಬಾರೆ ನನ್ನ ಪ್ರೀತಿಯ ಗೆಳತಿಯೇ


- ದಿವ್ಯ ಆಂಜನಪ್ಪ
೦೯/೧೧/೨೦೧೪


ಕಾಯುವುದು ಬೇಸರವೆನಿಸಿದಾಗ
ನಿನ್ನ ಹುಡುಕಿದೆ
ನಿನ್ನದೂ ಮೌನವೇ ಆದಾಗ
ನನ್ನದೋ ಗದ್ದಲ ಹೆಚ್ಚಳ
ಕಾಯುತ್ತಿರುವೆ ಹಾಗೆಯೇ 
ಸುಮ್ಮನೆ ಹರಟುತ್ತಲೂ....

18/02/2015

Wednesday, 18 February 2015

ಕವನ

"ಪ್ರೀತಿ ಬೆಳಕು"


ಬೆಳಕನು ಹಿಡಿಯುವ 
ಅವಸರದಲಿ
ನೀಡಿದೆ ಕೈಯನು 
ಸಂಜೆಗೆ ಒಡ್ಡಿ

ಅಲ್ಲಿಯೇ ಇದ್ದನು 
ಬೆರಗುಗಣ್ಣಿನ ತುಂಟ
ಅಕ್ಕನ ಮಗನು..
ಬಾರೋ ಇಲ್ಲಿ ನೋಡೋ ಬಣ್ಣ 
ಒಡೆದಿದೆ ಬೆಳಕು..
ಕರೆದೆನು ನಾ ಚೆಂದದಲಿ..

ಹೌದೇ ಎನುತ 
ಓಡಿ ಬಂದವನೇ 
ಹಿಡಿಯಲು ಹೊರಟ 
ಬಾಚಿದಂತೆ 
ಕೈಯೊಳು 
ಕೈ ಹಾಕಿ..

ತಪ್ಪಿಸಿಕೊಂಡ 
ಬಣ್ಣವು ಉಕ್ಕಿ
ಅವನ ಕೈ ಮೇಲೆಲ್ಲಾ 
ಹರಿದು ನಿಂತವು!

ಈ ಬಾರಿಯ ಬೆರಗೆಲ್ಲಾ
ನನಗೆ ಮಾತ್ರ; ಹೌದು
'ಬಣ್ಣವು ಉಕ್ಕುವುದು
ಪ್ರೀತಿಯ ಬೆಳಕಲಿ ಮಿಂದು'!....

ಚಿತ್ರ; ದಿವ್ಯ ಆಂಜನಪ್ಪ



18/02/2015















Monday, 16 February 2015

ಕವನ

"ಹಾರೆಲೇ ಹಕ್ಕಿ"



ಮಗಳೇ, ಚಿನ್ನು ಮರಿಯೇ
ಹಾರೆಲೆ ನೀನು ನವಿಲ ಗರಿಯೇ
ನಿನ್ನ ಓರಿಗೆಯವರೆಲ್ಲ ಹಾರಿ ಹೋದರು
ಹೋಗಲೇ ನೀನು ಹಾರೆಲೇ ಮುದ್ದೇ..

ಹೌದೋ ಅಪ್ಪ, ಅವರೆಲ್ಲಾ ಹಾರಿಬಿಟ್ಟರು
ಅವರದೆಲ್ಲಾ ಬಲಿತ ರೆಕ್ಕೆಯು
ನಾನು ಹಾರುವೆನಿರು 
ತುಸು ಹೊತ್ತು ತಡವೇ.. ನೀ ಸುಮ್ಮನಿರು!

ಹಾರಲೇ ನೀ ಗುಬ್ಬಚ್ಚಿಯೇ, ನನ್ನ ಕೋಗಿಲೆಯೇ
ನಾನಿನ್ನು ಸಲಹೆನು ನಿನ್ನ
ಮೊಟ್ಟೆಯೊಳಗಿನ್ನೂ ನಿನ್ನ ತಂಗಿ-ತಮ್ಮನು
ಪೊಷಿಸಬೇಕಿದೆ ತಕರಾರುಗಳಿಲ್ಲದೆ
ಹಾರಲೇ ನೀ ಹಕ್ಕಿಯೇ...

ಹಾರುವೆನಪ್ಪ ಇಂದಲ್ಲ ನಾಳೆ
ರೆಕ್ಕೆಗಳಷ್ಟು ತೇವವಿನ್ನು 
ಆರಲಿ..
ನಾ ಹಾರುವೆ...

ನೆಪಗಳೇ ಆಯ್ತಲ್ಲೆ ಹುಡುಗಿ
ಹಾರಿಬಿಡಲೇ ಬೆಡಗಿ
ಗೂಡುಬಿಟ್ಟು ಹೋಗಲೇ ಹೆಣ್ಣೇ
ಪ್ರಕೃತಿಯದು ಮರುಳೇ
ಹಾರಿ ಹೋರಟುಬಿಡು ಎಲ್ಲರಂತೆ!

ಹೌದಣ್ಣ ಹೌದು ನೀನು ನಿಜವೇ
ಹಾರಿಬಿಡುವೆ ಬಿಡು
ನಿನಗೂ ಮತ್ತೆ ಕಾಣದಂತೆ
ಯಾರ ಇದಿರೂ ಸುಳಿಯದಂತೆ
ಏನು ಮಾಡಲಿ? 
ಹಾರುವುದೇ ಅಪರಾಧದಂತೆ
ಸಾಕಿಬಿಟ್ಟೆ ನೀನು;
ದಿಢೀರನೆ ವಚನಗಳ ಬದಲಿಸಿಬಿಟ್ಟೆ
ನನಗೀಗ ದಿಕ್ಕೇ ತೋಚದಂತಾಗಿದೆ
ಒಬ್ಬಳೆ ನಾನೆಲ್ಲಿಗೆಂದು ಹಾರಲೇ ಅಪ್ಪ?!

ಹಾರಿಬಿಡೆಂದು ಹೇಳಬಲ್ಲೆ
ಹೇಗೆ? ಎಲ್ಲಿ? ನಿನಗೆ ಬಿಟ್ಟೆ,
ಹಾರಿ ಹೋಗುವಂತೆ ಹುರಿದುಂಬಿಸಿದ್ದೆ,
ಅಷ್ಟೆತ್ತರ 'ರೆಕ್ಕೆ ಹಿಡಿದು' ನಿನ್ನ ಮೇಲಕ್ಕೆತ್ತಿದ್ದೆ
ನೀನೋ ನೆಲಕ್ಕೆ ಬಿದ್ದೆ
ನನ್ನ ತಪ್ಪೇ?!...
ಗಾಳಿಗೆ ನೀನೆ ಒಡ್ಡಿಕೊಳ್ಳಬೇಕು
ರೆಕ್ಕೆಯ ನೀನೇ ಬಡಿಯಬೇಕು
ಆಗಲೇ ಅಲ್ಲವೇ ನೀನು ಹಾರುವೆ!

ಹೌದಪ್ಪ ಹೌದು, 
ನೀನೇನೋ ಕೈ ಎತ್ತಿ
ಬಿಟ್ಟುಬಿಟ್ಟಿದ್ದೆ,
ನಾನೂ ರೆಕ್ಕೆ ಬಡಿದಿದ್ದೆ
'ವಾಯು'ವೂ ಸೆಳೆದುಕೊಂಡಂತೆ
ಖಾಲಿ ಜಗಕ್ಕೆ ನಾ ನುಗ್ಗಿದ್ದೆ
ನನ್ನದು ತಪ್ಪೇ
ಈ ಸೃಷ್ಟಿಯ ಕೈವಾಡಕೆ?!

ನ್ಯೂನತೆಗಳೆಲ್ಲಾ 
ನೀ ಅಡಿಯಿಟ್ಟಲ್ಲೇ
ಕಂಡುಬಿಟ್ಟರೆ,
ನನ್ನದೇನು ಅಪರಾಧವೇ ಮಗಳೆ
ಹಾರಿಬಿಡೇ ಅವೆಲ್ಲ ಪುರಾಣಗಳ ಬಿಟ್ಟು
ನನ್ನ ಗೂಡೀಗ ದಿನದಿನಕ್ಕೂ ಕಿರಿದು

ಹೌದು ಕಿರಿದೇ ಎಲ್ಲಾ 
ಮನಸು, ಗೂಡು
ಎಲ್ಲವೂ..
ಹಾರಿಯೇ ಬಿಡುವೆ ನಾನಿನ್ನು,
ಬಿದ್ದರೆ 
ಇದ್ದೇ ಇದೆ ಎಂದಿನಂತೆ
ಈ ನೆಲವು;
ತೆವಳೊ ಅವಕಾಶವಾದರೂ..
ಮೊದಲೇ
ಹಾರಲಾರದ ಹಕ್ಕಿ ನಾನು
ಹಾರುವೆ ಅಷ್ಟೆತ್ತರಕ್ಕಾದರೂ...


-ಚಿತ್ರ ಕೃಪೆ; ಅಂತರ್ಜಾಲ


17/02/2015

ಕವನ


ಇತಿ-ಮಿತಿ


ಅಗತ್ಯಕ್ಕಿಂತ ಹೆಚ್ಚಿದ್ದರೆ 
ವ್ಯರ್ಥವೇ ಹೌದು
ಅದು ಪ್ರೀತಿಯೇ ಆದರೂ..

ಬೊಗಸೆಗಷ್ಟು ನೀರು ಸುರಿದರೆ
ತುಂಬಿದೊಡನೆ ನಿಲ್ಲಿಸಬೇಕು
ಸಂಭ್ರಮಕೆ ಎಲ್ಲವ ಕೊಟ್ಟುಬಿಟ್ಟರೆ
ಹಿಡಿಯರು ಯಾರೂ ಕಷ್ಟವೆನಿಸಿ!

ಇತಿಮಿತಿಗಳಿರಬೇಕೇನೋ
ಗೊತ್ತೇ ಇಲ್ಲ;
ಇರಲಿ ಬಿಡು ತುಂಬಿಕೊಳ್ಳುವ ಪ್ರವೃತ್ತಿಗೆ
ಕಳೆದುಕೊಳ್ಳುವ ಭಯವಿಲ್ಲ!

16/02/2015

ಕವನ

ಬೆಳಕು



ಸೂರ್ಯನಿಂದ ಹೊರಡುವವು
ಸಹಸ್ರ ಕಿರಣಗಳು
ಅವುಗಳಲ್ಲಿ ಕೆಲವು ಮಾತ್ರ
ಧರೆಗೆರಗಿ ಬೆಳಕಾದವು
ಮಿಕ್ಕಂತೆಲ್ಲಾ ಹೊರಟ ರಾಶಿಯು
ದೂರ ಕಾಯಕೆ ಹೊಳಪು ಅಷ್ಟೆ!

ವಾಯುಗೋಲವೆಂಬ ಉಸಿರಿದೆ
ಈ ಭೂಮಿಗೆ
ಆ ಎಲ್ಲಾ ದಕ್ಕಿಸಿಕೊಂಡ ಕಿರಣಗಳ
ಪ್ರಭೆಯನನುಭವಿಸಲು..

ಎಷ್ಟೊ ಕಾಲಗಳ ಶ್ರಮದ ಫಲ
ಈ ಬೆಳಕು!
ಪ್ರತಿಫಲಿತ ಕಿರಣಗಳು..
ಭೂಮಿಗೂ ಗೋಳಕೂ
ನಡುವಿನ ಪರಸ್ಪರ ಸಂಘರ್ಷ..

ಈ ಒತ್ತಡಗಳಿಂದ ಹೊಸತುಗಳ
ಚೇತರಿಕೆಯಾಗುವುದಾದರೆ
ನಡೆದೇ ಬಿಡಲಿ ಅನೇಕ ಘರ್ಷಣೆಗಳು
ಮೋಡ, ಮಳೆ, ಮಿಂಚು, ಕಾಮನಬಿಲ್ಲು
ಪ್ರವಾಹ, ಸುನಾಮಿಯೂ
ಹೊಸ ದಿಕ್ಕು, ಹೊಸ ಹುಟ್ಟು....

16/02/2015
ಪ್ರೇಮಮಯವೀ ಸಮಯ
ಮನವು ಕಾಡಿದಂತೆ
ಬಯಸಿದೆ ಅವನ ಸನಿಹ
ಆದರೇಕೋ ಇನ್ನೂ ದೃಷ್ಟಿಗಿಲ್ಲ
ನಾಚಿ ಎಲ್ಲೋ ಅಡಗಿಕೊಂಡಿರಬೇಕು!

******

ಈ ಬೇಕು-ಬೇಡದ ಗೊಡವೆಯೆಲ್ಲಾ
ನಿನಗಷ್ಟೇ ಗೆಳೆಯ:
ನನಗೆ ನೀ ಬೇಕೆಂದಾಗಿದೆ!
ದೂರಿ ನೀ ಬೇಡವೆಂದರೂ
ಇರಲಿ ನನಗಷ್ಟು ನಿನ್ನ ತಿರಸ್ಕಾರವೂ,
ನೆನಪಿಗೆ!

15/02/2015

ಕವನ

ಎಲ್ಲಿ ಹೋದನೋ ಈ ಹುಡುಗ


ಈ ಹುಡುಗ ಎಲ್ಲಿ ಹೋದನೋ
ರಾತ್ರಿಯಿಡೀ ಇವನದೇ ಕನಸು
ಹೊತ್ತು ಹುಟ್ಟುತ್ತಲೇ ಹುಡುಕಿ ಬಂದರೆ
ಎಲ್ಲಿ ಹೋದನೋ ಹುಡುಗ ಕನಸ ಕಿಚ್ಚು ಹತ್ತಿಸಿ

ಇದ್ದಂತೆಯೇ ಇದ್ದು ಕಣ್ರೆಪ್ಪೆ ಓಟದೊಳು
ಅದೆಲ್ಲಿಗೋ ಓಡಿಬಿಡುವ ಈ ಹುಡುಗ 
ಎಲ್ಲಿ ಹೋದನೊ ಹೇಳಿಯೂ ಹೋಗುವುದಿಲ್ಲ
ಕತ್ತಲ ಮೂಲೆಯಲ್ಲಾ ನಾ ತಡಕುವಂತೆ
ಮಾಯವಾದನೊ ಈ ಹುಡುಗ

ಕಂಡಾಗ ಒಂದಷ್ಟು ಚಕಿತಗಳ ಮುಂದಿಟ್ಟು
ಆ ಎಲ್ಲಾ ಆಶ್ಚರ್ಯಗಳಿಂದ ಹೊರಬರುವ ಹೊತ್ತಿಗೆ
ಎಲ್ಲಿ ಹೋದನೋ ಈ ಹುಡುಗ ಸುಳಿವಿಲ್ಲದಂತೆ

ಹೆಚ್ಚೇನು ಗೊತ್ತಿಲ್ಲ ಇವನ ಕುರಿತು
ಆದರೇನೋ ಸೆಳೆದುಕೊಂಡಂತೆ ಹೊರಟುಬಿಟ್ಟ
ಎದೆಯಲೊಂದು ಎಳೆಯ ಹಿಡಿದು
ಎಲ್ಲಿ ಹೋದರೂ ಹುಡುಗ, ದೂರ ಹೋಗದಿರು ನನ್ನಿಂದ!

15/02/2015


ಇಷ್ಟ-ಕಷ್ಟಗಳು
ಅವರವರ ಅಭಿರುಚಿಗಳು
ಪ್ರಶ್ನಿಸಬಾರದು ಯಾರದು
ವಾದಿಸಲೂಬಾರದು
ಮೊಂಡುಗೊಳಿಸಿ ತಮ್ಮಭಿರುಚಿಯ!

15/02/2015

********

ನೀ ಮುಗ್ಧನೆನಿಸಿದಾಗ
ನಾನು ಸ್ವಾರ್ಥಿ ಎನಿಸಿತು!
ನೀ ಸ್ವಾರ್ಥಿಯಾದರೆ
ನನ್ನ ಕುರಿತಾಗಷ್ಟೇ ಆಗು!
ನನ್ನಲೂ ಮಗುವಾಗುವ ಬಯಕೆಯು!

14/02/2015

Saturday, 14 February 2015

ಕವನ

ಪ್ರೇಮಿಗೊಂದು ಸರಳ ಪತ್ರ! 


ಒಲವಿನ ಪತ್ರವನು ಬರೆದು
ಕಳುಹಿಸಿರುವೆ ಹುಡುಗ
ತಲುಪಿದ ತಕ್ಷಣ ಬಂದುಬಿಡು
ಕ್ಷಮಿಸು ವಿಳಾಸವೇ ಇಲ್ಲ ಅದರಲ್ಲಿ
ನಿನ್ನದು!

ತಲುಪಿದರು ತಲುಪಬಹುದು
ಮನ್ನಿಸಿಬಿಡು ನನ್ನೆಲ್ಲಾ ತಪ್ಪುಗಳ
ಪತ್ರ ಬಂದ ದಾರಿಯನೇ ಹಿಡಿದು
ಬರುವುದಾದರೆ ನಾನಲ್ಲಿಯೇ ನಿಂತೆ

ಈ ಪತ್ರಕ್ಕೆ ದಿನಾಂಕದ ಗಡುವಿಲ್ಲ
ತಡವಾಯಿತೆಂದು ಆತಂಕವೂ ಬೇಡ
ಎಂದು ನೀ ಬಂದರೂ ಸರಿಯೇ
ಆದರೆ ನೀನೇ ಬರಬೇಕು...

ಭಾರಿ ಮೊಸ ಕಂಡಿರುವೆ ಗೆಳೆಯ
ನಿಮ್ಮಂತೆ ಅವನ ತಂದರು ಎಲ್ಲಾ
ನಾಚಿ ಕರಗಿ ನೋಡಲೇ ಇಲ್ಲ ನಾ
ನೀನಲ್ಲದೆ ಅವನ, ಮತ್ತೊಮ್ಮೆ ಕ್ಷಮೆಯಿರಲಿ!..

ತೇಲಿ ಬರುವುದೊ, ಹಾರಿ-ಜಿಗಿದೊ
ಈ ಪತ್ರ;
ಒಪ್ಪಿ ಅಪ್ಪಿಕೊಂಡುಬಿಡು ಸಂದೇಶವ

ಇಂದಲ್ಲ; ಮನಸು ಕಣ್ತೆರೆದ ದಿನದಿಂದಲೂ
ನಿರೀಕ್ಷೆಯಿದೆ ನಿನ್ನದೇ...
ಅದ್ಯಾವ ರೂಪದೊಳು ಅವತರಿಸುವೆಯೋ
ಹುಡುಕಾಟವಿದೆ ನಿನ್ನದೇ, ಹೌದು ನಿರ್ಮಲ ಪ್ರೇಮದ್ದೇ!

14/02/2015

Friday, 13 February 2015

ಕವನ

"ಪ್ರೀತಿ"



ಪ್ರೀತಿ
ಎನ್ನುವುದು ಸಂಭ್ರಮವೇ 
ಆದರೆ
ನಾನಾಗಲೇ ಪ್ರೀತಿಯಲ್ಲಿರುವೆ

ಪ್ರೀತಿ ಧ್ಯಾನವೇ ಆದರೆ
ನಾನಾಗಲೇ ಯೋಗಿ 
ಗೋಜಲುಗಳಲಿ!

ಪ್ರೀತಿ ಮೋಹವೇ ಆದರೆ
ಬದುಕೆಂದರೆ ಬಹು ಮೋಹ
ನಾನಾಗಲೇ ಬದುಕಿನ ಕೈವಶ!

ಪ್ರೀತಿ ಕಾಮವೇ ಆದರೆ
ದಿನಕ್ಕೊಂದು ರಮ್ಯಗೀತೆಯೊಳು 
ತೇಲಿ ಹೋದ ಪಾರಿಜಾತದ
ಘಮಲು ಈ ಮನವು!

ಪ್ರೀತಿ ಭರವಸೆಯೇ ಆದರೆ
ನಗುವಿನ ಮೇಲೆ ನನಗಾಗಲೇ
ಪ್ರೀತಿಯಾಗಿದೆ!

ಪ್ರೀತಿ ತ್ಯಾಗವೇ ಆದರೆ
ಎಲ್ಲವನೂ ಹೊತ್ತೊಯ್ಯಲಿ
ಹುಟ್ಟಿ ಹಾಕುವ ಕಲೆ ಗೊತ್ತು
ಮತ್ತೆ ಮತ್ತೆ ..
ಬಿಟ್ಟುಕೊಡುವೆ ಎಲ್ಲವ!

ಪ್ರೀತಿ ನೀನೇ ಆದರೆ
ನಾನಾಗಲೇ ನನ್ನ ಹೆಸರ ಮರೆತಿರುವೆ
ನಾಮಕರಣ ಮಾಡಿಬಿಡು ಹೊಸ ಹುಟ್ಟಿಗೆ! ......

13/02/2015

Thursday, 12 February 2015

ಹಟ ಮಾಡುವ ಮನವ
ಸಂತೈಸಲು ನಿನ್ನನ್ನಷ್ಟು ದೂಷಿಸಿದೆ
ಮತ್ತೂ ರಚ್ಚೆ ಹಿಡಿದಿದೆ
ಹೇಗೆ ಸಂಭಾಳಿಸುವೆಯೋ
ನೋಡು
ನಿನಗೊಪ್ಪಿಸುವೆ! ...

12/02/2015

ಕವನ

ಕಲಕೋ ಕನಸುಗಳು


ಈ ತಲೆ ತಿರುಗಿದ ಕನಸುಗಳಿಗೆ
ಹೆಸರಿಸೆನು ಯಾರನು!
ವಾಸ್ತವಗಳಿಗಿಂತ ಹೆಚ್ಚು
ಪ್ರೀತಿಸುವೆ ಅವನ ಕಲ್ಪನೆಯನು!

ಕದಡಿದ ಮುಖಗಳೇ ಹೇರಳ
ಬಿಂಬ ಕಾಣದೆ ಉಳಿದ 
ಎದುರು ಬೊಂಬೆಗಳು

ಸಮೀಕರಿಸಿ ನೋಡಿ
ತಾಳೆಯಾಗದೇ ನೂಕುವುದು
ಮುನಿಸುವ ಮನವು

ಇರಲಿ ಬಿಡು
ಎಲ್ಲಾ ಬಂಧನಗಳಾಚೆ 
ಮನವಿನ್ನೂ ಶುದ್ಧ
ಕಳೆದು ಕೂಡಿದ; ಕೂಡಿ ಕಳೆದ
ಜಗದ ಲೆಕ್ಕಾಚಾರದೆದುರು

ಸುಮ್ಮನೆ ಜೀವಿಸಿಬಿಡುವ
ಈ ಕನವರಿಕೆಗಳಲೇ..
ಬಹುಶಃ ನೋಯಿಸದು,
ದೂರ ಮಾಡದು 
ಈ ಮನಸ ಕಲಕೋ ಕನಸುಗಳು!

12/02/2015
ಜಗತ್ತಿನಲ್ಲಿ
ಒಬ್ಬರೇ ಎನಿಸುವುದೆಲ್ಲಾ 
ಶ್ರೇಷ್ಠವೇ
ಆಗಿದೆ
ಆ ಸೂರ್ಯ, ಚಂದ್ರ,
ಈ ಭೂಮಿ 
ಕಾತುರತೆಯ ಉಳಿಸಿಕೊಂಡ 'ಇವನು'
ಕಳೆದು ಹೋದ
'ಅಮ್ಮ'ನು!

12/02/2015

ಕವನ

ನಾ ನಿನ್ನ ಹಿಂದೆ,,,


ಮುಂದೆ ನೀ ನಡೆದಿರಲು
ಹೀಗೆ ತಿರುತಿರುಗಿ ನೋಡಿ
ಓರೆಯಾಗಿ;
ನಾ ನಿನ್ನ ಹಿಂದೆಯೇ ಅನುಸರಿಸಿ
ನಡೆದಿದ್ದೆ ನೇರ ನಿನ್ನೇ ದಿಟ್ಟಿಸಿ

ನಿನಗೇನೊ ಜೊತೆಯಿತ್ತು
ಮಾತೂ ಇತ್ತು ಅವರೊಂದಿಗೆ
ನಾನೊಬ್ಬಳೆ ನಡೆದಿದ್ದೆ
ಪೂರ ಧ್ಯಾನ ನಿನ್ನ ಮೇಲೆ

ಯಾರಿಗೂ ತಿಳಿಯುವುದಿಲ್ಲ
ಅಲ್ಲಿನ್ಯಾರೂ ನನ್ನ ದೃಷ್ಟಿಸುವರೂ ಇರಲಿಲ್ಲ
ಅರಿವಿಲ್ಲ ಯಾರಿಗೂ
ನಾ ನಿನ್ನನು ಹೀಗೆ 'ಹಿಂಬಾಲಿಸಿದ್ದು'

ಆದರೆ ನಿನಗೆ ಗೊತ್ತಿತ್ತು ಬಿಡು,
ಅದು ನನಗೂ ಗೊತ್ತಿತ್ತು

ಮುಂದಲ್ಲಿ ತಿರುವಿನಲ್ಲಿ
ನೀ ದಾಟಿ ತಿರುಗಿ 
ದೃಷ್ಟಿ ನೆಟ್ಟ
ಆ ಎಡವು ಎತ್ತರಕೆ
ಜಾಗೃತಿಯೇ? ನನಗೆ ಎಚ್ಚರಿಕೆಯೇ?!
ಎಡವಿ ಬೀಳಬಾರದೆಂದು

ಬಿದ್ದೆನೊ ಹುಡುಗ ನಾನಲ್ಲಿಯೇ
ನೀನು ಗಮನಿಸಲಿಲ್ಲ ಅಷ್ಟೆ
'ಮಸುಕು ಮಸುಕು' ಎಂದಿನಂತೆ..

12/02/2015

Wednesday, 11 February 2015

ಕವನ

"ಛಾಯೆ"


ತುಸು ಹೆಚ್ಚೇ ಪ್ರೀತಿಸಿಬಿಟ್ಟಿದ್ದೆ
ತುಂಬಾ ಹಚ್ಚಿಕೊಂಡಿದ್ದೆ
ನನ್ನದೇ ಛಾಯೆಯೆಂಬ ಭ್ರಮೆಯಲಿ!

ಕಾಲೇಜಿನ ದಿನಗಳು
ನಂತರದ ಕೆಲ ವರ್ಷಗಳು
ಅಂಟಿಕೊಂಡಂತೆಯೇ ಜೊತೆಗಿದ್ದೆವು

ಅದೇನು ಆತುರವೋ ನನ್ನ ತಾಳ್ಮೆ ಪರೀಕ್ಷೆಗೆ
ಪ್ರೇಮಿಗೂ ಅತಿಯಾಗಿ ಕಂಡಿದ್ದೆನು ಅವಳ
ಕಡೆಗಣ್ಣಲೂ ನೋಡದಾದೆ ಹಗುರಾಗಿಸಿದ ಮಾತಿಗೆ

ಆಗೊಮ್ಮೆ ಈಗೊಮ್ಮೆ ಈಗೀಗ ಹತ್ತಿರಾದರೂ
ಅವಳು; ಪಡೆಯದಾದಳು ಮುಂಚಿನ ಕಾಳಜಿ
ಸುಳಿವಳು ಇದಿರು ಹುಡುಕಿ ನನ್ನೊಳ ಅವಳ

ಆಗಿನ ನನ್ನದೊಂದು ಉದ್ಗಾರ;
"ಅಲ್ಲ ಕಣೆ, ನಿನ್ನನ್ನು ಎಷ್ಟು ಚೆನ್ನಾಗ್ ನೋಡ್ಕೋಳ್ತೀನಿ,
ಎಷ್ಟ್ ಪ್ರೀತಿ,
ಬಹುಶಃ ನಾ ನನ್ ಹುಡುಗನ್ನೂ ಹಿಂಗ್ ನೋಡೋಲ್ವೇನೋ ಕಣೆ"...

ಎಲ್ಲಾ ನೆನಪುಗಳು ..
ಅವಳ ಎರಡು ಹೆಣ್ಣು ಮಕ್ಕಳು,
ನನ್ನ ಹುಟ್ಟು ಹಬ್ಬದಂದೇ ಹುಟ್ಟಿದ ಮೊದಲನೇಯವಳು,
ಆಮಟ್ಟಿಗಿನ ಹಂಬಲ ಅವಳಲ್ಲಿ...

ನಿರಾಶೆಗೂ ಅತಿಯಾಗಿ ನಾನಾಗಿದ್ದೆ ದೂರ,,
ಅದೇಕೋ ಏನೋ ಎಷ್ಟು ತಪ್ಪಿಸಿದ ಭೇಟಿಯೋ
ಇಂದೇಕೋ ಸೇಡು ತೀರಿಸಿಕೊಂಡಂತೆ

ಸಿಕ್ಕಿ ಬಿಟ್ಟಳು ಅವಳು,
ಹೌದು; ಮುಕ್ಕಾಲು ಗಂಟೆ ಕಾದು ಕಂಡಿದ್ದೆ
ಮೊದಲಿನ ಆ ಅದೇ ಪ್ರೀತಿಯಲಿ
ಟಿಸಿಲೊಡೆದ ಹೊಂಬಾಳೆ ಮರದ ನೆರಳಲಿ!....




10/02/2015

Tuesday, 10 February 2015

ಅನಾಮಧೇಯ ರಸ್ತೆಗಳಲಿ
ಅವಳ ನಿರೀಕ್ಷೆಯಲಿ
ಕಾಯುವುದೆಂದರೆ
ಅದೇನೋ ಅನಾಥ ಪ್ರಜ್ಞೆ ..

****


ಈ ಚಳಿಗಾಲಕ್ಕೆ 
ಹುಡುಗಿಯ ತುಟಿಗಳು 
ಬಿರುಕು; ಆಗದಿರಲಿ 
ಚುಂಬಿಸ ಬಂದ ಹುಡುಗನ
ಹಾರ್ಟು ಬ್ರೇಕು!

10/02/2015

Monday, 9 February 2015

"ಕ್ಷಮೆ"

ಹೀಗೆ ಚೆಂದವಾಗಿ 
ಕಾಣ ಬಯಸುವ
ಮನಗಳನ್ನು
ಸುಮ್ಮನೆ ನೋಯಿಸೆನು
ಅವರ ಆಸಕ್ತಿಗಳ ಕುರಿತಾದ
ನನ್ನ ಕುತೂಹಲಕ್ಕೆ!

*******

ಸ್ವರ್ಗದ ಸೆರಗಂಚನು 
ಹಿಡಿದೆಳೆದು
ಸುತ್ತಿಕೊಂಡಿರುವೆ
ಇನಿಯನೇ,
ಬಂದು ಬಿಡಿಸುವೆಯೋ
ಸೇರಿಕೊಳ್ಳುವೆಯೋ 
ಬೇಗನೆ ಯೋಚಿಸು
ಉಸಿರುಗಟ್ಟಿದೆ
ನಾ ಇಲ್ಲೊಬ್ಬಳೆ ....

09/02/2015

Sunday, 8 February 2015

ಕವನ

"ಮರ"


ತನ್ನೆಲ್ಲಾ ಆಸರೆಯ ಎಲೆಗಳ
ಉದುರಿಸಿ ನಿಂತೆ
ಮೀರಿದ ಸಮಯಕೆ 
ಆಙ್ಞೆಯಂತೆ

ಮುಂಬರುವ ವಸಂತಕೆ
ಮೈತುಂಬಿಕೊಳ್ಳುವ
ಸಂಭ್ರಮಕೆ ತುದಿಗಾಲಲ್ಲಿ
ನಿಂತ ಕಾಂತೆಯಂತೆ

ನಿರಂತರ ನನ್ನದೀ
ನಿಲುವುಗಳು
ಬರಿದಾಗುವ; ತುಂಬಿಕೊಳ್ಳುವ
ಆತುರಗಳು

ನಾನೊಂದು ಪ್ರಕೃತಿಯ
ತುಣುಕು
ನನ್ನನನುಸರಿಸಿ ತಿಳಿಗೊಳ್ಳೋ
ಎಷ್ಟೊ ಆಕೃತಿಗಳು ನನ್ನಂತೆ

ಹುಟ್ಟುವುದು ಬೇಳೆಯುವುದು
ಅಗಾಧವಾಗಿ ಗೋಜಲಾಗುವುದು
ಸಿಕ್ಕು ಬಿಡಿಸೆಂದು ಬರುಡಾಗಿ ನಿಲ್ಲವುದು
ಮತ್ತೂ ಚಿಗುರಿ ತೊನೆಯುವುದು!



08/02/2015

ಕವನ

"ತೊಟ್ಟಿಲು"


ಎಲ್ಲೆಲ್ಲಿ ಅಲೆದರೂ
ಬಂದಿಲ್ಲಿಯೇ ಬೀಳಬೇಕು
ಹೃದಯ ತೊಟ್ಟಿಲು
ಅದು ನಿನ್ನ ಮಡಿಲು!

ಗಾಬರಿ ಬೇಡ ಹುಡುಗನೇ
ಹೆಚ್ಚು ಜವಾಬ್ದಾರಿಯೆಂದು
ತೂಗಿಕೊಳ್ಳುವೆ ನಾನೇ
ಕೊಟ್ಟುಬಿಡು ಮನಸ್ಸು!

08/02/2015

ಕವನ

ಭ್ರಮೆ


ಭ್ರಮೆಗಾದರೂ
'ನೀನು' ಇರಬೇಕು
ಮಿಕ್ಕಂತೆಲ್ಲಾ
ನಾ ನಿಭಾಯಿಸುವೆ!

ಅದೂ ಇಲ್ಲದೆ
ಕಲ್ಪನೆಯ ರೆಕ್ಕೆ
ಮುರಿದಂತೆ; ಇದ್ದುಬಿಡು ಸುಮ್ಮನೆ
ನಾನಿರುವೆ ಎಲ್ಲಕೂ

ಎಷ್ಟು ಮುಖ್ಯ 
ಈ ಸಂಗಾತಿ ಎನ್ನುವುದು
ಜೋಡಿಯಿಲ್ಲದೆ ಅರೆ ಕ್ಷಣವೂ
ಕ್ಷಮಿಸದು ನೋಡುವ ಜೋಡಿ ಕಣ್ಗಳು

ಇದ್ದುಬಿಡು ಹೀಗೆಯೇ
ಬರೆದುಬಿಡುವೆ ನಿನ್ನನ್ನಷ್ಟು; 
ಯಾರಿಗೂ ಬಿಟ್ಟುಕೊಡೆನು
ನೋಡಲು ಸಹ
ಈ ಅಂತರಾಳ!..

08/02/2015

Saturday, 7 February 2015

ಕವನ

"ಕುಟ್ಟೆ"



ಕುಟ್ಟೆ ಹಿಡಿದಂತೆ
ಕೂತುಬಿಟ್ಟೆ
ಈಗಷ್ಟು ದಿನಗಳು

ಎದ್ದು ಕೊಡವಿಕೊಂಡಿದ್ದರೆ
ಇನ್ನಷ್ಟು ಉಳಿಯುತ್ತಿತ್ತು
ಮುಕ್ಕಾಗದೆ ಕೆಲ ಕನಸುಗಳು

ಈಗಲೂ ಬಿರುಸಿದೆ
ಎಲ್ಲಾ ಸಿಬಿರುಗಳ ಕಳೆದು
ಕೊರತೆಗಳ ಸಿಗಿದು

ಉಳಿದಷ್ಟು ದಿಂಡು
ಇದ್ದಷ್ಟು ಹೊತ್ತು
ಹೊತ್ತಿರಲಿ ಹಲವು
ಚಿಗುರುಗಳು, ಒಲವು-ಒನಪುಗಳು

08/02/2015

ಕವನ

ಕನ್ನಡಿ


ನೀ ನನ್ನ ಮೆಚ್ಚಲು
ನನಗೆ ನಾ ಚೆಂದವೇ 
ಅನಿಸುತ್ತಿದ್ದೆ

ನಾ ನಿನ್ನ ಮೆಚ್ಚಲು
ಅದೇಕೋ ನಾನೇ ನನಗೆ ಚೆಂದವಿಲ್ಲ
ಕುಂದು ಕೊರತೆಗಳೇ ಎದ್ದು ಕಾಣುವವು!

ನೀನೊಂದು ಕನ್ನಡಿಯಂತೆ
ಹೆಚ್ಚು ನನ್ನನ್ನೇ ತೋರಿಸಿ
ಕಷ್ಟಕ್ಕೀಡು ಮಾಡಿರುವೆ

ಆಗಾಗ ತುಸು ಸುಳ್ಳನೂ
ಹೇಳು; ತುಂಬಾ ಪ್ರೀತಿಯಿದೆ,
ಮೋಹವೂ.........
ಎಂದು! 

08/0282015