ನನ್ನದೀ ಭೂಮಿ
ನನ್ನದೀ ಭೂಮಿ
ಅಗೆದಗೆದು ಸಿಗಿದು ಬಿಟ್ಟದ್ದು
ಸಡಿಲಗೊಳಿಸಿ ಕೆದರಿ ಬಿಟ್ಟದ್ದು
ವಾಯು ಸಂಚಾರಿಸುವಂತೆ
ಕೀಟ ವಿಘಟಕಗಳು ಕಲೆತು
ಮಣ್ಣನ್ನು ಕ್ಷಾರವನ್ನಾಗಿಸಿ
ಸಿಕ್ಕದನ್ನು ದಕ್ಕಿದನ್ನು ಸೆಳೆಸೆಳೆದು
ಕೊಳೆಸಿ ಹದಗೊಳಿಸಿ
ಹೀರಿ ಸಾರ
ಆಗದಂತೆ ಏನೂ
ಮತ್ತೆ ಮಣ್ಣಾಗಿ ಉಳಿವಂತೆ
ನನ್ನದೀ ಭೂಮಿ..
ನನ್ನದೀ ಭೂಮಿ
ನಿರಂತರ ಧಾಳಿಗೊಳಪಟ್ಟು
ಸದಾ ನುಣುಪು ಹೊಳಪು
ಒಗರು ಒರಟು
ಜೀವ ಉಸಿರು ಕೆಟ್ಟಂತೆ
ನೆಲದ ಎಲೆಯೂ ನೀಲಿ
ಯಾವುದನ್ನೂ ಮುಚ್ಚಿಡದ ಗುಟ್ಟು
ಈ ಮನದ ಹರವು
ಮಣ್ಣನೇ ತಿಂದು
ಮಣ್ಣನೇ ಗೊಬ್ಬರವಾಗಿಸುವ
ಎರೆ ಹುಳುಗಳ ಹೊತ್ತ
ಫಲವತ್ತು ಮಣ್ಣು
ನನ್ನದೀ ಭೂಮಿ
ನನ್ನದೀ ಭೂಮಿ
ರಜಗಳ ಭಿತ್ತಿಸಿಕೊಳ್ಳದ್ದು
ಸೆಳೆದುಕೊಳ್ಳುವಂತಹುದ್ದು
ಸದಾ ಹಸಿರಿಗೆ
ಉಸಿರಾಗಬಯಸುವುದು
ಅದಕ್ಕಾಗಿ ಕಳೆ ತೊಳೆವ
ಮಳೆಗೊಡ್ಡಿಕೊಳ್ಳುತ್ತ
ಹೆಪ್ಪುಗಟ್ಟಿ ಮಣ್ಣು
ಬಿಳಲಿಗೆ ಬೇರಾಗುವುದು
ಹಸಿರು ಹೂಗಳನೇ ಹೊದ್ದು
ಮತ್ತೆ ಮತ್ತೆ ಮಳೆಯ ಸೆಳೆದು
ಸಿಸಿಗಳ ಪೋಷಿಸಿಕೊಳ್ವದು
ಹಣ್ಣಾದ ಎಲೆ ಉದುರಿ
ತಂಪ ಹೀರಿ ಬುಡ ಭದ್ರವಾಗಿ
ಮನಸ್ಸು ವಿಚಾರಗಳಲಿ
ದಿಟ್ಟವಾಗಿ ನಿಂತು
ಹೂವ ಬಿಡಿಸಿ
ಆಗಾಗ ಜಗದೆದುರು
ಮುಡಿಗೇರಿಸಿಕೊಳ್ವದು
ಸೌಂದರ್ಯ ಮೆರೆಯಲು
ಈ ಭೂಮಿ
ನನ್ನದೀ ಭೂಮಿ..
21/09/2015
No comments:
Post a Comment