ಬಯಸಿದಷ್ಟೂ ಬಾಕಿಯುಳಿವ ಬೇಡಿಕೆಗಳು
ನೀಡಿಬಿಡುವ ಬಯಕೆಗಳ ಮೀರಿ
ಕರಗಿದಂತೆ ಕೊರತೆಗಳು...!
*****
ಈ ಕಣ್ಣುಗಳಲ್ಲಿ
ಇಷ್ಟೊಂದು ನಿದ್ದೆ ಇತ್ತೆಂದು
ಗೊತ್ತೇ ಇರಲಿಲ್ಲ..
ಕನಸುಗಳನ್ನೇ ಹೊತ್ತು ತಿರುಗಿ
ಮಂಪರಿನ ಗುರುತೇ ಇರದಂತೆ
ರೆಪ್ಪೆ ಮುಚ್ಚದ ಮೀನಾಕ್ಷಿ
ಕನಸು ತೇಲಿದಂತೆ ಮದಿರೆ
ಕಣ್ಣೊಳಗೆ ಸಾವಿರ ಮಧುಶಾಲೆ
ಒಟ್ಟೊಟ್ಟಿಗೆ
ಮಧು ಸುರಿದುಕೊಂಡಂತೆ
ನಿದಿರೆ..
ಈ ಕಣ್ಣುಗಳಲ್ಲಿ ಇಷ್ಟೊಂದು
ನಿದ್ದೆ ಇತ್ತೆಂದು ಗೊತ್ತೇ ಇರಲಿಲ್ಲ.... !
08/09/2015
******
ಕಾಡು ಸಂತೆಯಲ್ಲಿ
ಹಂದಿಯೊಂದು ಹೂಂಕರಿಸಿದಂತೆ
ಯಾರ ಪರಿವೆಯೂ ಇಲ್ಲದೆ
ನಟ್ಟಿರುಳು ಮೊಗ್ಗು ಮೂಡಿ ಅರಳಿದಂತೆ
ಎತ್ತರೆತ್ತರವಾಗಿ ನಿಂತ ಮರಗಳಂತೆ
ಸುತ್ತಲು ಹುಲುಸಾಗಿ ಹರಿದ ತೊರೆ
ಮತ್ತೆಲ್ಲೋ ಹರಿದಂತೆ
ಮರೆತು ಅದರ ಹೊರೆ
ಯಾರೂ ಕೇಳದ ಕರೆ
ಯಾರನೂ ತಲುಪದ ಅಲೆ
ಇದ್ದ ಇಲ್ಲದ ದ್ವಂದ್ವದ ಸೆಲೆ
ಒಮ್ಮೊಮ್ಮೆ ಈ ಖಾಲಿ ಗಡಿಗೆ..!!!
*****
ಬೇಸರಕೆ ಬೆನ್ನ ಮಾಡಿ
ನಡೆದ ಘಳಿಗೆ
ಸಾವಿರ ಮಾತಿಗೂ
ಉಸಿರಿಲ್ಲದ ಮೌನ
ಅರ್ಥ ಕಲ್ಪಿಸಲಾರೆ
ಎಲ್ಲರ ಎಲ್ಲಾ ಅನಿವಾರ್ಯಗಳಿಗೆ
ಇಂದು ಹೀಗೆ ದಿಢೀರೆಂದು
ನಿಮ್ಮ ಕಂಡು ಹೀಗೆ ನೆನದು...!
*****
ಹ್ಮೂ ಹೌದು
ಈ ಕಣ್ಣಾಮುಚ್ಚಾಲೆ
ಬಹು ದೂರಕೆ ಒಯ್ದುಬಿಟ್ಟಿತು
ಈ ಅವಧಿಯಲ್ಲಿ
ಚೂರಾದ ಚಂದಿರನಂತಲ್ಲ ಬಿಡು
ಒಡೆದೇ ಹೋದ ಹಾಲಿನಂತೆ
ಪನ್ನೀರ್ ಬಳಸದ ಜನ ನಾವು
ಸುರಿದುಬಿಟ್ಟೆವು ಕಾಲದ ಹರಿವಿಗೆ
ಅಳಿವೂ ಹೌದು
ಏನೂ ಉಳಿಯದೆ
ನೀರಾವಿ ಹೋದಂತೆ
ಸೆಳೆತವಿದ್ದಲ್ಲಿ ನಿಂತು ಘನವಾಗಿ
ಭಾವುಕತೆ ಭಾರವಾಗಿ ಧರೆಗಿಳಿದುಬಿಟ್ಟೆ
ಅಂತೂ ನೆಲಮುಟ್ಟಿಬಿಟ್ಟೆ
ಕಣ್ಣಾಮುಚ್ಚಲೆಯ ಆಟದಲ್ಲಿ
ಸೋತು ಗೆದ್ದು....!!!!!
07/09/2015
No comments:
Post a Comment