Thursday, 12 November 2015



ಏನೆಲ್ಲಾ ತಳಮಳಗಳ 
ಹೊತ್ತರೂ
ಶಾಂತವಾಗಿ ಹಸಿರಾಗಿ 
ಹೊಮ್ಮುನ ಪೃಥ್ವಿ
ತಳಮಳಗೊಳ್ಳುತ್ತಲೇ 
ಉರಿವ ಸೂರ್ಯ
ಅನೇಕ ಭೂಮಿಗಳ 
ಹೆತ್ತು ಆಡಿಸಿ ಮತ್ತೂ ಉರಿವನು
ಭೂಮಿ ಬಳಗಗಳ 
ಬೆಳಗಲು ಬೆಳಕಾಗಿ
ಉರಿ, ಬೆಂಕಿ, ತಾಪ, ಜ್ವಾಲೆಗಳು 
ಪೋಷಣೆಗಳೇ ಸರಿ
ದೂರದಿಂದ.... 

*****

ಬಿಂಕ ಬಿಟ್ಟ ಹುಡುಗ
ಸುಂಕ ಮುರಿದ ಸರದ್ಹಾಂಗ
ಸರಿದಾಡುತಾನ ಸಲೀಸ 
ಕುತ್ತಿಗೆಯ ಸುತ್ತ ಮುತ್ತ 
ಪೋಣಿಸುತ್ತ ಒಂದೊಂದೇ 
ಸರದ ಮುತ್ತ...!!

*****

ಹೀಗೆ ಅವನ ಕೇಳಿದೆ
ಪ್ರೀತಿ ಹೆಚ್ಚಾದರೆ ಏನು ಮಾಡಬೇಕೆಂದು
ನನಗೂ ಇನ್ನೂ ಗೊತ್ತಾಗದೆ
ನಿನ್ನೊಳಗೆ ಯೋಚಿಸುತ ಕೂತೆ
ಎಂದನವನು... 
ಪ್ರಶ್ನಿಸದವನು... 

*****

ಮೌನವ ಮೀಟುವ
ಈ ಕೆಲ ನೋವುಗಳು
ವೀಣೆ ನುಡಿದಂತೆ ಮಿಡಿದು 
ಹೊರಡಿಸಿದ ಆ ಸ್ವರಗಳ
ಹೆಸರಿಸದಾದೆ
ಗಂಧ ಗಾಳಿಯಿಲ್ಲವೋ ಎನಗೆ
ಈ ಗೀತೆಯದ್ದು... !!!

******

ಮುಳುಗಿದರೂ ಕರಗದ
ಅನೇಕ ಮಣ್ಣಿನ ವಿಗ್ರಹಗಳಂತೆ
ಈ ಕನಸು ಇರುಳ ಹೊಕ್ಕಿ
ನಕ್ಷತ್ರಗಳಾದಂತೆ ಉಳಿದು ಆಗಸದಲಿ....

23/08/2015

No comments:

Post a Comment