ನಿನ್ನ ಕಣ್ಣುಗಳು
ಕೆಂಪಾದ ನಿನ್ನ ಕಣ್ಣುಗಳ
ನಾಲಿಗೆ ನೇವರಿಸಿ ತಂಪುಗೊಳಿಸಲು
ಉರಿವ ಬೇಗೆಗಳ
ಉಸರಿನಿಂದಲೇ ಆರಿಸಿ ತಾಮಸಗೊಳಿಸಲು
ಪ್ರೇಮದ ಅಮಲೊಳು
ಬರೀ ಕಾಮವೇ ಇಲ್ಲ
ಭರಿಸದ ಭಾರ ಕನಸುಗಳೂ ಇವೆ
ಉಬ್ಬಿಸಿ ಮೆರೆಸಲು
ತೂಗಿ ನೋಡಿ ಅಳೆದು
ಸುರಿದುಬಿಡು ಮುತ್ತುಗಳ
ನನ್ನದು ತುಂಬದ ಜೋಳಿಗೆ
ಅರಿವು ಜ್ಞಾನದ ಹಸಿವು
ಪ್ರೀತಿ ನೀ ಅಕ್ಷಯ ದೀವಿಗೆ
ಇರುಳ ರಮ್ಯತೆಗೆ ಬೆಳದಿಂಗಳ ಮೆರಗು
ಆರಿದ ಅಧರಕೆ ಜೇನಿನ ಹೊಳಪು
ಬರಿಗೈ ಹೊತ್ತ ಬೆವರ ಹನಿಗಳು
ಹಸಿರೆಲೆಗೆ ಹಸಿರನೇ ಹೆಸರಿಸಿದಂತೆ
ಎದೆಯೊಳು ರಕುತ ಸಂಚಲನ
ಮಿಡಿಯಲು ನೀ ಹಿತವಾಗಿ ಮಾತಿನಲಿ
ಪದಗಳಲಿ ನಾ ನಾಚಿ ಅದುರಿದಂತೆ.. !!
14/09/2015
No comments:
Post a Comment