ವ್ಯಂಗ್ಯ..
ವ್ಯಂಗ್ಯವಾಡಬೇಕೆಂದಾಗಲೆಲ್ಲಾ
ಕತ್ತಲ ಕೋಣೆ ಸೇರಿಬಿಡುತ್ತೇನೆ
ನೇರ ನುಡಿದು ನಿಲ್ಲಬಯಸಿದಾಗ
ಕನ್ನಡಿ ಎದುರು ಭಾಷಣ ಮಾಡುತ್ತೇನೆ
ಏನನ್ನೂ ಹೇಳಲಾರದೆ ಉಳಿವಾಗ
ಸುಮ್ಮನೆ ನಡೆದುಬಿಡುತ್ತೇನೆ
ತುಂಬಾ ಮಾತುಗಳಿದ್ದಾಗ
ನನ್ನ ಕಣ್ಣಿನ ಶಕ್ತಿಗೆ ಬೆರಗಾಗುತ್ತೇನೆ
ನೆಲದಾಳಕೆ ಹೂತು ಹೋಗೋ ದೃಷ್ಟಿಗೆ
ಎಂದಿಗೂ ಹೆದರಿ ಮತ್ತೆ ಮತ್ತೆ ರೆಪ್ಪೆಗಳ ಹೊಡೆಯುತ್ತೇನೆ
ಕತ್ತಲಿಗೆ ಹೆದರುತ್ತೇನೆ
ಹುದುಗಿದ ಆತಂಕದ ಕೈಗಳಿಗೆ
ಕತ್ತಲಲೇ ಹುದುಗುತ್ತೇನೆ
ಕಳೆದು ಹೋಗದ ಕನಸ ಕಟ್ಟುವ ಸಲುವಾಗಿ
ನನ್ನ ದೃಷ್ಟಿಗೆ ನಾನೇ ಸಿಲುಕಿ
ಅವರ ಉತ್ತರಕ್ಕಾಗಿ ಪ್ರಶ್ನಿಸಿಕೊಳ್ಳುತ್ತೇನೆ
ಇದು ನಾನಾ? ಇಲ್ಲ ಅವರಾ?!
ಮತ್ತೆ ವ್ಯಂಗ್ಯವಾಡುತ್ತೇನೆ
ಕತ್ತಲಿಗೆ ದೋಷವಾಗಬಾರದೆಂದು
ಹಗಲಲೇ ಎದುರಿನ ಆ ಕಣ್ಗಳಲಿ
ದೃಷ್ಟಿನೆಟ್ಟು
ಹಲವು ಬಾರಿ ಕನ್ನಡಿಯ ಎದುರೇ... !
11/08/2015
No comments:
Post a Comment