Saturday, 14 November 2015

ಪದ್ಯ

ಕತ್ತಲು


ಕತ್ತಲಿಗೆ ಕಣ್ಣು ಹೊಂದಿಕೊಳ್ಳುತ್ತಿತ್ತು
ಬೆಳಕು ಅಲೆಲ್ಲೋ ಹುಟ್ಟಿ
ಇಲ್ಲಿ ಚೆಲ್ಲಾಡಿತ್ತು... 

ಕಣ್ಣು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಕೋಟೆ ಕತ್ತಲ ಕಳೆದು
ಪಾಪೆ ಹಿಗ್ಗಿಸಿ ಬೆಳ್ಳಿ ಕಿರಣವ ಹೀರಬೇಕಿತ್ತು... 

ಕತ್ತಲು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಒಡಲ ನೀಡಿ ಅಲ್ಲಲ್ಲಿ
ಬೆಳಕ ಹಡೆಯಬೇಕಿತ್ತು...

ಬೆಳಕು ಕತ್ತಲಿಗೆ ಹೊಂದಿಕೊಳ್ಳುತ್ತಿತ್ತು
ಕತ್ತಲ ದೇಹವ ಹೊಕ್ಕಿ ಕತ್ತಲೇ ಆದಂತೆ
ಕತ್ತಲು ಬೆಳಕ ಹೊತ್ತು ಹೊಳೆಯುತ್ತಿತ್ತು.... 

ಕತ್ತಲಿಗೆ ಬೆಳಕು ಪ್ರಾಣವಾಗಿ
ವಿರಹ ತುಂಬಿದಾಗ ಕತ್ತಲಾಗಿ
ಸಂಯೋಗಗೊಂಡಾಗ ಕತ್ತಲು ಬೆಳಕಾಗಿ
ಕಣ್ಣೆದುರು ನಿಲ್ಲುತ್ತಿತ್ತು... 

ಈಗ ಕಣ್ಣೆದುರಿನ ಕತ್ತಲೆಗೆ
ನನ್ನದು ಬೆಳಕಿನಷ್ಟೇ ಆರಾಧನಾ ಭಾವ
ಹುಟ್ಟುಗಳ ಹುಟ್ಟು ಹಾಕುವ ಕತ್ತಲೆಯು 
ಒಳಗೆಲ್ಲಾ ಬೆಳಕಿನ ಪಂಜುಗಳ ಬಿತ್ತುತ್ತಿತ್ತು... 
ಕಣ್ಣೊಳಗೆ ಕಪ್ಪು ಬಿಳುಪು ಕನ್ನಡಿಯೆದುರು ಹೊಳೆದಿತ್ತು....

30/10/2015

No comments:

Post a Comment