ಹೂವಿನ ದಳಗಳ
ದುಂಬಿ ಮೈಸವರಿ
ಝೇಂಕರಿಸಿ ರಮಿಸಿ
ಮುತ್ತಿಟ್ಟು ಬಚ್ಚಿಟ್ಟು
ಕೊಟ್ಟ ಪ್ರೀತಿ
ಒಳಗೊಳಗೇ ಕಾಯಿ ಹಣ್ಣಾಗಿ
ಮಾಗಿ ತೂಗಿದೆ ಓಲಾಡಿ
ಈ
ತಂಗಾಳಿಗೆ ... !
*****
ತುಟಿಗಳ ಜೀವತಂತುಗಳು
ಬಿಗಿ ಹಿಡಿದು ಸೆಳೆದುಕೊಂಡಂತೆ
ನಿನ್ನ ತುಟಿಗಳಲ್ಲಿ ಬೆಸೆದುಕೊಂಡಂತೆ
ತುದಿಗಾಲಲ್ಲಿ ನಿಂತ ಆತುರ
ಲಜ್ಜೆ ಮರೆತು ಗೆಜ್ಜೆ ಚೆಲ್ಲಿ ಹೆಜ್ಜೆ ಇಟ್ಟಂತೆ
ಪ್ರೀತಿ ನೀ
ಹೀಗೆ ಹಗುರಾಗಿ ಹತ್ತಿರತ್ತಿರವಾದಾಗ...
******
ಕೈಗೆ ಸಿಗದ ಕಾಮನಬಿಲ್ಲಿಗೆ
ಆಸೆಪಟ್ಟು ಕೊರಗುವ ಬದಲು
ಕೈಗೆಟುಕೊ ಬಣ್ಣದ ಗಾಳಿಪಟ ಹಿಡಿದು
ಆಗಸಕೆ ಹಾರಿಸಿ ನೋಡುವ ಚಂದ
ಒಪ್ಪಬಹುದೇನೋ; ಸೂತ್ರವೂ ಕೈಲಿರಲು
ಮಾಯವಾಗೋ ಗೊಂದಲವಿಲ್ಲ,,
ಆದರೂ ಸೂತ್ರ ಗಟ್ಟಿ ಇರಬೇಕಷ್ಟೆ
ತುಂಡಾಗಿಸೋ ಹುನ್ನಾರಗಳೆದುರು...
*****
ಯಾರನ್ನೂ ಒಲಿಸಿಕೊಳ್ಳುವ
ಅಗತ್ಯವೇ ಕಾಣಲಿಲ್ಲ
ಒಮ್ಮೆಲೆ ಮೆಚ್ಚುಕೊಂಡೆನಷ್ಟೇ ಅವನ....!
*****
ನಾನು ನನ್ನ ಮನಸ್ಸು
ಬಹುಶಃ
ಯಾರ ಅರ್ಥಕ್ಕೂ ನಿಲುಕದ್ದು
ಹಾಗಾಗಿಯೇ ಏನೊ
ಆಗಾಗ ಹೊಸದಾಗಿ
ಸಜ್ಜುಗೊಳ್ಳುವೆ
ಮತ್ತೆ ಎಲ್ಲರ ಕಾರಣವಿಲ್ಲದೆ
ಪ್ರೀತಿಸಲು... !
ಕಾರಣವಿದ್ದರೂ ಯಾರನೂ ದ್ವೇಷಿಸದೇ
ತನ್ನೊಂದಿಗೆ ಹೋಲಿಸುವ ಅಕಾರಣಕ್ಕೆ
ಯಾರೆಡೆಗೂ ಅಸೂಯೆಯಿಲ್ಲದೆ....
ಸಜ್ಜುಗೊಳ್ಳುತ್ತಲೇ ಉಳಿವೆ...
15/08/2015
*****
ಹಾಲಂತ ಮನವು
ಉಕ್ಕೇರಿ ಹರಿಯಲು
ಬಿಸಿ ತಾಗಿಯೇ ಇರಬೇಕು.. !
*****
ಖುಷಿಯಲಿ ಹೂ ಮಾಲೆಯ
ಹೆಣಿಯಲೆಣಿಸಿದೆ
ಅದೇನೋ ಇರುಸು ಮುರುಸು
ಕೈಗತ್ತಿದ ಸುಗಂಧ
ಈ ಸುತ್ತಲ ಗಾಳಿಗೆ...
ಖುಷಿಗೆ ಬೆಲೆಯಿಲ್ಲವೇ
ಕಟ್ಟಲೂ ಆಗಲಿಲ್ಲವೇ..?!
ನಡುವೆ ಸುಳಿವ ಉಸಿರಿಗೆ
ಹಾರಿ ಹೋಗೋ ಹೂವಿಗೂ ಗಂಧಕೂ
ಹೆಣೆಯಲಾರದ ನಂಟು ಉಳಿದು...
14/08/2015
No comments:
Post a Comment