Sunday, 15 November 2015

ಪದ್ಯ

ಕನಸು


ಜೀವವಿಲ್ಲದ ನಾಡಿಗಳಲ್ಲಿ
ಕಿಚ್ಚು ಹೊತ್ತಿ ಮಿಡಿತ ಹುಟ್ಟಿ
ಹೆಪ್ಪುಗಟ್ಟಿದ ರಕ್ತ ಹರಿಯಲು 
ಜೀವಂತವೆಂದರು ಎಲ್ಲ ಬುದ್ಧಿಜೀವಿಗಳು
ನಾಡಿ ಹಿಡಿದು ಉಸಿರ ಮುಟ್ಟಿ

ಸತ್ತ ಹೆಣಕೆ ಎಷ್ಟೆಲ್ಲಾ ಅಲಂಕಾರ 
ಹೂವು ಗಂಧ ವಸ್ತ್ರ ವಸ್ತು 
ಆಡಂಬರ ಆಚರಣೆಯ ವೈಭೋಗ

ಹರಿದ ಕನಸಿನ ಕಣ್ಣಿಗೆ 
ಎಷ್ಟು ಮುತ್ತುಗಳು, ಬಾವಣಿಕೆಗಳು ..
ಎದ್ದು ಬಂದೀತೇನೋ ಎಂಬ ಭ್ರಮೆಯೇ
ಸತ್ತ ಕನಸಿದು ಸುಲಭಕೆ ಎದ್ದು ನಿಲ್ಲದು..

ಹಾಡಿ ನುಡಿದು ಕೈ ಹಿಡಿದೆಳೆದುಬ್ಬಿಸಿ 
ಮೈದಡವಿ ಬೆನ್ಚಪ್ಪರಿಸಿ ಹುರಿದಿಂಬಿಸಿದರು
ಕನಸಿನ ಗರಿಕೆದರಿ ಆಕಾಶದಾಸೆ ತೋರಿಸಿ.. 
ಉಸಿರಿದ್ದ ಮಾತ್ರಕೆ ಹಾರದ ಕನಸಿದು 
ತೂಗಿಬಿಟ್ಟಿದೆ ಕಾಲ ಬಹು ತೂಕ ಹೊರಿಸಿ..
ಹಾರದು ಈ ಚಳಿಗಾಳಿಗೆ 'ತೇಲದ ಕನಸು'..

15/11/2015
ಪ್ರೀತಿಯಲಿ
ಮೌನ;

ಅದುವೇ 
ನಿಜ ಒಲುಮೆ

ಹೆಚ್ಚು 
ಸಹಿಸಿಕೊಳ್ಳುವ ರೀತಿ.

*****

ಅತಿಯಾದ ಮೋಹ
ದೈಹಿಕ
ಆಕರ್ಷಣೆ

ಅತಿಯಾದ ಪ್ರೀತಿ
ಮನದ
ಘರ್ಷಣೆ..!

13/11/2015

ಪದ್ಯ

ಕಾಲಚಕ್ರದಡಿ ಸಿಲುಕಿದೆ ಘಳಿಗೆ..


ಹೊರಟು ಹೋದ
ಬಿಟ್ಟುಕೊಟ್ಟ ಸ್ನೇಹ-ಬಂಧಗಳು
ಬಾರದು ಎಂದೂ
ಬಂದರೂ ಉಳಿಯದು 
ಅದರ ಸ್ಥಾನ ಗುರ್ತಿಸಿ...!

ಹೋಗುವ ಮುನ್ನ
ಬಿಟ್ಟುಕೊಡುವ ಮುನ್ನ
ತೂಗಿ ಕಾಣಬೇಕು
ಅದರದರ ಮೌಲ್ಯಗಳ
ಅಹಂಭಾವ ಬದಿಗೊತ್ತಿ...!

ತಿರುವುಗಳು ಇಹವು ಹಲವು
ಅದರೊಳೆಲ್ಲೊ ತಿರುಗಿ ಬಂದರೆ
ಇದ್ದ ಕಾಲಕ್ಕೆ ಋಣಿಯಾಗಿರಲಿ
ಗೌರವ ಘನತೆಯ ತುಂಬಿಕೊಂಡಿರುವ
ತಿರುವೊಳು ನಿಂತಾಗ ಪಶ್ಚಾತ್ತಾಪದ ಬಿಸಿ ಇಂಗಿಸಿ..!

ಸ್ವಾಭಿಮಾನದ ಮುಖ ಬದಲಿಯಾಗಿ
ಅಹಂನ ಅಟ್ಟಹಾಸ
ತಿಳಿಯದ ಮುಗ್ಧರು ಮುನಿಸಿಕೊಂಡರು
ತಿರುಗಿ ಬಾರದೆ ತಿರುಗಿ ನೋಡದೆ
ಮನದಲಿ ನೆನೆದರು
ಬಿಟ್ಟುಕೊಟ್ಟ ಬಂಧವ 
ಕೋಪದ ಕೂಪಕ್ಕೆ ಕೆಡವಿ...!

ಕಾಲಚಕ್ರದಡಿ ಸಿಲುಕಿದೆ ಘಳಿಗೆ 
ಅಡಿಗಡಿಗೂ ಬಿರುಸು ಸೆಡವು
ಕರಗದ 'ನಾನು' ಹರಿದಾಡಿಯೇ ಸಾಗುವುದು
ಒಮ್ಮೆ ಉಕ್ಕಿ, ಒಮ್ಮೆ ಧುಮುಕಿ 
ಹಗುರಾಗಿ ಬಯಲಲಿ ನದಿಯನ್ನನುಸರಿಸಿ..
ಅಲ್ಲಲ್ಲಿ ಕಣ್ಣೀರ ಕೊಡವಿ...!!

13/11/2015

Saturday, 14 November 2015

ಪದ್ಯ




ಸ್ಪಂದನ
ನಿನ್ನ ವದನ
ಉಸಿರುಗಟ್ಟಿ ಸತ್ತ ಭಾವ ಭರವಸೆಗಳೆಲ್ಲಾ 
ಜೀವದೊಳು 'ಜೀವಂತ'.. 

ಪ್ರೇರಣ
ಮೆಚ್ಚುಗೆಯ ನಿನ್ನ ಒಂದು ನೋಟ
ಸುರಿವ ಮಳೆಯಲಿ
ಮೋಡದ ಮೇಲೋಡುವ 'ಹದ್ದು' ಈ ಮನಸ್ಸು

ಸಾಂತ್ವನ
ಸ್ನೇಹ ಪ್ರೀತಿಯ ಸವರಿದ ನಿನ್ನ ಕೈ
ಸಂಜೆ ಸೊಬಗ ಹೊತ್ತಂತೆ ಈ ಕೆನ್ನೆ ಕೆಂಪು
ಮಗುವಿನ 'ಮುಗ್ಧತೆ'ಯ ಮೊಗವು

ಪ್ರೇಮ
ನಿನ್ನ ಒಂದು ದಳದ ಸ್ಪರ್ಷಕೆ
ನನ್ನಿಡೀ ಜೀವಮಾನ ಕಮಲದ ಕೊಳ
ಈಜುತ್ತಲೇ ಉಳಿದು 'ದಡ' ಸೇರದಂತಹ ದಣಿವು..

ಯೌವ್ವನ
ನಿನ್ನ ಒಂದು ಕಿರುನಗೆಯ ಬೆಂಕಿ
ನಿರಂತರ ತಾಪವನ್ನೀಯುವ ಸೂರ್ಯ
ಹಗಲಿರುಳು ಈ 'ಭಾವ ಜೀವ'ಕೆ...

12/11/2015

ಪದ್ಯ

ದೀಪ


ದೀಪವಿರಲಿ ಸಾವಿರಾರು
ಈ ಕಣ್ಣ ಕಾಂತಿಗೆ ಸಾಲು ಕನಸು
ಹರಿದಷ್ಟೂ ಮನದ ಹರವು
ನೆಟ್ಟಿ ನಿಲ್ಲಲಿ ದೀಪದ ಕಾವು

ಅದು ಬೆಳಕಿಗಾಗಿಯೇ ಹೊತ್ತಿ ಉರಿವ ಬೆಂಕಿ
ಉಳಿದಂತೆ ಭೂರಮೆಯೊಳು ತಣ್ಣಗೆ ಮಲಗಿದ ಒಡಲು
ಬೆಂಕಿಯು ಬೇಕು ಕತ್ತಲೆಗೆ 
ಸಣ್ಣಗೆ ಮಿಣುಕಾಡುವಂತೆ
ಕಿಚ್ಚು ಇರಲಿ ಇರದಂತೆಯೂ
ಹೆಚ್ಚಿ ಇರಲಿ
ಅದುಮಿಟ್ಟರೂ ಪುಟಿವಂತೆಯೂ 
ಬೆಳಕಾಗುವ ಬೆಂಕಿ ಕತ್ತಲೂ ಹೌದು
ಹಿಡಿದಂತೆ ಚುಕ್ಕಾಣಿ ರಥದ ಪಥವು..

ದೀಪವಿದು ಗುರುದೀಪ
ದಾರಿ ನೀಡಿ ಕನಿಕರಿಸೋ ಕಾಲವು
ಕೈಯೊಳು ಹಿಡಿದು ಸಾಗಬೇಕು ಹಾದಿ
ದೀಪವಿದ್ದಡೆಯೇ ಅಂತ್ಯವೆಂದೆಣಿಸದೆ
ಙ್ಞಾನದ ಹಸಿವಿಗೆ 
ಎದುರಾದ ಕನ್ನಡಿಗಳು ಸಾಲು ಸಾಲು 
....ದೀಪಗಳ ಸಾಲು

10/11/2015

ಪದ್ಯ

ಪದ


ನನ್ನೊಂದಿಗೆ ನಾ 
ಕುಗ್ಗಿ ಮಾತನಾಡುವಾಗ
ನೀನು ಆಸರೆ ನೀಡಿದೆ 'ಪದ್ಯ'ವೇ
ಕೈ ಬಿಡದಿರು ಇನ್ನು 
ನನ್ನಿಂದ ನಾನೇ ಕಳೆದಂತೆ..

ಕಣ್ಣು ನೀನು ಕಿವಿಯೂ
ಮೂಕಿಗೆ ಮಾತು
ಶಬ್ದಕೆ ಪ್ರಾಸವು
ಮೌನಕೆ ಮಧುರ ರಾಗವು

ನಿದಿರೆಗೆ ಕನಸು
ಹಗಲಿಗೆ ಆಲೋಚನೆಯು
ಬಯಲಾಗಿ ನಿಂತಾಗ
ತಂಗಾಳಿ ಆಲಾಪನೆಯೂ ನೀನು..

ನನ್ನ ಬೆನ್ನಿಗೆ ಕಾಣದ ಹಸ್ತವೂ
ಅಪ್ಪನಷ್ಟೇ ಧೈರ್ಯವೂ 
ಅಮ್ಮನಂತಾ ಮಮತೆವೂ
ಪ್ರೇಮಿಯಂತ ರಸಿಕನು ನೀನು..

ಒಲಿಯದಿದ್ದರೂ ಮುನಿಯದಿರು
ಜೊತೆಗಿದ್ದು ರಮಿಸು
ಜೀವನಕೆ ನಂಟಾಗಿ
ಆತ್ಮಕ್ಕೆ ಚೇತನವಾಗಿ ನಿಲ್ಲು ನೀ ಪದವೇ...!

07/11/2015

ಪದ್ಯ

ವಸ್ತು,


ಯಾವ ವಸ್ತುವಿಗೆ
ಇಡೀ ಜೀವಭಾರವ ತೂಗಿಬಿಡುವೆವೊ
ಅವುಗಳೇ ನೆಲಮಟ್ಟಕ್ಕೆ ಬಗ್ಗಿಸಿಬಿಡುವವು..

ಯಾವುದನ್ನೂ ಹಿಡಿದಿಟ್ಟು 
ಮೆರೆಯಬಾರದು
ಹಕ್ಕೆಂದು..
ಒಲಿಯಬೇಕು ಎಲ್ಲವೂ ನೀತಿಗೆ

ಉಡಾಫೆಗೊಂಡ ಮನಸ್ಸು
ರಮಿಸದ ನಮ್ಮ ಕಣ್ಣು
ಇರಲಿ ಬಿಡು ಹೊರಳಿಸೋಣ 
ಮತ್ತ್ಯಾವುದೋ ನಿಃಸ್ವಾರ್ಥದ ಬದುಕೆನೆಡೆಗೆ

ನಾನು, ನನ್ನದು ನನಗಾಗಿಯೇ ಎಂದು
ಇಲ್ಲಿ ಇದುವರೆಗೂ ಏನೂ ಇರಲಿಲ್ಲ..
ಇರಬಾರದು ಕೂಡ..

ಹಾಗೆ ಇದ್ದು ನಿಂತು ಬಿಟ್ಟರೆ 
ಗಾಣದ ಎತ್ತಾಗಿಬಿಡುವೆ
ಒಂದೇ ವೃತ್ತಕೆ, ಒಂದೇ ಆಸೆಗೆ

ವಿಶಾಲವಾಗಿ ಹರಡಿ ನಿಂತುಬಿಡುವ
ಬಿಟ್ಟುಕೊಟ್ಟು ಬಿಳಲುಗಳನು ಆಲದ ಮರದಂತೆ..
ಹಬ್ಬಿದಷ್ಟೇ ಅದರ ಗರಿಮೆಯಂತೆ..

07/11/2015

ಪದ್ಯ

ತೊಳಲಾಟಗಳು...


ತೊಳಲಾಟಗಳಲ್ಲೇ 
ಸತ್ವವು ಹುಟ್ಟುವುದು 
ಕಳೆ ಕೀಳುವುದು,
ಸುನಾಮಿ ಮಥಿಸಿ 
ಸಮುದ್ರವ ತೊಳೆದಂತೆ
ಮಜ್ಜಿಗೆಯು ಜಿಡ್ಡು ತೊರೆದು 
ನಿರಾಳವಾದಂತೆ

ಒತ್ತಡವೊಂದು ತಿರುಗಿ ತಿರುಳೊಳು
ಹಗುರ ಹಲವು
ಗಾಳಿಗೆ ಹುಟ್ಟಿ ಸುಂಟರಗಾಳಿ
ಒಳ ಹೊರಗಿನ ಬೆಸ ಕದಡಿ ಊರಾಚೆ ಚೆಲ್ಲಿ
ಒಳಗಿನ ಗೆದ್ದಲು ಹಿಡಿದ ಮರ 
ಹೊರಗಿನ ಹೂ ಮರ ಘರ್ಷಿಸಿ ಕಿಚ್ಚು.. 
ಹೊತ್ತು ಉರಿದೀತು ಜೀವ 
ಹೊರಳಿ ಬೂದಿಯಲಿ ತಂಪು 
ಅದೇ ಅಂತ್ಯ.. 

ಸಂಘರ್ಷಗಳು ಬೇಕು
ತುಮುಲ ತೊಳಲಾಟಗಳು
ಉರಿದು ಕಳೆದು 
ಚಿಗುರ ಚಿವುಟಿ 
ಉದುರಿ ಹಸಿರು
ಶಾಂತವಾಗಿ 
ಮತ್ತೆ ಮೈದಳೆಯಬೇಕು ಉಸಿರು
ಹುಟ್ಟಬೇಕು ಬದುಕು ಮತ್ತೆ ಮತ್ತೆ...
ಒಳಗೊಂಡು 
ಒತ್ತಡ ತೊಳಲಾಟಗಳನು...

06/11/2015

ಪದ್ಯ

ಮೌನ


ಸಿಟ್ಟು ನೆತ್ತಿಗೇರಿ
ನಿಂದನೆಯ ಅಪಮಾನವೆಣಿಸಿ
ದೂರದೇ ದೂರಾಗಿ
ಮೌನಗಳು ನಿಂತಿವೆ
ಮಾತಿನ ಬಾಗಿಲ ಎಡ ಬಲ... 

ನುಣುಪು ಕೆನ್ನೆ
ಚೂಪು ಮೂಗು
ಕೆಪ್ಪಗೆ ಹೊಳೆದು 
ಕನ್ನಡಕವು ಹಬೆಯಾಗಿ
ಬುಸಗುಟ್ಟಿದ್ದ ಕೋಪ
ಅಂದಿನ ಅಂದಗಳದು

ಮೊದಲೇ ಚಿಲಕವಿಲ್ಲದ ಬಾಗಿಲು
ಮೊದಲು ತಟ್ಟುವವರ್ಯಾರೋ
ಕೀಲಿ ಕೈಗೆ ತಡಕಾಡದೆ 
ಕೆಂಪಾರಿದ ನಿಮ್ಮ
ಮೂಗು ತೂರಿಸಿ ಮಾತೊಳಗೆ..
ಬಾಗಿಲಿಗೆ ತೋರಣ ಕಟ್ಟುವ... 

ನಿಂದನೆ ಅಪಮಾನಗಳ
ಈ ನಡುವೆ ಅರ್ಥ ಕಳೆದು
ಹೊಸ ದಾರಿಯ ಹೊಸ ಅರ್ಥಗಳಲಿ
ಬೆರೆತ ಸತ್ಯ ಬಹುಶಃ
ಮಾತನಾಡಿಸಬಹುದು ಮನಸ ಮೌನಗಳ....

06/11/2015

ಪದ್ಯ

.....

ನಾನೇ ದೂರಬೇಕಾದ್ದ
ಅಷ್ಟೂ ಅಂಶಗಳನ್ನು
ನಿಮ್ಮಲ್ಲಿ ಕಾಣುತ್ತೇನೆ
ನಾನೀಗ ನಮ್ಮಂತೆ ಆಗಬಯಸುತ್ತೇನೆ

ಪ್ರಾಮಾಣಿಕ ಪ್ರೇಮಿಯಾಗಿ
ವಿಹರಿಸಿಯೂ ಕರಗದಂತೆ ಉಳಿದು
ಬನಗಳಲಿ ಸುತ್ತಿ ಬರುತ್ತೇನೆ
ಹೂಗಳ ಕಂಡೆಣಿಸಿ...
ಆಘ್ರಾಣಿಸಿ ತಾಗದಂತೆ ನಿಂತು..

ಬಂಧಿತ ಕೈದಿಯಾಗಿ
ನಿಂತು ಕೈ ಚಾಚುವೆಯಷ್ಟೇ
ದೂರದ ನೋಟಕೆ ಮೈಮಾಟಕೆ
ಅಪರಾಧವೆಸಗದೆ ಹೀಗೆ ನಿಷ್ಠೆಯಿಂದ

ಮುಖ್ಯವಾಗಿ ಮುಖ್ಯವಾಗಿಸಿ
ನಿಮ್ಮನ್ನೇ ನಿಮ್ಮಂತೆಯೇ ನಾನು
ಒಪ್ಪುತೇನಷ್ಟೇ ಅಪ್ಪಿಕೊಳ್ಳದೆ
ಯಾವುದೇ ವೃತ್ತದ ಕೆಂದ್ರವಾಗದೆ...

ನಾನೇ ದೂರಬೇಕಾದ್ದ
ಅಷ್ಟೂ ಅಂಶಗಳನ್ನು
ನಿಮ್ಮಲ್ಲಿ ಕಾಣುತ್ತೇನೆ
ನೀವೇ ದೂರಿರಿ ಸಾಧ್ಯವಾದರೆ
ನಾನೀಗ ನಮ್ಮಂತೆ ಆಗಬಯಸುತ್ತೇನೆ

06/11/2015

ಪದ್ಯ

ಉಂಗುರ..

ಉಂಗುರಗಳ ಜೋಡಿಸುತ್ತಲಿದ್ದೆ
ಚಿನ್ನದವು ಹರಳಿನವು ...
ಆಸೆಯಿಲ್ಲದೆ ಜೊತೆಗುಳಿದವು

ಮರೆತ ಎಷ್ಟೋ ಉಂಗುರಗಳು
ಈಗ ಅವನು ಪೋಣಿಸಿಕೊಳ್ಳುತ್ತಿದ್ದಾನೆ
ಇದುದ್ದರ ಅರಿವೇ ಎನಗಿರದೆ..

ಮುಚ್ಚಿಟ್ಟುಕೊಂಡ ಉಂಗುರವೊಂದು
ಉರಿದಂತೆ ಮುನಿದು
ಮಳೆ ತಂಗಾಳಿಗೆ ಒಲಿದು
ಹಟ ಮಾಡಿದೆ ಅವನ ತೊಡಲು 

ಈ ಸಂಜೆಯ ಮಳೆಗೆ ತೋಯ್ದ ಇಳೆ
ಹಸಿಗೊಂಡು ಬಿರಿದಂತೆ ಮುತ್ತಿನ ಮೊಗ್ಗು
ಮುತ್ತುತ್ತಲಿವೆ ಮುಚ್ಚಿಟ್ಟುಕೊಂಡ ಬೆಂಕಿಯುಂಗುರ

03/11/2015

ಪದ್ಯ

ಕತ್ತಲು


ಕತ್ತಲಿಗೆ ಕಣ್ಣು ಹೊಂದಿಕೊಳ್ಳುತ್ತಿತ್ತು
ಬೆಳಕು ಅಲೆಲ್ಲೋ ಹುಟ್ಟಿ
ಇಲ್ಲಿ ಚೆಲ್ಲಾಡಿತ್ತು... 

ಕಣ್ಣು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಕೋಟೆ ಕತ್ತಲ ಕಳೆದು
ಪಾಪೆ ಹಿಗ್ಗಿಸಿ ಬೆಳ್ಳಿ ಕಿರಣವ ಹೀರಬೇಕಿತ್ತು... 

ಕತ್ತಲು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಒಡಲ ನೀಡಿ ಅಲ್ಲಲ್ಲಿ
ಬೆಳಕ ಹಡೆಯಬೇಕಿತ್ತು...

ಬೆಳಕು ಕತ್ತಲಿಗೆ ಹೊಂದಿಕೊಳ್ಳುತ್ತಿತ್ತು
ಕತ್ತಲ ದೇಹವ ಹೊಕ್ಕಿ ಕತ್ತಲೇ ಆದಂತೆ
ಕತ್ತಲು ಬೆಳಕ ಹೊತ್ತು ಹೊಳೆಯುತ್ತಿತ್ತು.... 

ಕತ್ತಲಿಗೆ ಬೆಳಕು ಪ್ರಾಣವಾಗಿ
ವಿರಹ ತುಂಬಿದಾಗ ಕತ್ತಲಾಗಿ
ಸಂಯೋಗಗೊಂಡಾಗ ಕತ್ತಲು ಬೆಳಕಾಗಿ
ಕಣ್ಣೆದುರು ನಿಲ್ಲುತ್ತಿತ್ತು... 

ಈಗ ಕಣ್ಣೆದುರಿನ ಕತ್ತಲೆಗೆ
ನನ್ನದು ಬೆಳಕಿನಷ್ಟೇ ಆರಾಧನಾ ಭಾವ
ಹುಟ್ಟುಗಳ ಹುಟ್ಟು ಹಾಕುವ ಕತ್ತಲೆಯು 
ಒಳಗೆಲ್ಲಾ ಬೆಳಕಿನ ಪಂಜುಗಳ ಬಿತ್ತುತ್ತಿತ್ತು... 
ಕಣ್ಣೊಳಗೆ ಕಪ್ಪು ಬಿಳುಪು ಕನ್ನಡಿಯೆದುರು ಹೊಳೆದಿತ್ತು....

30/10/2015
ಕತ್ತಲಿಗೆ ಕಣ್ಣು ಹೊಂದಿಕೊಳ್ಳುತ್ತಿತ್ತು
ಬೆಳಕು ಅಲೆಲ್ಲೋ ಹುಟ್ಟಿ
ಇಲ್ಲಿ ಚೆಲ್ಲಾಡಿತ್ತು...

ಕಣ್ಣು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಕೋಟೆ ಕತ್ತಲ ಕಳೆದು
ಪಾಪೆ ಹಿಗ್ಗಿಸಿ ಬೆಳ್ಳಿ ಕಿರಣವ ಹೀರಬೇಕಿತ್ತು...

ಕತ್ತಲು ಬೆಳಕಿಗೆ ಹೊಂದಿಕೊಳ್ಳುತ್ತಿತ್ತು
ಒಡಲ ನೀಡಿ ಅಲ್ಲಲ್ಲಿ
ಬೆಳಕ ಹಡೆಯಬೇಕಿತ್ತು...

ಬೆಳಕು ಕತ್ತಲಿಗೆ ಹೊಂದಿಕೊಳ್ಳುತ್ತಿತ್ತು
ಕತ್ತಲ ದೇಹವ ಹೊಕ್ಕಿ ಕತ್ತಲೇ ಆದಂತೆ
ಕತ್ತಲು ಬೆಳಕ ಹೊತ್ತು ಹೊಳೆಯುತ್ತಿತ್ತು....

ಕತ್ತಲಿಗೆ ಬೆಳಕು ಪ್ರಾಣವಾಗಿ
ವಿರಹ ತುಂಬಿದಾಗ ಕತ್ತಲಾಗಿ
ಸಂಯೋಗಗೊಂಡಾಗ ಕತ್ತಲು ಬೆಳಕಾಗಿ
ಕಣ್ಣೆದುರು ನಿಲ್ಲುತ್ತಿತ್ತು...

ಈಗ ಕಣ್ಣೆದುರಿನ ಕತ್ತಲೆಗೆ
ನನ್ನದು ಬೆಳಕಿನಷ್ಟೇ ಆರಾಧನಾ ಭಾವ
ಹುಟ್ಟುಗಳ ಹುಟ್ಟು ಹಾಕುವ ಕತ್ತಲೆಯು
ಒಳಗೆಲ್ಲಾ ಬೆಳಕಿನ ಪಂಜುಗಳ ಬಿತ್ತುತ್ತಿತ್ತು...
ಕಣ್ಣೊಳಗೆ ಕಪ್ಪು ಬಿಳುಪು ಕನ್ನಡಿಯೆದುರು ಹೊಳೆದಿತ್ತು....


ಪದ್ಯ

ಮಧುಶಾಲೆ.. 

ನಿಶೆಯಲಿ ನಶೆಯೇರಿಸೋ
ಅವನ ಕಣ್ಗಳೇ ನನ್ನ ಪ್ರಿಯ ಮಧುಶಾಲೆ
ಕುಡಿದಷ್ಟೂ ಕುಡಿಸೋ ಮೋಹ ಅವನದು
ನಿಶೆ ಕರಗಿದರೂ ನಶೆಯುಳಿಸಿ
ಹಗಲಿಗೆ ದೂಡುತ್ತಾನೆ
ಮಧುರವಾಗಿ ಮಧು ತುಂಬಿ 
ತುಟಿ ಬಟ್ಟಲುಗಳಲಿ.. 

ಈ ಮಧುಶಾಲೆಯಲಿ 
ಕಣ್ಣೀರಿಗೂ ಮತ್ತೇರಿಸೋ ಹಟವಿದೆ
ಅಮಲಲಿ ಹೊರಳಾಡಿ 
ಕಣ್ಣ ರೆಪ್ಪೆಗಳುಣಿಸೋ ಸೋಜಿಗವು 
ಪ್ರತಿದಿನವೂ ಹೊಸತನ

ಮಧುಶಾಲೆ ಕಣ್ಣೊಳಗೆ 
ತೆರೆದಿದೆ ನನಗಾಗಿಯೇ 
ಈ ಮಬ್ಬಿಗೂ ಮುಂದಿನ ಅನೇಕ ಕತ್ತಲೆಗೂ
ಮರುಳೆಂದರೂ ಈ ಮಧುಶಾಲೆಯ ದಾಸಳು ನಾನು

28/10/2015

ಪದ್ಯ

ಸೋಲಿನ ನೆರಳ ಮರ


ಸೋಲೆಂಬ ಆಲಿಕಲ್ಲು
ರಪರಪನೆ ಮುಖಕ್ಕೆ ಬಡಿದು
ಬಾವು ಊದಿಕೊಂಡು 
ನೋವೆಲ್ಲಿ ಸೋಲೆಲ್ಲಿ ಹುಡುಕ ಹೊರಟು
ದಾರಿಗುಂಟ ಒದ್ದೆ ಮುದ್ದೆಯಾಗಿ ಬಿದ್ದಿದ್ದ ಸೋಲು
ಜಿನುಗುತ್ತಿದೆ ಕೆಸರಾಗಿ ;ಕಾಲು ಹೂತು ತೊಡರು

ಅದೇನೋ ಹೊಳೆದಂತೆ ಸೂರ್ಯ ಕಂಡು 
ಉಷ್ಣವೇರಿ ಆಕರ್ಷಣೆಗೊಂಡು
ಮತ್ತೆ ಮತ್ತೆ ಮೇಲೆರುತ್ತಿದೆ ಆವಿಯಾಗಿ 
ಮತ್ತೆ ಮೋಡ ಮಳೆ ಆಲಿಕಲ್ಲಿನೇಟಿಗೆ
ಜಡಗೊಳ್ಳದ ಮನ ಕೊರಗಿ ತತ್ತರಿಸಿದೆ..
ಸೋಲಿಗೆ ಜೊತೆಯಾಗಿ ನಿಂತಿದೆ..

ಬದುಕು ಎಂದು ಹೆಸರಿಟ್ಟು
ನಿರಂತರ ಮಳೆಗಾಗಿ ಕಾದು ಕೂತು
ಏಟಿಗೆ ಎದೆಕೊಟ್ಟು
ಹೆಪ್ಪುಗಟ್ಟುವ ರಕ್ತವ ಕುದಿಸಿ ಹರಿಸಿ
ಮಳೆಯ ನೆರಳಲಿ ಸುಖವೆಂದು
ಆಲಿಕಲ್ಲಿನೇಟಿಗೆ ಜಗ್ಗದೆ ನಿಂತ ಜೀವ ಮರ

ಹೆಚ್ಚೆಚ್ಚು ಆಸೆ, ಆಸರೆಯ ಹುಚ್ಚು ಬೆಳೆಸಿಕೊಂಡು
ಘನವಾದ ಮೋಹದ ಬಯಕೆಯಲಿ 
ಭಾರಿ ಮೋಡವ ಅರಸಿ 
ಮಳೆಯ ಸುರಿಸೆಂದು ನಿಂತ ಮರ
ಹನಿವ ತುಂತುರಿಗೆ ದಾಹ ತೀರದೆ
ತೊಯ್ವ ಧಾರೆಯ ನೆನೆದು
ಸಿಡಿಲು ಗುಡುಗನ್ನೇ ಮೇಲರೆಗಿಸಿಕೊಂಡು
ಒಮ್ಮೆ ಸುಟ್ಟು ಮತ್ತೆಲ್ಲೇ ಮೂಲೆಯಲಿ ಚಿಗುರಿ
ಹಸಿರ ಉಸಿರಲಿ ಮಳೆಗಾಗಿ ನಿಂತ ಮರ

ಇದು ಬೇರಿಲ್ಲದ ಮರ
ತೇಲಿ ನಡೆವ ಮರ
ಬಿಳಲುಗಳನೇ ಹಗ್ಗ ಮಾಡಿ
ಭೂಮಿಯ ಮೇಲೆ ಹರಿದಾಡುವ ಮರ
ಮರ; ಮರಗಟ್ಟದ ಮರ
ಇದ್ದರೂ ಸತ್ತರೂ ಸುಟ್ಟುಕೊಳ್ಳುವ ಮರ
ಬೆಳಕಿಗೆ ಬದುಕಿಗೆ...

28/10/2015




ಚಿನ್ನ ;ಅದು ಚಿನ್ನವೇ.
ನೀನೆಷ್ಟೇ ಮಸಿ ಸಿಡಿಸಿ ಬೆಸ ಬೆರೆಸಿದರೂ
ನಿನ್ನೆಲ್ಲಾ ಒತ್ತಡ ಬೆಂಕಿಗೆ
ಕರಗಿಬಿಟ್ಟರೆ
ಹೊಳೆವದು
ಮತ್ತೂ ಚಿನ್ನದಂಶವೇ ಹೊರತು
ಮಸಿ ಸೀಸಗಳೆಲ್ಲಾ
ಕಣ್ಣೆದುರೇ ಆವಿ

ಚಿನ್ನಕ್ಕೆ ಕರೆಗಳಿಲ್ಲವೋ ಮರುಳೆ
ಕೊರೆತಗಳಷ್ಟೇ ಅಲಂಕಾರ...! 

26/10/2015

ಪದ್ಯ

ಸೋಲು


ಸೋಲುಗಳು ಅದೇಕೋ ನಿರಂತರ
ಆಗಾಗ ಸ್ಫೂರ್ತಿ ತುಂಬೋ 
ಕೆಲ ಸಣ್ಣ ಗೆಲುವುಗಳು
ನಿರಂತರ ಜೊತೆಗಿದ್ದು 
ಸತ್ತ ನಿರೀಕ್ಷೆಗಳ ಎಚ್ಚರಿಸುತ್ತವೆ

ಈ ಸೋಲು 
ಬಲು ಮಾಮೂಲು ಬಿಡು,
ಗೆದ್ದೇ ಗೆಲ್ಲುವ ಹಠ ತೊರೆದು
ತೊಟ್ಟ ಚಿಕ್ಕದೊಂದು ವೈರಾಗ್ಯ 
ಬಹುಶಃ
ಎಲ್ಲಾ ಸೋಲುಗಳನ್ನು ಗೆಲ್ಲಿಸಿಬಿಡುವುದು

ಹೊರಗಿನ 
ಈ ಸೋಲು ಗೆಲುವುಗಳನ್ನು
ನೀಗಿ ನಿಲ್ಲೊ
ಮನದ ನೀಯತಷ್ಟೇ 
ನಿಜದ ಗೆಲುವು... ! 
ಇದ ಅರಿತು, ಅರಿಯದೆ
ಹೀಗೆ ಗೆದ್ದುಬಿಡುವ 
ಹಠವಿಡಿದು ಸೋಲಿಸೋ 
ಈ ಹಳೇ ಸೋಲುಗಳೆದುರು... !

23/10/2015

ಪದ್ಯ

ಎದೆಗಪ್ಪಿ ಮುದ್ದಿಟ್ಟು
ತಡವುತಿದ್ದ ಒಲವೇ
ದೂರ ನಿಂತು ಹಗಲು
ಅದೇಕೋ
ಎದೆ ಖಾಲಿ ಖಾಲಿ..

ನಿನ್ನುಸಿರ ತುಂಬು ಬಾ 
ರಾತ್ರಿ ಕನಸಿಗೆ
ಕತ್ತಲೊಳಗೆ ಸಣ್ಣ ಕಿಡಿ ಹೊತ್ತಿಸಿ
ಬೆಳಗಿ ಕಣ್ಣ ಕಾಂತಿ;
ಉಸಿರುಗಟ್ಟಿ ಬೆಂಕಿ ಬೆಳಕಾಗಿ 
ಬೆಂಕಿಯುಸಿರ ಆ ತಂಗಾಳಿ
ಸುಳಿದು ಮನವು ಮೆದುವು

ಹವೆಯೊಳಗೆ ನಿಶೆ ಮೂಡಿ 
ವಿರಹಕ್ಕೊಂದು ವಿರಾಮ
ಈ ಇರುಳಿಗೆ ಸುಮ್ಮನೆ ನೆನಪಿಗೆ 
ನಕ್ಷತ್ರಗಳೆಣಿಸುವ ಕೆಲಸ... 
ದೂರದ ಬೆಂಕಿ ಸಣ್ಣಗೆ ಕಂಪನ
ಮಿಂಚಿ ಮರೆಯಾಗಿ ಕಾಡುವ ವಿನೂತನ

ಎದೆಗಪ್ಪಿ ಮುದ್ದಿಟ್ಟು
ತಡವಿದೆ ಈ ನನ್ನ ಕೈಗಳು
ನಿನ್ನದೇ ನಿನ್ನೆದೆ
ಆ ಅದೇ ಮಾತುಗಳ
ತುಂಟಾಟಗಳ ಸವಿ ಸವಿ ನೆನಪು...!

19/10/2015



ಎದೆ ತುಂಬಾ 
ತುಂಬಿಕೊಳ್ಳೋ ವೈರಾಗ್ಯಕ್ಕೆ 
ದೂರದ ಭರವಸೆಯ ಹೊದಿಕೆ ಹೊದಿಸಿ
ಕತ್ತಲ ರಾತ್ರಿಗಳಲ್ಲಿ 
ಕೆಂಡಕೆದರಿ ಗಬೆಯೆಬ್ಬಿಸಿ
ತಣ್ಣಗೆ ಮಲಗಿಸುತ್ತೇನೆ

15/10/2015

*****

ಆತ್ಮವಿಶ್ವಾಸ ಕಳೆದುಕೊಂಡ ವ್ಯಕ್ತಿ
ಬಹಳ ದಿನ ಬದುಕಲಾರ
ಸತ್ತುಬಿಡುವನು 
ಇಲ್ಲವೇ 
ಮತ್ತೆ ಹುಟ್ಟಿಬಿಡುವನು
ಹೊಸ ವಿಶ್ವಾಸಕ್ಕೆ ಮತ್ತೆ ಆತ್ಮ ಬಿಗಿದು...!

12/10/2015

Thursday, 12 November 2015

ನಡೆವ ದಾರಿಗೆ ಎದುರಾದ ಮುಳ್ಳುಗಳನ್ನು
ನಯವಾಗಿ ಬಿಡಿಸಿ ಪಕ್ಕಕ್ಕೆ ಸರಿಸಿ ನಡೆದಿದ್ದೆ,,
ತಪ್ಪಾಯಿತು,,!
ಹಿಂದೊಮ್ಮೆ ತಿರುಗಿ ನೋಡಿದ ಕಾರಣ
ನೇರೆ ಎದೆಗೆ ಬಂದು ನಾಟಿದವು,,
ನೋವಿದ್ದೂ ಚೀರಲಾರೆ,,!


*****


ಪಳಗುತ್ತಿರುವ ಕೈಗಳ 
ಬಳೆ ಸದ್ದು 
ಬಲು ಜೋರು
ಪಳಗುತ್ತಿದ್ದಂತೆ ಸದ್ದಡಗಿ 
ಗುನುಗಾದದ್ದು 
ಟಿಸಿಲೊಡೆದ ಪುಳಕವು..

07/10/2015

ಪದ್ಯ

ಸುಖದ ಸುಪ್ಪತ್ತಿಗೆ


ಸುಖದ ಸುಪ್ಪತ್ತಿಗೆ
ಕೆಳಕ್ಕೆ ಜಾರಿಸಿ ಮಲಗಿಸಿದರೆ
ನೋವಿನ ಮುಳ್ಳುಗಳಷ್ಟೇ
ಕಠೋರವಾಗಿ ನಿಂತು ಆಧಾರವಂತೆ..!!!

ಸುಖಕ್ಕಿಂತ ನಿಂತ ನಿಲುವು
ಸದಾ ಕಾಲದ ಸತ್ಯ
ದಣಿವೇ ಇಲ್ಲವಾಗಲಿ
ಕಾಲ ಕಂಬ, ಹೊನ್ನ ಕಳಶ ಅಲುಗದೆ..!

ಸುಪ್ಪತ್ತಿಗೋ ಹೊರಳಾಡಿಸೋ
ಮೋಜಿನ ವೈಯ್ಯಾರ
ಕದಡಿದ ಮೆದುಳು ಮನಸ್ಸು
ಮಜ್ಜಿಗೆ ಬೆಣ್ಣೆಯಾಗದ ಮೊಸರಂತೆ..!

ಕೆಳಕ್ಕಿಳಿಸುವ ಸುಖವು
ನೋಟಕ್ಕೆ ಎತ್ತರವಂತೆ
ಆದರದು ಬಾಗಿಯೋ ನೋಡಬೇಕಂತೆ
ಆಳದ ಅಗೇವಿನಲಿ ಜೊಳ್ಳಿನ ರಾಗಿ ಕಾಳು..!

07/10/2015


ಎದೆಯ ಕಾವಿಗೆ
ಹನಿ ದನಿಯಾಗುವುದು
ಎಂದರೆ
ಮಳೆ ತುಂಬಿದ ಮೋಡ
ಸುರಿಯದು ಇನ್ನೂ
ಕಾಮನಬಿಲ್ಲನಷ್ಟೇ ತೋರಿಸಿ
ಬಿಸಿಲನಿಟ್ಟು ಆರ್ದ್ರತೆ ಕಾಪಾಡುವ
ಹೊಸ ಹುನ್ನಾರ
ಸೂರ್ಯನದ್ದು... 
ಬಣ್ಣ ತೇಲಿ ಕಣ್ಣ ತೇಲಿಸಿ
ಬೆವರಲೂ ನಗೆ ಹೊನಲು
ಹಬೆಗೊಂಡ ತೆನೆಯೊಡಲು

*****

ಅಳುವನೇ ಮರೆತವಳಿಗೆ
ಸಣ್ಣ ಅಕಾರಣಕ್ಕೂ 
ಅತ್ತು
ತನ್ನ ಬಾಹುಗಳಲಿ ಹುದುಗಲು
ನೆಪಗಳ ಹೊದ್ದಿಸಿ 
ಮಲಗಿಸುತ್ತಾನವನು..
ಶರಧಿ;
ಎದೆಯಲಿ ಹರಿದಾಡಿ
ಭೂ ತಂಪಗೆ

06/10/2015
*****

ಸದ್ದಿಲ್ಲದ ತುಟಿ ಮುತ್ತು
ನಶೆ ಏರಿಸುವುದ ಮರೆಯಲಿಲ್ಲ
ಕಣ್ತುಂಬದ ಒಲವು
ಎದೆಯೊಳಗಿಳಿವುದ ಮರೆಯಲೇ ಇಲ್ಲ
ಕತ್ತಲು ಸುತ್ತಲೂ ಇದ್ದರೂ
ಜೋಡಿ ಕೈಗಳು
ದಾರಿ ತೋರುವುದ ನಿಲ್ಲಿಸಲೇ ಇಲ್ಲ...!

02/10/2015

*****

ತುಂಡು ಬಟ್ಟೆಗಳ 
ಹೆಣೆದು 
ಒಟ್ಟುಗೂಡಿಸಿ 
ದಿರಿಸು ಮಾಡುವ ಸೂಜಿ
ಕೊನೆಗೂ ಒಂಟಿ...!


*****

ಮಾತು ಮತ್ತು ಧೈರ್ಯ
ಒಟ್ಟೊಟ್ಟಿಗೆ ಬಂದಾಗ
ಕಳೆದುಕೊಳ್ಳುವ ಭಯ ಕಾಡಿ
ಸುಮ್ಮನಾಗುತ್ತೇನೆ... 
ಪ್ರೀತಿಸುತ್ತೇನೆ... ಅಷ್ಟೇ ..!!

28/09/2015

ಪದ್ಯ

ನನ್ನದೀ ಭೂಮಿ


ನನ್ನದೀ ಭೂಮಿ
ಅಗೆದಗೆದು ಸಿಗಿದು ಬಿಟ್ಟದ್ದು
ಸಡಿಲಗೊಳಿಸಿ ಕೆದರಿ ಬಿಟ್ಟದ್ದು
ವಾಯು ಸಂಚಾರಿಸುವಂತೆ 
ಕೀಟ ವಿಘಟಕಗಳು ಕಲೆತು 
ಮಣ್ಣನ್ನು ಕ್ಷಾರವನ್ನಾಗಿಸಿ 
ಸಿಕ್ಕದನ್ನು ದಕ್ಕಿದನ್ನು ಸೆಳೆಸೆಳೆದು 
ಕೊಳೆಸಿ ಹದಗೊಳಿಸಿ 
ಹೀರಿ ಸಾರ
ಆಗದಂತೆ ಏನೂ 
ಮತ್ತೆ ಮಣ್ಣಾಗಿ ಉಳಿವಂತೆ 
ನನ್ನದೀ ಭೂಮಿ.. 

ನನ್ನದೀ ಭೂಮಿ
ನಿರಂತರ ಧಾಳಿಗೊಳಪಟ್ಟು
ಸದಾ ನುಣುಪು ಹೊಳಪು
ಒಗರು ಒರಟು
ಜೀವ ಉಸಿರು ಕೆಟ್ಟಂತೆ
ನೆಲದ ಎಲೆಯೂ ನೀಲಿ
ಯಾವುದನ್ನೂ ಮುಚ್ಚಿಡದ ಗುಟ್ಟು 
ಈ ಮನದ ಹರವು
ಮಣ್ಣನೇ ತಿಂದು 
ಮಣ್ಣನೇ ಗೊಬ್ಬರವಾಗಿಸುವ
ಎರೆ ಹುಳುಗಳ ಹೊತ್ತ
ಫಲವತ್ತು ಮಣ್ಣು
ನನ್ನದೀ ಭೂಮಿ

ನನ್ನದೀ ಭೂಮಿ
ರಜಗಳ ಭಿತ್ತಿಸಿಕೊಳ್ಳದ್ದು
ಸೆಳೆದುಕೊಳ್ಳುವಂತಹುದ್ದು
ಸದಾ ಹಸಿರಿಗೆ 
ಉಸಿರಾಗಬಯಸುವುದು
ಅದಕ್ಕಾಗಿ ಕಳೆ ತೊಳೆವ 
ಮಳೆಗೊಡ್ಡಿಕೊಳ್ಳುತ್ತ
ಹೆಪ್ಪುಗಟ್ಟಿ ಮಣ್ಣು 
ಬಿಳಲಿಗೆ ಬೇರಾಗುವುದು
ಹಸಿರು ಹೂಗಳನೇ ಹೊದ್ದು
ಮತ್ತೆ ಮತ್ತೆ ಮಳೆಯ ಸೆಳೆದು
ಸಿಸಿಗಳ ಪೋಷಿಸಿಕೊಳ್ವದು

ಹಣ್ಣಾದ ಎಲೆ ಉದುರಿ
ತಂಪ ಹೀರಿ ಬುಡ ಭದ್ರವಾಗಿ 
ಮನಸ್ಸು ವಿಚಾರಗಳಲಿ
ದಿಟ್ಟವಾಗಿ ನಿಂತು
ಹೂವ ಬಿಡಿಸಿ 
ಆಗಾಗ ಜಗದೆದುರು
ಮುಡಿಗೇರಿಸಿಕೊಳ್ವದು
ಸೌಂದರ್ಯ ಮೆರೆಯಲು
ಈ ಭೂಮಿ
ನನ್ನದೀ ಭೂಮಿ..

21/09/2015


ತಂತಿ ನಾದಕೆ ಕುಣಿದಾಡೋ 
ಎದೆ ಸ್ವರಗಳು 
ಕಣ್ಣೀರ ತಂದೀತು 
ಕಲ್ ಹೃದಯ ಒಮ್ಮೆಲೇ ಕರಗಿದಂತೆ 

ಮೀಟುವ ಎಲೆಗಳು 
ಅಲೆಗಳೆಬ್ಬಿಸಿ ಸೋಲಿಸಿದಂತೆ 
ಕಳೆದು ಪಡೆವಂತೆ 
ಉಮ್ಮಿಳಿಸಿ ಬರುವ 
ಭಾವಗಳಿಗೆ ನದಿಯ ತಂಪು..!

*****


ಹಂಚಿಕೊಳ್ಳುವ ತುತ್ತಿಗಿಂತ
ಕಿತ್ತುಕೊಳ್ಳುವ ಮುತ್ತು ಸಿಹಿ
ಮಾವಿನ ಮರದ ಗಿಳಿಗಳ ಉಲಿ..

18/09/2015

ಪದ್ಯ

ನಿನ್ನ ಕಣ್ಣುಗಳು


ಕೆಂಪಾದ ನಿನ್ನ ಕಣ್ಣುಗಳ 
ನಾಲಿಗೆ ನೇವರಿಸಿ ತಂಪುಗೊಳಿಸಲು
ಉರಿವ ಬೇಗೆಗಳ
ಉಸರಿನಿಂದಲೇ ಆರಿಸಿ ತಾಮಸಗೊಳಿಸಲು

ಪ್ರೇಮದ ಅಮಲೊಳು 
ಬರೀ ಕಾಮವೇ ಇಲ್ಲ 
ಭರಿಸದ ಭಾರ ಕನಸುಗಳೂ ಇವೆ
ಉಬ್ಬಿಸಿ ಮೆರೆಸಲು

ತೂಗಿ ನೋಡಿ ಅಳೆದು 
ಸುರಿದುಬಿಡು ಮುತ್ತುಗಳ 
ನನ್ನದು ತುಂಬದ ಜೋಳಿಗೆ 
ಅರಿವು ಜ್ಞಾನದ ಹಸಿವು

ಪ್ರೀತಿ ನೀ ಅಕ್ಷಯ ದೀವಿಗೆ
ಇರುಳ ರಮ್ಯತೆಗೆ ಬೆಳದಿಂಗಳ ಮೆರಗು
ಆರಿದ ಅಧರಕೆ ಜೇನಿನ ಹೊಳಪು
ಬರಿಗೈ ಹೊತ್ತ ಬೆವರ ಹನಿಗಳು

ಹಸಿರೆಲೆಗೆ ಹಸಿರನೇ ಹೆಸರಿಸಿದಂತೆ 
ಎದೆಯೊಳು ರಕುತ ಸಂಚಲನ 
ಮಿಡಿಯಲು ನೀ ಹಿತವಾಗಿ ಮಾತಿನಲಿ
ಪದಗಳಲಿ ನಾ ನಾಚಿ ಅದುರಿದಂತೆ.. !!

14/09/2015




ಬಯಸಿದಷ್ಟೂ ಬಾಕಿಯುಳಿವ ಬೇಡಿಕೆಗಳು
ನೀಡಿಬಿಡುವ ಬಯಕೆಗಳ ಮೀರಿ
ಕರಗಿದಂತೆ ಕೊರತೆಗಳು...! 

*****


ಈ ಕಣ್ಣುಗಳಲ್ಲಿ 
ಇಷ್ಟೊಂದು ನಿದ್ದೆ ಇತ್ತೆಂದು 
ಗೊತ್ತೇ ಇರಲಿಲ್ಲ..
ಕನಸುಗಳನ್ನೇ ಹೊತ್ತು ತಿರುಗಿ
ಮಂಪರಿನ ಗುರುತೇ ಇರದಂತೆ
ರೆಪ್ಪೆ ಮುಚ್ಚದ ಮೀನಾಕ್ಷಿ

ಕನಸು ತೇಲಿದಂತೆ ಮದಿರೆ 
ಕಣ್ಣೊಳಗೆ ಸಾವಿರ ಮಧುಶಾಲೆ 
ಒಟ್ಟೊಟ್ಟಿಗೆ 
ಮಧು ಸುರಿದುಕೊಂಡಂತೆ
ನಿದಿರೆ..
ಈ ಕಣ್ಣುಗಳಲ್ಲಿ ಇಷ್ಟೊಂದು
ನಿದ್ದೆ ಇತ್ತೆಂದು ಗೊತ್ತೇ ಇರಲಿಲ್ಲ.... !

08/09/2015
******

ಕಾಡು ಸಂತೆಯಲ್ಲಿ
ಹಂದಿಯೊಂದು ಹೂಂಕರಿಸಿದಂತೆ 
ಯಾರ ಪರಿವೆಯೂ ಇಲ್ಲದೆ
ನಟ್ಟಿರುಳು ಮೊಗ್ಗು ಮೂಡಿ ಅರಳಿದಂತೆ
ಎತ್ತರೆತ್ತರವಾಗಿ ನಿಂತ ಮರಗಳಂತೆ
ಸುತ್ತಲು ಹುಲುಸಾಗಿ ಹರಿದ ತೊರೆ
ಮತ್ತೆಲ್ಲೋ ಹರಿದಂತೆ 
ಮರೆತು ಅದರ ಹೊರೆ
ಯಾರೂ ಕೇಳದ ಕರೆ
ಯಾರನೂ ತಲುಪದ ಅಲೆ
ಇದ್ದ ಇಲ್ಲದ ದ್ವಂದ್ವದ ಸೆಲೆ
ಒಮ್ಮೊಮ್ಮೆ ಈ ಖಾಲಿ ಗಡಿಗೆ..!!!


*****

ಬೇಸರಕೆ ಬೆನ್ನ ಮಾಡಿ
ನಡೆದ ಘಳಿಗೆ 
ಸಾವಿರ ಮಾತಿಗೂ
ಉಸಿರಿಲ್ಲದ ಮೌನ
ಅರ್ಥ ಕಲ್ಪಿಸಲಾರೆ
ಎಲ್ಲರ ಎಲ್ಲಾ ಅನಿವಾರ್ಯಗಳಿಗೆ
ಇಂದು ಹೀಗೆ ದಿಢೀರೆಂದು
ನಿಮ್ಮ ಕಂಡು ಹೀಗೆ ನೆನದು...!


*****

ಹ್ಮೂ ಹೌದು
ಈ ಕಣ್ಣಾಮುಚ್ಚಾಲೆ
ಬಹು ದೂರಕೆ ಒಯ್ದುಬಿಟ್ಟಿತು
ಈ ಅವಧಿಯಲ್ಲಿ
ಚೂರಾದ ಚಂದಿರನಂತಲ್ಲ ಬಿಡು
ಒಡೆದೇ ಹೋದ ಹಾಲಿನಂತೆ
ಪನ್ನೀರ್ ಬಳಸದ ಜನ ನಾವು
ಸುರಿದುಬಿಟ್ಟೆವು ಕಾಲದ ಹರಿವಿಗೆ 
ಅಳಿವೂ ಹೌದು 
ಏನೂ ಉಳಿಯದೆ
ನೀರಾವಿ ಹೋದಂತೆ
ಸೆಳೆತವಿದ್ದಲ್ಲಿ ನಿಂತು ಘನವಾಗಿ 
ಭಾವುಕತೆ ಭಾರವಾಗಿ ಧರೆಗಿಳಿದುಬಿಟ್ಟೆ 
ಅಂತೂ ನೆಲಮುಟ್ಟಿಬಿಟ್ಟೆ
ಕಣ್ಣಾಮುಚ್ಚಲೆಯ ಆಟದಲ್ಲಿ 
ಸೋತು ಗೆದ್ದು....!!!!!

07/09/2015

ಪದ್ಯ

ಅಳಿದೇ ಹೋದರೂ...

ಮುಳಗಿದರೂ ತೇಲುವ 
ದೋಣಿಯದು 
ಹಗುರ ಮನಸ್ಸು... !

ಹರಿದು ಹೋದರೂ
ಸೇರುವುದು ಮುಡಿಯ
ಅದು ಹೂವಿನ ಕನಸು...!

ಹುದುಗಿ ಇಳಿದರು
ಮೊಳೆತು ಹೊಮ್ಮುವುದು
ಬಲಿತ ಬೀಜದ ಸೊಗಸು...!

ಸಿಡಿದೇ ಹೋದರೂ
ಸೂರ್ಯ; ಮತ್ತೆ ಸಾಸಿರ
ಹುಟ್ಟುಗಳು ಒಡೆಯನವನು ...!

ಚದುರಿಯೇ ಕರಗಿದ 
ಮೋಡ; ತಂಗಾಳಿ ಹವೆ
ಮತ್ತೆಲ್ಲೋ ಬೆಟ್ಟದ ತುದಿಯು...!

ಅಳಿದೇ ಹೋದರು
ಉಳಿದುಕೊಳ್ಳುವ ಛಲ 
ಅದು ಕೆಂಡದಂತ ಸತ್ಯವು..!

24/08/2015


ಏನೆಲ್ಲಾ ತಳಮಳಗಳ 
ಹೊತ್ತರೂ
ಶಾಂತವಾಗಿ ಹಸಿರಾಗಿ 
ಹೊಮ್ಮುನ ಪೃಥ್ವಿ
ತಳಮಳಗೊಳ್ಳುತ್ತಲೇ 
ಉರಿವ ಸೂರ್ಯ
ಅನೇಕ ಭೂಮಿಗಳ 
ಹೆತ್ತು ಆಡಿಸಿ ಮತ್ತೂ ಉರಿವನು
ಭೂಮಿ ಬಳಗಗಳ 
ಬೆಳಗಲು ಬೆಳಕಾಗಿ
ಉರಿ, ಬೆಂಕಿ, ತಾಪ, ಜ್ವಾಲೆಗಳು 
ಪೋಷಣೆಗಳೇ ಸರಿ
ದೂರದಿಂದ.... 

*****

ಬಿಂಕ ಬಿಟ್ಟ ಹುಡುಗ
ಸುಂಕ ಮುರಿದ ಸರದ್ಹಾಂಗ
ಸರಿದಾಡುತಾನ ಸಲೀಸ 
ಕುತ್ತಿಗೆಯ ಸುತ್ತ ಮುತ್ತ 
ಪೋಣಿಸುತ್ತ ಒಂದೊಂದೇ 
ಸರದ ಮುತ್ತ...!!

*****

ಹೀಗೆ ಅವನ ಕೇಳಿದೆ
ಪ್ರೀತಿ ಹೆಚ್ಚಾದರೆ ಏನು ಮಾಡಬೇಕೆಂದು
ನನಗೂ ಇನ್ನೂ ಗೊತ್ತಾಗದೆ
ನಿನ್ನೊಳಗೆ ಯೋಚಿಸುತ ಕೂತೆ
ಎಂದನವನು... 
ಪ್ರಶ್ನಿಸದವನು... 

*****

ಮೌನವ ಮೀಟುವ
ಈ ಕೆಲ ನೋವುಗಳು
ವೀಣೆ ನುಡಿದಂತೆ ಮಿಡಿದು 
ಹೊರಡಿಸಿದ ಆ ಸ್ವರಗಳ
ಹೆಸರಿಸದಾದೆ
ಗಂಧ ಗಾಳಿಯಿಲ್ಲವೋ ಎನಗೆ
ಈ ಗೀತೆಯದ್ದು... !!!

******

ಮುಳುಗಿದರೂ ಕರಗದ
ಅನೇಕ ಮಣ್ಣಿನ ವಿಗ್ರಹಗಳಂತೆ
ಈ ಕನಸು ಇರುಳ ಹೊಕ್ಕಿ
ನಕ್ಷತ್ರಗಳಾದಂತೆ ಉಳಿದು ಆಗಸದಲಿ....

23/08/2015




ಬಿಸಿಯುಸಿರು ತಾಗೀತೆಂದು
ನಾನು ಉಸಿರಾಡಲು ನಿಲ್ಲಿಸುತ್ತೇನೆಯೇ... 
ಯಾರದೋ ಒಡಲ ಕಿಚ್ಚಿಗೆ
ನಾನು ಬೆವರಿ ನಿಲ್ಲುತ್ತೇನೆಯೇ... 
ಮಳೆಯಿದೆ ಚಳಿಯೂ 
ಛತ್ರಿ ಹಿಡಿದು ನಡೆವೆ
ಹೀಗೆ ಮೋಡಗಳ ಕೆಳಗೆ...

******

ನಾವು ಪ್ರೀತಿಸುವುದು
ನೋವುಗಳನ್ನೆ
ಯಾರನ್ನು ಹೆಚ್ಚು ಪ್ರೀತಿಸುತ್ತೇವೆ 
ಅವರಿಂದಲೇ ತಿರಸ್ಕಾರ ಪುರಸ್ಕಾರ
ಎಲ್ಲವೂ ಆಗಿ.. 
ಮಾತು ಮೌನವೂ ಕಾರಣವಾಗಿ
ನೊಯುತ್ತೇವೆ ನಲಿಯುತ್ತೇವೆ
ಖುಷಿಗಳನ್ನು ಸುಮ್ಮನೆ ಬಿಟ್ಟು
ತಬ್ಬುವುದಾದರೂ ಅವರಿಂದಾದ ನೋವುಗಳನು
ನಾವು ಅವರನ್ನೇ ಪ್ರೀತಿಸುತ್ತೇವೆ
ನೋವುಗಳನ್ನೇ ನಾವು ಪ್ರೀತಿಸಿರುವುದು
ಪ್ರೀತಿಸುತ್ತಿರುವುದು....

******

ಮಳೆಯಲಿ ಜೊತೆಯಲಿ 
ಛತ್ರಿ ಹಿಡಿದು ನೀ ನಡೆವಾಗ 
ಮನವರಳಿ ಮೊಗ ಮಿಂಚಿ 
ಸಿಡಿಲ ಸದ್ದು ಎದೆಯೊಳಗೆ 
ಗೊತ್ತಿಲ್ಲವೇ ಹುಡುಗ 
ಆ ಸದ್ದಡಗಿಸಲೇ ನನ್ನದು ಮಾತು ಹೆಚ್ಚು...

ಅದರೊಳೂ ಛತ್ರಿ ಇಳಸಿ 
ನಡೆಯೋಣವೇ
ಎಂದು ಕೇಳಲು ನೀ
ನನ್ನೊಳಗೆ ಡವ ಡವ ದಾಂದಲೆ
ಗೊತ್ತಿಲ್ಲವೇ ಹುಡುಗ 
ನಾನು ಸಿನೆಮಾ ನಟಿಯಲ್ಲವೋ
ವಾಟರ್ ಪ್ರೂಫ್ ಮೇಕಪ್ ನನ್ನದಲ್ಲವೋ.. !!

19/08/2015

*****

ಎಷ್ಟೇ ವೇಗದಿ 
ಓಡಿದರೂ 
ಗಾಳಿ ತಾ 
ಉಸಿರಾಗಿ ಒಳಗೂಡಲು
ಅದೇಕೋ 
ಯೋಚಿಸಿದಂತೆ;
ನಾ ಉಸಿರುಕಟ್ಟಿದಂತೆ 
ಈ ಹೊತ್ತು ನಿಂತೆ..

18/08/2015


*****

ಹೆಚ್ಚು ಪ್ರೀತಿಸಿಕೊಳ್ಳುವ
ಹೂವು 
ಮುದುಡಿದ್ದೇ ಹೆಚ್ಚು
ಇಲ್ಲದಿದ್ದರೂ 
ಉದುರಿ ಹೋದೀತೆಂಬ ಭಯವು
ಮರುಗಟ್ಟಿ ಜೀವ ಪಕಳೆಗಳು


*****

ಚಿನ್ನವೇ ಆದರೂ 
ಮತ್ತಷ್ಟು ಕುದಿಸಿ
ಕಲ್ಮಶವ ತೆಗೆವರು...!
ಸಹಿಸಬೇಕು ಕುದಿಗಳ
ಒಳಗುಣ ಮತ್ತಷ್ಟು ಹೊಮ್ಮಿ 
ಮೆರೆಯಲು...!

17/08/2015