ಮೋಡದ ಮರೆಯಲಿ
ಸೂರ್ಯನುದಯಿಸಿ
ಕರೆದ, ಕೊಂಡೊಯ್ದ
ಕಣ್ ಹೊಡೆದು ಚಿತ್ರ ಬಿಡಿಸಿದ
ಮತ್ತೆ ತಂದು ಜಗದೆದುರು
ನೀರು ಚಿಮುಕಿಸಿ ನಿಲ್ಲಿಸಿದ...
ನಾನಲ್ಲ; ನನ್ನದಲ್ಲ
ಈ ಬಣ್ಣಗಳು....
*****
ಈಚಲ ಮರದ
ಬುಡದೊಳು ಕುಳಿತು
ಸೊರ್ರನೆಳೆವ ಮಜ್ಜಿಗೆಯ ಸದ್ದಿನಲ್ಲೂ
ಅದೇನೋ ಅಮಲ ಘಮಲು
ಜಗದ ಕಣ್ಣದು ಮರಳು ಜಾತ್ರೆ
ಮಾಯೆಯೆಂಬುದು
ಒಂದು ಜಾದುವೇ ಆಗಲು
ಒಂದಷ್ಟು ಹೊತ್ತು
ಮನರಂಜಿಸುವ ಬದುಕು..
*******
ಇಡೀ ರಾತ್ರಿ
ನಿನ್ನ ಕನಸುಗಳನ್ನೇ
ಹೊದ್ದು ಮಲಗಿದ್ದೆ
ಬೆಳಗಾಗೆ ಮೈಕೊಡವಿ
ಎದ್ದೇಳಲು
ನಾ..
ಈ ಬಿಂಬು ಹಾಸಿಗೆ
ಎಲ್ಲವೂ
ನೀನೇ ಆಗಿ
ಮತ್ತೂ
ನಿನ್ನ ಕನಸಿಗೆ ಬಿದ್ದೆ
ಎದ್ದೇಳದೆ....
****
ವ್ಯತ್ಯಾಸ...
'ಅವರು' ಪ್ರೀತಿಸುವುದಕ್ಕಾಗಿ
ಯಾವ ಹಂತವನ್ನಾದರೂ ಮೀರುತ್ತಾರೆ
ಮತ್ತೆ 'ಇವರು' ದ್ವೇಷಿಸುವುದಕ್ಕಾಗಿ
ಯಾವ ಹಂತಕ್ಕಾದರೂ ಇಳಿಯುತ್ತಾರೆ...
ಅವರು-ಇವರುಗಳ ನಡುವಿನ ವ್ಯತ್ಯಾಸದಲಿ
ಉಳಿದು ಲೆಕ್ಕವಿಡದಂತೆ 'ನಾವು' ನಾವಾಗುವ
ತಕ್ಕದನ್ನು ಪ್ರೀತಿಸಿ ಮಿಕ್ಕದನ್ನು ನಿರ್ಲಕ್ಷಿಸುವ...
ಬೆಳಗು ಬೈಗಿನೊಂದಿಗೆ ಬೆರೆತು ಹಮ್ಮು ಬಿಮ್ಮಿಲ್ಲದೆ ನಿತ್ಯ ಸತ್ಯವಾಗುವ...
ಅವರೇ ನಾವಾಗುವ ಪ್ರೀತಿಸಿ ನೂರಾಗುವ..
12/07/2015
*******
ನಮ್ಮಿಬ್ಬರ ನಡುವೆ
ಗಾಳಿ ತಾ
ಹಾದು ಹೋಗುವುದೇ ಆದರೆ
ಮಿಶ್ರಿತ ಗಾಳಿ
ಧೂಳು ಮಣ್ಣನ್ನೂ ಹೊತ್ತೊಯ್ಯುವುದು
ಎಚ್ಚರ ತಪ್ಪಿ
ಕಣ್ಣಿಗೂ ಬೀಳಬಹುದು
ಆಗೆಲ್ಲಾ ದೂರ ಸರಿಯದೆ
ಮತ್ತಷ್ಟು ಹತ್ತಿರಾಗು
ಗಲ್ಲ ಹಿಡಿದು ತುಟಿ ಸವರಿ
ಕಣ್ಣಿಗಷ್ಟು ನಿನ್ನುಸಿರ ಊದಿಬಿಡು
ಇದ್ದ ಹೋದ
ರಜವೆಲ್ಲಾ ಹಾರಿ ಹೋಗಲು
ನಾ ಮತ್ತೂ ಹಗುರ
ನಿನ್ನ ತೋಳ ತೆಕ್ಕೆಯಲಿ...
*****
ಕತ್ತಲು ಹೆಚ್ಚಿದಂತೆ
ಈ ಹೊತ್ತು
ಅವನ ಚಿತ್ರಣ ಸ್ಪಷ್ಟ
ಈ ತಾರಸಿಯಲ್ಲಿ
ಬೆಳಕಿನ ಬುಗ್ಗೆಗಳ
ಕಣ್ಗಳಲ್ಲಿ ತಂದು ದಿಟ್ಟಿಸುವನು
ಮತ್ತೂ ನಶೆಯೆಂದು
ನಿಶೆಯಲಿ ಕಳ್ಳನಾಗುವನು..!
09/07/2015
No comments:
Post a Comment