ಎಲ್ಲವನ್ನೂ ಜಯಿಸಿ ನಿಗ್ರಹಿಸಿ ನಿಂತ ಮೇಲೆ
ನೀನು ಕಂಡೆ
ಪುಸ್ತಕದ ಮೊದಲ ಪುಟದ ಅರ್ಥಕ್ಕಾಗಿ ಶಬ್ದಕೋಶವನ್ನು ಹಿಡಿದೆ
ಎಲ್ಲರಿಗೂ ಈಗ ನಗುವಂತೆ
ನಾನೋ ನಿನ್ನೆದುರು ಮಗುವಂತೆ.. !...
ಹುಟ್ಟಿ ಬೆಳೆಯಬೇಕು
ಮೊಗ್ಗು ಅರಳಬೇಕು
ಗಂಧ ಸುಗಂಧವನ್ನೇ ಮೆರೆಯಬೇಕು
ಚಿಟ್ಟೆ ಹೂ ಬಾನಾಡಿಯಾಗಿ ಉಳಿಯಬೇಕು
ಅಳಬೇಕು ನಗಬೇಕು ಆಸರೆಯ ಬೇಡಬೇಕು
ಎಷ್ಟ ಹೊಸ ಹೊಸ ಬೇಕುಗಳನು ಹೊಂದಿಕೊಂಡು
ಹೊಸದಾಗಿ ಮೂಡಬೇಕು
ಆಗೆಲ್ಲಾ ಜೊತೆಗೆ ನೀನಿರಬೇಕು...!
ಆದಿಯಿಂದಂತ್ಯದವರೆಗೂ ಬೇಗೆಯಂತೆ ಚಿಂತೆ
ಕಾಡಿದವೋ ಕಾಡಿಕೊಂಡವೋ ನನ್ನದೇ ಭ್ರಾಂತೆ?
ಗೊಜಲಾಗಿ ಅಡಗಿ ಸ್ಫುಟವಾಗಿ ಚಿಮ್ಮುವ ನೀನೊಂದು ಹಣತೆ
ಹೊತ್ತಿಸಿ ಹೊಸ ಭಾಷೆ ಹರಿಸಿ ಹೊಸ ಕಾಂತಿ ಅಚಲವಾಗಿ ನಿಂತೆ
ದಿಬ್ಬದೊಳು ಆಕಸ್ಮಿಕದ ಕಬ್ಬದಂತೆ
ಜೀವದೊಳು ಹೇಗೋ ನಿನ್ನುಸಿರಂತೆ
ಮಿಳಿತ ಪುಳಕವಾಗಿಹ
ಈ ವಿಸ್ಮಯ ನಡೆದು
ಜಯಿಸಿ, ನಿಗ್ರಹಿಸಿದ ಕಲೆಗಳ ಹೊತ್ತಿಗೆ
ತೆರೆದುಕೊಳ್ಳಲಿ ಕಲಿತುಕೊಳ್ಳುವ ಕಾತುರತೆಗಲಿ
ಬೇಡಿಕೆಯಿದೆ ನಿನ್ನದೇ ; ಈ ಹಸಿರು ಮರೆತ ಕಾನನದಲಿ..
12/07/2015