Wednesday, 31 July 2013

ಕವನ

"ಆಲಾಪನೆ"

ಹೊಸದೊಂದು ಚಿಂತನೆ,
ಚಿತೆಗೇರುವ ಮುನ್ನ ಚಿಂತನಗಳಾಗಬೇಕೆಂದು.

ಹೊಸದೊಂದು ಕಲ್ಪನೆ,
ಭ್ರಮೆಯಾಗದ ಭವಿಷ್ಯವ ಕಲ್ಪಿಸಬೇಕೆಂದು.

ಹೊಸದೊಂದು ಭಾವನೆ,
ಅದರೊಳು ಖುಷಿಯನಷ್ಟೇ ಭಾವಿಸಬೇಕೆಂದು.

ಹೊಸದೊಂದು ಯಾತನೆ,
ಮನವೇಕೆ ನೋವು ನಿರೋಧಕವಾಯಿತೆಂದು.

ಹೊಸದೊಂದು ಕಾಮನೆ,
ಕಾಮವನೇ ಜೈಸಬೇಕೆಂದು.

ಹೀಗೊಂದು ನಮೂನೆ,
ಎಲ್ಲರ ಮನದೊಳು ತಣ್ಣನೇ ಉಳಿಯಲೆಂದು.

ಮತ್ತೊಂದು ಸಾಧನೆ,
ಬದುಕಲು ಬದುಕು ಸಾಧನವೆಂದು.

ಬದುಕಿಗೊಂದು ಸೂಚನೆ,
ಸೂಚ್ಯದಿ ಸುರ ಸೌಖ್ಯ ಸೂರೆಗೊಳ್ಳಲೆಂದು.

-ದಿವ್ಯ ಆಂಜನಪ್ಪ 
31/07/2013

Tuesday, 30 July 2013

ಚುಟುಕು

ಹಾಗೇ ಸುಮ್ಮನೇ..... 

"ಸಿಹಿ" ಕನಸಲಿ
ಸಹಿ ಹಾಕುವಾ 
ನಲ್ಲನೇ,
ಒಮ್ಮೊಮ್ಮೆ 
"ಕಹಿ" ನೀಡಿ
ಕಣ್ಮರೆಯಾಗುವೆ,
ಕನಸಿಗೆ ಬಾರದೇ...
"ಸವಿ" ಮಾತನುಡಿಯದೇ.....

-ದಿವ್ಯ ಆಂಜನಪ್ಪ 
30/07/2013

ಚುಟುಕು

"ಮನವೂ"

ಸುಮ್ಮನಿರದ ಶಾಂತ ಮನವೂ
ತುಂಬಿಕೊಳ್ಳುತ್ತದೆ ಬೇಕಾದ ಬೇಡದ
ಚೆಲುವು-ನೋವುಗಳನು,
ಮತ್ತೆ ವಿಮರ್ಶೆಗಳ ತಿಕ್ಕಾಟಗಳಲಿ
ಕಿಡಿಯೆದ್ದವು ಕೆಲವು ಬೆಂಕಿಕೆಂಡವಾಗಿ
ಇನ್ನೂ ಕೆಲವು ಹೊಸಕಾಂತಿಯಾಗಿ,
ಜರಡಿಯಂತ ಮನವು ನಿರಂತರ
ಶೋಧಿಸುತ, ಭೇದಿಸುತ, ಸೇರಿಸುತಾ
ದುಡಿವುದು ಮನುಷ್ಯ ಕೂತರೂ
ತಾ ನಿಲ್ಲದಂತೆ. 

-ದಿವ್ಯ ಆಂಜನಪ್ಪ
30/07/2013

Monday, 29 July 2013

ಹನಿಗವನ

ಪ್ರಿಯನೇ,
ತೋರಿಕೆಯ ಪ್ರೀತಿಯ ನಾ
ತೋರಲಾರೆ,
ನಶಿಸುವ ಶೃಂಗಾರಕೆ
ಬೆಸ್ತು ಬೀಳದೇ,
ನಶಿಸದ ಭಾವಕೆ
ಪ್ರಿಯನಾಗು.

ಮೆಚ್ಚಿಸಬಲ್ಲೆ ನಿನ್ನ
ಈ ಪದಗಳಲಿ,
ಮೆಚ್ಚಬೇಕು ನೀ
ನನ್ನ ಶಬ್ದಗಳು ಮೀರಿದ
ರೀತಿಯಲಿ,
ಒಲುಮೆಯ ಪ್ರೇಮದಲಿ. 

-ದಿವ್ಯ ಆಂಜನಪ್ಪ
29/07/2013

ಚುಟುಕು

ತಮ್ಮದನ್ನು ತಮ್ಮದಾಗಿಸುವ
ಒಳ ಒತ್ತಡವಿಲ್ಲ
ತಮ್ಮದಲ್ಲದನ್ನು ಹಿಂಬಾಲಿಸ
ಬಿಡುವುದಿಲ್ಲ.
ಈ ವೈಪರಿತ್ಯದಲಿ ಜಗದ
ಓಟಕ್ಕೆ ದಿಕ್ಕೇ ಇಲ್ಲ

-ದಿವ್ಯ ಆಂಜನಪ್ಪ
29/07/07/2013

ಚುಟುಕು

ಕದಡಿದ ಮನಕೂ
ಒಂದು ಬಯಕೆ
ಹೆಪ್ಪುಗಟ್ಟಲು,
ಮತ್ತಷ್ಟು ಕದಡಲು
ಬಟ್ಟಲು ಬೆಣ್ಣೆಯಾಗಲು 

-29/07/2013

Sunday, 28 July 2013

ಚುಟುಕು

ಯಾವ ಸಂಚಿಗೂ
ಸಿಲುಕದೇ
ಮಿಂಚಿ
ನುಸುಳುವಳು
ಅವಳು
ಮಿಂಚುಳ್ಳಿ

-ದಿವ್ಯ ಆಂಜನಪ್ಪ
28/07/2013

ಹನಿಗವನ

ಹಾಸ್ಯ:-

ಮೈಕಿನ ಮುಂದೆ ಕವನ ವಾಚಿಸುವವ,
ಉತ್ಸಾಹ, ಹುಮ್ಮಸ್ಸಿನಲಿ,
"ಪ್ರಿಯೇ" ಎನುತ
ತನ್ನಲ್ಲೇ ದೃಷ್ಟಿ ನೆಟ್ಟಿರುವಾಗ,
"ಎಲಾ ಇವನಾ?!"
ಎಂದುದ್ಗರಿಸಿದರೂ
ಗೆಳತಿಯರು ಗಮನಿಸಿ,
ಚುಡಾಯಿಸುವರೆಂದು
ತಲೆ ತಗ್ಗಿಸಲು ಹೇಳಿತು ಮನ,
ಇಲ್ಲದಿದ್ದರೇ ಕಣ್ಣಲ್ಲೇ
ಸುಟ್ಟುಬಿಡುತ್ತಿದ್ದೆನೋ ಅವನ ಆ ದಿನ.

(ಹೀಗೆ ಒಂದು ನೆನಪು)
-ದಿವ್ಯ ಆಂಜನಪ್ಪ
೨೮/೦೭/೨೦೧೩

ಕವನ

ಈ ಮನ

ಬಿಡಿಸಿಕೊಂಡಷ್ಟು 
ಸಂಕೋಲೆಗಳ ಬಂಧನ,
ಅವಿರತ ಪ್ರಯತ್ನಗಳಿಂದ 
ಜರ್ಜರಿತ ಮನ,
ಓಡಿದಷ್ಟೂ ಕಾಲ್ಕೆಳಗೇ ಇರುವ
ಭೂಕಂಪನ.

ನಾ ಮರೆತ ದುರಂತವ, 
ಮತ್ತೇ ಹೆಗಲೇರಿಸುವ ಜನಮನ.
ಹಟಬಿದ್ದು ಕೊಡವಿ ತೂರುವ
ಈ ಮನ,
ಉಲಿದಿದೆ; ತನ್ನದಲ್ಲದ ತಪ್ಪಿಗೆ ತಲೆಬಾಗದೆ
ಎದುರಿಸಿ ಸಾಗುವುದೇ ದಿಟ್ಟ ಜೀವನ.

-ದಿವ್ಯ ಆಂಜನಪ್ಪ
28/07/2013

Saturday, 27 July 2013

ಹನಿಗವನ

"ಸಾರ್ಥಕ್ಯ"

ವ್ಯಥೆಯು ಕಥೆಯಾಗದೆ,
ಹಳತು-ಹೊಸತು ಭಾವಗಳು
ಪಾತ್ರಗಳಾಗಿ ಕಾಡದೆ,
ಹನಿಗಳಾಗಿ ಹೊಮ್ಮಿ ಹೂವಾಗಿವೆ,
ಕವಿತೆಯಾಗಿ ಹರಿದಿವೆ;
ಈ ಹೆಪ್ಪುಗಟ್ಟಿದೆದೆಯ
ಹಗುರಾಗಿಸಲು...
ಕಳೆದ ವ್ಯಥೆಯೂ ತಂದಿದೆ ಸಾರ್ಥಕ್ಯ :-)

-ದಿವ್ಯ ಆಂಜನಪ್ಪ
೨೭/೦೭/೨೦೧೩


ಚುಟುಕು

"ದಯ್ಯ"

ನಾ ಸುಮ್ಮನಿದ್ದಾಗ
ನನ್ನೆಡೆಗೆ ಮಿಡಿವ,
ನಾ ತಿರುಗಿ ಒಲಿವಾಗ 
ಓಡುತಲಿರುವ 
ಮನಸ್ಸುಗಳು
ಭ್ರಮೆ ಹುಟ್ಟಿಸಿವೆ,
ನಾನೇನು ದಯ್ಯವೋ ಎಂದು 

-ದಿವ್ಯ ಆಂಜನಪ್ಪ
27/07/2013

Friday, 26 July 2013

ಹನಿಗವನ

"ಭಾವ"

ನನ್ನೊಳ ಭಾವ ಕಳೆದಿದೆ,
ಭಾವವಿಲ್ಲದ ಕವನವಿಲ್ಲ,
ನೀನಿಲ್ಲದೆ ನಾನಿಲ್ಲ,
ಇದ್ದರೂ ನಾನವಳಲ್ಲ.
ಎನ್ನ ಕವನ ನೀ ಮುದುಡಿರಲು
ಕಾವ್ಯವೆಲ್ಲಿ ಅರಳೀತು?
ಓ ನನ್ನ ಭಾವವೇ..... 
ಮರುಳು ನೀ ಮನಸಿಗೆ.......


-ದಿವ್ಯ ಆಂಜನಪ್ಪ
26/07/2013

Thursday, 25 July 2013

ಕವನ

"ಅಣ್ಣಾ"

ಅಣ್ಣಾ(ಅಪ್ಪ), ನೀನೆಂದೂ
ಅಣ್ಣನ ಕೊರತೆಯ ತುಂಬಿರುವೆ.
ಅದಕ್ಕಾಗಿಯೇನೋ
ನಾ ಯಾರನ್ನೂ ಅಣ್ಣನೆಂದು
ಕರೆಯಲಾರೆ.

ನೀನೇ ಸಲಹಿದ ಈ ಜೀವ
ಆಗಿದೆ ನಿನ್ನಂತೆಯೇ ದೃಢಭಾವ.
ವಯಸ್ಸಿಳಿದಂತೆ ನೀ ತಾಮಸವಾದಿ
ವಯಸ್ಸೇರಿದಂತೆ ನಿನ್ನಂತೆ ನಾ ಖಂಡಿತವಾದಿ.

ಏನು ಮಾಡಲಿ
ಒರಟು ನನ್ನ ಮಾತು.
ನಿನ್ನ ನೋಡಿ ಕಲಿತೆ
ನಿನ್ನಂತೆ ಬೆಳೆದೆ. :-)

-ದಿವ್ಯ ಆಂಜನಪ್ಪ

ಹನಿಗವನ

"ನಿರ್ಲಿಪ್ತ ಮನ"

ನಿರ್ಲಿಪ್ತ ಮನದೊಳು
ಇಣುಕಿದರೂ ನೆನಪಿನ ಪೊರೆಯಿಲ್ಲ;
ಇದ್ದರೂ ಅದರ ಪರಿವೆಯಿಲ್ಲ.
ಕಹಿ ನೆನಪುಗಳ ಬಲೆಗೆ
ಸಿಲುಕದ, ನಲುಗದ ಸ್ವಚ್ಚಂದವೀ ಮನವು
ನಿರ್ಮಲವೂ, ಸುಭೀಕ್ಷವೂ
ಹರಿವ ನದಿಯಂತೆ. :-)

-ದಿವ್ಯ ಆಂಜನಪ್ಪ

೨೫/೦೭/೨೦೧೩

Tuesday, 23 July 2013

ಕವನ

ದೃಢೀಕರಿಸು....

ಬೀಸುವ ತಂಗಾಳಿ
ಚಳಿಯಾಗಿ ನಡುಗಿ,
ಬಿಡಿಸಿದೆ ನಿನ್ನೆದೆ ಚಿತ್ತಾರವ,

ಗೆಳೆಯಾ,
ಚಿತ್ತ ಚಾಂಚಲ್ಯದಿ
ಬೆಸೆಯುತ್ತಿದೆ ಮನವು
ಬಾರಿ ಬಾರಿ ಕನಸ ನಿನ್ನೊಂದಿಗೆ,

ಬಂದುಬಿಡು ಕನಸ್ಸಿಂದಿಳಿದು
ದೃಢೀಕರಿಸು ಈ ವಿರಹಿಯ ಭ್ರಮೆಗಳ
ನಿಜ ಪ್ರೇಮದ ಕನವರಿಕೆಗಳೆಂದು ಜಗಕೆ.

೨೩/೦೭/೨೦೧೩

Monday, 22 July 2013

ಚುಟುಕು

ಹಾಗೇ ಸುಮ್ಮನೇ....... 

ಕಳೆದ ದಶಕದಲಿ
ಪ್ರೀತಿಸುವ ನಲ್ಮೆಯರಿಗೆ 
ನನ್ನಲ್ಲಿ ಪ್ರೀತಿಸುವ ತಾಳ್ಮೆಯಿರಲಿಲ್ಲ
ಆದರ್ಶ ಮೆರೆವ ತವಕದಲಿ,
ಇಂದು ನನ್ನನ್ನಷ್ಟೇ ಪ್ರೀತಿಸುವ ತಾಳ್ಮೆ ಅವಗಿಲ್ಲ
ಕಾಲ ಬದಲಾದ ದಿನಗಳಲೀ. :-)

23/07/2013

ಚುಟುಕು

ಹಾಗೇ ಸುಮ್ಮನೆ................. 

ಪ್ರೀತಿಗೆ ಪ್ರೀತಿ ಆಸರೆಯಾಗದಿದ್ದರೂ
ಸಹಿಸೀತು,
ಆದರೆ ಅಪಚಾರವೆದುರಾದರೇ,
ಹಕ್ಕಿನ ಜಿದ್ದಿಗೆ ಒಗ್ಗಿಬಿಡುತ್ತದೆ
ಆಗಲೇ ಪ್ರೀತಿ ಒಂದು ಒಗಟು, 
ಬದುಕೊಂದು ಕಗ್ಗಂಟು.

22/07/2013

Sunday, 21 July 2013

ಕವನ

"ಅವನಾಟ"

ಸಮುದ್ರದಂಚಿನಲಿ ನಿಂತವನು
ಅದರ ಮೊರೆತವನು ಆನಂದಿಸುವನು,

ಕಾಣಲಾರನು ಆ ಒಡಲ ತುಮುಲ-ತಳಮಳವಾ
ಸತಾಯಿಸುವನು ಸ್ಪರ್ಶಿಸಲು ಬಿಡದಂತೆ;
ತನ್ನೆಡೆಗೆ ಮಿಡಿವ ತೆರೆಗಳನು.
ಸುಖಿಸುವನು ಮತ್ತೂ ಸಾಗರವು ಮೊರೆದಷ್ಟು,

ತನಗಾಗಿ ತುಡಿಯುವ ಅಲೆಗಳ ಅಲ್ಲಗೆಳೆಯುತಾ....
ಅಬ್ಧಿಯು ಶಾಂತವಾದರೂ ಸಹಿಸಲಾರದ ಮನ;
ಸೆಳೆವೆಂಬ ಕಲ್ಲೆಸೆವುದು ನೀರ ಮೇಲೆ ನರ್ತಿಸುವಂತೆ,
ಮತ್ತೆ ತನ್ನೆಡೆಗೆ ಮೊರೆವಂತೆ.

ಸುಮ್ಮನೆ ದಡದೊಳು ನಿಲ್ಲಲಾರ,
ಸನಿಹ ಬಿಟ್ಟು ನಡೆಯಲಾರ.
ಬೆಸೆದುಕೊಂಡಾನು ಚಂದಿರ, ಸಾಗರಕೆ
ಪೂರ್ಣನಾಗಿ ಒಮ್ಮೊಮ್ಮೆ ಶೂನ್ಯನಾಗಿ.

-ದಿವ್ಯ ಆಂಜನಪ್ಪ

೨೧/೦೭/೨೦೧೩

ಹನಿಗವನ

"ಮೂಕಿ"

ತಪ್ಪು ತಪ್ಪು ಮಾತನಾಡುವವ,
ತಪ್ಪಾದರೂ ಒಪ್ಪದವ,
ಪ್ರೀತಿಯೆಂದು ಮುನ್ನುಗ್ಗಿ ತಬ್ಬದವ,
ಮೋಹವೆಂದು ಹಿಂದುಳಿದು ತಬ್ಬಿಬ್ಬಾದ.
ಗೆರೆಯ ದಾಟಲಾರ,
ಅಲ್ಲೆ ನಿಲ್ಲಲಾರ.
ಮನಸ್ಸಿನ ದೊಂಬರಾಟಕ್ಕೆ
ಮೂಕಿ,
ಈ ಪ್ರೀತಿ.

-ದಿವ್ಯ ಆಂಜನಪ್ಪ
೨೧/೦೭/೨೦೧೩


Saturday, 20 July 2013

ಹನಿಗವನ

ಹಾಗೆ ಸುಮ್ಮನೆ........... :-)

ಯಾರ್ಯಾರಿಗೆ ಯಾರ್ಯಾರು ಹಿತವರೋ?
ಯಾರ್ಯಾರಿಗೆ ಯಾರ್ಯಾರು ಅಹಿತರೋ?
ಯಾರ್ಯಾರಿಗೆ ಯಾರ್ಯಾರು ಎಲ್ಲಿಯ ತನಕ ಹಿತವರೋ?
ಈ ಹಿತ-ಅಹಿತಗಳ ನಡುವೆ
ಶತ-ಪತ ಶ್ರಮಿಸಿದವು
ಯಾರ್ಯಾರಿಗೆ ಯಾವ್ಯಾವ ತರದಲ್ಲೋ...
ಇಂದಿನ ನ್ಯಾಯ ದೇಗುಲಗಳು. :-)

-ದಿವ್ಯ ಆಂಜನಪ್ಪ

೨೦/೦೭/೨೦೧೩

ಚುಟುಕು

ಚಂಚಲದ ಮನದೊಳು
ಅಚಲ ಪ್ರೀತಿಯನ್ನು
ಸಂಸ್ಥಾಪಿಸುವುದೇ
ಒಂದು ಭಕ್ತಿ.

20/07/2013

Thursday, 18 July 2013

ಹನಿಗವನ

ಹೊಸ ಪ್ರಯತ್ನ

ಮತ್ತದೇ ನಿರಾಶೆ,
ಮತ್ತದೇ ಕಣ್ಣೀರ ಮಡಿಲು,
ಮತ್ತದೇ ಬರಿದಾದ ಮನ,
ಮತ್ತದೇ ವಿಧಿ ಹಳಿಯುವ ವ್ಯಸನ
ಎಂದೆಣಿಸದೆ,
ಮತ್ತೆದ್ದೇಳಬೇಕು ತನ್ನ ತಾ ಕುಂದಿಸದೆ,
ಕಳೆದ ಹಳತನ್ನು ಹಿಂದಾಕುತ
ಹೊಸ ದಾರಿ, ಹೊಸ ಬೆಳಕು,
ಹೊಸತನದ ಹೊಸ ಕನಸು,
ಹೊಸ ವ್ಯಕ್ತಿಯನ್ನಾಗಿಸುವ
ದೇವನ ಹೊಸ ಪ್ರಯತ್ನಗಳಲೀ
ಇದೂ ಒಂದೆನ್ನುತ........ :-)

-ದಿವ್ಯ ಆಂಜನಪ್ಪ
18/07/2013

Monday, 15 July 2013

ಲೇಖನ

"ಪಂಜು" ಪತ್ರಿಕೆಯ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ನನ್ನ ಲೇಖನ;

ದೀಪ

                ಅಂಧಕಾರವನ್ನು ತೊಲಗಿಸಿ, ಬೆಳಕನ್ನು ನೀಡಿ ದಾರಿ ತೋರುವ 'ದೀಪ'ವು ಙ್ಞಾನದ
ಸಂಕೇತವಾಗಿದೆ. ಸಾಂಪ್ರದಾಯಕ ದೃಷ್ಟಿಯಿಂದಲೂ ದೀಪವು ಶ್ರೇಷ್ಟ ಸ್ಥಾನವನ್ನು ಪಡೆದಿದೆ.
ಪೂಜೆ ಆಚರಣೆಗಳಲ್ಲಿ, ಆರತಿ ಬೆಳಗುವಲ್ಲಿ, ಯಾವುದೇ ಒಂದು ಕಾರ್ಯಕ್ರಮದ
ಉದ್ಘಾಟನೆಯಲ್ಲಿ, ದೀಪ ಬೆಳಗಿಸುವ ಕಾರ್ಯವೇ ಮೊದಲಾಗಿದೆ. ಹೀಗೆ ನಮ್ಮ ಮನಸ್ಸು, ನಮ್ಮ
ಸಂಸ್ಕೃತಿ ಮತ್ತು ನಮ್ಮ ಬುದ್ಧಿಯೂ ದೀಪವನ್ನು ಶ್ರೇಷ್ಠ ಸ್ಥಾನದಲ್ಲಿಟ್ಟು
ನೋಡುತ್ತದೆ. ಭಾವನಾತ್ಮಕವಾಗಿಯೂ ಮತ್ತು ಸಾಹಿತ್ಯಾತ್ಮಕವಾಗಿಯೂ ದೀಪವು ನಮ್ಮ
ಮನಗಳನ್ನು ಬೆಳಗಿಸಿವೆ ಎಂದೇ ಹೇಳಬಹುದು.

                ದೀಪವು ಬೆಳಕಿನ, ಙ್ಞಾನದ, ಕ್ರಾಂತಿಯ ದ್ಯೋತಕವಾಗಿ ಅನೇಕ ಕವಿತೆಗಳಾಗಿವೆ.
ಕವಿಗಳಿಗೆ ಸ್ಪೂರ್ತಿಯಾಗಿ ಸಾಹಿತ್ಯವನ್ನು ತನ್ನ ಪ್ರಾಕಾಶತೆಯಲ್ಲಿ ಬೆಳಗಿಸಿದೆ. ನಮ್ಮ
ಕವಿಗಳು ಅನಾದಿಕಾಲದಿಂದಲೂ ದೀಪದ ಆರಾಧಕರೇ ಆಗಿದ್ದಾರೆ. ಎಲ್ಲಿ ಙ್ಞಾನವೋ (ಬೆಳಗೋ)
ಅಲ್ಲಿ ದೀಪವು. ಸೂರ್ಯನ ನಂತರ ಪ್ರಕೃತಿಯಲ್ಲಿ ಮಾನವನ ಮನ-ಮನೆಗಳನ್ನು ಬೆಳಗುವ
ಕಾರ್ಯವನ್ನು ದೀಪವು ವಹಿಸಿಕೊಂಡಿದೆ ಎಂದು ಬಾಲ್ಯದಲ್ಲಿ ಪಾಠವಾಗಿ ಕಲಿತ ನೆನಪು.
ಹೌದಲ್ಲವೇ ಸೂರ್ಯ ಮುಳುಗಿದ ತದನಂತರ ದೀಪ ಬೇಳಗಿಸಿ ತಮ್ ತಮ್ಮ ಕಾರ್ಯಗಳ
ಪೂರೈಕೆಗಳಲ್ಲಿ ತೋಡಗುತ್ತೇವೆ.  ಹೀಗೆ ನಮ್ಮ ಅವಶ್ಯಕತೆಯಾಗಿ ದೀಪ, ಪೂಜೆ-
ದೇವನೊಲಿಸಿಕ್ಕೊಳ್ಳುವುದಕ್ಕಾಗಿ ದೀಪ, ಸಂತೋಷಕ್ಕಾಗಿ ದೀಪ, ದೃಷ್ಟಿ
ತೆಗೆಯುವುದಕ್ಕಾಗಿ ದೀಪ, ಹುಟ್ಟಿಗೆ ದೀಪ ಕಡೆಗೆ ಸಾವಿನಲ್ಲೂ ದೀಪದೊಂದಿಗೆ ಜೀವನದ
ಅಂತ್ಯವಾಗುತ್ತದೆ. ಜೀವನದುದ್ದಕ್ಕೂ ಒಂದಲ್ಲ ಒಂದು ಕಾರಣಕ್ಕಾಗಿ ದೀಪವು ನಮ್ಮ
ಜೊತೆಯಾಗಿರುತ್ತದೆ. ಇದರೊಟ್ಟಿಗೆ 'ದೀಪ'ಕ್ಕೆ ಸಾಂಪ್ರದಾಯಿಕ ನೆಲೆಗಟ್ಟಿನಲ್ಲಿ
ಹೆಚ್ಚು ಪ್ರಾಶಸ್ತ್ಯವನ್ನು ನೀಡಲಾಗಿದೆ. ದೀಪವನ್ನು ಹಚ್ಚಲು, ಅದಕ್ಕೆ ಬತ್ತಿಯನ್ನು
ಹಾಕಲು, ಅಲಂಕರಿಸಲು, ಎಣ್ಣೆ ಎರೆಯಲು ಹೀಗೆ ಎಲ್ಲಾ ಹಂತಗಳಲ್ಲೂ ಅದರದೇ ಆದ ರೀತಿ
ನೀತಿಗಳನ್ನು ಹೊಂದಿದೆ. ಈ ಎಲ್ಲಾ ರೀತಿ-ನೀತಿಗಳನ್ನು ಸಂಪ್ರದಾಯಗಳನ್ನು ಸೃಷ್ಟಿಸಿದ
ಮಾನವನ ಮನಸ್ಸಿನ ಶಕ್ತಿಯೂ ಇವೆಲ್ಲಕ್ಕಿಂತ ದೊಡ್ದದು ಅಲ್ಲವೇ? ಹಾಗಾಗಿ ಯಾವೋಬ್ಬ
ವ್ಯಕ್ತಿಯು ತನ್ನ ಮನದ ದೀಪವನ್ನು ಹಚ್ಚಿ ಅದರ ಬೇಳಗನ್ನು ಇತರರ ಶ್ರೇಯಸ್ಸಿಗೆ
ನೀಡುತ್ತಾನೋ ಅವನೇ ಶ್ರೇಷ್ಠನು ಎಂದೆನಿಸಿಕೊಳ್ಳುತ್ತಾನೆ.

                ಅದೇನೇ ಇರಲಿ, ಭಾವನಾತ್ಮಕವಾಗಿ ಮತ್ತು ಸಾಹಿತ್ಯಾತ್ಮಕವಾಗಿ ನಮ್ಮನವನ್ನು ತುಂಬಿರುವ
ದೀಪವು ರಂಗುರಂಗಾದ ಕನಸುಗಳನ್ನು ಕಟ್ಟಿಕೊಟ್ಟಿದೆ. ಹಾಗಾದರೆ, ಆ ದೀಪಗಳ ಬೆಳಕಿನಲ್ಲಿ
ಕವಿಮನಗಳ ಕೆಲವು ರಂಗುಗಳನ್ನು ನಾವಿಲ್ಲಿ ಕಾಣುವ ಮನಸ್ಸು ಮಾಡೋಣವೇ? :-)

                ಜೀವನದ ಸ್ಫೂರ್ತಿ, ಜೀವನದ ಆಸ್ತಿ, ಙ್ಜ್ಞಾನದ ಪ್ರತೀಕವಾಗಿರುವ 'ದೀಪ'ವು; ಕವಿಮನಗಳ
ಆರಾಧ್ಯ ದೈವವೆಂದೇ ಹೇಳಬಹುದು. ಹೀಗೆ ಕವಿ ಹೃದಯವನ್ನು ಕಲಕಿ ಜೀವನದ ಆಗು-ಹೋಗುಗಳಿಗೆ
ಕಾರಣಕರ್ತನನ್ನು ಪ್ರಾರ್ಥಿಸುತ್ತ ತನ್ನ ಜೀವನ (ದೀಪ, ಸಂಪತ್ತು)ವನ್ನು  ಉಳಿಸೆಂದು
ಹಾಡಿಸಿದ ಭಾವಗೀತೆ ಕೆ.ಎಸ್.ನರಸಿಂಹಸ್ವಾಮಿರವರ "ದೀಪವು ನಿನ್ನದೆ, ಗಾಳಿಯೂ ನಿನ್ನದೆ,,,,,".
ಜೀವನದ ಪ್ರತೀಕವಾದ ದೀಪವೂ ನಿನ್ನದೆ, ತೊಡಕುಗಳೆಂಬ ಗಾಳಿಯೂ
ನಿನ್ನದೆ ಆಗಿರಲು ನನ್ನ ದೀವಿಗೆಯು ಆರದಂತೆ ಕಾಪಾಡುವ ಹೊಣೆಯೂ ನಿನ್ನದೆ ಎಂದು
ಧೀಮಂತದೆದುರು ಪ್ರಾರ್ಥಿಸುವ ಭಾವವನ್ನು ಇಲ್ಲಿ ನೋಡಬಹುದು.

                ದೀಪವು ನಿನ್ನದೆ ಗಾಳಿಯೂ ನಿನ್ನದೆ, ಆರದಿರಲಿ ಬೆಳಕು
                ಕಡಲು ನಿನ್ನದೆ ಹಡಗು ನಿನ್ನದೆ, ಮುಳುಗದಿರಲಿ ಬದುಕು

                ಪ್ರಕೃತಿಯ ಸೃಷ್ಟಿಕರ್ತನೇ, ನಿನ್ನ ಸೃಷ್ಟಿಯ ಕಡಲು, ನಿನ್ನ ಸೃಷ್ಟಿಯ ಹಡಗು
(ಜೀವನ), ಎಲ್ಲವೂ ನಿನ್ನದೆ ನಿನ್ನ ಕೈಸೆರೆ. ಹೀಗಿರುವಾಗ, ಕಷ್ಟಗಳ ಬಿರುಗಾಳಿಗೆ
ಸಿಕ್ಕಿ ಜೀವನದ ಹಡಗು ಮುಳುಗದಂತೆ ನೋಡಿಕೊ. ಯಾವುದೊಂದಕ್ಕೆ ಧಕ್ಕೆಯಾದರೂ ಅದು
ನಿನ್ನದೇ ಒಂದಂಶದ ಸೋಲು ಎನ್ನುವ ಒಳಾರ್ಥವು ಈ ಸಾಲುಗಳದ್ದಾಗಿದೆ. ಈ ಕವನದ ಮುಂದಿವ
ಸಾಲುಗಳಲ್ಲಿ ಬೆಟ್ಟ-ಬಯಲು, ನೆಳಲು-ಬಿಸಿಲು, ಸಿಡಿಲು-ಮುಗಿಲು, ರಣದುಂದುಭಿ-ವೀಣೆ,
ಎಂಬುವನ್ನು ಪರಸ್ಪರ ವೈರುದ್ಯವಾಗಿ ನಿಲ್ಲಸಿ; ಅವೆಲ್ಲವೂ ಕ್ರಮವಾಗಿ 'ಆ ಚೇತನನು
ತೋರುವ ಪ್ರೀತಿಯು', 'ಅವನಿಗೆ ಸಲ್ಲುವ ನಮಸ್ಕಾರಗಳು', 'ಅವನ ಪ್ರತಿಧ್ವನಿ'  ಮತ್ತು
ಮಹಾಕಾವ್ಯ-ಭಾವಗೀತೆಗಳು ಆತನ ಪದಧ್ವನಿಗಳೆಂದು ಕವಿ ಹಾಡುತ್ತ ಹೊಗಳಿ ಜೀವನದ ದೀಪವನ್ನು
ಬೆಳಗಿಸುವಂತೆ ಪ್ರಾರ್ಥಿಸುವ ಭಾವ ಈ ಕವನದ್ದಾಗಿದೆ.

                ತನ್ನ ಮನದಿ ಬಂದು ನೆಲಸಿ, ದೀಪವನ್ನು ಹಚ್ಚಿ. ಹಳೆ ಬಾಳನ್ನು ಹಿಂದಿಟ್ಟು
ಆತ್ಮರತಿಗೆ ಕಲ್ಲಾರತಿಯಾಗಿ ಬಂದು ನಂದಾದೀಪವಾಗಿ ಬೆಳಗೆಂಬ ಪ್ರಿಯಳ ಪ್ರಿಯನೆಡೆಗೆ
ಹರಿದು ಬಂದ ಭಾವ ಲಹರಿಯಲಿ ನಾವು ಆಧ್ಯಾತ್ಮದ ಲೇಪವನ್ನೂ ಕಾಣಬಹುದು. ಅಂತಹದೊಂದು ಗೀತೆ
'ಎಸ್.ವಿ.ಪರಮೇಶ್ವರ ಭಟ್ಟ'ರ "ಪ್ರೀತಿಯ ಕರೆ ಕೇಳಿ ಆತ್ಮನ ಮೊರೆ ಕೇಳಿ,,,,,,,,,"

                ತನ್ನ ಪ್ರಿಯಕರನ ಬರುವಿಗಾಗಿ ಹಾತೊರೆದ ಹೆಣ್ಮನದ ತುಮುಲಗಳನ್ನು ಕವಿಗಳು ಹೀಗೆ
ಕವನದಲ್ಲಿ ಹಿಡಿದಿಟ್ಟಿದ್ದಾರೆ. ಪ್ರೀತಿಯಿಂದ ಕರೆದ ಕರೆಯನ್ನು ಕೇಳಿ ತನ್ನ ಆತ್ಮದ
ಹಂಬಲವನ್ನು ಆಲಿಸಿ ಇನ್ನಾದರೂ ಬಂದು ನೀ ಮನದಿ ನೆಲಸಿ; ಮನೆಯೆಲ್ಲಾ ಬೆಳಗುವಂತೆ
ಬದುಕನ್ನು ಹಸನುಗೊಳಿಸಲೆಂದು ನೀ ದೀಪವ ಹಚ್ಚಿ ತನ್ನ ಕತ್ತಲೆಯ ವಿಷಾದಗಳನ್ನು
ಹೊಡೆದೋಡಿಸೆಂದು ಪ್ರೀಯೆಯ ನಿವೇದನೆಯೇ ಈ ಸಾಲುಗಳು.

                ಪ್ರೀತಿಯ ಕರೆಕೇಳಿ ಆತ್ಮನ ಮೊರೆ ಕೇಳಿ
                ನೀ ಬಂದು ನಿಂದಿಲ್ಲಿ ದೀಪ ಹಚ್ಚ||
                ನಲ್ಲ ನೀ ಬಂದಂದು, ಕಣ್ಣಾರೆ ಕಂಡಂದು
                ಮನೆಯೆಲ್ಲಾ ಹೊಳೆದಂತೆ ದೀಪ ಹಚ್ಚ||

                ಬದುಕಲ್ಲಿ ಅನೇಕ ಕಷ್ಟಗಳಲ್ಲಿ ನೊಂದು, ಅಂಧಕಾರವೇ ಆವರಿಸಿದಂತಾಗಿ ಬಾಳು ಇನ್ನೇನು
ಇರುಳಾಗುವ ಸಮಯದಿ ನೀ ಮನದಿ  ಬಂದು ದೀಪವನ್ನು ಹಚ್ಚಿ ಮನವ ಬೆಳಕಾಗಿಸು. ಇರುಳಿಗೆ
ಬಾನಿನ ತಾರೆಗಳು ಬೆಳಕಾಗುವಂತೆ ನೀ ಎನ್ನ ಜೀವನದ ಕಾಂತಿಯಾಗಿ ಬಾರೆಂದು ಪ್ರಿಯೆಯು
ಪ್ರಾರ್ಥಿಸುತ್ತಿದ್ದಾಳೆ. ಇಲ್ಲಿ ಕರಿಗೆಜ್ಜೆ ಎಂಬುದು ಇರುಳಿನ ಸಂಕೇತ, ಕಣೀರ
ಮಿಡಿಯುವುದು ಎಂಬುದು ಕಷ್ಟಗಳ ಸಂಕೇತವಾಗಿದೆ.

                ಕರಿಗೆಜ್ಜೆ ಕುಣಿಸುತ್ತ ಕಣ್ಣೀರ ಮಿಡಿಯುತ್ತಿರುವ
                ಇರುಳಾಕೆ ಬಂದಳು ದೀಪ ಹಚ್ಚ
                ಬಾನಿನಂಗಳದಲಿ ಚುಕ್ಕಿ ಹೊಳೆದೆಸೆವಂತೆ
                ನನ್ನ ಮನದಂಗಳದಿ ದೀಪ ಹಚ್ಚ||

                ನೀ ಕಾರಣವಾಗಿ ತನ್ನ ಹಳೆಯ ಕಣ್ಣೀರಿನ ಬಾಳು ಸತ್ತು, ಬೇಡದ ನೆನಪುಗಳು ಸುಡುವಂತೆ
ಹೊಸಬಾಳು ಹುಟ್ಟಿದೆ. ನೀ ಹಚ್ಚಿದ ದೀಪದಿಂದ ಹೊಸ ವ್ಯಕ್ತಿತ್ವವನ್ನು ಪಡೆದ ನಾನಿನ್ನು
ನಿನ್ನ ಆರಾಧಕಿ. ರತಿಯಂತೆ ಪ್ರೀತಿಸಿ; ನೀ ಬೆಳಗಿದ ಆರತಿಗೆ ಮನವೆಲ್ಲಾ ಬೆಳಕಾಗಿ
ಕಲ್ಲಾರತಿಯಾಗಿದೆ.
                "ಕಷ್ಟಗಳ ಕೋಟೆಯೊಳಗಿದ್ದ ಕತ್ತಲೆಯ ಮನಸ್ಸಿಗೆ ಪ್ರೀತಿ, ಙ್ಞಾನ, ಅರಿವೆಂಬ ಬೆಳಕು
ಬೀರುವಂತ ದೀಪವನ್ನು ತಂದಿಟ್ಟು, ಹೊಸ ಬಾಳು, ಹೊಸ ಧ್ಯೇಯೆಯ ನೀಡಿ; ಬಾಡಿದ ಹೃದಯಕ್ಕೆ
ಪ್ರೀತಿಯ ಸಿಂಚನ ಮಾಡಿಸಿ ರತಿಯಂತೆ ಜೀವ ತುಂಬಿದ ಹೇ ಸೃಷ್ಟಿಕರ್ತನೇ (ಪ್ರಿಯನೇ), ನೀ
ಎನ್ನ ಮನದ ಙ್ಞಾನದೀಪ" ಎಂಬ ಭಾವ ಈ ಕವನದಲ್ಲಿ ವ್ಯಕ್ತವಾಗಿದೆ.

                ಹಳೆಬಾಳು ಸತ್ತಿತ್ತು ಕೊಳೆಬಾಳು ಸುಟ್ಟಿತ್ತು
                ಹೊಸಬಾಳು ಹುಟ್ಟಿತ್ತು ದೀಪ ಹಚ್ಚ
                ಪ್ರೀತಿಯ ರತಿಗೆ ನೀ ಬೆಳಕಿನ ಆರತಿ
                ಬೆಳಗಿ ಕಲ್ಲಾರತಿ ದೀಪ ಹಚ್ಚ||

                ಈ ಮೊದಲೇ ಹೇಳಿದಂತೆ ಇದೊಂದು ಪ್ರೀತಿಯ ಮತ್ತು ಆಧ್ಯಾತ್ಮಿಕ ಭಾವವುಳ್ಳ ಕವನವಾಗಿದೆ.
ಇಲ್ಲಿ ಪ್ರಿಯನೇ ದೇವನು. ಇಡೀ ವಿಶ್ವವೇ ಆ ಭಗವಂತನ ಪಾದಗಳಿಗೆ ತಮ್ಮ
ಧ್ಯೇಯೋಭಿಲಾಷೆಗಳಿಗೆ ಮುಗಿಬೀಳುವರು. ಇಲ್ಲಿ ವಿಶ್ವಮೋಹಿತಚರಣವೆಂದರೆ ಭಗವಂತನೆಂಬ
ಅರ್ಥವು ಪ್ರಾಪ್ತವಾಗುವುದು. ವಿವಿಧ ರೀತಿಯ ಅವತಾರಗಳು ಆ ಭಗವಂತನ ಆಭರಣಗಳಿದ್ದಂತೆ
ಎಂಬುದು 'ವಿವಿಧ ವಿಶ್ವಾಭರಣ"ದಲ್ಲಿ ಪ್ರತಿಬಿಂಬಿತವಾಗಿದೆ. ವಿಶ್ವಕ್ಕೇ ನೀ ಆಭರಣ ಎಂಬ
ಅರ್ಥವೂ ಕೊಡುತ್ತದೆ. ಆನಂದ ಸಾಗರ ಆ ದೇವನು ಜ್ಯೋತಿಯಾಗಿ ಬೆಳಗಲು ಮಾನವನ ಜೀವ ಆ
ಬೆಳಕಿಗೆ ಆಕರ್ಷಿತವಾದ ಪತಂಗದಂತೆ  ಆ ದೀಪದ ಸುತ್ತಲೇ ಗಿರಕಿ ಹೊಡೆಯುತ್ತದೆ. ದೇವನ ಆ
ದಿವ್ಯತೆಗೆ ಶರಣಾಗಿ ವಿನಮ್ರದಿ ಪ್ರಾರ್ಥಿಸುವ ಮನವು ತನ್ನ ಮನದ ದೀಪ ಬೆಳಗಿಸಲೆಂದು
ಬೇಡುತ್ತದೆ.

                ಈ ಕವನವು ಪ್ರಿಯೆ ಪ್ರಿಯನಿಗೆ ಹೇಳಿದಂತೆಯೂ ಕಂಡಿದ್ದು, ತನ್ನ ಪ್ರಿಯನನ್ನು
ದೇವನಿಗೆ ಹೋಲಿಸಿ ತನ್ನ ಮನದರಿಕೆಯನ್ನು ಸಲ್ಲಿಸುತ್ತಿದ್ದಾಳೆ. ಪ್ರೀತಿಯೆಂಬ
ಜ್ಯೋತಿಗೆ ಹೆಣ್ಮನವು ಹಂಬಲಿಸಿದಂತ ಚಿತ್ರಣವನ್ನು ನಾವು ಕಾಣಬಹುದು.

                ವಿಶ್ವ ಮೋಹಿತ ಚರಣ ವಿವಿಧ ವಿಶ್ವಾಭರಣ
                ಆನಂದದ ಕಿರಣ ದೀಪ ಹಚ್ಚ
                ನೀನೆಂಬ ಜೋತಿಯಲಿ ನಾನೆಂಬ ಪತಂಗ
                ಸೋತ ಉಲಿ ಹೇಳಲೀ ದೀಪ ಹಚ್ಚ||

                ನನ್ನಂತರಂಗಕ್ಕೆ ಎಂದೆಂದೂ "ಆರದ ದೀಪ" ನೀನಾಗಿ ಬಾರೆಂದು ಪ್ರೀತಿಯ ಹಂಬಲಿಸುವ ಮನ
ಪೂರ್ಣ ಶರಣಾಗತಿಯಲ್ಲಿ ದೇವ (ಪ್ರಿಯ) ನಲ್ಲಿ ಪ್ರಾರ್ಥಿಸುತ್ತಿದೆ.
                ನನ್ನಂತರಂಗದಿ ನಂದದೆ ನಿಂದಿಪ
                ನಂದಾದೀಪವಾಗಿರಲೀ ದೀಪ ಹಚ್ಚ||

                ಮತ್ತೊಂದು ದೀಪದ ಬೆಳಕಿನ ಚಿತ್ತಾರವನ್ನು ನಾಡಭಾಷೆ, ಹೆಮ್ಮೆಯ ಭಾಷೆಯ ಬಣ್ಣಗಳಾಗಿ
ಕಾಣವ ಗೀತೆ ಡಿ.ಎಸ್.ಕರ್ಕಿ ರವರ "ಹಚ್ಚೇವು ಕನ್ನಡದ ದೀಪ" :-)
                ಕನ್ನಡ ನಾಡಿನ, ಸಿರಿಸಂಪತ್ತಿನ ಭಾಷೆ ನಮ್ಮಡೆಗೆ ಒಲವನ್ನು ತೋರುವ ಭಾಷೆಯೆಂಬ ದೀಪವು
ನಮ್ಮಿಂದ ಬೆಳಗಬೇಕಾಗಿದೆ. ಈ ದೀಪದ ಬೆಳಕಿನಲ್ಲಿ ಬಹುದಿನಗಳಿಂದ ಕೂಡಿದ ನಮ್ಮ
ಜಡತ್ವವನ್ನು ಬಡಿದೋಡಿಸಬೇಕು. ಅಂತಹ ಕನ್ನಡದ ದೀಪದ ಸುಳಿವಿದ್ದಲ್ಲಿ ನಮ್ಮ ಕಿವಿಗಳು
ಮನಗಳು ತೆರೆದುಕೊಳ್ಳಬೇಕು. ಕನ್ನಡವನ್ನು ಪ್ರೀತಿಸುವ ಪೋಷಿಸುವ ಪ್ರಯತ್ನಗಳಿಂದ
ಕನ್ನಡದ ದೀಪವನ್ನು ಹಚ್ಚಬೇಕು.

                ಹಚ್ಚೇವು ಕನ್ನಡದ ದೀಪ ಹಚ್ಚೇವು ಕನ್ನಡದ ದೀಪ||
                ಕರುನಾಡ ದೀಪ ಸಿರಿನುಡಿಯ ದೀಪ, ಒಲವೆತ್ತಿ ತೋರುವಾ ದೀಪ|| ಹಚ್ಚೇವು||
                ಬಹುದಿನಗಳಿಂದ ಮೈಮರವೆಯಿಂದ  ಕೂಡಿರುವ ಕೊಳೆಯ ಕೊಚ್ಚೇವು
                ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣ ಚಾಚೇವು.

                ನಾವು ಕನ್ನಡಿಗರು ನಡುನಾಡಿನಲ್ಲೇ ಇರಲಿ, ಗಡಿನಾಡಿನಲ್ಲೇ ಇರಲಿ ಕನ್ನಡಕ್ಕೆ
ಕಳೆಯಂತಿರಬೇಕು. ಮರೆವು ಎಂಬುದನ್ನು ಮರೆತು, ಒಲವನ್ನು ಪರಸ್ಪರ ಹಂಚಿಕೊಂಡು
ಪ್ರೀತಿ-ವಿಶ್ವಾಸದಿ ಬೆರೆತು ಬಾಳಬೇಕು. ಕನ್ನಡದ ಕಂದಮ್ಮಗಳು ನಾವಾಗಿರಲು ನಮ್ಮ
ನರನರಗಳಲ್ಲಿ ಕನ್ನಡವು ಮಿಡಿದು ಕನ್ನಡದ ದೀಪಕ್ಕೆ ಸೊಡರುಗಳಾಗಿ ಹೊತ್ತಿ ಉರಿಯಬೇಕು;
ಪ್ರಜ್ವಲಿಸಬೇಕು. ಎಂಬುದು ಕವಿಗಳ ಆಶಯವಾಗಿದೆ.

                ಕಲ್ಪನೆಯ ಕಣ್ಣುಗಳು ಹರಿಯುವತನಕ, ಅಂತ್ಯವಿಲ್ಲದಂತೆ ಸಾಲು ದೀಪಗಳನ್ನು ಬೆಳಗಿಸುವ
ಹೊಣೆ ನಮ್ಮದಾಗಿದೆ. ಆ ದೀಪಗಳ ಬೆಳಕಲ್ಲಿ ಕನ್ನಡತಾಯ ರೂಪವನ್ನು
ಕಣ್ತುಂಬಿಕೋಳ್ಳಬೇಕಿದೆ. ಪ್ರಸನ್ನಳಾದ ತಾಯಿಯನ್ನು ಕಾಣುವ ದಾರಿ ಇದಾಗಿದೆಯೆಂದು ಕವಿ
ಸೂಚಿಸಿದ್ದಾರೆ.

                ನಡುನಾಡೆ ಇರಲಿ, ಗಡಿನಾಡೆ ಇರಲಿ ಕನ್ನಡದ ಕಳೆಯ ಕೆಚ್ಚೇವು
                ಮರೆತೇವು ಮರೆವ ತೆರೆದೇವು ಮನವ ಎರೆದೇವು ಒಲವ ಹಿಡಿನೆನೆಪ
                ನರನರವನೆಲ್ಲಾ ಹುರಿಗೊಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ||
                ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪಗಳ ಬೆಳಕ ಬೀರೇವು
                ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ತೊರೇವು||ಹಚ್ಚೇವು||

                ತಮ್ ತಮ್ಮಲ್ಲಿನ ದ್ವೇಷ-ಅಸೂಯೆಯ ಭಾವಗಳನ್ನು ಗಡಿನಾಡಿನಾಚೆಗೆ ತೂರಿ, ಪರಸ್ಪರ
ಪ್ರೀತಿ-ಸ್ನೇಹದಿಂದಿರಲು, ನಾಡಿನೆಡೆಗಿನ ಒಲವೊಂದೇ ನಮ್ಮ ಧ್ಯೇಯವಾಗಿರಲು ನಮ್ಮ
ಮನೆ-ಮನಗಳಲ್ಲಿ ಕನ್ನಡದ ದೀಪವು ಪ್ರಜ್ವಲಿಸುತ್ತಿದೆ. ನಾವೆಲ್ಲಾ ಒಂದಾಗಿ ನಮ್ಮ
ಹಿರಿಯರು ಗಳಿಸಿದ ಹೆಸರನ್ನು ಉಳಿಸುವುದರ ಮೂಲಕ ಮತ್ತು ಕನ್ನಡ ಭಾಷೆಯ ಪೋಷಣೆಗೈವ ಮೂಲಕ
ಮಾತೆಯ ಪೂಜೆಯನ್ನು ಕೈಗೊಳ್ಳಬೇಕಿದೆ. ಈ ನಾಡಿವ ಹಸಿರನ್ನೂ ಉಸಿರನ್ನೂ ಸೇವಿಸಿದ
ನಾವಿನ್ನೂ ಈ ಮಣ್ಣಿಗೆ ಚಿರಋಣಿಗಳಾಗಿ ದುಡಿಯಬೇಕಿದೆ. ಇಲ್ಲಿ ಹುಟ್ಟಿದ ನಮ್ಮ
ಕಂದಮ್ಮಗಳಿಗೂ ಮಿಂಚನ್ನು ಮುಡಿಸುವ ಸೌಭಾಗ್ಯ ನಮ್ಮದಾಗಿದೆ ಎಂದು ಕವಿ ಹಾಡಿದ್ದಾರೆ.

                ಒಡಲೊಡಲ ಕಿಚ್ಚಿನ ಕಿಡಿಗಳನ್ನು ಗಡಿನಾಡಿನಾಚೆ ತೂರೇವು||
                ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾಡೊಲವ ನೀತಿ ಹಿಡಿನೆನಪ||

                ನಮ್ಮವರು ಗಲಿಸಿದ ಹೆಸರುಳಿಸಲು ಎಲ್ಲಾರು ಒಂದೂ ಗೂಡೇವು
                ನಮ್ಮೆದೆಯ ಮಿಡಿಯಿವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೇವು||

                ನಮ್ಮುಸಿರು ತೀಡುವೀ ನಾಡಿನಲ್ಲಿ ಮಾಂಗಲ್ಯ ಗೀತ ಹಾಡೇವು,,,
                ಕರುಳೆಂಬ ಕುಡಿಗೆ ಮಿಂಚನ್ನು ಮುಡಿಸಿ||ಹಚ್ಚೇವು||

                ನಾವೆಲ್ಲರೂ ಸಂತೋಷದಿ ಕನ್ನಡದ ದೀಪದ ಬೆಳಕಿನಲ್ಲಿ ಬಾಳುತ್ತಿದ್ದೇವೆ. ಕನ್ನಡ ನಾಡಿನ
ಜನತೆಗೆ ನಂದಾದೀಪವಾಗಿ ಕನ್ನಡ ದೀಪವು ಆಶ್ರಯ, ಆನಂದ, ಆತ್ಮತೃಪ್ತಿಯನ್ನು ನೀಡಿ ಕೈ
ಹಿಡಿದು ಮುನ್ನೆಡೆಸಿದೆ. ಆ ದೀಪವು ಎಂದೆಂದಿಗೂ ಬೆಳಗುತ್ತಿರುವಂತೆ ನೋಡಿಕೂಳ್ಳುವ
ಹೊಣೆ ನಮ್ಮೆಲ್ಲರದ್ದಾಗಿದೆ.

                 ನಿರಂತರ ಬೆಳಗುವು ಅರಿವಿನ ದೀವಿಗೆಗೆ ನಮೋ ನಮಃ. ದೀಪದಿಂದ ದೀಪದ ಬೆಳಗು. ಙ್ಞಾನದ
ಹಂಚಿಕೆಯಿಂದ ಙ್ಞಾನವು ವೃದ್ಧಿ. ಸ್ನೇಹಿತರೇ, ನಿರಂತರ ಙ್ಞಾನದಾಹದಿಂದ ನಾವು
ನಮ್ಮಲ್ಲಿನ ದೀಪನನ್ನು ಎಂದೂ ಮಂದವಾಗಿಸದಂತೆ ನಂದಾದೀಪಗಳಾಗೋಣವೇ?,,

                ದೀಪದ ಬೆಳಗು ಕವಿಮನಗಳಲ್ಲಿ ತರತರಹದ ಬೆರಗುಗಳನ್ನು ಮೂಡಿಸಿದೆ. ಅಂತಹುದೇ
ಸಾಹಿತ್ಯಾತ್ಮಕ ಬೆಳಕು "ಪಂಜು". ಪುಟ ಪುಟಗಳಲ್ಲೂ ಬೆಳಕಿನ ಬೆರಗನ್ನೂ ನೀಡುತ್ತಾ ಬಂದ
ನಮ್ಮ ಪಂಜುವಿಗೆ ತನ್ನ ೨೫ನೇ ಸಂಚಿಕೆಯನ್ನು ಹೊರಡಿಸುತ್ತಿರುವ ಸಂಭ್ರಮ. ಶುಭವಾಗಲೀ.
ಪಂಜು ನಿರಂತರ ಪ್ರಜ್ವಲಿಸುತ್ತಿರಲಿ.

http://www.panjumagazine.com/?p=3080

ಧನ್ಯವಾದಗಳು

-ದಿವ್ಯ ಆಂಜನಪ್ಪ
೦೫/೦೭/೨೦೧೩

ಮನದ ಮಾತು

ಒಮ್ಮೊಮ್ಮೆ ತೀರ ಹತ್ತಿರದವರು ಎನಿಸಿಕೊಂಡವರು ಹಟಾತ್ತನೆ ಸರಿದು ದೂರಾಗಿಬಿಡುತ್ತಾರೆ. ಕಾರಣವೆನೇ ಇರಲಿ. ಆ ಕಾರಣಕ್ಕೆ ಹೊಣೆಗಾರರು ಇಬ್ಬರೂ ಸರಿಯೇ. ನೆಡೆದು ಬಂದ ಅಷ್ಟೂ ಹೆಜ್ಜೆ ಗುರುತುಗಳು ಆಗಾಗ ನೆನಪಿನಲೆಯಾಗಿ ಮನವ ರಾಡಿಗೊಳಿಸಿದರೂ ಮತ್ತದೇ ಶಾಂತತೆಯನು ಕಾಯ್ದುಕೊಳ್ಳುವಂತೆ ಸಹಕರಿಸಿ, ಆ ನೆನಪಿನಂಗಳದಲಿ ತಾನಿಟ್ಟ ದಿಟ್ಟ ಹೆಜ್ಜೆಗಳ ಪ್ರಾಮಾಣಿಕತೆಯ ಗುರುತು, "ನೀ ಮುನ್ನೆಡೆ ನಾನಿದ್ದೇನೆ ನಿನ್ನ ನೀಯತ್ತು" ಎಂದು ಭಾವುಟವಾರಿಸಿದಂತೆ ತಾ ಮುನ್ನೆಡೆವ ಹಾದಿ ಹಸಿರಾದಂತೆ ಭಾಸವಾಗಿಬಿಡುತ್ತದೆ. ನಮ್ಮ ಮನದ ದೃಢತೆ; ನಮ್ಮ ಪ್ರಾಮಾಣಿಕತೆಯಷ್ಟೇ. ಆತ್ಮವಿಶ್ವಾಸದ ಕೊರತೆಯಿದ್ದರೆ, ಅದರ ಹಿಂದೆ ನಮ್ಮದೇ ಯಾವುದೋ ಒಂದು ಅಪ್ರಾಮಾಣಿಕತೆಯ ಛಾಯೆಯಷ್ಟೇ ಅಲ್ಲವೇ ಸ್ನೇಹಿತರೆ?? :-)

16/07/2013

ಚುಟುಕು

ಭಾವಕ್ಕಿಂತ ಮನವು ಮಿಗಿಲು
ಸೇಡಿಗಿಂತ ಸ್ನೇಹವು ಹಿರಿದು
ಅದ ತಿಳಿದೂ ಹೀಗೊಮ್ಮೆ
ಪ್ರೀತಿ ಭಾವಕೆ
ಮನಸು, ಮನುಷ್ಯತ್ವ ಸೇಡೆಂಬವು
ಪೈಪೋಟಿಗೆ ಗುದ್ದಾಡಿರಲು
ಅಂತ್ಯದಿ ಮೆರೆದಿದೆ ಮಾನವೀಯತೆಯು.... 

-ದಿವ್ಯ ಆಂಜನಪ್ಪ
೧೫/೦೭/೨೦೧೩

ಚುಟುಕು

ಮಾತಿನ ಮಲ್ಲ

ಅವ ಮಾತಿನ ಮಲ್ಲ
ಮರಳು ಮಾಡಿದನಲ್ಲ
ಹೇಳಲಾಗಲಿಲ್ಲ "ಇಲ್ಲ, ಇಲ್ಲ"
ಅವ ಹೇಳಿದೆಲ್ಲವೂ ಸಕ್ಕರೆ-ಬೆಲ್ಲ
ಅವನ ಪ್ರೀತಿಗೆ ಕೊನೆಯೇ ಇಲ್ಲ
ಮಾತಿನ ಮಲ್ಲ, ನನ್ನ ನಲ್ಲ
ನೆಪ ಹೂಡಿ ಮನದೊಳುಳಿದನಲ್ಲ!! :-)


-ದಿವ್ಯ ಆಂಜನಪ್ಪ

೧೫/೦೭/೨೦೧೩

Sunday, 14 July 2013

ಚುಟುಕು

ಅವ ಕೇಳಿದಾಗಲೆಲ್ಲಾ
ಸತಾಯಿಸಿದ ನಾನೇ,
ಇಂದು ಮುತ್ತನಿಟ್ಟರೆ;
ಸೇಡು ತೀರಿಸಿಕೊಳ್ಳುತ್ತಾನೆ ಶಿಲೆಯಾಗಿ

09/07/2013

Saturday, 13 July 2013

ಹನಿಗವನ

ಭ್ರಮೆಯಾದ ಸಂಭ್ರಮ

ಸಂಭ್ರಮಿಸಿದೆ
ನೀ ಪ್ರೀತಿಸಿದೆಯೆಂದು

ಆವರಿಸಿದೆ
ನಿನ್ನ ಛಾಯೆಗಳೊಂದೊಂದು

ಕಲ್ಪಿಸಿದೆ
ನನ್ನೆಲ್ಲಾ ಕನಸುಗಳ ನಿನ್ನೊಂದಿಗೆಂದು

ಭ್ರಮಿಸಿದೆ
ನೀನೇ ನನ್ನಂತರಾತ್ಮವೆಂದು

ಬೇಸರಿಸಿದೆ
ನೀ ಬರೀ ಮೋಹಿಸಿದೆ ಎಂದು

-ದಿವ್ಯ ಆಂಜನಪ್ಪ

ಹನಿಗವನ

ಮನವ ಕಲಕಿಬಿಟ್ಟ
ಹೃದಯದೊಳ್ ಇಳಿದು

ಮಧುವಾಗಿಬಿಟ್ಟ
ಅಧರದೊಳ್ ಇಳಿದು

ನಗುವಾಗಿಬಿಟ್ಟ
ಭಾವದೊಳ್ ಇಳಿದು

ಮೌನಿಯಾಗಿಬಿಟ್ಟ
ಕಣ್ಣು ಕಪ್ಪು ಹಿಡಿದು

ಅವನ್ಹೋರಟೇ ಬಿಟ್ಟ
ಕನಸಿನ್ಹೋರಗುಳಿದು

-ದಿವ್ಯ ಆಂಜನಪ್ಪ

Friday, 12 July 2013

ಕವನ

ನೋವು-ನಲಿವು

ನೋವುಗಳಲಿ ನರಳುವುದು ಸುಲಭವೇ
ಆದರೆ ನಲಿವುಗಳನು ದಕ್ಕಿಸಿಕೊಳ್ಳುವುದು ಕಷ್ಟ!......

ನೋವುಗಳಿಗೂ ಬೇಸರವಂತೆ
ನೊಂದೂ ನೊಂದು,
ನೋವಿಗೊಂದು ನಲಿವು ಕೊಡಿ
ನೋವಿನಲ್ಲೂ ನಗುನಗುತ..

ನೋವಿಗೇ ಭ್ರಮೆಯಾಗಿ ನಲಿದುಬಿಡುವಂತೆ
ನಗುವ ಹೂ ಮನಕೆ ನಿತ್ಯೋತ್ಸವವಾಗಲಿ
ಹಾಕಿಬಿಡಿ ದಿನವೂ
ನಗುವೆಂಬ 'ಸಹಿ', ಮನಕೆ :-)

-ದಿವ್ಯ ಆಂಜನಪ್ಪ

೧೨/೦೭/೨೦೧೩

ಚುಟುಕು

ಹಾಗೆ ಸುಮ್ಮನೆ..... 

ಪುರಾಣದಲ್ಲಿ ಪದ್ಮಾವತಿಯ
ಕಾಡಿದ ಕರಿಯಂತೆ,
ಆಗಾಗ ಕನಸಲಿ ಬೆನ್ನಟ್ಟುವ
ದನಕರುಗಳ ಮಂದೆಯೂ,
ದೈವಿಕ ಸಂದೇಶವೇನಾದರೂ
ಇತ್ತಿವೆಯೇ?! 

12/07/2013


ಚುಟುಕು

ಹೆಣ್ಣಷ್ಟೇ.......

"ತನಗೆ ನೀ ಹೆಣ್ಣಷ್ಟೇ
ಮತ್ತ್ಯಾವ ಒಲವೂ ಇಲ್ಲ"
ಎನ್ನುವ ಮುನ್ನ;
ಆಕೆಗೂ ಆತ ಗಂಡಷ್ಟೇ
ಎಂದಾಗಿದ್ದರೆ ತನ್ನದೇನು
ಅಸ್ಥಿತ್ವವೆಂದು ಒಮ್ಮೆ
ಯೋಚಿಸಬೇಕಿತ್ತು.

-ದಿವ್ಯ ಆಂಜನಪ್ಪ 
12/07/2013

Thursday, 11 July 2013

ಚುಟುಕು

ಮೋಡಿ

ಛಲದ ಬದುಕೆಂದುಕೊಂಡೆ
ನಿನ್ನಲ್ಲಿ ಚಂಚಲೆಯಾದೆ
ಅದನ್ನರಿತು ಸದಾ ಕಾಡುವವ ನೀನು
ಕಾಡುವವನನ್ನೇ ಬಯಸುವವಳು ನಾನು
ಇವೆಲ್ಲಾ ನಿನ್ನದೇ ಮೋಡಿ.
ಬೆರಗಾದೆ ನನ್ನೇ ನಾ ನೋಡಿ. 

-ದಿವ್ಯ ಆಂಜನಪ್ಪ
11/07/2013

ಚುಟುಕು

ಜೀವನವೇಕೊ ಈಗೀಗ 
ಒಗ್ಗಿದಂತಿದೆ,
ಏಕೋ ಬೇಸರವೇ ಆಗದು
'ಬೇಸರ'ವೆಂದರೂ ನಗು ಬರುವುದು
ಬದುಕೆಂದರೆ ಇದೆನಾ??

11/07/2013