*ನೀ ನನ್ನ ತೋಳಲಿ, ನಾ ನಿನ್ನ ತೋಳಲಿ*
ನೀ ಸುಮ್ಮನಿರಲು, ನಾ ಏನ ಹೇಳಲಿ?
ಕಡಲ ತೆರೆಗಳು ಒತ್ತೋತ್ತಲಾಗಿ ಬರಲು,
ನಿಂತ ನೆಲವು ನಡುನಡುಗಿ ಬಿಡಲು,
ಬೆಂಕಿ ಚೆಂಡು ಧರೆಗಪ್ಪಳಿಸುತ್ತಿರಲು,
ಶಾಂತಮೂರ್ತಿಯಾಗಿ ನೀ ನಿಂತಿರಲು,
ನಾ ಏನ ಹೇಳಲಿ ನೀ ಸುಮ್ಮನಿರಲು.
ಹೇಳದಿರು ಏನನ್ನೂ, ನನ್ನೋಳ ದನಿಯೇ!,
ನನ್ನೀ ಹೃದಯದ ಕಣ್ಮಣಿಯೇ,
ಭಯವೇಕೆ ಓ ಚಂಚಲೇ?
ನೀ ಇರಲು ನನ್ನೋಳಹೊರಗೂ,
ಕಡಲೇನು? ಧರೆಯೇನು?
ಬಾನೇನು ಬೆದರಿಸೀತು??
ಕಡಲೊಡಲ ಮುತ್ತಾಗಿ ಇಳಿಯೋಣ,
ಭೂಗರ್ಭದ ಮಣ್ಣ ಕಣಗಳಾಗಿ ಬೆರೆಯೋಣ,
ಉರಿವ ಬೆಂಕಿ ಜ್ವಾಲೆಯಾಗಿ ಪ್ರಜ್ವಲಿಸೋಣ,
ನೀ ನನ್ನ ತೋಳಲಿ, ನಾ ನಿನ್ನ ತೋಳಲಿ
ಅದೃಷ್ಯರಾಗಿ ಹೋಗೋಣ,
ಒಂದೇ ಆತ್ಮರಾದ ನಾವಿನ್ನು ಪ್ರಕೃತಿಯಲಿ ಲೀನವಾಗಿ ಹೋಗೋಣ.
-ದಿವ್ಯ ಆಂಜನಪ್ಪ
ಅತ್ಯುತ್ತಮ ದಾಂಪತ್ಯ ಗೀತೆ ಇದು. ಬೆರೆತು ಹೋದಾಗಲೇ ಬದುಕಿನಲ್ಲೂ ಸಂತಸದ ಊಟೆ.
ReplyDeleteಪ್ರೀತಿಯ ಪರಾಕಾಷ್ಟೆಯೆಂದು ತಿಳಿದಿದ್ದನ್ನು ನೀವು ದಾಂಪತ್ಯವೆಂದು ಕರೆದಿದ್ದೀರ. ತಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಸರ್.
Delete