Saturday, 22 June 2013

ಲೇಖನ

ಚೇತನ


"ಜಗತ್ಚೇತನದೆದುರು, ನಾನು ನನ್ನದು ಎಂಬ ಅಹಂ ಭಾವಕ್ಕಿಂತ, ನೀನು ನಿನ್ನದು ನಿನ್ನದೇ ಎಂಬ ಸಮರ್ಪಣಾ ಮನೋಭಾವ ಮಿಗಿಲು. ಸಕಲ ಜೀವ-ಸಂಕುಲಗಳನ್ನು ನಿಯಮಬದ್ದವಾಗಿ, ನಿಖರವಾಗಿ, ಆಯಾಯ ಪಾತ್ರಗಳನ್ನು ಸಮರ್ಪಕವಾಗಿ ನಿರ್ವವಹಿಸುವಂತೆ ಮಾಡುವ ವ್ಯವಸ್ಥಾಪಕ-ಕಾಣದ ಕೈಯೊಂದು ಇರಲೇಬೇಕು" ಎಂದು ಎಷ್ಟೋ ಸಂದರ್ಭಗಳಲ್ಲಿ ನಮ್ಮೆಲ್ಲರ ಮನಸ್ಸಿಗೆ ಅನ್ನಿಸಿರುತ್ತದೆ. ಆ ಕಾಣದ ಕೈ ಕೆಲವೊಮ್ಮೆ ವರಕೊಡುವ ಕೈಯಾಗಿಯೂ, ಬುದ್ಧಿ ಕಲಿಸುವ ಕೈಯಾಗಿಯೂ, ದಾರಿ ತೋರುವ ಕೈಯಾಗಿಯೂ ನಮ್ಮ ಅನುಭವಕ್ಕೆ ಬಂದಿರುವುದು. ಜೀವಸಂಕುಲದಲ್ಲಿನ ಬುದ್ಧಿ ಜೀವಿ ಮಾನವಕುಲವೊಂದು ತನ್ನ ಉಪಕುಲಗಳು-ಧರ್ಮಗಳ ನೆಲೆಗಳಲ್ಲಿ ಆ ಕೈಯನ್ನು 'ದೇವ'ನೆಂದು:ಕೃಷ್ಣ, ಏಸು, ಬುದ್ಧ, ಜಿನ, ಅಲ್ಲಾ ಎಂದು ಅವರವರಂತೆ ಕರೆದಿರುವುದುಂಟು. ಜಗತ್ತಿನ ಈ ಆಗು ಹೋಗುಗಳ ಕಾರಣಕರ್ತನನ್ನು ಒಂದು 'ಶಕ್ತಿ'ಯೇ ಎಂದು ಹೇಳಬಹುದು. ಆ ಶಕ್ತಿಯನ್ನು ಯಾವುದೇ ಧರ್ಮಕ್ಕಂಟಿಸದೆ "ಚೇತನ"ವೆಂದು ಹೆಸರಿಸುವುದು ಬಹುಸೂಕ್ತವೆನಿಸುತ್ತದೆ.

ಆ ಜಗತ್ಚೇತನದೆದುರು, ಮಾನವ ಸಣ್ಣದೊಂದು ಮಣ್ಣಿನ ಕಣಕ್ಕೆ ಸಮಾನ. 'ಚೇತನ'ವೆಂದರೆ ಜೀವಂತಿಕೆ, ಈ ಜೀವಂತಿಕೆಯ ಪ್ರತೀಕ 'ಹಸಿರು', ನಮ್ಮ ಪ್ರಕೃತಿ. ಜೀವರಾಶಿಗಳಿಗೆಲ್ಲಾ ನೆಲೆಬೀಡಾದ ಪ್ರಕೃತಿಯನ್ನೇ 'ಜಗತ್ಚೇತನ'ವೆಂದರೆ ತಪ್ಪಾಗಲಾರದು. ಪ್ರಕೃತಿಯ ವಿಸ್ಮಯಗಳ
ಮುಂದೆ ಮಾನವನ ತಂತ್ರಗಳಾವುವೂ ನೆಡೆಯದು. ಅವನೇನಿದ್ದರೂ ಚೇತನದೆದುರು ತಲೆಬಾಗಿ ನಿಂತ ಪುಟ್ಟಮಗುವಿನಂತೆ, ಹಾಗಿದ್ದರೇನೇ ಅದು ಚೆಂದ. ಅದನ್ನು ಬಿಟ್ಟು ಆ ಧೀಮಂತಕ್ಕೆ ಸೆಡ್ಡು ಹೊಡೆದು ನಿಲ್ಲಲು ಹೊರಟರೆ ನಿಲ್ಲಲು ನೆಲವೂ ಉಳಿಯದು. ಹೀಗಿರುವಾಗ ತೃಣಮಾತ್ರ
ಮಾನವನಿಗೇಕೆ ಈ  ಅಹಂ ಭಾವ?. ನನ್ನ ಮನೆ, ನನ್ನ ಕುಲ, ನನ್ನ ಕೀರ್ತಿ, ನಾನೇ ಶ್ರೇಷ್ಠ ಎಂಬ ಭಾವವೇಕೆ?

ಪರಿಸರದಲ್ಲಿನ ಅನೇಕ ಜೀವರಾಶಿಗಳಲ್ಲಿ ಮಾನವ ಸಂಕುಲವೂ ಒಂದು. ಮಾನವ ತನ್ನ ಜನಾಂಗಗಳಲ್ಲಿ ಜಾತಿ, ಧರ್ಮಗಳ ಬೇಲಿಗಳನ್ನು ಹೆಣೆದು, ಜಾತಿಗಳಲ್ಲೂ ಶ್ರೇಷ್ಠ-ನೀಚವೆಂದೆಣೆಸಿ, ಮಾನವ-ಮಾನವನನ್ನು ತುಳಿಯುತ್ತಿದ್ದಾನೆ. 'ಅಹಂ' ಎಂಬ ಭ್ರಾಂತಿಯಲ್ಲಿ… ಮರಕ್ಕಿಂತ ಮರ ದೊಡ್ಡದು, ಮನುಷ್ಯನಿಗಿಂತ ಮನುಷ್ಯ ದೊಡ್ಡವ,ಮನಸ್ಸಿಗಿಂತ ಮನಸ್ಸು ದೊಡ್ಡದು, ಇಂದು ನಾ ರಾಜನೇ ಆದರೂ, ಹಿಂದೆ ತನಗಿಂತ
ಹಿರಿಯರು-ಶ್ರೇಷ್ಠರು ಆಳಿ ಹೋದವರಿದ್ದಾರೆ. ಮುಂದೆ ಬರುವವರು ತನಗಿಂತ ಉತ್ತಮರಾಗಿರಬಹುದು, ಅದನ್ನರಿಯದೆ ತನ್ನ ರಾಜತ್ವವನ್ನೇ ಹೆಚ್ಚಾಗಿ ಭ್ರಮಿಸಿ ರಾಜನಾದ ಕರ್ತವ್ಯಗಳನ್ನು ಮರೆತರೆ ಪ್ರಜೆಗಳೇ ಧಿಕ್ಕರಿಸಿ ಕೊನೆಗೆ ಹೊರದೂಡುವರು. ಅಹಂನ
ಪರಿಣಾಮವು ಎಂದಿಗೂ ಎಲ್ಲರಿಂದ ತಿರಸ್ಕಾರವೇ ಆಗಿರುತ್ತದೆ. ಆದ್ದರಿಂದ ಸಂಘ ಜೀವಿಯಾದ ಮಾನವ 'ಅಹಂ'ನ ಪರಮಾವಧಿ ಸ್ಥಿತಿಯಿಂದ ಕೆಳಗಿಳಿದು ಸಂಯಮ, ಸಹಯೋಗದೊಂದಿಗೆ ಇತರರೊಂದಿಗೆ ಪ್ರೀತಿಯಿಂದ ವ್ಯವಹರಿಸಬೇಕು. ನಿಮಗೆ ತಿಳಿದಿರಬಹುದು, ನಾವು ಒಬ್ಬರನ್ನು ಪ್ರೀತಿಸಲೂ ಸಹ ಕೆಲವೊಮ್ಮೆ ನಮ್ಮ ಅಹಂ  ಅಡ್ಡಿಯಾಗಿಬಿಡುತ್ತದೆ.  ಮನುಷ್ಯನ ತುಡಿತ-ಮಿಡಿತಗಳೆಲ್ಲವೂ ಆಗಿರುವ "ಪ್ರೀತಿ"ಯು ಈ 'ಅಹಂ' ಭಾವದಿಂದ ಕರಗಿಹೋಗಿಬಿಡುತ್ತದೆ. ಯಾರೊಬ್ಬರನ್ನು ಮನಸಾರೆ ಪ್ರೀತಿಸಲು ಆಗುವುದಿಲ್ಲ. ಇನ್ನೂ ಯುವ ಮನಗಳಲ್ಲಿ ಪ್ರೀತಿ ನಿವೇದನೆಯಂತೂ ಸಾಧ್ಯವೇ ಆಗಲಾರದು. ಕಡೆಗೊಂದು ದಿನ ಪಶ್ಚಾತಾಪವೇ ಜೊತೆಯಾಗುತ್ತದೆ.

ದಿನನಿತ್ಯದ ವ್ಯವಹಾರಗಳಲ್ಲಿ ಕೆಲವೊಮ್ಮೆ 'ನಾನು', 'ನನ್ನದು' ಎಂಬ ಮಾತುಗಳನ್ನು ಮರೆಯುವುದು ಹೆಚ್ಚು ಸೊಕ್ತವೆಂದೆನಿಸುತ್ತದೆ. ಉದಾಹರಿಸುವುದಾದರೆ;  ಮಹಿಳೆಯೊಬ್ಬಳು ತನ್ನ ಆಡಂಬರವನ್ನು ಪ್ರದರ್ಶಿಸಲೆಂದೇ ತನ್ನ ಗೆಳೆತಿಯ ಕುಟುಂಬವನ್ನು ಔತಣಕ್ಕಾಗಿ
ಮನೆಗೆ ಕರೆದಿರುವ ಪ್ರಸಂಗ. ಮನೆಗೆ ಬಂದ ಅತಿಥಿಗಳಿಗೆ ತನ್ನ ಮನೆಯ ಭವ್ಯತೆಯನ್ನು ತೋರಿಸಿ ವರ್ಣಿಸುತ್ತ, "ಇದು ನನ್ನ ಹೆಸರಿನಲ್ಲಿರುವ ಮನೆ, ನಾನೇ ಖುದ್ದಾಗಿ ಮನೆಯ ಪ್ಲಾನ್ ಬರೆಸಿದ್ದು ಅದೂ ದೊಡ್ಡ ಎಂಜಿನಿಯರಿಂದ. ಈ ಪೇಂಟಿಂಗ್ ಕಲರ್ ಸೆಲೆಕ್ಷನ್ ನಂದೆ, ಈ ಡೈನಿಂಗ್ ಟೇಬಲ್ ಅರೇಂಜ್ಮೆಂಟ್ ಎಲ್ಲಾ ನಂದೆ, ಅದಕ್ಕಾಗಿ ನಾನು ತರಬೇತಿಯನ್ನೂ ಪಡೆದಿದ್ದೇನೆ. ಇಗೋ ಈ ಡೈನಿಂಗ್ ಸೆಟ್ಗಳೆಲ್ಲಾ ದುಬಾರಿಯವು. ಒಂದೊಂದೂ ಸಾವಿರ ರೂಗಳು. ನಿಮಗಾಗಿ ವಿಶೇಷವಾಗಿ ಊಟವನ್ನು ಪಂಚತಾರಾ ಹೊಟೆಲೊಂದರಿಂದ ತರಿಸಿದ್ದೇನೆ. ಅಲ್ಲೆಷ್ಟು ದುಬಾರಿ ಗೊತ್ತಾ?!…. "ಬನ್ನೀ, ನೀವು ಊಟಕ್ಕೆ ಕೂರಿ" ಎಂದು ಆ ಅತಿಥಿಗಳನ್ನು ಕರೆದಾಗ, ಅವರು ಆ ಮನೆಯ ಆ ಡೈನಿಂಗ್ ಟೇಬಲ್ನಲ್ಲಿ ಕುಳಿತು ಆ
ದುಬಾರಿ ಊಟವನ್ನು ಎಷ್ಟು ಸೊಗಸಾಗಿ ಉಣ್ಣಬಲ್ಲರೆಂದು ಊಹಿಸಿಕೊಳ್ಳಿ. ಹಸಿದಿದ್ದರೂ ಊಟ ಬೇಡವಾಗಿರುತ್ತದೆ. ಅಲ್ಲಿದಷ್ಟು ಕಾಲ ಅವರಿಗೆ ಉಸಿರು ಕಟ್ಟಿದ ಹಾಗೆ. ಅಲ್ಲಿಂದ ಕಾಲುಕಿತ್ತರೆ ಸಾಕೆಂದೆನಿಸಿರುತ್ತದೆ. 'ಅಹಂ' ಮನುಷ್ಯ ಮನುಷ್ಯರನ್ನು ದೂರ ಮಾಡುತ್ತದೆ.  "ಮನುಷ್ಯರ ಸಂಗ ಬೇಡದವನಿಗೆ ಅಹಂ ಅನಿವಾರ್ಯ" ಎಂದನಿಸುವುದಿಲ್ಲವೇ ಸ್ನೇಹಿತರೇ?

ಹೌದು, ಏನೆಲ್ಲಾ ತಿಳಿದಿರುವ, ಏನೆಲ್ಲಾ ಮಾತನಾಡುವ ನಾವು ಅತೀ ಚಿಕ್ಕ ಚಿಕ್ಕ ವಿಚಾರಗಳು ಎನಿಸಿಕೊಳ್ಳುವ ಇಂತಹವನ್ನು ಬಹುವಾಗಿ ನಿರ್ಲಕ್ಷಿಸಿ ಬಿಟ್ಟಿರುತ್ತೇವೆ. ವ್ಯಕ್ತಿ ತನ್ನ ಚಿಕ್ಕ-ಚಿಕ್ಕ ತಪ್ಪುಗಳಿಂದ ತಿದ್ದಿಕೊಳ್ಳಲು ಪ್ರಾರಂಭಿಸಬೇಕು. ಒಂದೇ ಬಾರಿಗೆ ದೊಡ್ಡದೊಂದು ತಪ್ಪನ್ನು ತಿದ್ದಲು ಹೋದರೆ "ಅಹಂ"ಗೆ ದೊಡ್ಡ ಪೆಟ್ಟೇ ಬೀಳುವ ಸಂಭವವಿದೆ. ಇದರಿಂದ ಮಾನಸಿಕ ಆರೋಗ್ಯವು ವ್ಯತಿರಿಕ್ತಗೊಳ್ಳಲೂಬಹುದು. ಹಾಗಾಗಿ
ಚಿಕ್ಕದ್ದರಲ್ಲೇ ಎಚ್ಚೆತ್ತಿಕೊಳ್ಳೋಣ. ವಿನಾಕಾರಣ ಹಾರಾಡುವ ಮನಕ್ಕೊಂದು ಶಮನಕ್ಕಾಗಿ ಧರ್ಮಗ್ರಂಥವೊಂದರ ಸಾರ ಹೀಗಿದೆ,

"ಆಗುವುದೆಲ್ಲಾ ಒಳ್ಳೆಯದಕ್ಕೆ ಆಗಿದೆ. ಆಗುವುದೆಲ್ಲಾ ಒಳ್ಳೆಯದಕ್ಕೇ ಆಗುತ್ತಿದೆ.
ಆಗಲಿರುವುದು ಅದೂ ಒಳ್ಳೆಯದೆ ಆಗಲಿದೆ. ರೋಧಿಸಲು ನೀನೇನು ಕಳೆದುಕೊಂಡಿರುವೆ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು? ನಾಶವಾಗಲು ನೀನು ಮಾಡಿರುವುದಾದರು ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ. ಏನನ್ನು ನೀಡಿದ್ದರೂ ಅದನ್ನು
ಇಲ್ಲಿಗೇ ನೀಡಿರುವೆ. ನೆನ್ನೆ ಬೇರೆಯಾರದೋ ಆಗಿದ್ದು ಇಂದು ನಿನ್ನದಾಗಿದೆ ಮತ್ತು ನಾಳೆ
ಇನ್ಯಾರದೋ ಆಗಲಿದೆ".

ಹೀಗೆ ನಮ್ಮದೇನು ಅಲ್ಲವಾದದನ್ನು ನನ್ನದೇ ಎಂಬ ಭಾವ ನಮ್ಮನ್ನು ಅಲ್ಪರನ್ನಾಗಿಸುತ್ತದೆ. ಮಹಾ ಚೈತನ್ಯದೆದುರು ನಾವು ತಲೆ ಬಾಗಲೇ ಬೇಕು.

ಮಾನವ ಸಂಬಂಧಗಳಲ್ಲಿ ಸ್ವಾರ್ಥವನ್ನು ತ್ಯಜಿಸಿ, ಸ್ನೇಹ ಪ್ರೀತಿಯಿಂದ ವ್ಯವಹರಿಸುವಂತಾಗಬೇಕು. ಯಾವುದೇ ಒಂದು ಸಂಘ ಕಾರ್ಯದಲ್ಲಿನ ಜಯವು ನನ್ನಿಂದಲೇ ಎಂಬುದರ ಬದಲು ನೀನು, ನಿನ್ನಿಂದ ನಿನ್ನದೇ ಈ ಸಕಾರ್ಯಗಳು ಎನ್ನುವುದರ ಮೂಲಕ ಆ ಜನ ಮನಗಳ ನಡುವೆ
ವಿದ್ಯುತ್ ಬಲ್ಪಿನಲ್ಲಿ ಕಾಣುವಂತಹ 'ಟಂಗಸ್ಟನ್' ತಂತಿಯಂತಹ ಮಧುರ ಬೆಸುಗೆಯೊಂದು ಮೂಡಿ, ಮುಂದೊಂದು ದಿನ ವಿದ್ಯುಚ್ಛಕ್ತಿಯ ಹರಿವು ಎಂಬ ಸುಘಳಿಗೆಯಲ್ಲಿ ಆ ಮನಗಳಲ್ಲಿ ಬೆಳಕಿನ ಸಂಚಲನವಾಗುತ್ತದೆ. ಸರಳ-ಸಹಜತೆಯೊಂದಿಗೆ ನಾವು ನಮ್ಮವರೊಂದಿಗೆ ಬೆಳಕಿನೆಡೆಗೆ
ಸಾಗುತ್ತೇವೆ. ನೆಮ್ಮದಿಯ ಜೀವನ ನಮ್ಮದಾಗುತ್ತದೆ.

ಕೆಲವೊಮ್ಮೆ ನೀನು ನಿನ್ನದೆ ಎಂಬ ಬಿಟ್ಟುಕೊಡುವ ಸಂದರ್ಭಗಳಲ್ಲಿ ದೇಶ, ಭಾಷೆ ಮತ್ತು ನೆಲೆಗಳು ಬಂದು ನಿಂತಾಗ; ನನ್ನ ದೇಶ, ನನ್ನ ಭಾಷೆ ಎಂಬ ಭಾವದೊಂದಿಗೆ ಪರತಂತ್ರಕ್ಕೆ ಒಳಗಾಗದಂತೆ ತಡೆಯುವಂತಹ ಸಂದರ್ಭಗಳಲ್ಲಿ ಕೆಚ್ಚೆದೆಯ ವೀರತ್ವವನ್ನು ಮೆರೆಯಬೇಕು. ಇಲ್ಲಿ ತನ್ನದೂ ಎಂಬ "ಅಹಂ"ನ ಲೇಪನವು ಕೂಡಿದ್ದರೂ ಇಂತಹ ಅಹಂ ಒಪ್ಪುವಂತಹದು, ಪ್ರೋತ್ಸಾಹಿಸುವಂತಹದು. "ಅಹಂ", ಇಲ್ಲಿ ಹೆಮ್ಮೆಯಾಗಿ ಅಭಿಮಾನವಾಗಿ ಗುರ್ತಿಸಿಕೊಳ್ಳುತ್ತದೆ.
ಪರತಂತ್ರಗೊಳಿಸ ಬಂದವರಿಗೆ ತಲೆಬಾಗದಿರೋಣ, ನಮ್ಮವರಲ್ಲಿ ತಲೆತಗ್ಗಿಸದೆ ಪರರಾಗಿ ಬಾಳದಿರೋಣ. ಜಗತ್ಚೇತನದೆದುರು ಪುಟ್ಟ-ಪುಟ್ಟ ಚೇತನರಾಗೋಣ, ಕೊನೆಗೊಮ್ಮೆ ಆ ಮಹಾ ಚೇತನದಲ್ಲಿ ಲೀನವಾಗಿಬಿಡೋಣ. ಧನ್ಯವಾದಗಳು ಸ್ನೇಹಿತರೇ.

ಪಂಜು ಪತ್ರಿಕೆಯಲ್ಲಿ ನನ್ನೀ ಲೇಖನವನ್ನು ಪ್ರಕಟಿಸಿ ಪ್ರೋತ್ಸಾಹಿಸಿದ ಸಂಪಾದಕರು ಮತ್ತು ಪತ್ರಿಕಾ ಬಳಗಕ್ಕೆ ನನ್ನ ಅನಂತ ವಂದನೆಗಳು

-ದಿವ್ಯ ಆಂಜನಪ್ಪ
03/02/2013

No comments:

Post a Comment