ಹುಗ್ಗಿ-ತುಪ್ಪ
ಜನಪದ ಕತೆಯ ನಾಟಕ ರೂಪಾಂತರ.
[ ಒಂದು ಊರಿನಲ್ಲಿ ಗಂಡ-ಹೆಂಡತಿಯೊಬ್ಬರು ಬಹಳ ಅನ್ಯೋನ್ಯದಿಂದ ಇರುತ್ತಾರೆ. ಅವರದು
ಬೇಸಾಯದ ಬದುಕು. ಅವರಲ್ಲಿ ಎರಡು ಎತ್ತುಗಳು ಇದ್ದವು. ಗಂಡ ಹೆಂಡತಿ ಇಬ್ಬರೂ ದೈವ
ಭಕ್ತರು. ಹಸಿದು ಬಂದವರಿಗೆ ಊಟೋಪಚಾರ ನೀಡದೆ ಮನೆಯಿಂದ ಕಳುಹಿಸುತ್ತಿರಲಿಲ್ಲ.
ವಿಚಿತ್ರಾ ಏನೆಂದರೆ ಅವರು ಪ್ರೀತಿಯಿಂದ ಒಬ್ಬರಿಗೊಬ್ಬರು ಅಡ್ಡ ಹೆಸರನ್ನು
ವಿಶಿಷ್ಟವಾಗಿ ಇಟ್ಟುಕೊಂಡಿದ್ದರು. ಹೆಂಡತಿಯನ್ನು 'ಉಗ್ಗಿ' ಎಂದೂ, ಗಂಡನನ್ನು
'ತುಪ್ಪ' ಎಂದೂ ಕರೆಯುತ್ತಿರುತ್ತಾರೆ. ಹಾಗೆಯೇ ಜೊತೆಗಿರುವ ಎರಡು ಎತ್ತುಗಳಿಗೆ,
ಒಂದಕ್ಕೆ 'ಅಯ್ಯ', ಇನ್ನೊಂದಕ್ಕೆ 'ದೊಣ್ಣೆ' ಎಂದೂ ಹೆಸರು ಇಟ್ಟು
ಕರೆಯುತ್ತಿರುತ್ತಾರೆ.]
ದೃಶ್ಯ-೧
ಬೇಸಾಯದ ಒಂದು ದಿನ ತುಪ್ಪ(ಗಂಡ) ಹೊಲದಲ್ಲಿ ಕೆಲಸದಲ್ಲಿ ನಿರತನಾಗಿರುತ್ತಾನೆ. ಒಬ್ಬ
ಅಯ್ಯ (ವ್ಯಕ್ತಿ) ಈ ಮಾರ್ಗವಾಗಿ ಯಾವುದೋ ಊರಿಗೆ ಹೋಗುವ ಸಲುವಾಗಿ ಬರುತ್ತಿರುತ್ತಾನೆ.
ತುಪ್ಪ:- (ಭಕ್ತಿಯಿಂದ)," ಸ್ವಾಮಿ ಇಲ್ಲಿ ಬರ್ರೀ"
"ಸ್ವಾಮಿ ಎಲ್ಲಿಂದ ಬರ್ತಾ ಇದಿರೀ?,,, ಊಟ ಆಯ್ತಾ?".
ಅಯ್ಯ:- (ಸ್ವಗತ) "ಸಧ್ಯ,, ಏನಾದ್ರೂ ಊಟ ಕೊಟ್ರೆ ಹೊಟ್ಟೆ ತುಂಬಿಸ್ಕೊಳ್ಬೋದು ಅಲ್ವೇ?".
" ಇಲ್ಲಾ ಸ್ವಾಮಿ,,,,"
ತುಪ್ಪ:- "ಹಸಿದು ಬಂದೊರ್ಗೆ ಊಟ ಕೊಡೊದು ನಮ್ಮ್ ಧರ್ಮ. ಸ್ವಾಮಿ ಅಂಗಾದರೆ ನೀವು
ನಮ್ಮನೀಗೆ ಹೋಗ್ರೀ".
"ಮನೇಲಿ ಉಗ್ಗಿ(ಹೆಂಡತಿ) ಐತೆ, ಊಟಕ್ಕೆ ಬಡುಸ್ತಾರೆ.
ನಾನು ಇನ್ನೂ ಸ್ವಲ್ಪವೊತ್ತು ಬೇಸಾಯ ಒಡೆದು ಬರ್ತೀನಿ".
ಅಯ್ಯ:- (ಸ್ವಗತ) "ಹಸಿದೊಟ್ಟೆಗೆ ಹುಗ್ಗಿ ಊಟ!! ಯಾರು ಬ್ಯಾಡಂತಾರೆ?".
"ಸರಿ, ಅಂಗೇ ಆಗ್ಲಪ್ಪ ನಾ ನಿಮ್ಮನೀಗ್ ವೊಯ್ತೀನಿ"
ದೃಶ್ಯ-೨
[ಅಯ್ಯ, ಆ ಗಂಡ-ಹೆಂಡಿರ ಮನೆಗೆ ಬರುತ್ತಾನೆ. ಮನೆಯೊಡತಿ ತುಂಬಾ ಸಂತೋಷದಿಂದ
ಉಪಚರಿಸುತ್ತಾಳೆ. ಕೈ-ಕಾಲು ತೊಳೆದು ಬಂದು ಪಡಸಾಲೆಯ ಮೇಲೆ ಅಯ್ಯ ಕೂರುತ್ತಾನೆ]
ಉಗ್ಗಿ:- "ಸ್ವಾಮಿ, ಈಗ ಊಟ ಮಾಡ್ತೀರೋ? ಅಥ್ವಾ ತುಪ್ಪ ಬಂದ್ಮೇಲೆ ಊಟ ಮಾಡ್ತೀರೋ?"
("ತುಪ್ಪ" ಅನ್ನುತ್ತಲೇ ಅಯ್ಯನ ಬಾಯಲ್ಲಿ ನೀರೂರಿತು)
ಅಯ್ಯ:- (ಸ್ವಗತ) "ಹುಗ್ಗಿ ಜೊತೆಗೆ ತುಪ್ಪ ಬಿದ್ರೆ ಸಂದಾಕಿರ್ತದೆ ಅಲ್ವಾ?"
"ಅಮ್ಮಾ, ತುಪ್ಪ ಬಂದ್ಮೇಲೇನೇ ಊಟ ಮಾಡ್ತೀನಿ"
[ಗಂಡ-ಹೆಂಡಿರ ಹೆಸರು ತುಪ್ಪ-ಹುಗ್ಗಿ ಎಂದು ಅಯ್ಯನಿಗೆ ತಿಳಿದಿಲ್ಲ. ಸರಿ ಎಷ್ಟು
ಹೊತ್ತು ಕಳೆದರೂ ತುಪ್ಪ ಬರಲಿಲ್ಲ]
ಅಯ್ಯ:- (ಸ್ವಗತ) "ಅರೆ, ಸಂಜೆನೇ ಆಯ್ತಾ ಬಂತೂ,,, ಎಲ್ಲೋ ಪ್ಯಾಟೆಗೆ ಹೋಗಿರ್ಬೇಕು
ತುಪ್ಪ ತರಕೆ".
ಅಗೋಳೊ! ಆವಯ್ಯನೂ ಬತ್ತವ್ನೆ!?,,,
ಎರಡೆತ್ನೂ ಕೈಯಾಗ್ ಇಡ್ಕೊಂಡು, ನೋಗ ನೇಗ್ಲನ್ನು ಹೆಗಲ್ಗೆ ಆಕ್ಕೊಂಡು ಅಟ್ಟೀಗ್
ಬತ್ತಾವ್ನೆ,,,".
ತುಪ್ಪ:- "ಸಾಕಾಯ್ತಪ್ಪ, ನೋಗ ನೇಗಿಲ್ನ ಇಲ್ಲೇ ಇಳ್ಸಣ".
"ಅರೆರೆ, ದೊಣ್ಣೆ (ಎತ್ತು) ಕೈಯಿಂದ ಹಗ್ಗ ಕಳಚ್ಕೋಂಡ್ ಓಡ್ತಾಯ್ತೆ!!!?"
[ದೊಣ್ಣೆ ಎಂಬೆತ್ತು ಹೊರಕ್ಕೆ ಓಡುತ್ತದೆ. ಇನ್ನೊಂದು ಎತ್ತು 'ಅಯ್ಯ'ನನ್ನು ಕೈಯಲ್ಲಿ
ಹಿಡಿದು, ಬಾರುಗೊಲನ್ನು ಹೆಗಲ ಮೇಲೆ ಹಾಕಿಕೊಂಡು ಮನೆಯೊಳಕ್ಕೆ ಬಂದು, ಅಯ್ಯ ಎಂಬ
ಎತ್ತನ್ನು ದನದಕೊಟ್ಟಿಗೆಗೆ ಹೊಡೆದ. ಅಯ್ಯ ತಪ್ಪಿ ಮನೆಯೋಳಕ್ಕೆ ನುಗ್ಗುತ್ತದೆ.]
ತುಪ್ಪ:- (ಹೆಂಡತಿಗೆ) "ಅಲೆಲೇ, ಅಯ್ಯ ಒಳಗೆ ಬಂದಾನೆ, ಗೂಟ್ಕ ಕಟ್ಟಾಕು. ನಾನ್
ದೊಣ್ಣೆ ಹುಡ್ಕಂಡ್ ಬರ್ತೀನಿ"
[ಪಡಸಾಲೆ ಮೇಲೆ ಕೂತಿದ್ದ ಅಯ್ಯ(ವ್ಯಕ್ತಿ), ಇವನು ಹೇಳಿದ ಮಾತುಗಳನ್ನು ಕೇಳಿಸಿಕೊಂಡ.]
ಅಯ್ಯ:- "ಶಿವ, ಶಿವಾ ನಾನೇನು ತಪ್ಪ ಮಾಡ್ಡೀನಿ ಅಂತ ಗೂಟಕ್ಕೆ ಕಟ್ಟಿ
ಹಾಕ್ತಾರಪ್ಪಾ!!!. ಅಯ್ಯನ ಕಟ್ಟು, ದೊಣ್ಣೆ ಹುಡುಕ್ಕೋಂಡ್ ಬರ್ತೀನಿ ಅಂತ ಹೇಳಿ
ಹೋಗ್ತಾನಲ್ಲಾ?!!. ಇವುನ ಕೈಗೆ ಸಿಕ್ರೆ ನನ್ನ ಬಾರುಕೋಲಿಂದ ಚನ್ನಾಗ್ ಬಡಿತಾನೆ,,,"
[ ಪಂಜೆ ಮೇಲಕ್ಕೆ ಕಟ್ಟಿಕೊಂಡು, ನೆಗೆದು,, ಓಟ ಕೀಳ್ತಾನೆ. ಅಷ್ಟರಲ್ಲಿ
ದೊಣ್ಣೆಯನ್ನು ಹುಡುಕಿಕೊಂಡು ತುಪ್ಪ ಮನೆಗೆ ಬರುತ್ತಾನೆ. ಅಯ್ಯ ಮನೆಯಲ್ಲಿ
ಇರುವುದಿಲ್ಲ]
ತುಪ್ಪ:- (ಹೆಂಡತಿಗೆ) "ಅಯ್ಯ ಬಂದಿದ್ರು ಎಲ್ಲೇ?"
ಹುಗ್ಗಿ:- "ಇಲ್ಲೇ ಕುಂತಿದ್ರು, ಊಟ ಮಾಡಿ ಅಂದ್ರೆ 'ತುಪ್ಪ ಬರ್ಲಿ' ಅಂದ್ರು,,,"
"ಎಲ್ಲಿ ಓದ್ರೂ?"
[ಹೊರಗೆ ಬಂದು ನೋಡುತ್ತಾಳೆ. ಅಯ್ಯ ಓಡುತ್ತಾ ಇರುತ್ತಾರೆ.] ದೃಶ್ಯ-೩
ಹುಗ್ಗಿ:- "ನೋಡ್ರೀ, ಅಯ್ಯ ಅಲ್ಲಿ ಓಡ್ತಾ ಇದಾರೆ......"
ತುಪ್ಪ:- "ಅಲೇ. ನಮ್ಮನಿಗೆ ಬಂದವರು ಯಾರೂ ಅಂಗೆ ಹೋಗಿಲ್ಲ. ಬಂದಾರ್ಗೆ ಊಟಕ್ಕೆ
ಕೊಡೋದು ನಮ್ಮ ಧರ್ಮ. ಏನೇ ಆಗ್ಲೀ ಅವ್ರುನ ಹಿಡಿದು ಇಲ್ಲಿಗೆ ಕರ್ಕೊಂಡ್ ಬರ್ತೀನಿ"
[ಅಯ್ಯನನ್ನು ಹಿಡಿಯಲು ಇವನೂ ದಾರೀಲಿ ಓಡುತ್ತಿರುತ್ತಾನೆ, ಬಾರು ಕೋಲು ಕೈಯಲ್ಲಿ
ಹಾಗೇಯೇ ಇರುವುದು]
ತುಪ್ಪ:- " ಅಯ್ಯಾ,,, ಅಯ್ಯಾ,,,,,,,"
[ಅಯ್ಯ ಒಂದು ಬಾರಿ ಹಿಂತಿರುಗಿ ನೋಡಿದ, ಇವನನ್ನೂ ಹಾಗೂ ಇವನ ಕೈಯಲ್ಲಿನ ಬಾರುಕೋಲನ್ನೂ!!!!.]
ಅಯ್ಯ:- "ಇವನು ನನ್ನ ಬಡಿಯಾಕೆ ಬರಾದು,,!"
(ಇನ್ನೂ ಜೋರಾಗಿ ಓಡುವುದಕ್ಕೆ ಶುರುವಿಕ್ಕಿದ. ದಾರಿಯ ಅಕ್ಕಪಕ್ಕದ ಜನರು
ಇವರಿಬ್ಬರನ್ನು ನೋಡುತ್ತಿರುತ್ತಾರೆ)
ಜನ:- " ಅಯ್ಯ ಮನೇಲಿ ಏನೋ ಕಳ್ತನ ಮಾಡಿರ್ಬೇಕು, ಅದ್ಕೇ ಇಯಪ್ಪ ಹೊಡಿಯಾಕೆ ಬಾರುಕೋಲು
ತಗೊಂಡು ಓಡಿಸ್ಕೋಂಡು ಓಗ್ತಿರೋದು,,,"
(ಇವನಿಗೆ ಅಯ್ಯನನ್ನು ಹಿಡಿಯಲಿಕ್ಕೆ ಆಗಲಿಲ್ಲ)
ತುಪ್ಪ:- "ಓಡಿ ಓಡಿ ಸುಸ್ತಾಯ್ತು,,,,, ಸಿಕ್ಲಿಲ್ಲಾ,,,,,, ಸರಿ ಓದ್ರೆ ಓಗ್ಲಿ
ಬಿಡು,,,,,,,", " ಉಸ್ಸಪ್ಪಾ,,,"
(ಮನೆಗೆ ಹಿಂದಿರುಗುತ್ತಾನೆ)
***** ******** ******** *****
ಕೃಪೆ: ಅಡವಿಗುಮಾರ ಮತ್ತು ಇತರ ಜನಪದ ಕಥೆಗಳು"
(ಕಥಾಸಂಕಲನ)
- 'ಮೈಲಹಳ್ಳಿ ರೇವಣ್ಣ' ಪ್ರಸ್ತುತ 'ಹುಗ್ಗಿ-ತುಪ್ಪ', ಒಂದು ಹಾಸ್ಯ ಜನಪದ ಕಥೆ. ಈ ಜನಪದ ಕಥೆಯನ್ನು
ಸಂಭಾಷಣೆಗಳ ಮೂಲಕ ನಾಟಕವನ್ನಾಗಿಸುವ ಪ್ರಯತ್ನ ನನ್ನದು. ನನ್ನ ಶಾಲಾ ಮಕ್ಕಳಿಗೆ ನಾಟಕವಾಡಿಸುವ ಸಲುವಾಗಿ ತಯಾರಿಸಿದ್ದು. ನನ್ನೀ ಮೊದಲ ಪ್ರಯತ್ನಕ್ಕೆ
ನಿಮ್ಮಿಂದ ಸಲಹೆ-ಸೂಚನೆಗಳನ್ನು ನಿರೀಕ್ಷಿಸುತ್ತೇನೆ.
ಧನ್ಯವಾದಗಳು.
- ದಿವ್ಯ ಆಂಜನಪ್ಪ
10/04/2013