Thursday 23 October 2014

ಕವನ

ಕವಿ-ಕಾವ್ಯ ನಾಮ




ನಕ್ಷತ್ರವೊಂದು ಹೇಳಿತಂತೆ
ದೂರದಿಂದ ಆರಾಧಿಸೋ
ಆ ನನ್ನಯ ಸಾಸಿರ ಜೀವಗಳು
ಬಂದು ಒಂದರೆ ಘಳಿಗೆಯೂ
ಇರರು ನನ್ನೊಟ್ಟಿಗೆ; ಕಾರಣ
ನನ್ನೊಳ ಬೇಗೆ, ಉರಿಯೋ ವೇದನೆ
ಉಸಿರಿಲ್ಲದ ಉಚ್ಛ್ವಾಸ-ನಿಶ್ವಾಸಗಳು!

ಕಾನನದ ಹೂವೊಂದು ನಲುಗಿತಂತೆ
ಅದೆಲ್ಲೋ ಕುಳಿತು ಜಪಿಸೋ ಕವಿ ಹೃದಯ
ಕಾಡು ಮಲ್ಲೆಯ ಸೊಬಗ ಇನ್ನಿಲ್ಲದೆ ವರ್ಣಿಸಿದ
ಆತನಾದರೂ ಬಂದೊಮ್ಮೆ ಕೇಳಿದನೇ
ನನ್ನಯ ಅನಿವಾರ್ಯ ವೈರಾಗ್ಯ
ಬರಲಾರನು ದಾಟಿ ಕಾಡ ಗಡಿಯ
ಜೀವ ಭಯವಿದೆ ಅವನಿಗೂ
ನೋಡಿ ನನ್ನಯ ಈ ದಟ್ಟ ಅರಣ್ಯ!

ಕಡಲಾಳದ ಮುತ್ತೊಂದು ಕರೆಯಿತಂತೆ
ಬಂದು ಸೇರೋ ಚಿನ್ನದ ಹುರಿಯ
ಬರಲಾರೆನೆನುತ ಸೋತುಕೊಂಡಿತಂತೆ
ಅವರ ಕೈಯೊಳು ತಲತಲಾಂತರದ ಸೊತ್ತಂತೆ,
ನಿಟ್ಟುಸಿರಲಿ ಮಗ್ಗುಲಾದ ಮುತ್ತು
ಮತ್ತೆಲ್ಲೋ ಬಲೆಯೊಳಗೆ ಬಿಕ್ಕು
ಸಮುದ್ರದಾಳಕ್ಕಿಂತ ಮನಸು ಭಾರವಾಯ್ತು
ಬರಲಾರದ ಚಿನ್ನದ ಹುರಿಗೆ ದೂರ ನೆಪವಾಯ್ತು

ಮಾಯದ ಮೋಹವು ಮಾತಾಯಿತಂತೆ
ನನ್ನೆಡೆ ಬರಲಾರರು ಎಂದು ಯಾರೂ ಇಲ್ಲ
ಬಂದವರ್ಯಾರು ಉಳಿವರಿಲ್ಲ;
ಬಂದು ಹೋಗೊ ಬಯಕೆ ನಾ
ಬಂದಿಲ್ಲೇ ಕಳೆದು ಹೋದವರೆಲ್ಲಾ ಹುಚ್ಚರು!
ದಾಹಿಗಳು, ಧ್ಯಾನಿಗಳು, ಮೋಹದ ಮಾಂತ್ರಿಕರು
ಕಳೆದು ಬಂದು ಉಳಿವರು ಹೀಗೆ ಕವಿಗಳ ಹಾಗೆ!

ಆಗಸದ ನಕ್ಷತ್ರ, ಕಾಡು ಮಲ್ಲೆ, ಕಡಲಾಳದ ಮುತ್ತುಗಳು
ಒಂದೇ ಸಮನೆ ಉದ್ವೇಗದಿ ಉಲಿವರಂತೆ
ಮೋಹದ ಜೊತೆಗೂಡಿ
ವಿರಹ, ಪ್ರೇಮ, ಮಧುರ ಭಾವ, ವೈರಾಗ್ಯ
ತಮ್ಮದೇ ಆಸ್ತಿಗಳಂತೆ
ಕ್ಷಣ ಕಾಲ ಮೌನವಾಗಿ ಆವರಿಸಿ ಎದೆಗೇರಿ ನಿಂತರು
ಕವಿ ಕಾವ್ಯ ನಾಮಗಳಲ್ಲಿ
ನೆಲೆ ಕಂಡರಂತೆ!

23/108/2014

No comments:

Post a Comment